ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಶೂ ರ್‍ಯಾಕ್ ಇಟ್ಟ ನಿವಾಸಿಗೆ ₹24,000 ದಂಡ, ಏನಿದು ರೂಲ್ಸ್?
ಬೆಂಗಳೂರು ಲೈಫ್ ಮೊದಲೇ ದುಬಾರಿ ಎಂದು ಕರೆಸಿಕೊಳ್ಳುತ್ತಿದೆ. ಈ ನಗರದಲ್ಲಿ ಎಷ್ಟು ಸಂಪಾದಿಸಿದರೂ ಹಣ ನೀರಿನಂತೆ ಪೋಲಾಗುತ್ತೆ ಎನ್ನುತ್ತಾರೆ. ಇನ್ನು ಬೆಂಗಳೂರಿನಲ್ಲಿ ಮನೆ, ಅಪಾರ್ಟ್‌ಮೆಂಟ್ ಬಾಡಿಗೆ ಕೂಡ ಗಗನಕ್ಕೇರಿದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ಶೂ ರ್‍ಯಾಕ್ ಇಟ್ಟರೆ ಅಪಾರ್ಟ್‌ಮೆಂಟ್‌ನಲ್ಲಿ ಅದಕ್ಕೂ ದಂಡ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ತನ್ನ ನಿವಾಸದ ಬಾಗಿಲ ಮುಂದೆ ಶೂ ರ್‍ಯಾಕ್ ಇಟ್ಟ ಕಾರಣಕ್ಕೆ ನಿವಾಸಿಯೊಬ್ಬರು ಬರೋಬ್ಬರಿ 24,000 ರೂಪಾಯಿ ದಂಡ ಕಟ್ಟಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬ ನಿವಾಸಿ ತನ್ನ ಮನೆಯ ಮುಂಭಾಗದ ಬಾಗಿಲಿನ ಹೊರಗೆ ಒಂದು ಸಾಧಾರಣ ಶೂ ರ್‍ಯಾಕ್ ಇಟ್ಟುಕೊಂಡಿದ್ದಕ್ಕೆ ಸುಮಾರು ಎಂಟು ತಿಂಗಳಿನಿಂದ ದಿನಕ್ಕೆ 100 ರೂಪಾಯಿಯಂತೆ ದಂಡ ಪಾವತಿಸಿದ್ದು, 24,000 ರೂಪಾಯಿವರೆಗೆ ದಂಡ ತಲುಪಿದೆ. ಅಪಾರ್ಟ್‌ಮೆಂಟ್ ಅಸೋಸಿಯೇಷನ್ ವತಿಯಿಂದಲೇ ಈ ರೂಲ್ಸ್ ಜಾರಿ ಮಾಡಿದ್ದು, ದಂಡದ ಮೊತ್ತವನ್ನು ದಿನಕ್ಕೆ 100 ರೂಪಾಯಿಗಳಿಂದ 200 ರೂಪಾಯಿಗೆ ಹೆಚ್ಚಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ನಿವಾಸಿಗಳ ಸಂಘವು ಶೂ ರ್‍ಯಾಕ್‌ಗಳು, ಪಾಟ್‌ನಲ್ಲಿಡುವ ಸಸ್ಯಗಳು ಸೇರಿದಂತೆ ಸಾಮಾನ್ಯ ಸ್ಥಳಗಳಲ್ಲಿ ವೈಯಕ್ತಿಕ ವಸ್ತುಗಳನ್ನು ಇಡುವುದರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಸುಮಾರು ಅರ್ಧದಷ್ಟು ನಿವಾಸಿಗಳು ತಮ್ಮ ಫ್ಲಾಟ್‌ಗಳ ಹೊರಗೆ ಈ ವಸ್ತುಗಳನ್ನು ಇರಿಸಿದ್ದಾರೆ.
ಈ ಸಂಬಂಧ ನಿವಾಸಿಗಳಿಗೆ ನೋಟಿಸ್‌ಗಳನ್ನು ನೀಡಲಾಗಿದ್ದು, ಎರಡು ತಿಂಗಳ ಗಡುವನ್ನು ಕೂಡ ನಿಗದಿಪಡಿಸಿತ್ತು. ಮೊದಲಿಗೆ ಹಲವರು ಇದನ್ನು ವಿರೋಧಿಸಿದರೂ ಕೊನೆಗೆ ಎಲ್ಲರೂ ನಿಯಮ ಪಾಲಿಸುತ್ತಿದ್ದಾರೆ. ಒಬ್ಬ ನಿವಾಸಿ ಕೊನೆಗೂ ಅದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ನಿಯಮ ಮೀರಿ ಶೂ ರ್‍ಯಾಕ್ ಅನ್ನು ಇಟ್ಟುಕೊಂಡಿದ್ದು, ಇದಕ್ಕೆ ದಂಡ ಕೂಡ ಪಾವತಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೊದಲಿಗೆ ಶೂ ರ್‍ಯಾಕ್‌ಗೆ ದಂಡವಾಗಿ 15,000 ರೂಪಾಯಿಯನ್ನು ಮೊದಲಿಗೆ ಪಾವತಿಸಿದ್ದಾರೆ. ಅಲ್ಲದೆ ದಂಡ ಹೆಚ್ಚು ಮಾಡಿದರೆ ಈತ ಬಗ್ಗುತ್ತಾನೆ ಎಂದುಕೊಂಡರೆ, ರ್‍ಯಾಕ್ ಹಾಗೆಯೇ ಇಟ್ಟುಕೊಂಡು ದಂಡ ಪಾವತಿ ಮಾಡಿದ್ದಾರೆ. ಅವರು ಈಗ ಕಳೆದ ಎಂಟು ತಿಂಗಳುಗಳಿಂದ 24,000 ರೂಪಾಯಿ ದಂಡ ಪಾವತಿ ಮಾಡಿದ್ದಾರೆ. ಇದರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಈ ನಿಯಮ ಜಾರಿ ಮಾಡಿದ ನಂತರವೂ ಸುಮಾರು ಅರ್ಧದಷ್ಟು ನಿವಾಸಿಗಳು ತಮ್ಮ ಫ್ಲಾಟ್‌ಗಳ ಹೊರಗೆ ಯಾವುದಾದರೂ ಒಂದು ರೀತಿಯ ವೈಯಕ್ತಿಕ ವಸ್ತುಗಳನ್ನು ಇರಿಸಿದ್ದರು. ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದವರಿಗೆ ಈ ದಂಡಪ್ರಯೋಗ ಮಾಡಲಾಗಿದೆ. ಕೆಲವರು ಹಠಮಾರಿ ವ್ಯಕ್ತಿಯ ನಡೆಯನ್ನು ಮೆಚ್ಚಿದ್ದಾರೆ. ಆ ವ್ಯಕ್ತಿಯು ತನ್ನ ಮಿತಿಯಲ್ಲಿ ಇದನ್ನೆಲ್ಲ ಮಾಡಿದ್ದಾರೆ ಎಂದಿದ್ದಾರೆ. ಕೆಲವರು ಅಪಾರ್ಟ್‌ಮೆಂಟ್‌ನ ಈ ನಿಯಮವನ್ನು ಖಂಡಿಸಿದ್ದಾರೆ. ಇನ್ನೂ ಕೆಲವರು ಸ್ವಚ್ಛತೆ ದೃಷ್ಟಿಯಿಂದ ಇದು ಒಳ್ಳೆಯದು ಎಂದಿದ್ದಾರೆ.












Click it and Unblock the Notifications