ಯುಪಿ, ಪಂಜಾಬ್ ಚುನಾವಣೆಗೆ ಸಜ್ಜು: ಮತದಾರರು, ಅಭ್ಯರ್ಥಿಗಳ ವಿವರ ಇಲ್ಲಿದೆ
ನವದೆಹಲಿ, ಫೆಬ್ರವರಿ 19: ಈ ವರ್ಷ ಪಂಚ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯು ಭಾರೀ ಕುತೂಹಲವನ್ನು ಕೆರಳಿಸಿದೆ. ನಾಳೆ ಪಂಜಾಬ್‌ನಲ್ಲಿ 117 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದರೆ, ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ 59 ವಿಧಾನಸಭೆ ಕ್ಷೇತ್ರಗಳಿಗೆ ಮೂರನೇ ಹಂತದ ಚುನಾವಣೆ ನಡೆಯಲಿದೆ. ಈ ನಡುವೆ ಎಲ್ಲ ಪಕ್ಷಗಳ ಹಿರಿಯ ನಾಯಕರು ಮತದಾರರನ್ನು ಸೆಳೆಯಲು ಶುಕ್ರವಾರ ಕೊನೆಯ ಹಂತದ ಪ್ರಯತ್ನ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮೂರನೇ ಹಂತದಲ್ಲಿ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಲಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧಿಸುತ್ತಿರುವ ಕರ್ಹಾಲ್ ವಿಧಾನಸಭಾ ಕ್ಷೇತ್ರಕ್ಕೂ ಭಾನುವಾರ ಈ ಹಂತದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರದಿಂದ ಬಿಜೆಪಿ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಾಘೇಲ್ ಅವರನ್ನು ಕಣಕ್ಕಿಳಿಸಿದೆ.
Recommended Video
117 ಸ್ಥಾನಗಳ ಪಂಜಾಬ್ ವಿಧಾನಸಭೆಗೆ ನಾಳೆ ಮತದಾನ ನಡೆಯಲಿದೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಉತ್ತರ ಪ್ರದೇಶ, ಮಣಿಪುರ, ಪಂಜಾಬ್, ಉತ್ತರಾಖಂಡ, ಗೋವಾ ಪಂಚ ರಾಜ್ಯಗಳಲ್ಲಿಯೂ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ನಾಳೆ ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ನಡೆಯುವ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಇಲ್ಲಿದೆ ಮುಂದೆ ಓದಿ.....

ಪಂಜಾಬ್ ವಿಧಾನಸಭೆ ಚುನಾವಣೆ
ಪಂಜಾಬ್‌ನಲ್ಲಿ 117 ವಿಧಾನಸಭೆ ಕ್ಷೇತ್ರಗಳು ಇದ್ದು, 93 ಮಹಿಳೆಯರು ಸೇರಿದಂತೆ 1,304 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 2.14 ಕೋಟಿ ಮತದಾರರನ್ನು ಹೊಂದಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಪಂಜಾಬ್ ಸಿದ್ಧವಾಗಿದೆ. ಒಟ್ಟು 117 ಕ್ಷೇತ್ರಗಳಿಂದ 2,266 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಪರಿಶೀಲನೆಯಲ್ಲಿ 33 ತಿರಸ್ಕೃತಗೊಂಡಿದ್ದು, 829 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಸರ್ಕಾರ ರಚಿಸಲು, ಪಕ್ಷಗಳು 59 ಅಥವಾ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಹೊಂದಿರಬೇಕು. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಮ್ಯಾಜಿಕ್ ಫಿಗರ್ 59 ಆಗಿದೆ. ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ ಎಂದು ಇಲ್ಲಿನ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್‌ನಲ್ಲಿ 1,02,00,996 ಮಹಿಳೆಯರು ಸೇರಿದಂತೆ ಒಟ್ಟು 2,14,99,804 ಮತದಾರರಿದ್ದಾರೆ. 24,740 ಮತಗಟ್ಟೆಗಳಿದ್ದು, ಅವುಗಳಲ್ಲಿ 2,013 ನಿರ್ಣಾಯಕ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭಾನುವಾರ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಸಹಿತ ರಜೆ ಘೋಷಿಸಿದೆ.

ಪಂಜಾಬ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್
ಪಂಜಾಬ್‌ನಲ್ಲಿ ಕಾಂಗ್ರೆಸ್, ಎಎಪಿ, ಎಸ್‌ಎಡಿ-ಬಿಎಸ್‌ಪಿ ಮೈತ್ರಿ, ಬಿಜೆಪಿ-ಪಿಎಲ್‌ಸಿ-ಎಸ್‌ಎಡಿ (ಸಂಯುಕ್ತ) ಕೂಟಾ ಮಾತ್ರವಲ್ಲದೇ ಈಗ ವಿವಿಧ ರೈತ ಸಂಘಟನೆಗಳ ರಾಜಕೀಯ ಪಕ್ಷವಾದ ಸಂಯುಕ್ತ ಸಮಾಜ ಮೋರ್ಚಾ ಕೂಡಾ ಸ್ಪರ್ಧೆಗೆ ಇಳಿಯಲಿದೆ. ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಆಡಳಿತಾರೂಢ ಕಾಂಗ್ರೆಸ್, ಮಾದಕ ವಸ್ತುಗಳ ಹಾವಳಿ, ಭ್ರಷ್ಟಾಚಾರ, ಒಳಜಗಳ ಸೇರಿದಂತೆ ಹಲವು ವಿಷಯಗಳಲ್ಲಿ ರಾಜಕೀಯ ವಿರೋಧಿಗಳಿಂದ ತೀವ್ರ ದಾಳಿಗೆ ಒಳಗಾಗಿದೆ. 2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಪಡೆಯುವ ಮೂಲಕ ಎಸ್ಎಡಿ-ಬಿಜೆಪಿ ಒಕ್ಕೂಟದ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ. ಪ್ರಸ್ತುತ ಸಿಎಂ ಚರಣ್‌ಜೀತ್ ಸಿಂಗ್ ಚನ್ನಿ ಅವರ 111 ದಿನಗಳ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ವಿದ್ಯುತ್ ದರ ಮತ್ತು ಇಂಧನ ಬೆಲೆಗಳನ್ನು ಕಡಿಮೆ ಮಾಡುವ ನಿರ್ಧಾರಗಳನ್ನು ಕಾಂಗ್ರೆಸ್‌ಗೆ ಲಾಭ ಉಂಟು ಮಾಡುವ ಸಾಧ್ಯತೆ ಇದೆ. ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿರುವ ಆಮ್ ಆದ್ಮಿ ಪಕ್ಷವು ದೆಹಲಿಯ ಆಡಳಿತ ಮಾದರಿಯನ್ನು ಬಿಂಬಿಸುತ್ತಲೇ ಅಧಿಕಾರವನ್ನು ಪಡೆಯುವ ಕಾರ್ಯತಂತ್ರ ರೂಪಿಸಿದೆ. ಆದರೆ ಈ ನಡುವೆ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡಿದ ಆರೋಪವನ್ನು ಎದುರಿಸಿದೆ. ಕೃಷಿ ಕಾನೂನು ವಿಚಾರದಲ್ಲಿ 2020 ರಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಶಿರೋಮಣಿ ಅಕಾಲಿದಳಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ಉತ್ತರ ಪ್ರದೇಶ ಮೂರನೇ ಹಂತದ ಚುನಾವಣೆ
ಉತ್ತರ ಪ್ರದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಈಗಾಗಲೇ ಎರಡು ಹಂತಗಳಲ್ಲಿ ಚುಣಾವಣೆಯು ನಡೆದಿದೆ. ಉತ್ತರ ಪ್ರದೇಶದ 16 ಜಿಲ್ಲೆಗಳಲ್ಲಿ ಹರಡಿರುವ 59 ವಿಧಾನಸಭಾ ಕ್ಷೇತ್ರಗಳಿಗೆ ಮೂರನೇ ಹಂತದ ಮತದಾನದಲ್ಲಿ ಭಾನುವಾರ ಮತದಾನ ನಡೆಯಲಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರವರೆಗೆ ನಡೆಯಲಿದೆ. ರಾಜ್ಯ ಚುನಾವಣೆಯ ಮೂರನೇ ಹಂತದ ಪ್ರಚಾರ ಶುಕ್ರವಾರ ಅಂತ್ಯಗೊಂಡಿದ್ದು, ಮತದಾರರನ್ನು ಸೆಳೆಯಲು ಪಕ್ಷಗಳ ಹಿರಿಯ ನಾಯಕರು ಅಂತಿಮ ಪ್ರಯತ್ನ ನಡೆಸಿದ್ದಾರೆ. ಮೂರನೇ ಹಂತದಲ್ಲಿ 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‌ಪುರಿ, ಫರುಕಾಬಾದ್, ಕನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‌ಪುರ್, ಹಮೀರ್‌ಪುರ್ ಮತ್ತು ಮಹೋಬಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. 2017ರ ಚುನಾವಣೆಯಲ್ಲಿ 59 ಸ್ಥಾನಗಳ ಪೈಕಿ ಬಿಜೆಪಿ 49 ಸ್ಥಾನಗಳನ್ನು ಗೆದ್ದಿದ್ದರೆ, ಎಸ್‌ಪಿ ಒಂಬತ್ತು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆದಿದ್ದರೆ, ಬಹುಜನ ಸಮಾಜ ಪಕ್ಷ ಯಾವುದೇ ಸ್ಥಾನವನ್ನು ಪಡೆದಿಲ್ಲ. ಎರಡನೇ ಹಂತದಲ್ಲಿ ಒಂಬತ್ತು ಜಿಲ್ಲೆಗಳ 55 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಮೊದಲನೇ ಹಂತದ ಚುನಾವಣೆ ಫೆಬ್ರವರಿ 10ರಂದು ನಡೆದಿದೆ. ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಸ್ಥಾನಗಳ ಪೈಕಿ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದೆ.

ಪ್ರಮುಖ ಅಭ್ಯರ್ಥಿಗಳು ಯಾರ್‍ಯಾರು ನೋಡಿ..
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧಿಸುತ್ತಿರುವ ಕರ್ಹಾಲ್ ವಿಧಾನಸಭಾ ಕ್ಷೇತ್ರಕ್ಕೆ ಭಾನುವಾರ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರದಿಂದ ಬಿಜೆಪಿ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಾಘೇಲ್ ಅವರನ್ನು ಕಣಕ್ಕಿಳಿಸಿದೆ. ಭಾನುವಾರ ನಡೆಯಲಿರುವ ಮತದಾನವು ಸಮಾಜವಾದಿ ಪಕ್ಷದ ಮುಖ್ಯಸ್ಥರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ಅವರು ತಮ್ಮ ಸಾಂಪ್ರದಾಯಿಕ ಜಸ್ವಂತ್‌ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಶುಕ್ರವಾರ ಮೂರನೇ ಹಂತದ ಪ್ರಚಾರ ಕೊನೆಗೊಳ್ಳುವ ಮೊದಲು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾನ್ಪುರ, ಕಲ್ಪಿ, ಜಲೌನ್ ಮತ್ತು ಹಮೀರ್‌ಪುರದಲ್ಲಿ ಮನೆ ಮನೆಗೆ ಮೆರವಣಿಗೆಯನ್ನು ಕೈಗೊಂಡಿದ್ದಾರೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಜಲೌನ್ ಮತ್ತು ಔರೈಯಾದಲ್ಲಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಸಮಾಜವಾದಿ ಪಕ್ಷದ ಕುಲಪತಿ ಮುಲಾಯಂ ಸಿಂಗ್ ಯಾದವ್ ಕರ್ಹಾಲ್‌ನಲ್ಲಿ ತಮ್ಮ ಪುತ್ರ ಅಖಿಲೇಶ್ ಯಾದವ್‌ಗೆ ಮತ ಯಾಚಿಸಿದರು. ಕರ್ಹಾಲ್‌ನ ಎಲ್ಲಾ ಬೂತ್‌ಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸುವಂತೆ ಕೋರಿ ಬಿಜೆಪಿ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ. ಈ ಹಂತದಲ್ಲಿ ಕಣದಲ್ಲಿರುವ ಪ್ರಮುಖ ಮುಖಗಳ ಪೈಕಿ ಬಿಜೆಪಿಯ ಸತೀಶ್ ಮಹಾನಾ (ಕಾನ್ಪುರದ ಮಹಾರಾಜಪುರ) ಮತ್ತು ರಾಮವೀರ್ ಉಪಾಧ್ಯಾಯ (ಹತ್ರಾಸ್‌ನ ಸದಾಬಾದ್) ಮತ್ತು ಫರೂಕಾಬಾದ್ ಸದಾರ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಲೂಯಿಸ್ ಖುರ್ಷಿದ್ ಸೇರಿದ್ದಾರೆ. ಲೂಯಿಸ್ ಖುರ್ಷಿದ್ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಆಗಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಸಿಮ್ ಅರುಣ್ ಬಿಜೆಪಿ ಟಿಕೆಟ್‌ನಲ್ಲಿ ಕನ್ನೌಜ್ ಸದರ್‌ನಿಂದ ಸ್ಪರ್ಧಿಸುತ್ತಿದ್ದು, ಉತ್ತರ ಪ್ರದೇಶದ ಸಚಿವ ರಾಮನರೇಶ್ ಅಗ್ನಿಹೋತ್ರಿ ಕೂಡ ಈ ಹಂತದಲ್ಲಿ ಕಣದಲ್ಲಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications