ತಿಂಗಳಿಗೆ ₹1.5 ಲಕ್ಷ ಸಂಬಳ ಬಂದ್ರೂ ನೆಮ್ಮದಿ ಇಲ್ಲ: ಬೆಂಗಳೂರು ಬದುಕಿನ ವಾಸ್ತವ ಬಿಚ್ಚಿಟ್ಟ ಉದ್ಯೋಗಿ
ಬೆಂಗಳೂರಲ್ಲಿ ಒಂದು ಕೆಲಸ ಗಿಟ್ಟಿಸಿಕೊಳ್ಳೋದೇ ದೊಡ್ಡ ಸವಾಲು. ಒಳ್ಳೆ ಶಿಕ್ಷಣ ಪಡೆದು ಹತ್ತಾರು ಕಂಪನಿಗಳಿಗೆ ಅಲೆದರೂ ಕೆಲಸವೇನೋ ಸಿಗುತ್ತೆ. ಆದ್ರೆ ಒಂದೊಳ್ಳೆ ಸಂಬಳ ಅನ್ನೋದು ಅದೆಷ್ಟೋ ಜನಕ್ಕೆ ಕನಸಿನ ಮಾತು. ಲೋ ಮಚ್ಚಾ, ನಂಗೇನಾದ್ರೂ ಒಂದು ಲಕ್ಷ ಸಂಬಳ ಇದ್ದಿದ್ರೆ...ನನ್ ಲೈಫು ಹಾಗೇ ಹೀಗೆ ಇರ್ತಿತ್ತು ಅಂತಾ ಡೈಲಾಗ್ ಕೂಡ ಹೊಡಿತೀವಿ. ಆದ್ರೆ, ಬೆಂಗಳೂರಲ್ಲೆ ಲಕ್ಷ ಲಕ್ಷ ಸಂಬಳ ತೆಗೆದುಕೊಳ್ತಿರೋ ಟೆಕ್ಕಿಯೊಬ್ಬರು ಮಾಡಿರುವ ಪೋಸ್ಟ್ ಎಲ್ಲರಿಗೂ ಶಾಕ್ ನೀಡಿದೆ.
ಹೌದು ತಿಂಗಳಿಗೆ 1.5 ಲಕ್ಷ ರೂಪಾಯಿ ಸಂಬಳ ಅದೆಷ್ಟೋ ಉದ್ಯೋಗಿಗಳ ಡೊಡ್ಡ ಕನಸು. ಆದರೆ ಈ ಸಂಬಳ ಪಡೆಯುತ್ತಿರುವ ಉದ್ಯೋಗಿಯೊಬ್ಬರು ತಮ್ಮ ಅನುಭವ ಹಂಚಿಕೊಂಡು ಹಾಕಿರುವ ಪೋಸ್ಟ್‌ನಲ್ಲಿ ಅಚ್ಚರಿಯ ಹಾಗೂ ಆಘಾತಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಗೂ ಕಾರಣವಾಗಿದೆ. ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮ ಕಥೆಯನ್ನು ಹಂಚಿಕೊಂಡಿದ್ದು, ಆರಾಮದಾಯಕ ಜೀವನದ ಹಿಂದಿನ ಕಠೋರ ವಾಸ್ತವವನ್ನು ಅವರು ಬಿಚ್ಚಿಟ್ಟಿದ್ದಾರೆ.

ತಿಂಗಳಿಗೆ 1.5 ಲಕ್ಷ ರೂಪಾಯಿ ಗಳಿಸುತ್ತಿದ್ದರೂ, ಮೆಟ್ರೋಸಿಟಿಯಲ್ಲಿ ಜೀವನವು ಏಕೆ ತುಂಬಾ ಕಷ್ಟಕರವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಮ್ಮ ಕೆಲಸ ಕಳೆದುಕೊಳ್ಳುವುದರಿಂದ ಅವರ ಉಳಿತಾಯವು ಬೇಗನೆ ಖಾಲಿಯಾಗುತ್ತದೆ ಎಂಬ ಆತಂಕವನ್ನೂ ಅವರು ತಿಳಿಸಿದ್ದಾರೆ.
ಪೋಸ್ಟ್‌ನಲ್ಲಿ ಟೆಕ್ಕಿ ಹೇಳಿಕೊಂಡಿದ್ದೇನು?
ʼನಾನು ನನ್ನ ಪತ್ನಿ ಜೊತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನಾನು ತಿಂಗಳಿಗೆ ಸುಮಾರು 1.5 ಲಕ್ಷ ಸಂಪಾದಿಸುತ್ತೇನೆ. ಊರಿನಲ್ಲಿ ನನ್ನ ಕುಟುಂಬವಿದೆ. ಮತ್ತು ಒಂದು ಇಎಂಐ ಕೂಡ ಇದೆ. ಹಾಗಾಗಿ ನಾನು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಉಳಿಸುತ್ತೇನೆ. ಅಂದಾಜು ತಿಂಗಳಿಗೆ ಸುಮಾರು 30ರಿಂದ 40 ಸಾವಿರ ರೂಪಾಯಿ ಉಳಿಸುತ್ತೇನೆʼ ಎಂದು ಟೆಕ್ಕಿ ಹೇಳಿದ್ದಾರೆ.

ʼಆದರೆ ವಿಷಯ ಇದಲ್ಲ, ಬಾಲ್ಯದಲ್ಲಿ ಇಷ್ಟೊಂದು ಹಣ ಸಂಪಾದಿಸುವುದು, ಬೆಂಗಳೂರಿನಲ್ಲಿ ವಾಸಿಸುವುದು ನನ್ನ ಕನಸಾಗಿತ್ತು. ಗೆಳತಿಯನ್ನು ಹೊಂದುವುದು ಹಾಗು ಆಕರ್ಷಕ ದಿನಚರಿ ಕೂಡ ಕನಸು. ಆದರೆ, ಈಗ ನಾನು ಅದನ್ನು ಜೀವಿಸುತ್ತಿದ್ದೇನೆ. ಆದರೆ ಅದು ಒಂದು ದಿನ ಇದ್ದಕ್ಕಿದ್ದಂತೆ ಬಿರುಕು ಬಿಡುವ ಹೂವಿನ ಮಡಕೆಯಂತೆ ನನಗೆ ಭಾಸವಾಗುತ್ತಿದೆʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ʼಏಕೆ, ಎಂದು ನೀವು ಕೇಳಬಹುದು. ನಾನು ಬ್ಯಾಕಪ್‌ಗಾಗಿ ಹೆಚ್ಚು ಹಣ ಉಳಿಸಿಲ್ಲ. ಒಂದು ವೇಳೆ ನಾನು ನನ್ನ ಕೆಲಸವನ್ನು ಕಳೆದುಕೊಂಡರೆ, ನನ್ನ ಇಎಂಐಗಳು ಮತ್ತು ಖರ್ಚುಗಳಿಗೆ ಅಬ್ಬಬ್ಬಾ ಅಂದ್ರ ನನ್ನ 3-4 ತಿಂಗಳ ಉಳಿತಾಯದ ಹಣ ಖಾಲಿಯಾಗಿಬಿಡುತ್ತೆ. ನಾವು ವಾಸಿಸುತ್ತಿರುವುದು ಈಗಲೂ ಪಿಜಿಯಲ್ಲೇ, ಫ್ಲಾಟ್‌ನಲ್ಲಿ ಅಲ್ಲ. ಬೆಂಗಳೂರಿನಲ್ಲಿ ಫ್ಲಾಟ್‌ಗಾಗಿ ಹುಡುಕಾಟದ ಬಗ್ಗೆ ಯೋಚಿಸುವುದು ಕೂಡ ನನ್ನನ್ನು ಕೊಲ್ಲುತ್ತದೆʼ ಎಂದು ಸಂಕಟ ಹೊರಹಾಕಿದ್ದಾರೆ.

ʼನನ್ನ ಪೋಷಕರು ನನ್ನ ಮೇಲೆ ತುಂಬಾ ಅವಲಂಬಿತರಾಗಿದ್ದಾರೆ. ನಾನು ಪ್ರತಿ ತಿಂಗಳು ಮನೆಗೆ ಹಣ ಕಳುಹಿಸದಿದ್ದರೆ, ಅವರು ಬದುಕಲು ಸಾಧ್ಯವಾಗುವುದಿಲ್ಲ. ಈ ಎಲ್ಲ ಜವಾಬ್ದಾರಿಯ ನಡುವೆ ನಗರದ ಅವ್ಯವಸ್ಥೆ ನಲುಗಿಸುತ್ತಿದೆ. ಇಲ್ಲಿ ನೀವು ನ್ಯಾಯಯುತ ಬೆಲೆಗೆ ಯೋಗ್ಯವಾದ ವಸ್ತುಗಳನ್ನು ಸಹ ಪಡೆಯುವುದಿಲ್ಲ. ಅಗ್ಗದ ಬೆಲೆಗೆ, ನೀವು ಕೇವಲ ಕಳಪೆ ಗುಣಮಟ್ಟದ ಆಹಾರ, ದಿನಸಿ, ವಾಸ್ತವ್ಯದ ಸೇವೆಗಳನ್ನು ಹೊಂದಿದ್ದೀರಿʼ ಎಂದು ಇಲ್ಲಿನ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ʼಅರೇ, 1.5 ಲಕ್ಷ ಸಂಬಳ ಪಡೆಯುವ ವ್ಯಕ್ತಿಗೆ ಜೀವನ ಯಾವಾಗಿಂದ ಇಷ್ಟೊಂದು ಕಷ್ಟಕರವಾಯಿತು? ಇದು ಬೆಂಗಳೂರಲ್ಲಿ ಮಾತ್ರಾನಾ ಅಥವಾ ಬೇರೆ ಕಡೆಯೂ ಹೀಗೇನಾ? ಎಂದು ಕೇಳಿದ್ದಾರೆ. ನನ್ನ ಆಕ್ರೋಶದ ಮಾತುಗಳಿಗೆ ಕ್ಷಮಿಸಿ, ಆದರೆ, ನಾನು ಇದನ್ನು ಹೊರಹಾಕಲೇಬೇಕುʼ ಎಂದು ಅಸಹಾಯಕತೆಯನ್ನು ತೆರೆದಿಟ್ಟಿದ್ದಾರೆ. ಈ ಪೋಸ್ಟ್ ನಿಜಕ್ಕೂ ಉದ್ಯೋಗಸ್ಥರಿಗೆ ಶಾಕ್ ನೀಡಿದೆ.












Click it and Unblock the Notifications