ಗ್ರಾಮ-ಒನ್ ಸೇವಾ ಕೇಂದ್ರ ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 03: ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರು ಒನ್ ಮಾದರಿಯಲ್ಲಿ ಫ್ರಾಂಚೈಸಿ ಆಧಾರದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಲು ಈಗಾಗಲೇ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 37 ಗ್ರಾಮ ಪಂಚಾಯಿತಿಗಳಿಂದ ಯಾವುದೇ ಅರ್ಜಿ ಸ್ವೀಕೃತವಾಗದ ಹಿನ್ನೆಲೆ, ಅರ್ಜಿ ಸಲ್ಲಿಕೆಯಾಗದ ಗ್ರಾಮ ಪಂಚಾಯಿತಿಯಲ್ಲಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ನೆಲಮಂಗಲ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ಅಗಳಕುಪ್ಪೆ, ಅರೆಬೊಮ್ಮನಹಳ್ಳಿ, ದೊಡ್ಡಬೆಲೆ, ಹಸಿರುವಳ್ಳಿ, ಕೊಡಿಗೆಹಳ್ಳಿ, ಕುಲುವನಹಳ್ಳಿ, ಮಣ್ಣೆ, ಮರಳುಕುಂಟೆ, ನರಸೀಪುರ, ಶಿವಗಂಗೆ, ದೇವನಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ಬೆಟ್ಟಕೋಟೆ, ಜಾಲಿಗೆ, ಕನ್ನಮಂಗಲ, ಕಾರಹಳ್ಳಿ, ಕೊಯಿರಾ, ನಲ್ಲೂರು, ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ಅರಳುಮಲ್ಲಿಗೆ, ಚನ್ನಾದೇವಿ ಅಗ್ರಹಾರ, ಹಾಡೋನಹಳ್ಳಿ, ಹಾದ್ರಿಪುರ, ಹೊನ್ನಾವರ, ಕನಸವಾಡಿ, ಮಜರಾ ಹೊಸಹಳ್ಳಿ, ಮೇಲಿನ ಜೂಗಾನಹಳ್ಳಿ (ಎಸ್.ಎಸ್.ಘಾಟಿ), ತೂಬಗೆರೆ, ತಿಪ್ಪೂರು, ಹೊಸಕೋಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಾದ ದೇವನಹೊಂದಿ, ದೊಡ್ಡಹುಲ್ಲೂರು, ದೊಡ್ಡನಲ್ಲಾಳ, ಗಣಗಲೂರು, ಕಲ್ಕುಂಟೆ ಅಗ್ರಹಾರ, ಕಂಬಳಿಪುರ, ಮುಗಬಾಳ, ಮುತ್ಸಂದ್ರ, ನೆಲವಾಗಿಲು, ಓರೋಹಳ್ಳಿ ಹಾಗೂ ಶಿವನಾಪುರದಲ್ಲಿ ಯಾವುದೇ ಅರ್ಜಿ ಸ್ವೀಕೃತವಾಗಿಲ್ಲ.
ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ 'ಗ್ರಾಮ ಒನ್' ಮೂಲಕ ಹಳ್ಳಿಯ ಜನತೆಗೂ ಸೇವೆ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತರು ಅರ್ಜಿಯನ್ನು ವೆಬ್‌ಸೈಟ್: http://karnatakaone.gov.in ಅಥವಾ sevasindhu.karnataka.gov.in ಮೂಲಕ 2022ರ ಫೆಬ್ರವರಿ 7 ರೊಳಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹೆಲ್ಪ್‌ಡೆಸ್ಕ್ ಮೊ.ಸಂ: 7829274377, 9743669741 ಹಾಗೂ 9686579224 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮ ಒನ್:
ಇದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಗ್ರಾಮಗಳಲ್ಲಿಯೇ ತಲುಪಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ನಾಗರಿಕ ಕೇಂದ್ರಿತ ಸೇವೆಗಳಾದ ಜಿ2ಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್ ಟಿ ಐ ಪ್ರಶ್ನೆಗಳು ಹಾಗೂ ಇನ್ನಿತರೇ ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಎಲ್ಲಾ ನಾಗರಿಕರಿಗೆ ತಲುಪಿಸುವ ಏಕ-ಬಿಂದು ಸಹಾಯ ಕೇಂದ್ರವಾಗಿರುವಂತೆ ಯೋಜಿಸಲಾಗಿದೆ.
ಕರ್ನಾಟಕದ ಮುಖ್ಯಮಂತ್ರಿಗಳು ಈ ಯೋಜನೆಯನ್ನು ವರ್ಷ 2020-21 ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ವಾರದ ಎಲ್ಲಾ ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತವೆ. ಈಗಾಗಲೇ ಸಕಾಲ ಯೋಜನೆಯಡಿ ಸಕಾಲದಲ್ಲಿ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಇಂತಹ ಕೇಂದ್ರ ಆರಂಭವಾಗಲಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು-ಒನ್ ಕರ್ನಾಟಕ-ಒನ್ ರೀತಿಯಲ್ಲಿ ಹಲವು ಸೇವೆಗಳು ಈ ಯೋಜನೆಯಡಿ ಸಿಗಲಿವೆ. ಮಾಹಿತಿ ಹಕ್ಕು ಕಾಯ್ದೆ ಸೇವೆ, ಮುಖ್ಯಮಂತ್ರಿಗಳ ಪರಿಹಾರ ಸೇವೆಗಳು, ಕೃಷಿ ಇಲಾಖೆ ಸೇವೆಗಳು, ಕಾರ್ಮಿಕ ಇಲಾಖೆ ಸೇವೆಗಳು, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಒಳಗೊಂಡಂತೆ ಹಲವು ಸೇವೆಗಳು ಲಭ್ಯವಿದೆ.
ಗ್ರಾಮ ಒನ್ ಕೇಂದ್ರಗಳ ಪ್ರಯೋಜನಗಳು ಹೀಗಿವೆ:
- ಸರ್ಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ಜಿಲ್ಲೆ,ತಾಲ್ಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
- ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯಬಹುದಾಗಿದೆ.
- ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರಿಕರು ಸಮಯ ಮತ್ತು ಹಣವನ್ನು ಉಳಿಸಬಹುದು.
- ಮಧ್ಯವರ್ತಿಗಳಿಂದ ಯಾವುದೇ ಅಪಾಯವಿಲ್ಲ.
- ಗ್ರಾಮ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
- ಪ್ರತಿ ಗ್ರಾಮಒನ್ ಕೇಂದ್ರವು ಮೈಕ್ರೋ ಬ್ಯಾಂಕಿಂಗ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಆರ್ಥಿಕ ಸೇರ್ಪಡೆಯನ್ನು ಸಾಧಿಸಲಾಗುತ್ತದೆ
- ಸರ್ಕಾರದ ಸೇವೆಗಳನ್ನು ಪಡೆಯಲು ನಾಗರಿಕರು ಯಾರನ್ನೂ ಅವಲಂಬಿಸಬೇಕಾಗಿಲ್ಲವಾದ್ದರಿಂದ ಸ್ವಾವಲಂಬನಾ ಮನೋಭಾವವನ್ನು ಎತ್ತಿಹಿಡಿದಂತಾಗಿದೆ
- ಸೇವೆಗಳ ಸಮಯೋಚಿತ ಮತ್ತು ಗುಣಮಟ್ಟದ ವಿತರಣೆಯ ಮೂಲಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲಾಗುತ್ತದೆ
ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಯೋಜನೆಗಳ ಪ್ರಯೋಜನ ಸಾರ್ವಜನಿಕರಿಗೆ ಸಿಗಲಿದೆ. 100 ಕ್ಕೂ ಹೆಚ್ಚು ಸೇವೆಗಳು ಒಂದೇ ಸೂರಿನಡಿ ದೊರೆಯುತಿದೆ. ಸಕಾಲದಲ್ಲಿ ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಒನ್ ಯೋಜನೆಯನ್ನು ಸಕಾಲ ತಂತ್ರಾಂಶದೊಂದಿಗೆ ಏಕೀಕರಣ ಮಾಡಲ್ಪಟ್ಟಿರುವುದು ಈ ಯೋಜನೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯ ಸಾಕಾರಕ್ಕೆ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕೆ ನೇತೃತ್ವ ವಹಿಸಬೇಕೆಂದರು ಎಂದು ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications