Dating: ಡೇಟಿಂಗ್‌ನಲ್ಲೂ ಬೆಂಗಳೂರು ಮಂದಿ ದಾಖಲೆ, ಹೆಚ್ಚಾಗಿ ಡೇಟ್ ಮಾಡೋದು ಯಾರ್ ಗೊತ್ತಾ?
ಈಗಾಗಲೇ ಸಿಲಿಕಾನ್ ಸಿಟಿ, ಐಟಿ ಸಿಟಿ, ಉದ್ಯಾನ ನಗರಿ, ಟ್ರಾಫಿಕ್ ಸಿಟಿ ಎಂಬೆಲ್ಲ ಪಟ್ಟ ಪಡೆದಿರುವ ನಮ್ಮ ಬೆಂಗಳೂರು ಮತ್ತೊಂದು ವಿಚಾರದಲ್ಲೂ ದಾಖಲೆ ನಿರ್ಮಿಸಿದೆ. ಡೇಟಿಂಗ್ ಎನ್ನುವ ಪಾಶ್ಚಾತ್ಯ ಸಂಸ್ಕೃತಿ ಭಾರತಕ್ಕೂ ಕಾಲಿಟ್ಟು ಹಲವು ವರ್ಷಗಳಾಗಿದೆ. ದೇಶದಲ್ಲಿ ಹೆಚ್ಚಾಗಿ ಡೇಟಿಂಗ್ ಮಾಡುವವರ ಪೈಕಿಯೂ ನಮ್ಮ ಬೆಂಗಳೂರು ಮಂದಿಯೇ ಮುಂದಿದ್ದಾರೆ ಎನ್ನುವ ಸಂಗತಿ ಬಹಿರಂಗವಾಗಿದೆ.
ಈಗೆಲ್ಲ ಕೈಲಿ ಮೊಬೈಲ್ ಇದ್ರೆ ಸಾಕು, ಜಗತ್ತೇ ನನ್ನ ಜೇಬಲ್ಲಿ ಅನ್ನೋ ಜಮಾನ. ಮೊಬೈಲ್‌ನಿಂದ ಜಸ್ಟ್ ಕೆಲವೇ ನಿಮಿಷಗಳಲ್ಲಿ ಬೇಕಾದ ವಸ್ತುಗಳು ಬಂದು ಕೈಸೇರುತ್ತವೆ. ಹಾಗೆಯೇ ಡೇಟಿಂಗ್ ಅನ್ನೋ ಹೊಸ ಟ್ರೆಂಡ್ ಮೂಲಕ ಜನ ಕೂಡ ಪರಸ್ಪರ ಬೆಸೆಯಲಾರಂಭಿಸಿದ್ದಾರೆ. ನೀನೆಲ್ಲೋ ನಾನೆಲ್ಲೋ ಎನ್ನುವವರು ಈ ಡೇಟಿಂಗ್ ಮೂಲಕ ಒಂದಾಗುತ್ತಿದ್ದಾರೆ..

ಡೇಟಿಂಗ್‌ಗೆ ಭಾರತದಲ್ಲಿ ಹಲವರ ವಿರೋಧವಂತೂ ಈಗಲೂ ಇದೆ. ಆದ್ರೆ, ಈಗಿನ ಜನರೇಷನ್ ಅವರು ಡೇಟಿಂಗ್ ಅನ್ನ ಕಾಮನ್ ಅಂತಾನೆ ತಗೊಂಡಿದ್ದಾರೆ. ಇದೇ ಕಾರಣದಲ್ಲಿ ಈಗ ಡೇಟಿಂಗ್ ಆಪ್‌ಗಳ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಡೇಟಿಂಗ್ ಆಪ್‌ಗಳ ಮೂಲಕ ಹಲವರು ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಮತ್ತೊಂದೆಡೆ ಅವಾಂತರಗಳಿಗೂ ಸಾಕ್ಷಿಯಾಗಿವೆ. ಆದರೂ ಡೇಟಿಂಗ್ ಟ್ರೆಂಡ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾಗಿದೆ ಎನ್ನುವುದಕ್ಕೆ ಸಾಕ್ಷಿ ಇಲ್ಲಿದೆ.
ಹೌದು ಗ್ಲೀಡೆನ್ (Gleeden) ಅನ್ನೋ ಡೇಟಿಂಗ್ ಅಪ್ಲಿಕೇಷನ್ ಈ ಮಾಹಿತಿ ಹಂಚಿಕೊಂಡಿದೆ. 2024ರಲ್ಲಿ ಈ ಅಪ್ಲಿಕೇಶನ್ ತನ್ನ ಬಳಕೆದಾರರಲ್ಲಿ ಶೇ 270ರಷ್ಟು ಏರಿಕೆ ಕಂಡಿದೆಯಂತೆ. ಈ ಆಪ್‌ನಲ್ಲಿ ಮಹಿಳಾ ಬಳಕೆದಾರರಲ್ಲಿ ಶೇ 128ರಷ್ಟು ಹೆಚ್ಚಳವನ್ನು ಕಂಡಿದ್ದು, ಗ್ಲೀಡೆನ್ ಬಳಕೆದಾರರಲ್ಲಿ ಸದ್ಯ ಶೇಕಡಾ 58ರಷ್ಟು ಮಂದಿ ಮಹಿಳೆಯರೇ ಇದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

ಗ್ಲೀಡೆನ್ ಬಳಕೆದಾರರ ಪೈಕಿ ಶೇ 40ರಷ್ಟು ಜನರು ಅಪ್ಲಿಕೇಶನ್‌ನಲ್ಲಿ ಪ್ರತಿದಿನ ಸುಮಾರು 45 ನಿಮಿಷಗಳವರೆಗೆ ಸಮಯ ಕಳೆಯುತ್ತಾರೆ. ಇನ್ನು ಈ ಬಳಕೆದಾರರೆಲ್ಲ 30ರಿಂದ 45 ವಯಸ್ಸಿನವರು ಎಂದೂ ಹೇಳಿದೆ. ಇನ್ನು ಗ್ಲೀಡೆನ್‌ನ ಅಪ್ಲಿಕೇಷನ್ ಬಳಕೆದಾರರಲ್ಲಿ ಬೆಂಗಳೂರು ಮಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಮೊದಲ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಶೇ 20ರಷ್ಟು ಗ್ಲೀಡೆನ್‌ನ ಬಳಕೆದಾರರ ಸಂಖ್ಯೆ ಇದೆ. ನಂತರದ ಸ್ಥಾನಗಳಲ್ಲಿ ಮುಂಬೈ ಶೇ 19ರಷ್ಟು, ಕೋಲ್ಕತ್ತಾದಲ್ಲಿ ಶೇ 18ರಷ್ಟು ಹಾಗೂ ದೆಹಲಿಯಲ್ಲಿ ಶೇ 15ರಷ್ಟು ಬಳಕೆದಾರರಿದ್ದಾರೆ. ದೇಶದ ಮೆಟ್ರೋ ನಗರಗಳು ಗರಿಷ್ಠ ಬಳಕೆದಾರರನ್ನು ಹೊಂದಿವೆ. ಇದರ ಜೊತೆಗೆ ಭೋಪಾಲ್, ವಡೋದರಾ ಮತ್ತು ಕೊಚ್ಚಿಯಂತಹ ಸಣ್ಣ ನಗರಗಳಲ್ಲಿ ಕೂಡ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.
ಭಾರತವು ಯಾವಾಗಲೂ ಗ್ಲೀಡೆನ್‌ಗೆ ಪ್ರಮುಖ ಮಾರುಕಟ್ಟೆಯಾಗಿದೆ. ಬರೋಬ್ಬರಿ 3 ಮಿಲಿಯನ್ ಬಳಕೆದಾರರು ಭಾರತದಲ್ಲಿದ್ದಾರೆ. ಇದು ದೇಶದಲ್ಲಿ ಸಂಬಂಧಗಳ ವಿಕಾಸದ ಗ್ರಹಿಕೆಗಳಿಗೆ ಸಾಕ್ಷಿಯಾಗಿದೆ ಎಂದು ಗ್ಲೀಡೆನ್‌ನ ಭಾರತದ ಮ್ಯಾನೇಜರ್ ಸಿಬಿಲ್ ಶಿಡ್ಡೆಲ್ ಹೇಳಿದ್ದಾರೆ. ಈ ಬೆಳವಣಿಗೆಯು ಬದಲಾಗುತ್ತಿರುವ ಸಮಾಜದ ಸಂಕೇತ. ಡೇಟಿಂಗ್‌ನಲ್ಲಿ ಹೆಚ್ಚುತ್ತಿರುವ ಮಹಿಳೆಯರ ಆಸಕ್ತಿಯು ಇಂದಿನ ಜಗತ್ತಿನಲ್ಲಿ ಸುರಕ್ಷತೆ, ಆಯ್ಕೆಯ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುವ ವೇದಿಕೆಗಳ ಪ್ರಾಮುಖ್ಯತೆಗೆ ಹಿಡಿದ ಕನ್ನಡಿ ಎಂದಿದ್ದಾರೆ.












Click it and Unblock the Notifications