V Sunil Kumar Profile: ಆರ್‌ಎಸ್‌ಎಸ್ ಹಿನ್ನಲೆಯ ಸುನೀಲ್ ಕುಮಾರ್ ಪರಿಚಯ
ಹಾಲೀ ಬೊಮ್ಮಾಯಿ ಸರಕಾರದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ವಿ.ಸುನೀಲ್ ಕುಮಾರ್ ಅವರು ರಾಜ್ಯ ಕರಾವಳಿ ಭಾಗದ ಪ್ರಮುಖ ನಾಯಕರಲ್ಲೊಬ್ಬರು. ಅವರ ವ್ಯಕ್ತಿಚಿತ್ರದ ಒಂದು ಕಿರು ಪರಿಚಯ.
ಕಳೆದ ಬಾರಿಯ ಅಂದರೆ 2018ರ ಚುನಾವಣೆಯ ಸಂದರ್ಭ, ಬಂಟ್ವಾಳದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವಿ.ಸುನೀಲ್ ಕುಮಾರ್, ಈ ಬಾರಿಯ ಚುನಾವಣೆ ಪ್ರಭು ಶ್ರೀರಾಮಚಂದ್ರ ಮತ್ತು ಅಲ್ಲಾಹ್ ನಡುವೆ ನಡೆಯುವ ಸಮರ ಎಂದು ಹೇಳಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮಾನಾಥ ರೈ, ಅಲ್ಲಾಹನ ಕೃಪೆಯಿಂದ ನಾನು ಚುನಾವಣೆಯನ್ನು ಗೆದ್ದಿದ್ದು ಎಂದು ಹೇಳಿದ್ದರು. ಇದಕ್ಕೆ ಕೌಂಟರ್ ಆಗಿ ಸುನೀಲ್ ಈ ರೀತಿಯ ಹೇಳಿಕೆಯನ್ನು ನೀಡಿದ್ದರು. ಇದು ಅವರೊಬ್ಬ ಪ್ರಖರ ಹಿಂದೂವಾದಿ ಎನ್ನುವುದಕ್ಕೆ ಕೊಡಬಹುದಾದ ಒಂದು ಉದಾಹರಣೆ ಎಂದು ವಿಶ್ಲೇಷಿಸಲಾಗಿತ್ತು.
ಕರಾವಳಿ ಕರ್ನಾಟಕ ಭಾಗದ ಪ್ರಮುಖ ಬಿಜೆಪಿ ನಾಯಕ, ಉತ್ತಮ ವಾಗ್ಮಿಯೂ ಆಗಿರುವ ಸುನೀಲ್ ಕುಮಾರ್ ಅವರ ಜನನ ಆಗಸ್ಟ್ ಹದಿನೈದು, 1975ರಂದು, ಮೂಡಿಗೆರೆಯಲ್ಲಿಯಾಯಿತು. ಎಂ.ಕೆ.ವಾಸುದೇವ , ಕೆ.ಪಿ.ಪ್ರಮೋದ ದಂಪತಿಗಳ ಮಗನಾದ ಸುನೀಲ್ ಅವರ ಬಾಲ್ಯದ ಶಿಕ್ಷಣ (ನಾಲ್ಕನೇ ತರಗತಿಯವರೆಗೆ) ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಐದರಿಂದ ಏಳನೇ ತರಗತಿ ಬಸವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಶಿವಮೊಗ್ಗ ಜಿಲ್ಲೆಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಇದಾದ ನಂತರ ಚಿಕ್ಕಮಗಳೂರು ಸರಕಾರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ಪದವಿ ಪಡೆದು ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ ಸುನೀಲ್ ಕುಮಾರ್, ರಾಷ್ಟ್ರೀಯವಾದಿ ಚಿಂತನೆಯ ಒಲವು ಹೊಂದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‍ನಲ್ಲೂ ಸಕ್ರಿಯರಾಗಿದ್ದವರು. ಹಿಂದುತ್ವದ ಸಿದ್ದಾಂತದ ಕಡೆ ವಾಲಿದ್ದ ಇವರು ಬಜರಂಗದಳದ ಮೂಲಕ ಹಿಂದೂಪರ ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಂಡವರು.
ಬಿಲ್ಲವ ಸಮುದಾಯದ ಮುಖಂಡ
ಕರಾವಳಿ ಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬಿಲ್ಲವ ಸಮುದಾಯದ ಮುಖಂಡರಾಗಿರುವ ಸುನೀಲ್ ಕುಮಾರ್, 2004ರಲ್ಲಿ ಕಾರ್ಕಳ ಅಸೆಂಬ್ಲಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದರು. 2012ರಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸುನೀಲ್, ಕಾಂಗ್ರೆಸ್ಸಿನ ಕೆ.ಜಯಪ್ರಕಾಶ್ ಹೆಗಡೆ ವಿರುದ್ದ ಸುಮಾರು 45ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಕಳೆದ ಬಾರಿಯ ಚುನಾವಣೆಯ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಇವರ ಆಸ್ತಿ 2.92 ಕೋಟಿ, ಸಾಲ 92.16 ಲಕ್ಷ.
ಸರಕಾರಿ ಶಾಲಾ-ಕಾಲೇಜುಗಳಿಗೆ ಪುನಶ್ಚೇತನ
ಸಾವರ್ಕರ್ ಅವರ ಜನ್ಮ ಶತಮಾನೋತ್ಸವ ಆಚರಣೆಯನ್ನು ಕಾರ್ಕಳ ತಾಲೂಕಿನಾದ್ಯಂತ ನಡೆಸಿ ಯುವಜನರಿಗೆ, ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಸರಣಿಗಳನ್ನು ನಡೆಸಿದ್ದರು. ಇದು ಬಿಜೆಪಿಯ ಹೈಕಮಾಂಡ್ ವಲಯದಲ್ಲಿ ಇವರನ್ನು ಇನ್ನಷ್ಟು ಗುರುತಿಸಿಕೊಳ್ಳುವಂತಾಯಿತು. ಕಾರ್ಕಳದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಮಿಯ್ಯಾರಿನ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕಾರ್ಕಳ ತಾಲೂಕಿನ ಬಹುತೇಕ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಿಗೆ ಪುನಶ್ಚೇತನಗೊಳಿಸಿದ ಕೀರ್ತಿಯೂ ಸುನೀಲ್ ಕುಮಾರ್ ಅವರಿಗೆ ಸಲ್ಲುತ್ತದೆ.
ಕೋಟಿ ಚೆನ್ನಯ ಥೀಂ ಪಾರ್ಕ್
ತುಳುನಾಡಿನ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟಿ ಚೆನ್ನಯ ಥೀಂ ಪಾರ್ಕ್, ಕಾರ್ಕಳ ಹಿರಿಯಂಗಡಿ ಬಳಿ ಅರುವತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಯಾತ್ರಿ ನಿವಾಸ, ಹದಿನೈದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಪರಶುರಾಮ ಥೀಂ ಪಾರ್ಕ್ ಲೋಕಾಪರ್ಣೆಯ ಶ್ರೇಯಸ್ಸು ಸುನೀಲ್ ಕುಮಾರ್ ಅವರಿಗೆ ಸಲ್ಲಬೇಕು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ
2008ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ ವಿರುದ್ದ 1,537 ಮತಗಳ ಅಂತರದಿಂದ ಸೋಲುಂಡಿದ್ದ ಸುನೀಲ್, ನಂತರದ 2013, 2018ರ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಬಸವರಾಜ ಬೊಮ್ಮಾಯಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಸಂಪುಟ ವಿಸ್ತರಣೆಯ ವೇಳೆ ಸುನೀಲ್ ಕುಮಾರ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಲ್ಲಾ 5ಕ್ಷೇತ್ರ ಬಿಜೆಪಿ ಕ್ಲೀನ್ ಸ್ವೀಪ್
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಐದು ಕ್ಷೇತ್ರಗಳನ್ನು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ಅದರಲ್ಲಿ ಸುನೀಲ್ ಕುಮಾರ್ ಅವರ ಕ್ಷೇತ್ರ ಕೂಡಾ ಒಂದು. ಕಳೆದ ಬಾರಿಯಂತೆ ಈ ಬಾರಿಯೂ ಕಾರ್ಕಳದಲ್ಲಿ ಬಿಜೆಪಿಗೆ ಗೆಲುವು ಸುಲಭದ ತುತ್ತೇ ಎನ್ನುವ ಪ್ರಶ್ನೆಗೆ, ಇಲ್ಲ ಎನ್ನುವ ಉತ್ತರ ಬರುವುದು ಸದ್ಯದ ಕ್ಷೇತ್ರದ ಚಿತ್ರಣ.
ಬಲವಾದ ಸ್ವಯಂಸೇವಕ ಸಂಘದ ಬೇರು
ಅಭಿವೃದ್ದಿಯ ವಿಚಾರದಲ್ಲಿ ಬಹಳಷ್ಟು ಉತ್ತಮ ಕೆಲಸವನ್ನು ಸುನೀಲ್ ಕುಮಾರ್ ಮಾಡಿದ್ದರೂ ಕೂಡಾ, ಕ್ಷೇತ್ರದಲ್ಲಿನ ಪಕ್ಷದ ಭಿನ್ನಮತ, ಶ್ರೀರಾಮಸೇನೆಯ ಮುಖ್ಯಸ್ಥರ ಸ್ಪರ್ಧೆ ಸಾಧ್ಯತೆಯಿರುವುದರಿಂದ ಮುಂಬರುವ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿರಲಿದೆ ಎನ್ನುವ ವಾತಾವರಣ ಸದ್ಯಕ್ಕಿದೆ. ಆದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೇರು ಬಲವಾಗಿರುವುದರಿಂದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ತೊಂದರೆಯಾಗಲಾರದು ಎನ್ನುವ ಮಾತು ಕೂಡಾ ಇದೆ.
ಸುನೀಲ್ ಕುಮಾರ್ ರಾಜಕೀಯ ಭವಿಷ್ಯ ಕುತೂಹಲ
ಒಂದು ಕಾಲದಲ್ಲಿ ಸುನೀಲ್ ಕುಮಾರ್ ಅವರ ಗುರುವೆಂದು ಬಿಂಬಿತರಾಗಿರುವ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಇದರ ಜೊತೆಗೆ ಕಾಂಗ್ರೆಸ್ಸಿನಿಂದ ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ವಾಣಿಜ್ಯೋದ್ಯಮಿ ಸುರೇಂದ್ರ ಶೆಟ್ಟಿ ಮತ್ತು ಡಿ.ಆರ್.ರಾಜು ಅರ್ಜಿಯನ್ನು ಸಲ್ಲಿಸಿದ್ದಾರೆ. ಮುತಾಲಿಕ್ ಸ್ಪರ್ಧೆಯಿಂದ ಹಿಂದೂ ಮತಬ್ಯಾಂಕ್ ಇಬ್ಬಾಗವಾಗಲಿದೆಯಾ ಎನ್ನುವ ಚರ್ಚೆ ಚಾಲ್ತಿಯಲ್ಲಿ ಇರುವುದರಿಂದ ಕಾರ್ಕಳ ಕ್ಷೇತ್ರದ ಫಲಿತಾಂಶ ಮತ್ತು ಸುನೀಲ್ ಕುಮಾರ್ ಅವರ ರಾಜಕೀಯ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ.











Click it and Unblock the Notifications