Anitha Kumaraswamy Profile: ಪುತ್ರನಿಗಾಗಿ ಕ್ಷೇತ್ರ ತ್ಯಾಗ, ಅನಿತಾ ಕುಮಾರಸ್ವಾಮಿಯ ಏಳು-ಬೀಳಿನ ರಾಜಕೀಯ!
ನಿಮ್ಮನ್ನು ಮದುವೆಯಾಗಬೇಕಾದರೆ ನೀವು ರಾಜಕೀಯಕ್ಕೆ ಬರಬಾರದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಷರತ್ತು ವಿಧಿಸಿದ್ದ ಅನಿತಾ ಕುಮಾರಸ್ವಾಮಿ ಸದ್ಯ ತಾವೂ ಶಾಸಕರಾಗಿ ವಿಧಾನಸಭೆಯಲ್ಲಿ ಪತಿಯ ಜೊತೆಗಿದ್ದಾರೆ.
ಬೆಂಗಳೂರು, ಫೆಬ್ರವರಿ 27: ಕರ್ನಾಟಕ ರಾಜ್ಯದ ಕೆಲವೇ ಕೆಲವು ಮಹಿಳಾ ರಾಜಕಾರಣಿಗಳಲ್ಲಿ ಅನಿತಾ ಕುಮಾರಸ್ವಾಮಿ ಕೂಡ ಒಬ್ಬರು. ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ರಾಜಕೀಯದತ್ತ ಒಲವು ತೋರುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ರಾಜಕೀಯ ಪುರುಷ ಪ್ರಧಾನವಾಗಿದ್ದ ಸಂದರ್ಭದಲ್ಲಿ ರಾಜಕೀಯ ಎಂಬ ಬೃಹತ್ ಸಾಗರಕ್ಕೆ ಇಳಿದ ಮಹಿಳೆಯರಲ್ಲಿ ಅನಿತಾ ಕುಮಾರಸ್ವಾಮಿ ಹೆಸರು ಪ್ರಮುಖವಾಗಿದೆ.
ಸದ್ಯ ರಾಮನಗರ ಕ್ಷೇತ್ರದ ಶಾಸಕಿಯಾಗಿರುವ ಅನಿತಾ ಕುಮಾರಸ್ವಾಮಿ ಜನ್ನಮನ್ನಣೆ ಗಳಿಸುವ ಮೂಲಕ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮದ ಡಾ. ಸೀತಾರಾಮನ್ ಹಾಗೂ ವಿಮಲ ದಂಪತಿಯ ಪುತ್ರಿಯಾಗಿ ಫೆಬ್ರವರಿ 24ರಂದು ಜನಿಸಿದರು. ಇಂಜಿನಿಯರಿಂಗ್ ಮುಗಿಸಿದ್ದ ಅನಿತಾ ಕುಮಾರಸ್ವಾಮಿ 1986 ಮಾರ್ಚ್ 13 ರಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನು ವಿವಾಹವಾಗಿ ಮಾಜಿ ಪ್ರಧಾನಿ ದೇವೇ ಗೌಡರ ಮನೆಯ ಸೊಸೆಯಾದರು.

ನಿಮ್ಮನ್ನು ಮದುವೆಯಾಗಬೇಕಾದರೆ ನೀವು ರಾಜಕೀಯಕ್ಕೆ ಬರಬಾರದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಷರತ್ತು ವಿಧಿಸಿದ್ದ ಅನಿತಾ ಕುಮಾರಸ್ವಾಮಿ ಸದ್ಯ ತಾವೂ ಶಾಸಕರಾಗಿ ವಿಧಾನಸಭೆಯಲ್ಲಿ ಪತಿಯ ಜೊತೆಗಿದ್ದಾರೆ. ಕುಮಾರಸ್ವಾಮಿ ರಾಜಕೀಯ ಪ್ರವೇಶದ ಬಳಿಕ ಅವರ ಬೆನ್ನೆಲುಬಾಗಿ ನಿಂತ ಅನಿತಾ ಕುಮಾರಸ್ವಾಮಿ ಓರ್ವ ಜೆಡಿಎಸ್ ಕಾರ್ಯಕರ್ತೆಯಾಗಿ ಸಹ ಪಕ್ಷಕ್ಕಾಗಿ ದುಡಿದಿದ್ದಾರೆ.
2008ರ ಬಳಿಕ ಅಧಿಕೃತವಾಗಿ ರಾಜಕೀಯಕ್ಕೆ ಕಣಕ್ಕೆ ಇಳಿದ ಅನಿತಾ ಕುಮಾರಸ್ವಾಮಿ 2008ರ ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲೇರಿದ ಅವರು ಜನಪರ ಕೆಲಸಗಳ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು.
ಮೊದಲ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದ ಅನಿತಾ ಕುಮಾರಸ್ವಾಮಿ ಅದೇ ಹುರುಪಿನಲ್ಲಿ ಜೆಡಿಎಸ್ ಪಕ್ಷದ ವರಿಷ್ಠರು ಸೂಚಿಸಿದಂತೆ 2013ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಆ ಸಮಯದಲ್ಲಿ ಅದೃಷ್ಟ ಕೈಕೊಟ್ಟಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಸೋಲನ್ನು ಅನುಭವಿಸಿದ್ದರು. ಪರಾಜಿತ ಅಭ್ಯರ್ಥಿಯಾದ ಬಳಿಕವೂ ತಮ್ಮ ರಾಜಕೀಯ ಜೀವನಕ್ಕೆ ಬ್ರೇಕ್ ಹಾಕದ ಅನಿತಾ ಕುಮಾರಸ್ವಾಮಿ ಜೆಡಿಎಸ್‌ನಲ್ಲಿ ಸಕ್ರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಎದೆಗುಂದದ ಅನಿತಾ ಕುಮಾರಸ್ವಾಮಿ ಪಕ್ಷ ಸಂಘಟನೆ, ಜೆಡಿಎಸ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ರಾಜಕೀಯದಲ್ಲಿ ಸಕ್ರಿಯವಾಗಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಫರ್ಧಿಸಿ ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ್ದರು. ಬಳಿಕ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರವನ್ನು ತೆರವು ತೆರವು ಮಾಡಿದ್ದರು.

ಬಳಿಕ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನ ಎಚ್.ಎ ಇಕ್ಬಾಲ್ ಹುಸೇನ್ ಹಾಗೂ ಬಿಜೆಪಿಯ ಎಚ್ ಲೀಲಾವತಿಯವರ ವಿರುದ್ಧ ಸ್ಫರ್ಧಿಸಿದ್ದ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರದಲ್ಲಿ 1,25,043 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲವು ಸಾಧಿಸಿದ್ದರು. ಸತತ ಐದು ವರ್ಷಗಳಿಂದ ರಾಮನಗರ ಶಾಸಕಿಯಾಗಿ ಯಶಸ್ವಿಯಾಗಿ ಮುಗಿಸಿರುವ ಅನಿತಾ ಕುಮಾರಸ್ವಾಮಿ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಫರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪುತ್ರನಿಗಾಗಿ ಕ್ಷೇತ್ರ ತ್ಯಾಗ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಜಿಸಿದ್ದಾರೆ. ಜೆಡಿಎಸ್ ಪಂಚರತ್ನ ಯಾತ್ರೆ ವೇಳೆ ಸಾವಿರಾರು ಕಾರ್ಯಕರ್ತರ ನಡುವೆ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ಅನಿತಾ ಕುಮಾರಸ್ವಾಮಿ ರಾಜಕೀಯವಷ್ಟೇ ಅಲ್ಲದೇ ಸಿನಿಮಾ ಸೇರಿದಂತೆ ಕಿರುತೆರೆ ಧಾರವಾಹಿಗಳಿಗೆ ಬಂಡವಾಳ ಹಾಕುವ ಮೂಲಕ ಕನ್ನಡ ಚಿತ್ರರಂಗದ ನಿರ್ಮಾಪಕಿಯಾಗಿ ಸಹ ಗುರುತಿಸಿಕೊಂಡಿದ್ದಾರೆ. ಸದಾ ಜನ ಸಮೂಹದೊಂದಿಗೆ ಬೆರೆಯುವ ಇವರು, https://www.facebook.com/AnithaKumaraswamyOfficial/ ಫೇಸ್‌ಬುಕ್ ಖಾತೆ ಹಾಗೂ https://twitter.com/Anitha_JDS ಟ್ವಿಟ್ಟರ್ ಖಾತೆ ಮೂಲಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.t












Click it and Unblock the Notifications