• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಸಂಘರ್ಷದ ಕಾಲ ನಮ್ಮೆಲ್ಲರನ್ನೂ ಒಗ್ಗೂಡಿಸಬೇಕು!

By ಮೇರಿ ಶೈಲಾ ಡಯಾಸ್
|

ಹಾಗಂತ ಪದೇ ಪದೇ ಹೇಳುತ್ತಿದ್ದವರು ಮಹಾತ್ಮಾ ಗಾಂಧಿ. ಈ ನೆಲದಿಂದ ಬ್ರಿಟಿಷರ ದಾಸ್ಯದಲ್ಲಿ ನರಳುತ್ತಿದ್ದಾಗ, ಅವರ ಸೆರೆಯಿಂದ ಹೊರಬರಲು ತವಕಿಸುತ್ತಿದ್ದಾಗ ಈ ದೇಶದಲ್ಲೂ ಅಸಮಾನತೆ ಎಂಬುದು ತಾಂಡವವಾಡುತ್ತಿತ್ತು.

ಜಾತಿ ಪದ್ದತಿಯ ಕುರೂಪದಿಂದ ಹಿಡಿದು ಹಲವು ವಿಷಯಗಳು ಭಾರತ ತಲ್ಲಣಗೊಳ್ಳುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ನಮ್ಮಲ್ಲಿನ ಇಂತಹ ಕುರೂಪಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕು ಎಂಬ ಕೂಗು ಎದ್ದಿತ್ತು.

ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ?

ಈ ಕೂಗು, ಆ ಕೂಗು ದೇಶಾದ್ಯಂತ ಆವರಿಸಿದ ರೀತಿಗಳೆಲ್ಲ ಈಗ ಇತಿಹಾಸ. ಆದರೆ ಇದನ್ನೆಲ್ಲ ಬಲ್ಲವರಾಗಿದ್ದ ಗಾಂಧಿ, ದೇಶದೊಳಗಿನ ಜಾತೀಯತೆ, ಅಸಮಾತೆಯಂತಹ ಕುರೂಪಗಳನ್ನು ವಿರೋಧಿಸುತ್ತಲೇ ಹೇಳಿದ್ದು : ಒಂದು ಸಂಘರ್ಷದ ಕಾಲ ನಮ್ಮೆಲ್ಲರನ್ನೂ ಒಗ್ಗೂಡಿಸಬೇಕು, ಬಲ ತುಂಬಬೇಕು.

ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ನಿಜಾಮರಿಂದ : ಖರ್ಗೆ

ಬ್ರಿಟಿಷರೆಂಬ ಸಶಕ್ತ ವ್ಯವಸ್ಥೆಯ ವಿರುದ್ಧ ಹೋರಾಡಲು ನಮಗೆ ಅಂತಹ ಒಗ್ಗಟ್ಟಿನ ಅಗತ್ಯವಿತ್ತು. ಮತ್ತದು ಎಲ್ಲ ಸಂಕಟಗಳ ನಡುವೆ ಸಾಧ್ಯವಾಯಿತು ಕೂಡಾ. ಹೀಗಾಗಿ ಬಲಿಷ್ಠ ಬ್ರಿಟಿಷರನ್ನು ಭಾರತದಿಂದ ಓಡಿಸಲು ನಮಗೆ ಸಾಧ್ಯವಾಯಿತು.

ಇದನ್ನೆಲ್ಲ ಏಕೆ ಗಮನಿಸಬೇಕೆಂದರೆ, ಇವತ್ತು ಕರ್ನಾಟಕದಿಂದ ಉತ್ತರ ಕರ್ನಾಟಕವನ್ನು ಪ್ರತ್ಯೇಕಿಸಬೇಕು ಎಂಬ ಕೂಗು ಶುರುವಾಗಿದೆ. ಹಳೆ ಮೈಸೂರಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಪ್ರಗತಿ ಸಾಧಿಸಿಲ್ಲ ಎಂಬುದು ನಿಜ.

ಆದರೆ ಪ್ರತ್ಯೇಕತೆಯ ಕೂಗಿನಿಂದ ಅದು ಸರಿಯಾಗುವುದಿಲ್ಲ. ವಿಪರ್ಯಾಸವೆಂದರೆ ಕರ್ನಾಟಕದಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ಪ್ರತ್ಯೇಕವಾದರೆ ಅಭಿವೃದ್ಧಿ ಸಾಧಿತವಾಗುತ್ತದೆ ಎಂದು ಹಲವರು ಕೂಗೆಬ್ಬಿಸುತ್ತಿದ್ದಾರೆ. ಈ ತಾರತಮ್ಯಗಳಿಗೆಲ್ಲ ಆಳುವ ವರ್ಗವೇ ಕಾರಣ ಎಂದು ಪ್ರತಿಪಾದಿಸುತ್ತಿದ್ದಾರೆ.

ಪ್ರತ್ಯೇಕ ರಾಜ್ಯದ ಬೇಡಿಕೆ ತಳ್ಳಿ ಹಾಕಿದ ಒನ್ಇಂಡಿಯಾ ಕನ್ನಡ ಓದುಗರು

ಆದರೆ ಅಳುವ ವರ್ಗ ಇದಕ್ಕೆ ಕಾರಣ ಎಂದು ಸಾರಾಸಗಟಾಗಿ ದೋಷ ಹೊರಿಸುವುದು ಸರಿಯಲ್ಲ. ಹಳೆ ಮೈಸೂರು ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಪ್ರಗತಿಯಲ್ಲಿ ಹಿಂದುಳಿಯಲು ಐತಿಹಾಸಿಕ ಕಾರಣಗಳಿವೆ.

ಯಾಕೆಂದರೆ, ಬ್ರಿಟಿಷರ ಕಾಲದಲ್ಲಿ ಕರ್ನಾಟಕದ ಹಲವು ಜಿಲ್ಲೆಗಳು ವಿವಿಧ ಆಡಳಿತ ವ್ಯವಸ್ಥೆಗಳ ಹಿಡಿತದಲ್ಲಿದ್ದವು. ಕೆಲ ಜಿಲ್ಲೆಗಳು ಮದ್ರಾಸ್ ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿದ್ದವು. ಕೆಲವು ಮುಂಬೈ ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿದ್ದವು. ಗುಲ್ಬರ್ಗ, ಕೊಪ್ಪಳ, ರಾಯಚೂರು, ಬಳ್ಳಾರಿಯಂತಹ ಪ್ರದೇಶಗಳು ಹೈದ್ರಾಬಾದ್ ನಿಜಾಮನ ಆಡಳಿತದ ವ್ಯಾಪ್ತಿಗೆ ಒಳಪಟ್ಟಿದ್ದವು.

ಹೀಗೆ ವಿವಿಧ ವ್ಯವಸ್ಥೆಗಳ ಅಡಿಯಲ್ಲಿ ಸಿಲುಕಿದವರ ಮಟ್ಟಿಗೆ ಅಯಾ ಆಡಳಿತ ವ್ಯವಸ್ಥೆಗಳು ಅನ್ಯಾಯವನ್ನೇ ಮಾಡಿದವು. ಯಾಕೆಂದರೆ ಅಭಿವೃದ್ದಿಯ ವಿಷಯ ಬಂದಾಗ ಈ ಪ್ರದೇಶಗಳಿಗೆ ಅವು ಆದ್ಯತೆ ನೀಡಲೇ ಇಲ್ಲ. ಹೀಗಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಅಭಿವೃದ್ದಿಯ ವಿಷಯದಲ್ಲಿ ಹಿಂದುಳಿದವು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಇಷ್ಟೆಲ್ಲಾ ಲಾಭಗಳು ಆಗುತ್ತವಂತೆ

ಒಂದು ಉದಾಹರಣೆಯ ಮೂಲಕ ಇದನ್ನು ಸ್ಪಷ್ಟ ಪಡಿಸಿಕೊಳ್ಳಬೇಕು. ಭಾರತ ಜಾತಿ ವ್ಯವಸ್ಥೆಯ ಕಪಿ ಮುಷ್ಟಿಗೆ ಸಿಲುಕಿದ ಪರಿಣಾಮವಾಗಿ, ನಾಲ್ಕು ವರ್ಗಗಳಲ್ಲಿ ವಿಂಗಡಿತವಾದ ಪರಿಣಾಮವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಸಮಾನತೆ ಕಾಣುವಂತಾಯಿತು.

ಇದನ್ನು ಸರಿಪಡಿಸಲು ಇವತ್ತಿಗೂ ಆಗಿಲ್ಲ. ಮೀಸಲಾತಿ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಹಿಡಿದು ಹಲವು ಅನುಕೂಲಗಳನ್ನು ಮಾಡಿಕೊಡಲು ಯತ್ನಿಸಿದರೂ ಅದರ ಭಿನ್ನ ಭಿನ್ನ ಪರಿಣಾಮಗಳು ಗೋಚರವಾಗುತ್ತಲೇ ಇವೆ.

ಪ್ರದೇಶಗಳ ವಿಷಯದಲ್ಲೂ ಇದು ಅನ್ವಯವಾಗುತ್ತದೆ. ಆಳುವವರು ನಿಷ್ಟಕ್ಷಪಾತ ಧೋರಣೆ ಹೊಂದಿದ್ದರೆ, ಅಭಿವೃದ್ದಿ ಎಂಬುದು ಎಲ್ಲ ಹಂತಗಳಿಗೂ ತಲುಪಬೇಕು ಎಂಬ ಮನಸ್ಸು ಹೊಂದಿದ್ದರೆ ಇದು ಸಾಧ್ಯ. ಆದರೆ ಐತಿಹಾಸಿಕವಾಗಿ ಆಳುವವರ ದೋರಣೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಹಿಂದುಳಿಯುವಂತೆ ಮಾಡಿದವು.

ಹೀಗಾಗಿ ಇವತ್ತಿಗೂ ಅಭಿವೃದ್ದಿಯ ವಿಷಯ ಬಂದಾಗ ದಕ್ಷಿಣ ಕರ್ನಾಟಕದ ಜತೆ ಉತ್ತರ ಕರ್ನಾಟಕವನ್ನು ಹೋಲಿಸಲಾಗುತ್ತಿಲ್ಲ. ದಕ್ಷಿಣ ಕರ್ನಾಟಕ ಮೈಸೂರು ಅರಸರ ಆಳ್ವಿಕೆಯಲ್ಲಿದ್ದ ಪರಿಣಾಮವಾಗಿ ಅವರ ಆಳ್ವಿಕೆಯ ವ್ಯಾಪ್ತಿಯಲ್ಲಿದ್ದ ಜಿಲ್ಲೆಗಳು ಪ್ರಗತಿ ಕಂಡವು.

ಈ ಪ್ರಗತಿ ನೂರಕ್ಕೆ ನೂರು ಎಂದು ಹೇಳಲಾಗದಿದ್ದರೂ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ಉತ್ತಮವಾಗಿತ್ತು ಅಂತ ನಿಸ್ಸಂಶಯವಾಗಿ ಹೇಳಬಹುದು. ಹೀಗೆ ಐತಿಹಾಸಿಕ ಕಾರಣಗಳಿಂದ ಆದ ಪ್ರಮಾದವನ್ನು ಸರಿಪಡಿಸಲು ನಾವು ಗಮನ ಕೇಂದ್ರೀಕರಿಸಬೇಕೇ ಹೊರತು, ನಾಡು ಒಡೆಯುವುದರಿಂದ ಪ್ರಗತಿ ಸಾಧ್ಯವಿಲ್ಲ.

ಸ್ವಾತಂತ್ರ್ಯ ಬಂದ ನಂತರ ಮುಂಬೈ-ಕರ್ನಾಟಕ, ಹೈದ್ರಾಬಾದ್-ಕರ್ನಾಟಕ, ಕರಾವಳಿ ಕರ್ನಾಟಕದ ಅಭಿವೃದ್ದಿಯ ವಿಷಯದಲ್ಲಿ ಸರ್ಕಾರಗಳು ಗಂಭೀರ ಪ್ರಯತ್ನ ಮಾಡಿವೆ ಎಂಬುದು ನಿಜ. ಈ ಪ್ರಯತ್ನದಲ್ಲೂ ಲೋಪಗಳನ್ನು ಕಾಣಬಹುದು. ಆದರೆ ಉತ್ತರ ಕರ್ನಾಟಕವನ್ನು ಆಳುವವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂಬುದು ಸರಿಯಲ್ಲ.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ ನದಿ ನೀರಿನಲ್ಲಿ ನಮ್ಮ ಪಾಲನ್ನು ಸದ್ಭಳಕೆ ಮಾಡಿಕೊಳ್ಳಲು ಶ್ರಮಿಸಿದ ರೀತಿ ಅದ್ಭುತ, ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಬಾಂಡ್ ಗಳನ್ನು ಬಿಡುಗಡೆ ಮಾಡಿ, ಆಲಮಟ್ಟಿ ಆಣೆಕಟ್ಟಿನ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಾದ ಸಾವಿರಾರು ಕೋಟಿ ರೂ.ಗಳನ್ನು ಅವರು ಒದಗಿಸಿದ್ದು ಇತಿಹಾಸ.

ಅದೇ ರೀತಿ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ 371(ಜೆ) ಮೂಲಕ ವಿಶೇಷ ಸ್ಥಾನಮಾನ ಕೊಡಿಸಲು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ನಾಯಕರು ರಾಷ್ಟ್ರ ಮಟ್ಟದಲ್ಲಿ ಹೋರಾಡಿದ್ದು ಕೂಡಾ ಇತಿಹಾಸ.

ಹೀಗಾಗಿ ಆಳುವ ವರ್ಗವನ್ನು ಸದಾ ದೂಷಿಸುವ ಬದಲು, ಆ ವರ್ಗ ಪ್ರಗತಿಯಲ್ಲಿ ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರುವಂತೆ ಮಾಡಲು ದುಡಿಯಬೇಕು ಅಂತ ಪ್ರೇರೇಪಣೆ ನೀಡುವುದು ನಮ್ಮ ಕೆಲಸವಾಗಬೇಕು.

ಪ್ರಸಕ್ತ ವರ್ಷ ರಾಜ್ಯ ಸರ್ಕಾರದ ಬಜೆಟ್ ಗಾತ್ರ ಎರಡೂ ಕಾಲು ಲಕ್ಷ ಕೋಟಿ ರೂಗಳಿಗಿಂತ ಹೆಚ್ಚು. ಈ ಪೈಕಿ ಎಷ್ಟು ಹಣ, ಯಾವ್ಯಾವುದಕ್ಕೆ ವೆಚ್ಚವಾಗುತ್ತದೆ? ಅದು ಸದ್ಭಳಕೆಯಾಗುತ್ತಿದೆಯೋ? ಸೋರಿಕೆಯಾಗುತ್ತಿರುವುದೇ ಹೆಚ್ಚೋ? ಅನ್ನುವುದರ ಕಡೆ ಜನಸಾಮಾನ್ಯರೂ ಗಮನ ಹರಿಸಬೇಕು.

ಹೀಗೆ ಆಳುವ ವರ್ಗದ ನಡವಳಿಕೆಗಳನ್ನು ಗಮನಿಸುವುದಕ್ಕಿಂತ ಹೆಚ್ಚಾಗಿ ಪ್ರತ್ಯೇಕತೆಯ ಕೂಗಿಗೆ ಶಕ್ತಿ ತುಂಬುವ ಕೆಲಸ ಹೆಚ್ಚಾದರೆ ಮುಂದಿನ ದಿನಗಳಲ್ಲಿ ನಾಡನ್ನು ಪದೇ ಪದೇ ಒಡೆಯುವ ಕೆಲಸವಾಗುತ್ತದೆ. ನಾಡಿನ ಏಕೀಕರಣಕ್ಕಾಗಿ ದುಡಿದವರ ಶ್ರಮವನ್ನು ವ್ಯರ್ಥ ಮಾಡುವ ಬದಲು ನಾವೆಲ್ಲ ಅದನ್ನು ಸಾರ್ಥಕಗೊಳಿಸುವಂತೆ ಕೆಲಸ ಮಾಡಬೇಕು.

ಹೀಗಾಗಿ ಬ್ರಿಟಿಷರ ವಿರುದ್ಧ ಹೋರಾಡುವಾಗ ಗಾಂದೀಜಿ ಹೇಳಿದಂತೆ : ಒಂದು ಸಂಘರ್ಷದ ಕಾಲ ನಮ್ಮೆಲ್ಲರನ್ನೂ ಒಗ್ಗೂಡಿಸಬೇಕು, ಒಗ್ಗೂಡಿಸಿ ಬಲ ತುಂಬಬೇಕು. ಹಾಗಾದಾಗ ಮಾತ್ರ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯ.

ಅದನ್ನು ಬಿಟ್ಟು ಯಾರನ್ನೋ ದೂರುತ್ತಾ, ಮುಖ್ಯಮಂತ್ರಿಗಳಾಡಿದ ಮಾತು ಅಕ್ಷಮ್ಯ ಎನ್ನುತ್ತಾ ಮುಂದುವರಿದರೆ ನಡೆದು ಹೋಗಿರುವ ತಪ್ಪು ಸರಿಯಾಗುವುದಿಲ್ಲ. ಅದು ಸರಿಯಾಗಬೇಕು ಎಂದರೆ ನಾವು ಒಗ್ಗೂಡದೆ ಪರ್ಯಾಯ ದಾರಿಯಿಲ್ಲ.

ಈ ಸಂದರ್ಭದಲ್ಲಿ ನಾವೆಲ್ಲ ಗಮನಿಸಬೇಕಿರುವುದು ಒಂದೇ ವಿಷಯವನ್ನು. ಅದೆಂದರೆ, ಒಡೆಯುವುದು ಸುಲಭ, ಆದರೆ ಕಟ್ಟುವುದು ಕಷ್ಟ. ಹೀಗಾಗಿ ನಾಡಿನ ಏಕೀಕರಣಕ್ಕಾಗಿ ನಮ್ಮ ಹಿರಿಯರು ನಡೆಸಿದ ಹೋರಾಟ, ಪಟ್ಟ ಶ್ರಮವನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯುವುದು ಉತ್ತಮ.

English summary
Any movement should unite us all, not separate said Mahatma Gandhi. Same applies to activists who are fighting for separate North Karnataka state. There are reasons for non-development of North Karnataka. Justice should be done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X