ಎಚ್ಚರ ಭೂಮಿಗೆ ಕಾದಿದೆ ಗಂಡಾಂತರ, ಮಾ. 21ರಂದು ಜಡ್ಜ್‌ಮೆಂಟ್ ಡೇ..!
ವಿಜ್ಞಾನಿಗಳು ಮತ್ತೊಮ್ಮೆ ಅಲರ್ಟ್ ಆಗಿದ್ದಾರೆ. ಜಗತ್ತಿನ ಎಲ್ಲಾ ಟೆಲಿಸ್ಕೋಪ್‌ಗಳು ಅದೊಂದು ಕ್ಷುದ್ರಗ್ರಹದ ಕಡೆ ಮುಖಮಾಡಿವೆ. ಅಷ್ಟಕ್ಕೂ ಕೊರೊನಾ ಕಂಟಕದ ಮಧ್ಯೆ ಭೂಮಿಗೆ ಕ್ಷುದ್ರಗ್ರಹ ಕಂಟಕವೂ ಎದುರಾಗಿದೆ. ಹೌದು, ನಾವಿಲ್ಲಿ ಹೇಳುತ್ತಿರುವುದು '2001- F032' ಎಂಬ ಹೆಸರಿನ ಕ್ಷುದ್ರಗ್ರಹದ ಬಗ್ಗೆ.
440 ರಿಂದ 680 ಮೀಟರ್ ದೊಡ್ಡದಾದ ಬೃಹತ್ ಬಂಡೆ ಇದು. ಮಾರ್ಚ್ 21 ಅಂದರೆ ಇದೇ ಭಾನುವಾರ ಭೂಮಿ ಸಮೀಪ ಹಾದು ಹೋಗಲಿದೆ. ಸೂರ್ಯನ ಸುತ್ತ 1 ರೌಂಡ್ ಹಾಕಲು 810 ಭೂ ದಿನಗಳು ಅಂದರೆ ಭೂಮಿ ಮೇಲಿನ ಸಮಯದ ಲೆಕ್ಕಾಚಾರದಲ್ಲಿ 810 ದಿನ ತೆಗೆದುಕೊಳ್ಳುತ್ತದೆ '2001- F032' ಕ್ಷುದ್ರಗ್ರಹ.
ಇದೇ ಕ್ಷುದ್ರಗ್ರಹ ಮಾನವನಿಗೆ ಭಯ ಹುಟ್ಟಿಸಿದೆ. ಏಕೆಂದರೆ ಭೂಮಿಯಿಂದ ತುಂಬಾ ಹತ್ತಿರದಲ್ಲಿ ಹಾದು ಹೋಗಲಿದೆ '2001- F032'. ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಭೂಮಿಯ ಸಮೀಪ ಹಾದು ಹೋಗುವ ಕ್ಷುದ್ರಗ್ರಹಗಳ ಸ್ಪೀಡ್‌ಗಿಂತ ಅತಿ ಹೆಚ್ಚು ವೇಗವಾಗಿ '2001- F032' ಹಾದು ಹೋಗಲಿದೆ. ಅಂದರೆ '2001- F032' ಹೆಸರಿನ ಈ ಕ್ಷುದ್ರಗ್ರಹದ ವೇಗ ಗಂಟೆಗೆ 1 ಲಕ್ಷ 24 ಸಾವಿರ ಕಿಲೋಮೀಟರ್ ಇರಲಿದೆ. ಹೀಗೆ ಭೂಮಿ ಬಳಿ ಹಾದು ಹೋಗುವಾಗ ಸ್ವಲ್ಪ ಹೆಚ್ಚುಕಮ್ಮಿ ಆದರೂ ಭೂಮಿಗೆ ಆಪತ್ತು ಕಟ್ಟಿಟ್ಟಬುತ್ತಿ.

ಮಾರ್ಚ್ 21ರಂದು ಜಡ್ಜ್‌ಮೆಂಟ್..!
ಅಂದಹಾಗೆ ಮಾರ್ಚ್ 21ರ ಭಾನುವಾರ ಭೂಮಿ ಪಾಲಿಗೆ ಜಡ್ಜ್‌ಮೆಂಟ್. ಅಷ್ಟಕ್ಕೂ ಇದು ಟರ್ಮಿನೇಟರ್ ಸಿನಿಮಾದಲ್ಲಿ ಬರುವ ಜಡ್ಜ್‌ಮೆಂಟ್ ಅನ್ನೇ ಹೋಲುತ್ತದೆ. ಆದರೆ ಟರ್ಮಿನೇಟರ್ ಚಿತ್ರದಲ್ಲಿ ಅಣು ಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ ಎಲ್ಲವನ್ನು ಸರ್ವನಾಶ ಮಾಡಿದರೆ, ಇಲ್ಲಿ ಕ್ಷುದ್ರಗ್ರಹ ಭಾರಿ ಆತಂಕ ಸೃಷ್ಟಿಸಿದೆ. ಮಾರ್ಚ್ 21ರಂದು ಭೂಮಿಗೆ ಅತ್ಯಂತ ಸಮೀಪ ಅಂದರೆ ಸುಮಾರು 20 ಲಕ್ಷ ಕಿಲೋ ಮೀಟರ್ ದೂರದಲ್ಲಿ 2001- F032 ಕ್ಷುದ್ರಗ್ರಹ ಹಾದು ಹೋಗಲಿದೆ. ಸರಿಯಾಗಿ 20 ವರ್ಷದ ಹಿಂದೆ ಇಂತಹ ಘಟನೆ ನಡೆದಿತ್ತು. 2001ರಲ್ಲಿ ಇದೇ ಕ್ಷುದ್ರಗ್ರಹ ಭೂಮಿಗೆ ಸಮೀಪದಲ್ಲಿ ಅಂದರೆ ಮೆಕ್ಸಿಕೋ ದೇಶದ ಬಳಿ ಹಾದು ಹೋಗಿತ್ತು.

ವಿಜ್ಞಾನಿಗಳ ಪಾಲಿಗೆ ಮಹತ್ವದ ದಿನ..!
ಒಂದು ಕಡೆ ಆತಂಕ, ಮತ್ತೊಂದು ಕಡೆ ಕುತೂಹಲ. ಹೀಗೆ ಎರಡನ್ನೂ ಸೃಷ್ಟಿಸಿದೆ 2001- F032 ಕ್ಷುದ್ರಗ್ರಹ. ಭೂಮಿಗೆ ಸಮೀಪದಲ್ಲಿ ಕ್ಷುದ್ರಗ್ರಹ ಹಾದು ಹೋಗುವ ಹಿನ್ನೆಲೆಯಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಹಲವಾರು ಮಹತ್ವದ ಸಂಶೋಧನೆಗೆ ತಯಾರಿ ನಡೆಸಿದ್ದಾರೆ. ನಾಸಾ ವಿಜ್ಞಾನಿಗಳು ನಿದ್ದೆಯನ್ನೇ ಮರೆತು 2001- F032 ಕ್ಷುದ್ರಗ್ರಹ ಬರುವಿಕೆಗೆ ಕಾಯುತ್ತಿದ್ದಾರೆ. ಭೂಮಿಗೆ ಸಮೀಪದಲ್ಲಿ ಸಾಗುವ ಹಿನ್ನೆಲೆಯಲ್ಲಿ ಅದರ ರಚನೆ ಮತ್ತು ಭೂಮಿ ಮೇಲೆ ಕ್ಷುದ್ರಗ್ರಹಗಳ ನಿಖರ ಪರಿಣಾಮ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ಭವಿಷ್ಯದಲ್ಲಿ ಗಣಿಗಾರಿಕೆ ನಡೆಸಲು ಇದೇ ಕ್ಷುದ್ರಗ್ರಹಗಳನ್ನ ಬಳಸಿಕೊಳ್ಳಲು ಸಹಾಯಕವಾಗಲಿದೆ.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!
ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.

ಊಹೆಗೂ ನಿಲುಕದಷ್ಟು ಸಂಪತ್ತು..!
ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.












Click it and Unblock the Notifications