ಚಾಮರಾಜನಗರ ನಡುರಸ್ತೆ ನರಿಕಲ್ಲು ಮಾರಮ್ಮನ ಮಹಿಮೆ!
ಚಾಮರಾಜನಗರ, ಮೇ 8: ಸಾಮಾನ್ಯವಾಗಿ ನಾವು ಸಾಗುವ ರಸ್ತೆ, ಹೆದ್ದಾರಿಗಳ ಅಂಚಿನಲ್ಲಿ ಗುಡಿ, ಗೋಪುರವಿಲ್ಲದ ದೇಗುಲಗಳು, ದೇವರ ಕಲ್ಲುಗಳು, ಅಲ್ಲಲ್ಲಿ ಕಂಡು ಬರುತ್ತಿವೆ. ಇವುಗಳಿಗೆ ಪೂಜಿಸಿ ಮುಂದೆ ಸಾಗುವ ದೃಶ್ಯಗಳನ್ನು ಕೂಡ ಅಲ್ಲಲ್ಲಿ ನಾವು ಕಾಣಬಹುದಾಗಿದೆ.
ರಸ್ತೆ ಬದಿಯಲ್ಲಿರುವ ಇಂತಹ ದೇಗುಲ ಹಾಗೂ ದೇವರ ಕಲ್ಲುಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ಹೆದ್ದಾರಿ ನಡುವೆ ಇರುವ ಒಳಲು ಕಲ್ಲಿನಂತಿರುವ ಮಾರಮ್ಮನನ್ನು ಹೆಚ್ಚಿನವರು ನೋಡಿರಲಾರರು. ಅದುವೇ ಯಳಂದೂರು ಮಾರ್ಗವಾಗಿ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುವ 209ರ ರಾಷ್ಟ್ರೀಯ ಹೆದ್ದಾರಿಯ ಅಗರ ಗ್ರಾಮದಲ್ಲಿರುವ ನಡುರಸ್ತೆ ನರಿಕಲ್ಲು ಮಾರಮ್ಮ.

ಶತಮಾನಗಳಿಂದ ಪೂಜಿಸಿಕೊಂಡು ಬಂದಿದ್ದಾರೆ
ಈ ಮಾರಮ್ಮನನ್ನು ಇವತ್ತಿನಿಂದಲ್ಲ ಹಲವು ಶತಮಾನಗಳಿಂದ ಜನರು ಪೂಜಿಸಿಕೊಂಡು ಬಂದಿದ್ದು, ಇಷ್ಟಾರ್ಥ ನೆರವೇರಿಸುವ ಶಕ್ತಿದೇವತೆಯಾಗಿ ಭಕ್ತರ ಮನದಲ್ಲಿ ಉಳಿದಿದ್ದು, ಈ ಹೆದ್ದಾರಿಯಲ್ಲಿ ಸಾಗುವ ಬಹುತೇಕರು ದೇವಿಗೆ ನಮಿಸಿ ಮುಂದೆ ಸಾಗುತ್ತಾರೆ. 209ನೇ ಸಂಖ್ಯೆಯ ರಾಷ್ಟ್ರೀಯ ಹೆದ್ದಾರಿಯು, ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕವಯತ್ರಿ ಸಂಚಿಹೊನ್ನಮ್ಮನ ಹುಟ್ಟೂರಾದ ಯಳಂದೂರು ಮಾರ್ಗವಾಗಿ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಈ ಹೆದ್ದಾರಿಯು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಗ್ರಾಮಕ್ಕಾಗಿ ಹಾದು ಹೋಗಿದ್ದು, ಹೆದ್ದಾರಿಯ ಮಧ್ಯಭಾಗದಲ್ಲಿಯೇ ನಡುರಸ್ತೆ ನರಿಕಲ್ಲು ಮಾರಮ್ಮ ನೆಲೆಸಿರುವುದು ವಿಶೇಷವಾಗಿದೆ.

ನರಿಕಲ್ಲು ಮಾರಮ್ಮ ಯಾವುದರ ರೂಪದಲ್ಲಿದೆ?
ಇಷ್ಟಕ್ಕೂ ಇಲ್ಲಿ ನರಿಕಲ್ಲು ಮಾರಮ್ಮ ನೆಲೆನಿಂತು ಭಕ್ತರಿಗೆ ದರ್ಶನ ನೀಡುತ್ತಿರುವುದು, ಕಲ್ಲು, ಮೂರ್ತಿ ಯಾವುದರ ರೂಪದಲ್ಲಿರದೆ, ಹೆದ್ದಾರಿ ಮಧ್ಯಭಾಗದಲ್ಲಿ ಮನುಷ್ಯನ ನಡುವಿನಷ್ಟು ಆಳದಲ್ಲಿ ಮಾರಮ್ಮ ನೆಲೆನಿಂತು ತನ್ನನ್ನು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾಳೆ.
ನರಿಕಲ್ಲು ಮಾರಮ್ಮ ಕೇವಲ ಹೆದ್ದಾರಿಯಲ್ಲಿ ಸಾಗುವವರನ್ನು ಕಾಪಾಡುವುದು ಮಾತ್ರವಲ್ಲದೆ, ಮಂಡಿನೋವು ಮತ್ತು ಕಾಲುನೋವು ಕಾಣಿಸಿಕೊಂಡರೆ ಮಾರಮ್ಮನಿಗೆ ಹರಕೆಹೊತ್ತು ಪೂಜಿಸಿದರೆ ನೋವು ಮಾಯವಾಗುತ್ತದೆ ಎಂಬ ನಂಬಿಕೆಯೂ ಇದೆ.

ಮಾರಮ್ಮನಿಗೆ ಸೋಕಿಸಿದರೆ ನೋವು ಮಾಯ
ಬಹಳಷ್ಟು ಭಕ್ತರು ಕಾಲು ನೋವು ಮತ್ತು ಮಂಡಿ ನೋವು ಕಾಣಿಸಿಕೊಂಡರೆ ಅಂತಹವರು ಈ ಮಾರಮ್ಮಳಿಗೆ ಉಪವಾಸವಿದ್ದು, ಶ್ರದ್ಧಾಭಕ್ತಿಗಳಿಂದ ಪೂಜೆಸಲ್ಲಿಸಿ ತಮಗೆ ನೋವಿರುವ ಭಾಗವನ್ನು ಆ ಮಾರಮ್ಮನ ಕಲ್ಲಿಗೆ ಸೋಕಿಸಿದರೆ ಸಾಕಂತೆ, ನಾಲ್ಕೈದು ದಿನಗಳಲ್ಲೇ ಆ ನೋವೆಲ್ಲ ಮಾಯವಾಗುತ್ತದೆಂಬ ನಂಬಿಕೆ ಭಕ್ತರದ್ದಾಗಿದೆ.
ಇಂದಿನ ವಿಜ್ಞಾನ, ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರ ಮನುಷ್ಯನ ಊಹೆಗೂ ನಿಲುಕಿ ಎಷ್ಟೇ ವಿಸ್ಮಯಕಾರಿಯಾಗಿ ಬೆಳೆದಿದ್ದರೂ ಕೂಡ, ಇಂದಿಗೂ ಈ ಭಾಗದ ಜನತೆಯಲ್ಲಿ ಕಾಲುನೋವು, ಮಂಡಿನೋವು ಹಾಗೂ ಕಾಲಿನಲ್ಲಿ ಭಾವು ಕಾಣಿಸಿಕೊಂಡರೆ ತಕ್ಷಣ ಈ ನಡುರಸ್ತೆ ನರಿಕಲ್ಲು ಮಾರಮ್ಮಳ ಮೊರೆಹೋಗುತ್ತಿದ್ದಾರೆ, ಆಗ ಆ ಮಾರಮ್ಮಳೇ ಇವರಿಗೆ ಅಭಯವಂತೆ.

ಜನರ ಊಹೆಗೂ ನಿಲುಕದ್ದಾಗಿದೆ..
ರಾಷ್ಟ್ರೀಯ ಹೆದ್ದಾರಿಯಾಗುವುದರ ಮೊದಲು ಈ ನಡುರಸ್ತೆ ನರಿಕಲ್ಲು ಮಾರಮ್ಮ ಕುಳಿತಿದ್ದ ಸ್ಥಳದಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿತ್ತು, ಆದರೆ ದಿನಕಳೆದಂತೆ ಆಧುನಿಕತೆಯ ನಾಗರಿಕತೆ ಬೆಳೆದಂತೆಲ್ಲ ಜಿಲ್ಲಾ ರಸ್ತೆಯಾದ ಈ ರಸ್ತೆಯೂ ಕೂಡ ರಾಷ್ಟ್ರೀಯ ಹೆದ್ದಾರಿ 209ಕ್ಕೆ ಸೇರ್ಪಡೆಗೊಂಡ ಮೇಲೆ ರಸ್ತೆಯ ನಾಜೂಕೆ ಜನರ ಊಹೆಗೂ ನಿಲುಕದಷ್ಟು ಸುಂದರವಾಗಿ ನಿರ್ಮಾಣಗೊಂಡಿದೆ, ಜೊತೆಗೆ ದೇಶದ ಐದು ಪ್ರಮುಖ ಹೆದ್ದಾರಿಗಳಲ್ಲಿ ಇದು ಕೂಡ ಒಂದಾಗಿರುವ ಮಾನ್ಯತೆ ಗಳಿಸಿರುವುದರಿಂದ ಈ ಭಾಗದ ಜನತೆಯ ಮೊಗದಲ್ಲಿ ಮಂದಹಾಸವೂ ಕೂಡ ಎದ್ದು ಕಾಣುತ್ತಿದೆ.

ಮಾರಮ್ಮನ ಮೇಲೆ ಹರಿದರೂ ಅಪಾಯವಿಲ್ಲ
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ತಲೆ ಎತ್ತಿದ ಅನೇಕ ಗುಡಿಮಂದಿರಗಳು ಇದುವರೆಗೆ ನೆಲಸಮಗೊಂಡಿವೆ, ಈ ಮಾರಮ್ಮಳಿಗೆ ರಕ್ಷಣೆಗೆ ಗುಡಿಯೇ ಇಲ್ಲದಿರುವುದರಿಂದ ಅನೇಕ ಶತಮಾನಗಳಿಂದ ರಸ್ತೆಯ ಮಧ್ಯಭಾಗದಲ್ಲಿ ಈ ಮಾರಮ್ಮ ಕುಳಿತಿರುವುದರಿಂದ, ಗುಂಡಿಯನ್ನು ಮುಚ್ಚುವ ದುಸ್ಸಾಹಸಕ್ಕೆ ಯಾವುದೇ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಹೋಗಿಲ್ಲ.
ಬದಲಾಗಿ ಜನರ ಆಚಾರ ವಿಚಾರಗಳ ಸಂಪ್ರದಾಯಗಳ ನಂಬಿಕೆಗೆ ಧಕ್ಕೆಯಾಗದಂತೆ ದೊಡ್ಡದಾದ ಹೊಂಡವನ್ನ ಬಹಳ ಕಿರಿದಾಗಿ ಅಂದರೆ ಒಂದು ಓನಕೆ ನುಗ್ಗುವಷ್ಟು ಸಣ್ಣದಾದ ನಡು ಆಳದಷ್ಟು ಗುಳಿ ನಿರ್ಮಿಸಿ, ರಸ್ತೆಯಲ್ಲೇ ಒಂದು ನಾಮಫಲಕ ನೆಟ್ಟು ಯಾವುದೇ ವಾಹನಗಳು ಈ ಮಾರಮ್ಮನ ಮೇಲೆ ಹರಿದು ಹೋದರೂ ಕೂಡ ಅಪಘಾತವಾಗದಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ಅಚ್ಚರಿಯೆಂಬಂತೆ ಈ ಮಾರಮ್ಮ ನೆಲೆಸಿದಂದಿನಿಂದಲೂ ಇದುವರೆಗೂ ಕೂಡ ಯಾವುದೇ ರಸ್ತೆ ಅಪಘಾತಗಳು ಈ ಮಾರಮ್ಮ ಕುಳಿತಿರುವ ಸ್ಥಳದಲ್ಲಿ ನಡೆದಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಹೇಗಿದೆ ನೋಡಿ, ನಮ್ಮ ನಡುರಸ್ತೆ ನರಿಕಲ್ಲು ಮಾರಮ್ಮನ ಮಹಿಮೆ.












Click it and Unblock the Notifications