ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Champa Shasti : ನಾಗಾರಾಧನೆಯ ನಾಡು ಕುಕ್ಕೆಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮ

|
Google Oneindia Kannada News

ಮಂಗಳೂರು, ನವೆಂಬರ್ 29; ನಾಗಾರಾಧನೆಯ ನಾಡು ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಸಂಭ್ರಮ ಮನೆ ಮಾಡಿದ್ದು, ಸಹಸ್ರಾರು ಮಂದಿ ಸುಬ್ರಹ್ಮಣ್ಯನ ದರ್ಶನ ಮಾಡಿ ತಮ್ಮ ದೋಷಗಳನ್ನು ಕಳೆದುಕೊಂಡು ಪುನೀತರಾಗುತ್ತಿದ್ದಾರೆ.

ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿರುವ ಕುಮಾರಪರ್ವತದ ತಪ್ಪಲಿನಲ್ಲಿ ನೆಲೆನಿಂತಿರುವ ಸುಬ್ರಹ್ಮಣ್ಯ ಕ್ಷೇತ್ರ ನಾಗಪೂಜೆಗೆ ಹೆಸರುವಾಸಿಯಾಗಿದೆಯಲ್ಲದೆ, ಹತ್ತು ಹಲವು ವಿಶೇಷತೆಯನ್ನು ಹೊಂದಿದೆ. ವಲ್ಮೀಖ ಅರ್ಥಾತ್ ಹುತ್ತವನ್ನು ಇಲ್ಲಿ ಪೂಜಿಸಲಾಗುತ್ತದೆಯಲ್ಲದೆ, ಅದರಿಂದ ತೆಗೆದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ದೋಷ ಕಳೆದು ಕೊಳ್ಳುವುದು ತಲೆತಲಾಂತರದಿಂದ ನಡೆದು ಬಂದಿದೆ.

ಕ್ಷೇತ್ರದಲ್ಲಿರುವ ಸುಬ್ರಹ್ಮಣ್ಯ ದೇಗುಲದ ಬಗ್ಗೆ ಹೇಳುವುದಾದರೆ ಈ ದೇವಾಲಯ ಸುಮಾರು ಎಂಟನೆಯ ಶತಮಾನದ್ದು ಆಗಿದ್ದು, ಇಲ್ಲಿ ನರಸಿಂಹ, ಉಮಾಮಹೇಶ್ವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಸುಬ್ರಹ್ಮಣ್ಯ ಆದಿದೈವ. ಬಲ್ಲಾಳ ರಾಜನ ಕಾಲದಲ್ಲಿ ಸುಬ್ರಹ್ಮಣ್ಯವು ರಾಜಧಾನಿಯಾಗಿತ್ತಂತೆ.

ಇಲ್ಲಿನ ದೇವಾಲಯದಲ್ಲಿರುವ ಮೂರ್ತಿ ಬಲ್ಲಾಳ ಅರಸರದ್ದಾಗಿದೆ. ಇತಿಹಾಸದ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯನ್ನು ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ಬಲ್ಲಾಳ ಅರಸರು ಆಳುತ್ತಿದ್ದರೆನ್ನಲಾಗಿದೆ. ಆದರೆ ಇಕ್ಕೇರಿ ಅರಸರು ಆಳ್ವಿಕೆ ನಡೆಸಲು ಆರಂಭಿಸಿದ ಬಳಿಕ ಕೆಲವೊಂದು ಗ್ರಾಮಗಳಲ್ಲಿ ಮಾತ್ರ ಬಲ್ಲಾಳ ಅರಸರ ಆಳ್ವಿಕೆ ನಡೆಯುತ್ತಿತ್ತು. ಆ ಸಂದರ್ಭ ಸುಬ್ರಹ್ಮಣ್ಯ ಅವರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಕುಕ್ಕೆಲಿಂಗ ರೂಪದಲ್ಲಿ ನೆಲೆನಿಂತ ಶಿವಪಾರ್ವತಿ

ಕುಕ್ಕೆಲಿಂಗ ರೂಪದಲ್ಲಿ ನೆಲೆನಿಂತ ಶಿವಪಾರ್ವತಿ

ಇನ್ನು ಕುಮಾರಸ್ವಾಮಿಯು ದೇವಸೇನೆಯೊಂದಿಗೆ ಮತ್ತು ಭಕ್ತ ವಾಸುಕಿಯೊಂದಿಗೆ ಇಲ್ಲಿ ನೆಲೆಸಿದ್ದರಿಂದ ಪುತ್ರನ ಮೇಲಿನ ವಾತ್ಸಲ್ಯದಿಂದ ಶಿವಪಾರ್ವತಿಯರು ಕುಕ್ಕೆಲಿಂಗ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಸ್ಕಂದ, ಕಾರ್ತಿಕೇಯ, ಷಣ್ಮುಖ ಎಂಬ ಹೆಸರಿನಿಂದ ಕರೆಯಲ್ಪಡುವ ಕುಮಾರಸ್ವಾಮಿ ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸಬಲ್ಲ ದೇವತೆಯಾಗಿದ್ದು, ಬ್ರಹ್ಮಜ್ಞಾನ, ಆಯಸ್ಸು, ಆರೋಗ್ಯ, ಉಪಸ್ಮಾರ, ಕುಷ್ಠಾದಿ ಮಹಾರೊಗಗಳ ಪರಿಹಾರ, ಭೂತ ಪೀಡೆ ಪರಿಹಾರ ಮಾಡಿ ಸಂತಾನ ಸೌಭಾಗ್ಯ, ಪುಷ್ಠಿ, ತುಷ್ಠಿ, ಕೀರ್ತಿ ನೀಡಿ ಶತ್ರು ವಿರುದ್ಧ ಜಯವನ್ನು ಕರುಣಿಸುವ ದೈವನಾಗಿದ್ದಾನೆ.

ಗರುಡ ಮಂತ್ರ ಮಂತ್ರಿಸಿ ಕಟ್ಟಿದ ಕಂಬ

ಗರುಡ ಮಂತ್ರ ಮಂತ್ರಿಸಿ ಕಟ್ಟಿದ ಕಂಬ

ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಮುಖ್ಯ ದ್ವಾರದ ಎದುರಿಗೆ ಸುಬ್ರಹ್ಮಣ್ಯ ಸ್ವಾಮಿಯ ಗರ್ಭಗುಡಿಯಿದೆ. ಈ ಗರ್ಭಗೃಹ ಮತ್ತು ನೂತನವಾಗಿ ಕಟ್ಟಲ್ಪಟ್ಟ ಮುಖಮಂಟಪದ ಮಧ್ಯದಲ್ಲಿ ಗರುಡ ಕಂಬವಿದೆ. ಈ ಗರುಡ ಕಂಬವನ್ನು ಗರುಡ ಮಂತ್ರವನ್ನು ಮಂತ್ರಿಸಿ ವಾಸುಕಿಯ ಉಸಿರಾಟದ ವಿಷಬಾಧೆ ತಟ್ಟಬಾರದೆಂಬ ಉದ್ದೇಶದಿಂದ ನಿರ್ಮಿಸಿರುವುದಾಗಿ ಹೇಳಲಾಗಿದೆ.

ಇನ್ನು ದೇವಾಲಯದಿಂದ ಉತ್ತರ ಭಾಗಕ್ಕೆ ತೆರಳಿದರೆ ಇಲ್ಲಿ ನಾವು ಹಲವು ಲಿಂಗಗಳನ್ನು ಕಾಣಬಹುದು. ಈ ಲಿಂಗಗಳನ್ನು ಕುಕ್ಕೆಯಲ್ಲಿಟ್ಟು ಪೂಜಿಸುತ್ತಿದ್ದುದರಿಂದ ಕುಕ್ಕೆಲಿಂಗ ಎಂದು ಕೂಡ ಕರೆಯಲಾಗುತ್ತಿದೆ. ದೇವಸ್ಥಾನದಿಂದ ಅನತಿ ದೂರದಲ್ಲಿ ಆದಿಸುಬ್ರಹ್ಮಣ್ಯನ ದೇವಾಲಯವಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದವರು ಇಲ್ಲಿಗೆ ತೆರಳಿ ದರ್ಶನ ಮಾಡದೆ ಮರಳುವಂತಿಲ್ಲ. ಇಲ್ಲೊಂದು ಬೃಹತ್ ವಲ್ಮಿಕ(ಹುತ್ತ) ಇದ್ದು, ಅಲ್ಲಿಂದ ತೆಗೆದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಸುಬ್ರಹ್ಮಣದಲ್ಲಿರುವ ಇನ್ನಿತರ ದೇಗುಲಗಳು

ಸುಬ್ರಹ್ಮಣದಲ್ಲಿರುವ ಇನ್ನಿತರ ದೇಗುಲಗಳು

ಸುಬ್ರಹ್ಮಣ್ಯ ದೇವಾಲಯದ ಸುತ್ತ ಹಲವು ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿ ಭೈರದೇವರ ದೇವಾಲಯವಿದ್ದು, ಇದನ್ನು ಕಪಾಲೇಶ್ವರ ದೇವಾಲಯ ಎಂದು ಕೂಡ ಕರೆಯಲಾಗುತ್ತದೆ. ಸುಬ್ರಹ್ಮಣ್ಯ ದೇವಾಲಯದ ಗರ್ಭಗೃಹದ ಈಶಾನ್ಯಕ್ಕೆ ಉಮಾಮಹೇಶ್ವರ ದೇವಾಲಯವಿದ್ದು, ಇಲ್ಲಿನ ಆರಾಧ್ಯ ದೈವ ಉಮಾಮಹೇಶ್ವರನಾದರೂ ಸೂರ್ಯ, ಅಂಬಿಕಾ, ವಿಷ್ಣು, ಗಣನಾಥ ದೇವರ ಮೂರ್ತಿಗಳು ಇಲ್ಲಿವೆ. ಇವುಗಳೆಲ್ಲವೂ ಪ್ರಾಚೀನ ಕಾಲದ ಮೂರ್ತಿಗಳಾಗಿವೆ. ಗರ್ಭಗೃಹದ ಆಗ್ನೇಯ ದಿಕ್ಕಿಗೆ ವೇದವ್ಯಾಸ ಸಂಪುಟ ನರಸಿಂಹ ದೇವರ ದೇವಾಲಯವಿದೆ. ಸುಬ್ರಹ್ಮಣ್ಯ ದೇವಾಲಯದ ದಕ್ಷಿಣಕ್ಕೆ ಹೊಸಳ್ಳಿಗಮ್ಮನ ದೇವಾಲಯವಿದ್ದು, ಹೊಸಳ್ಳಿಗಮ್ಮ ಹಾಗೂ ಪುರುಷರಾಯ ಆರಾಧ್ಯದೈವರಾಗಿದ್ದಾರೆ.

ಸುಬ್ರಹ್ಮಣ್ಯ ದೇವಾಲಯದಿಂದ ಕೆಲವೇ ದೂರದಲ್ಲಿ ಕಾಶಿಕಟ್ಟೆಯಿದ್ದು, ಇಲ್ಲಿ ಆಂಜನೇಯ ಹಾಗೂ ಗಣಪತಿ ದೇವರುಗಳ ದೇವಾಲಯ ಹಾಗೂ ಬೃಹತ್ ಅಶ್ವತ್ಥ ಕಟ್ಟೆಯನ್ನೂ ಕಾಣಬಹುದು. ತೇರು ಬೀದಿಯ ಉತ್ತರಕ್ಕೆ ದ್ವೈತ ಸಂಪ್ರದಾಯದ ಉತ್ತರಾದಿಮಠವಿದ್ದು, ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದಿಂದ ಕುಮಾರಧಾರಾ ನದಿಯತ್ತ ಸಾಗುವಾಗ ದಾರಿ ಮಧ್ಯೆ ಕಂಡು ಬರುವ ಬಿಲದ್ವಾರ ಪವಿತ್ರಕ್ಷೇತ್ರವಾಗಿದೆ. ಪುರಾಣದ ಪ್ರಕಾರ ಗರುಢ ನೀಡುತ್ತಿದ್ದ ತೊಂದರೆಯಿಂದ ತಪ್ಪಿಸಿಕೊಳ್ಳಲು ವಾಸುಕಿ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದನೆಂದು ಹೇಳಲಾಗಿದೆ.

ಮಹೀನದಿ ಕುಮಾಧಾರವಾಗಿದ್ದು ಹೇಗೆ?

ಮಹೀನದಿ ಕುಮಾಧಾರವಾಗಿದ್ದು ಹೇಗೆ?

ಸುಬ್ರಹ್ಮಣ್ಯ ಕೇತ್ರದಲ್ಲಿ ಹರಿಯುವ ಕುಮಾರಧಾರಾ ನದಿ ಪವಿತ್ರವಾಗಿದ್ದು, ಇದು ಭೂಮಿಯ ಒಡಲಾಳದಿಂದ ಉಕ್ಕಿಹರಿದ ಎಲ್ಲಾ ತೀರ್ಥಗಳ ಸಾರವನ್ನು ಹೊಂದಿದೆ ಎಂದು ನಂಬಲಾಗಿದೆ. ಇದನ್ನು ಹಿಂದೆ ಮಹೀನದಿ ಎಂದು ಕರೆಯಲಾಗುತ್ತಿತ್ತಂತೆ ಕಾಲಾಂತರದಲ್ಲಿ ಈ ನದಿಯ ನೀರನ್ನು ಕುಮಾರಸ್ವಾಮಿ (ಸುಬ್ರಹ್ಮಣ್ಯ)ಯ ಪೂಜೆಯ ಅಭಿಷೇಕಕ್ಕೆ ಉಪಯೋಗಿಸಲು ಆರಂಭಿಸಿದ ಬಳಿಕ ಕುಮಾರಧಾರಾ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಷಷ್ಠಿ ದಿನದಂದು ರಥೋತ್ಸವ ನಡೆಯುತ್ತದೆ. ಈ ವೇಳೆ ಬ್ರಹ್ಮರಥ, ಪಂಚಮಿ ತೇರು, ಚಂದ್ರಮಂಡಲ, ಹೂವಿನ ತೇರುಗಳನ್ನು ಎಳೆಯಲಾಗುತ್ತದೆ. ನೆರೆದ ಸಹಸ್ರಾರು ಜನರ ನಡುವೆ ರಥ ಸಾಗುವಾಗ ಭಕ್ತರ ಹರ್ಷೋದ್ಘಾರಗಳು ಮುಗಿಲು ಮುಟ್ಟುತ್ತದೆ.

English summary
Champa Shashti celebration at Kukke Subramanya temple, Dakshina Kannada. Know about temple history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X