Maha Kumbh Mela 2025: ಮಹಾಕುಂಭ ಮೇಳಕ್ಕೆ ಕಾಲಿಟ್ಟ ಬ್ಲಿಂಕಿಟ್, ಏನೆಲ್ಲ ಸೇವೆ ಸಿಗುತ್ತೆ?
ಇ ಕಾಮರ್ಸ್ ವಲಯದ ಬ್ಲಿಂಕಿಟ್ (Blinkit) ಸದ್ಯ ತ್ವರಿತವಾಗಿ ಆನ್‌ಲೈನ್ ಡೆಲಿವರಿ ಸೇವೆ ಕಲ್ಪಿಸುವ ಮೂಲಕ ಖ್ಯಾತಿ ಗಳಿಸಿದೆ. ಸದ್ಯ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೂ ಈ ಬ್ಲಿಂಕಿಟ್ ಕಾಲಿಟ್ಟಿದೆ. ಮಹಾಕುಂಭಮೇಳಕ್ಕೆ ಬರುವವರಿಗೆ ಕ್ಷಣ ಮಾತ್ರದಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಲು ಬ್ಲಿಂಕಿಟ್ ತಂಡ ಬೀಡುಬಿಟ್ಟಿದೆ. ಅಲ್ಲದೆ ಇದಕ್ಕಾಗಿ ಒಂದು ತಾತ್ಕಾಲಿಕ ಮಳಿಗೆಯನ್ನು ಕೂಡ ತೆರೆದಿದೆ.
ಸದ್ಯ ಭಾರತದ ಪ್ರಮುಖ ನಗರಗಳಲ್ಲಿ ಬ್ಲಿಂಕಿಟ್ ತನ್ನ ಸೇವೆಯ ಮೂಲಕ ಹೆಸರುವಾಸಿಯಾಗಿದೆ. ಇದೀಗ ಪ್ರಯಾಗ್‌ರಾಜ್‌ನಲ್ಲೂ ಮಹಾಕುಂಭಮೇಳಕ್ಕಾಗಿ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. ಇನ್ನು ಮಹಾಕುಂಭ ಮೇಳಕ್ಕೆ ಬರುವ ಯಾತ್ರಿಕರು ಹಾಗೂ ಭಕ್ತಾದಿಗಳಿಗೆ ಅಲ್ಲಿ ಅಗತ್ಯ ವಸ್ತುಗಳು ಬೇಕಾದರೆ ಕ್ಷಣ ಮಾತ್ರದಲ್ಲಿ ತನ್ನ ಮಳಿಗೆಯಿಂದ ತಲುಪಿಸಲು ಮುಂದಾಗಿದೆ. ಇದಕ್ಕಾಗಿ ತನ್ನ ಸಿಬ್ಬಂದಿಯನ್ನು ಕೂಡ ಅಲ್ಲಿಗೆ ನಿಯೋಜಿಸಲಾಗಿದೆ.

ಬ್ಲಿಂಕಿಟ್‌ನ ಈ ವಿನೂತನ ಪ್ರಯತ್ನದಿಂದ ಮಹಾಕುಂಭಮೇಳದಲ್ಲಿ ಹಲವರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ, ನಾವು ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಸೇವೆ ನೀಡಲು ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ತಾತ್ಕಾಲಿಕ ಬ್ಲಿಂಕಿಟ್ ಅಂಗಡಿಯನ್ನು ತೆರೆದಿದ್ದೇವೆ ಎಂದಿದ್ದಾರೆ. ಇದರ ಫೋಟೋ ಕೂಡ ಹಂಚಿಕೊಂಡಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಇದು 100 ಚದರ ಅಡಿ ವಿಸ್ತೀರ್ಣದ ಮಳಿಗೆಯಾಗಿದ್ದು, ಅರೈಲ್ ಟೆಂಟ್ ಸಿಟಿ, ಡೋಮ್ ಸಿಟಿ, ಐಟಿಡಿಸಿ ಐಷಾರಾಮಿ ಕ್ಯಾಂಪ್, ದೇವ್ರಾಖ್ ಮತ್ತು ಮಹಾ ಕುಂಭಮೇಳದ ಇತರ ಪ್ರಮುಖ ಪ್ರದೇಶಗಳಲ್ಲಿ ನಮ್ಮ ಸೇವೆ ಸಿಗಲಿದೆ. ಮಹಾಕುಂಭ ಮೇಳಕ್ಕೆ ಬರುವವರು ಇಲ್ಲಿಯೂ ಆನ್‌ಲೈನ್ ಮೂಲಕ ಬ್ಲಿಂಕಿಟ್ ಸೇವೆ ಪಡೆಯಬಹುದು ಎಂದಿದ್ದಾರೆ.
ನಮ್ಮ ಸಿಬ್ಬಂದಿ ಅಲ್ಲಿ ಪೂಜಾ ಅಗತ್ಯತೆಯ ಸಾಮಗ್ರಿಗಳು, ಹಾಲು, ಮೊಸರು, ಹಣ್ಣುಗಳು ಮತ್ತು ತರಕಾರಿಗಳು, ಚಾರ್ಜರ್, ಪವರ್ ಬ್ಯಾಂಕ್, ಟವೆಲ್, ಬ್ಲಾಂಕೆಟ್‌ಗಳು, ಬೆಡ್‌ಶೀಟ್‌ಗಳು ಸೇರಿದಂತೆ ಅಗತ್ಯ ವಸ್ತುಗಳು ನಮ್ಮಲ್ಲಿ ಸಿಗಲಿವೆ. ನಮ್ಮಲ್ಲಿ ತ್ರಿವೇಣಿ ಸಂಗಮ ಜಲ ಬಾಟಲಿಗಳು ಕೂಡ ಸ್ಟಾಕ್‌ನಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಇನ್ನು ಬ್ಲಿಂಕಿಟ್‌ನ ಈ ಆಲೋಚನೆ ಜನ ಫಿದಾ ಆಗಿದ್ದಾರೆ. ಕುಂಭಮೇಳಕ್ಕೆ ನಿಜವಾಗಿಯೂ ಈ ಸೇವೆಯ ಅಗತ್ಯವಿತ್ತು. ಇದರಿಂದ ಬಹಳ ಅನುಕೂಲವಾಗಲಿದೆ. ಕೆಲವರು ತಮ್ಮ ಅಗತ್ಯ ವಸ್ತುಗಳಿಗಾಗಿ ಪರದಾಡಬೇಕಾಗುತ್ತದೆ ಎಂದಿದ್ದಾರೆ.
ಬ್ಲಿಂಕಿಟ್ ಅಂತವರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ ಎಂದು ಶ್ಲಾಘಿಸಿದ್ದಾರೆ. ಬ್ಲಿಂಕಿಟ್ ನಿಜಕ್ಕೂ ಒಳ್ಳೆಯ ಆಲೋಚನೆ ಮಾಡಿದೆ. ಮಹಾ ಕುಂಭಮೇಳದಲ್ಲಿ ಅಗತ್ಯ ವಸ್ತುಗಳನ್ನು ಸುಲಭವಾಗಿ ಸಿಗುವಂತೆ ಮಾಡುವುದು ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ನಿಜವಾಗಿಯೂ ಒಂದು ಗೇಮ್ ಚೇಂಜರ್ ಇದ್ದಂತೆ ಎಂದಿದ್ದಾರೆ.
ಪ್ರಪಂಚದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾಕುಂಭ ಮೇಳವು ಜನವರಿ 13ರಿಂದ ಶುರುವಾಗಿದ್ದು, ಫೆಬ್ರವರಿ 26ರವರೆಗೆ ನಡೆಯಲಿದೆ. ಈ ವೇಳೆ ಮಹಾಕುಂಭಕ್ಕೆ ಬರೋಬ್ಬರಿ 45 ಕೋಟಿ ಜನ ಸೇರುವ ನಿರೀಕ್ಷೆಯಿದೆ.












Click it and Unblock the Notifications