ಅಖಾಡಕ್ಕಿಳಿದ ನಾಯ್ಡು, ದೇಶದ ರಾಜಕೀಯದಲ್ಲಿನ್ನು ಮಿಂಚಿನ ಸಂಚಾರ!
Recommended Video
ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಮುಗಿದ ನಂತರ ಇದ್ದಕ್ಕಿದ್ದಂತೇ ಮೌನವಾಗಿಬಿಟ್ಟಿದ್ದ ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಈಗ ಮತ್ತೆ ಅಖಾಡಕ್ಕಿಳಿದಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮಿಂಚಿನ ಸಂಚಾರವಾದಂತಾದಂತಾಗಿದೆ.
ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೇ 21 ರಂದು ವಿಪಕ್ಷಗಳೆಲ್ಲವೂ ಸೇರಿ ಸಭೆ ನಡೆಸಿ, ಪ್ರಧಾನಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸುವ ಬಗ್ಗೆಯೂ ಇಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಸಮಾವೇಶವೊಂದರಲ್ಲಿ ಇಂದು ಭಾಗಿಯಾದ ಅವರು, ನಾಳೆ ಅಲ್ಲಿನ ಮುಖ್ಯಮಂತ್ರಿ ಟಿಎಂ ಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ. ಈ ಮೂಲಕ ಮತ್ತೆ ಮಹಾಘಟಬಂಧನದ ಎಲ್ಲಾ ಪಕ್ಷಗಳನ್ನೂ ಒಗ್ಗೂಡಿಸುವ ಗುರುತರ ಜವಾಬ್ದಾರಿಯನ್ನು ನಾಯ್ಡು ಹೊತ್ತುಕೊಳ್ಳಲಿದ್ದಾರೆ.

ಚುನಾವಣೆಯ ನಂತರ ಮೌನವಾಗಿದ್ದ ನಾಯ್ಡು!
ಆಂಧ್ರ ಪ್ರದೇಶದಲ್ಲಿ ಏಪ್ರಿಲ್ 11 ರಂದು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದೆ. ಸಮೀಕ್ಷೆಗಳು ಹೇಳುವ ಪ್ರಕಾರ ಆಂಧ್ರದಲ್ಲಿ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಬಹುಮತ ಪಡೆಯಲಿದೆ. ಲೋಕಸಭೆಗೂ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಹೆಚ್ಚು ಸದಸ್ಯರೇ ಗೆಲುವು ಸಾಧಿಸಲಿದ್ದಾರೆ. ಆಂತರಿಕ ಸಮೀಕ್ಷೆ, ಗುಪ್ತಚರ ವರದಿಗಳು ಬಂದ ನಂತರವೇ ಚಂದ್ರಬಾಬು ನಾಯ್ಡು ಮೌನವಾಗಿದ್ದಾರೆ ಎನ್ನಲಾಗಿತ್ತು.

ತಾವು ಗೆಲ್ಲದಿದ್ದರೂ ಸರಿ, ಬಿಜೆಪಿಗೆ ಅಧಿಕಾರ ಕೊಡಬಾರದು!
ಆದರೆ ಇದೀಗ ಇದ್ದಕ್ಕಿದಂತೇ ಅವರೂ ಅಖಾಡಕ್ಕಿಳಿದಿದ್ದು, ತಾವು ಆಂಧ್ರ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರದಿದ್ದರೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ನಾಯ್ಡು ನಿರ್ಧರಿಸಿದಂತಿದೆ.

ಕೆಸಿಆರ್ ತೃತೀಯ ರಂಗಕ್ಕೆ ನಾಯ್ಡು ಉತ್ತರ?
ಅತ್ತ ಟಿಆರ್ ಎಸ್ ಮುಖಂಡ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತೃತೀಯ ರಂಗದ ಪ್ರಯತ್ನದಲ್ಲಿ ಓಡಾಡುತ್ತಿರುವುದನ್ನು ಅರಿತ ನಾಯ್ಡು, ತಾವೂ ಮಹಾಘಟಬಂಧನದ ಒಗ್ಗಟ್ಟಿಗಾಗಿ ಓಡಾಟ ನಡೆಸುವುದಕ್ಕೆ ಮುಂದಾದರು ಎಂಬ ಮಾತು ಕೇಳಿಬರುತ್ತಿದೆ.

ರಾಷ್ಟ್ರ ರಾಜಕಾರಣದಲ್ಲಿ ಮಿಂಚಿನ ಸಂಚಾರ
ಒಟ್ಟಿನಲ್ಲಿ ಇಷ್ಟು ದಿನ ಮೌನವಾಗಿದ್ದ ನಾಯ್ಡು ಅವರು ಈಗ ಅಖಾಡಕ್ಕಿಳಿದಿರುವುದು ರಾಷ್ಟ್ರ ರಾಜಕಾರಣದಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡಿದ್ದು ಸತ್ಯ. ವಿರೋಧ ಪಕ್ಶಃಗಳ ನಡುವಲ್ಲಿ ಸೇತುವೆಯಾಗಿ ಕೆಲಸ ಮಾಡುತ್ತಿರುವ ನಾಯ್ಡು, ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಇಳಿಸಲು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದು, ಮೇ 21 ರ ಸಭೆಯಲ್ಲೂ ಅವರೇ ಪ್ರಧಾನ ಪಾತ್ರ ವಹಿಸುವ ಸಾಧ್ಯತೆ ಇದೆ.












Click it and Unblock the Notifications