ವಿಶ್ವ ಕಾವ್ಯ ದಿನ: ಮಾ. 20ರಂದು ಹರಿವು ಬುಕ್ಸ್‌ನಲ್ಲಿ ಕಾವ್ಯ ಚಿಂತನೆ
ಬೆಂಗಳೂರು, ಮಾರ್ಚ್ 19: ಮಾರ್ಚ್ 21 ವಿಶ್ವ ಕಾವ್ಯ ದಿನ. ಕವಿ-ಕವಿತೆಗಳ ಮೆಲುಕು, ಮಂಥನ ಹಾಗೂ ಚಿಂತನೆಗೆ ಕಿಡಿ ಹಚ್ಚುವ ದಿನ. ಕಾಲ ಬದಲಾದಂತೆ ಜಗತ್ತಿನ ಆಗುಹೋಗುಗಳ ಜೊತೆಗೆ ಸಾಮಾಜಿಕ ಸ್ವರೂಪ ಮತ್ತು ಅದರ ಸುತ್ತಲ ಸಂವೇದನೆಗಳು ಬದಲಾಗುತ್ತವೆ. ಹಾಗೆಯೇ ಕಾಲಕ್ಕೆ ತಕ್ಕ ಕಾವ್ಯಚಿಂತನೆಯೂ ರೂಪುಗೊಳ್ಳುತ್ತದೆ.
ಹಾಗಾಗಿ, ಇಂದಿನ ಕಾಲದ ಕಾವ್ಯಚಿಂತನೆಯಲ್ಲಿ ಹೊಸತಲೆಮಾರಿನ ಪಾತ್ರ ಏನು ಎಂಬ ವಿಷಯವಾಗಿ ಚರ್ಚಿಸಲು ವಿಶ್ವ ಕಾವ್ಯದಿನದ ಮುನ್ನಾ ದಿನ ಅಂದರೆ ಮಾರ್ಚ್ 20, ಭಾನುವಾರ, ಬೆಳಗ್ಗೆ 11.30ಕ್ಕೆ ವಿಶೇಷವಾದ ಕಾರ್ಯಕ್ರಮವೊಂದನ್ನು ಹರಿವು ಬುಕ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡದ ಹಿರಿಯ ಬರಹಗಾರರು, ಕವಯತ್ರಿ ಆಗಿರುವ ಎಂ.ಆರ್. ಕಮಲಾ ಅವರು ಈ ಕಾರ್ಯಕ್ರಮದ ಕೇಂದ್ರ ಬಿಂದು. ಜೊತೆಗೆ ಪ್ರಶಸ್ತಿ ವಿಜೇತ ಯುವ ಬರಹಗಾರ, ಕವಿ ಶ್ರೀಧರ ಬನವಾಸಿ, ಹೊಸತಲೆಮಾರಿನ ಬರಹಗಾರ್ತಿ ಪೂರ್ಣಿಮಾ ಮಾಳಗಿಮನಿ ಹಾಗೂ ಬರಹಗಾರ, ಕವಿ ಡಾ. ಲಕ್ಷ್ಮಣ್ ಅವರು ಇರಲಿದ್ದಾರೆ.

"ಸಮಕಾಲೀನ ಕಾವ್ಯ ಚಿಂತನೆಯಲ್ಲಿ ಹೊಸತಲೆಮಾರಿನ ಪಾತ್ರ" ಎಂಬ ವಿಷಯದ ಕುರಿತು ಈ ನಾಲ್ಕೂ ಜನ ಮಾತನಾಡಲಿದ್ದಾರೆ. ಸಂವಾದ ನಡೆಸಲಿದ್ದಾರೆ. ಬೆಂಗಳೂರಿನ ಬಸವನಗುಡಿಯ ಡಿ.ವಿ.ಜಿ ರಸ್ತೆಯಲ್ಲಿರುವ 'ಹರಿವು ಪುಸ್ತಕ' ಮಳಿಗೆಯಲ್ಲಿ ಈ ಮಾತುಕತೆ ನಡೆಯಲಿದೆ. ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬಹುದು.
ಏನಿದು ವಿಶ್ವ ಕಾವ್ಯ ದಿನ?
ಕಾವ್ಯ ಎಂಬುದು ಯಾವುದೇ ಭಾಷೆಯ ಕಿರೀಟವಿದ್ದಂತೆ. ಭಾಷಿಕರ ತಲ್ಲಣಗಳು, ಅನಿಸಿಕೆಗಳು ಆಗುಹೋಗುಗಳು ಒಂದು ಸುಂದರವಾದ ಪದಗುಚ್ಛಗಳ ರೂಪದಲ್ಲಿ ಹೊರಹೊಮ್ಮುವ ವಿಶಿಷ್ಟ ಪ್ರಾಕಾರವೇ ಕಾವ್ಯ. ಕಾವ್ಯ ಎಂಬುದು ಸಾಂಸ್ಕೃತಿಕ ಹಾಗೂ ಭಾಷಾ ಅಭಿವ್ಯಕ್ತಿಯ ಹಾಗೂ ಗುರುತಿನ ಒಂದು ಅಮೂಲ್ಯವಾದ ರೂಪ. ಇತಿಹಾಸದುದ್ದಕ್ಕೂ- ಪ್ರತಿ ಸಂಸ್ಕೃತಿಯಲ್ಲಿ ಮತ್ತು ಪ್ರತಿ ಖಂಡದಲ್ಲಿ- ಕಾವ್ಯವು ನಮ್ಮಲ್ಲಿರುವ ಮಾನವೀಯತೆ ಮತ್ತು ನಾವು ಹಂಚಿಕೊಳ್ಳಬಹುದಾದ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ. ಒಂದು ಸರಳವಾದ ಕವಿತೆಗಳನ್ನು ಗಟ್ಟಿದನಿಯಾಗ ಬಲ್ಲದು, ಶಾಂತಿ ಕಾಪಾಡಬಲ್ಲದು, ಸಮಾಜದ ದಿಕ್ಕನ್ನು ಬದಲಿಸಬಲ್ಲದು.
ಇಷ್ಟೆಲ್ಲಾ ಶಕ್ತಿ ಇರುವ ಕಾವ್ಯಕ್ಕೆ ತಕ್ಕ ಗೌರವ ಕೊಡುವ ಸಲುವಾಗಿ ಯುನೆಸ್ಕೋ ಮಾರ್ಚ್ 21 ಅನ್ನು 'ವಿಶ್ವ ಕಾವ್ಯ ದಿನ' ಎಂದು ಘೋಷಿಸಿತು. 1999ರಂದು ಪ್ಯಾರಿಸ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು. "ಕಾವ್ಯ ಅಭಿವ್ಯಕ್ತಿಯ ಮೂಲಕ ಭಾಷೆಯ ವೈವಿಧ್ಯತೆಯನ್ನು ಎತ್ತಿಹಿಡಿಯುವುದು ಹಾಗೂ ಅಳಿವಿನಂಚಿನಲ್ಲಿ ಇರುವ ಭಾಷೆಗಳು ಕಾವ್ಯದ ದನಿಯ ಮೂಲಕ ಹೊರ ಪ್ರಪಂಚಕ್ಕೆ ತಲುಪುವಂತೆ ನೆರವಾಗುವುದು." ಇದು ವಿಶ್ವ ಕಾವ್ಯ ದಿನದ ಮೂಲ ಉದ್ದೇಶವಾಗಿದೆ.
Recommended Video
ಕಾವ್ಯದಿನದಂದು ಕವಿತೆಗಳದ್ದೇ ಗುಂಗು, ಕವಿಗಳನ್ನು ಗುರುತಿಸುವುದು, ಕವಿತೆಗಳನ್ನು ಓದುವುದು, ಓದಿಸುವುದು, ಗೌರವಿಸುವುದು. ಕವಿ-ಕಾವ್ಯವನ್ನು ಹುರಿದುಂಬಿಸುವುದು ಹೀಗೆ ಕಾವ್ಯದ ಅಭಿವ್ಯಕ್ತಿಯನ್ನು ಹೆಚ್ಚಿಸಲು ಬೇಕಾದ ಕೆಲಸಗಳನ್ನು ಮಾಡಲಾಗುವುದು. ಜಗತ್ತನ್ನೇ ಒಗ್ಗೂಡಿಸಬಲ್ಲ ಶಕ್ತಿಯಿರುವ ಕಾವ್ಯಕ್ಕೆ ಕಾವ್ಯದಿನ ಇನ್ನಷ್ಟು ಶಕ್ತಿ ತುಂಬಲಿ.












Click it and Unblock the Notifications