New Year celebration: ಹೊಸ ವರ್ಷಕ್ಕೆ ರಾತ್ರಿ ಎಷ್ಟರವರೆಗೆ ಹೋಟೆಲ್, ಬಾರ್-ರೆಸ್ಟೋರೆಂಟ್ ತೆರೆದಿರುತ್ತೆ?
ಹೊಸ ವರುಷ ಬರಮಾಡಿಕೊಳ್ಳಲು ಇನ್ನು ಐದೇ ದಿನ ಬಾಕಿ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಪೊಲೀಸರು ಕೂಡ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ತೊಂದರೆಯಾಗದಂತೆ ಅಲರ್ಟ್ ಆಗಿದ್ದಾರೆ. ಆದರೆ ಅಂದು ಪಾರ್ಟಿ ಮಾಡಲು ಬರುವವರಿಗೆ ಹೋಟೆಲ್, ರೆಸ್ಟೋರೆಂಟ್, ಪಬ್-ಬಾರ್ ಎಷ್ಟು ಸಮಯದವರೆಗೆ ತೆರೆದಿರುತ್ತದೆ ಎಂಬ ಗೊಂದಲವಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಈಗಾಗಲೇ ಹೊಸ ವರ್ಷಾಚರಣೆ ಸಂಬಂಧ ಪಾಲಿಸಬೇಕಾದ ಕೆಲವು ನಿಯಮಗಳ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಕೂಡ ಹೊರಡಿಸಲಾಗಿದೆ. ಅದರಂತೆ ಡಿಸೆಂಬರ್ 31ರಂದು ರಾತ್ರಿ ಎಷ್ಟು ಗಂಟೆಯವರೆಗೆ ಹೋಟೆಲ್‌ಗಳು, ಬಾರ್ ಹಾಗೂ ರೆಸ್ಟೋರೆಂಟ್‌ಗಳು ತೆರೆದಿರಬೇಕು ಎಂಬ ಬಗ್ಗೆಯೂ ಹೇಳಲಾಗಿದೆ. ಆದರೆ ಈ ಸಮಯವು ಪಾರ್ಟಿಗೆ ಸಾಕಾಗುವುದಿಲ್ಲ ಎಂಬ ಕೂಗು ಮೊದಲಿನಿಂದಲೂ ಇದೆ.

ಕೆಲವರು ರಾತ್ರಿಯಿಡೀ ಬಾರ್ ಹಾಗೂ ರೆಸ್ಟೋರೆಂಟ್‌ಗಳನ್ನು ತೆರೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಪೊಲೀಸ್ ಇಲಾಖೆ ಬಿಲ್‌ಕುಲ್ ಒಪ್ಪುತ್ತಿಲ್ಲ. ಸದ್ಯ ಈಗಿರುವ ನಿಯಮಂದಂತೆ ಡಿಸೆಂಬರ್ 31ರಂದು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರವೇ ಬೆಂಗಳೂರಿನಲ್ಲಿ ಎಲ್ಲ ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಆದರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷಾಚರಣೆ ಆಚರಿಸುತ್ತಾರೆ. ಇನ್ನು ಕೇವಲ ಒಂದೇ ಗಂಟೆಯಲ್ಲಿ ಪಾರ್ಟಿ ಮಾಡಲು ಹೇಗೆ ಸಾಧ್ಯ? ಎನ್ನುವುದು ಬೆಂಗಳೂರಿಗರ ವಾದ. ಆದರೆ, ರಾತ್ರಿಯಿಡೀ ಸೇವೆಗೆ ಅವಕಾಶ ಕಲ್ಪಿಸಿದರೆ ಅಹಿತಕರ ಘಟನೆಗಳು, ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಎನ್ನುವುದು ಪೊಲೀಸ್ ಇಲಾಖೆ ನೀಡುವ ಕಾರಣ.
ಇದರಿಂದಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೂ ನಷ್ಟ ಎಂದು ಹೇಳಲಾಗುತ್ತಿದೆ. ವರ್ಷಕ್ಕೆ ಒಂದು ದಿನ ಬರುವ ಈ ಸಂಭ್ರಮಾಚರಣೆಗೆ ಅಡ್ಡಿ ಮಾಡುವುದು ಸರಿಯಲ್ಲ ಎಂದು ಹೇಳುತ್ತಲೇ ಇದ್ದಾರೆ. ಈ ಬಾರಿ ಸಮಯ ವಿಸ್ತರಿಸಿದರೆ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಸ್ವಲ್ಪ ಲಾಭ ಕಾಣಬಹುದು, ಇದರಿಂದ ತೆರಿಗೆ ರೂಪದಲ್ಲಿ ಸರ್ಕಾರಕ್ಕೂ ಲಾಭ ಎಂದು ವಾದ ಮಾಡುತ್ತಿದ್ದಾರೆ.

ಇದೀಗ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಕೂಡ ಡಿಸೆಂಬರ್ 31ರಂದು ಹಾಗೂ ಜನವರಿ 1ರಂದು ಮಧ್ಯರಾತ್ರಿ 2 ಗಂಟೆಯವರೆಗೆಯಾದರೂ ಎಲ್ಲ ಹೋಟೆಲ್, ಬಾರ್ ಹಾಗೂ ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಅಂದು ನಮ್ಮ ಸೇವೆ ಅವಧಿಯನ್ನು ವಿಸ್ತರಿಸಿದರೆ ತೆರಿಗೆಗಳಿಂದ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಹೊಸ ವರ್ಷದ ಮುನ್ನಾ ದಿನವೇ ನಗರದಲ್ಲಿ ಸುಮಾರು 1000 ಕೋಟಿ ರೂಪಾಯಿವರೆಗೆ ಆದಾಯ ಬರುವ ನಿರೀಕ್ಷೆ ಇದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಕೂಡ ಹೇಳಿದ್ದಾರೆ. ಆದರೆ ಈ ಮನವಿಯನ್ನು ಸರ್ಕಾರ ಒಪ್ಪುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ..ಸದ್ಯ ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಎಲ್ಲ ಹೋಟೆಲ್, ಬಾರ್, ರೆಸ್ಟೋರೆಂಟ್ ತೆರೆಯಲು ಅವಕಾಶವಿದೆ.












Click it and Unblock the Notifications