ಅನಿಸಿಕೆ: ಆರ್ಯ-ದ್ರಾವಿಡ ವಿವಾದ: ಎಡಪಂಥೀಯರಿಗೆ ಭೂರೀ ಭೋಜನ?

ಆರ್ಕಿಯಾಲಜಿ, ಆಂತ್ರೊಪಾಲಜಿ, ಜಿಯಾಲಜಿ, ಆಸ್ಟ್ರಾನಮಿ ಮೊದಲಾದ ಆಧುನಿಕ ಶಾಸ್ತ್ರಗಳಿಂದಲೂ ಸುಳ್ಳೆಂದು ನಿರೂಪಿತವಾದ ಆರ್ಯ ಆಕ್ರಮಣ ವಾದ, ಎಲ್ಲವನ್ನೂ ರಷ್ಯಾ, ಚೀನಾಗಳಿಂದ ಎರವಲು ಪಡೆದುಕೊಂಡ ಸ್ವಂತ ವಿಚಾರಗಳೇ ಇಲ್ಲದ ಭಾರತೀಯ ಎಡಪಂಥೀಯರಿಗೆ ಇವತ್ತಿಗೂ ಭೂರಿ ಭೋಜನ ನೀಡುವ "ಸಾವಿರದ ಸುಳ್ಳು"! ಒಂದೇ ಸುಳ್ಳನ್ನು ಸಾವಿರ ಸಲ ಹೇಳುವಷ್ಟರಲ್ಲಿ ಅದು ಸತ್ಯವಾಗಿಬಿಡುವ ಅಪಾಯವಿದೆ ಎನ್ನುವುದಕ್ಕೆ ಕಣ್ಣೆದುರಿನ ನಿದರ್ಶನ ಈ ಆರ್ಯ ಆಕ್ರಮಣ ವಾದ.

ನೆಹರೂ ಪಾರುಪತ್ಯದಲ್ಲಿ ಶೈಕ್ಷಣಿಕ ವಲಯವನ್ನು ಹೊಕ್ಕ ಅದು ಇಂದಿಗೂ ಭಾರತೀಯ ಪೀಳಿಗೆಗಳ ತಲೆಯೊಳಗೆ ಇಳಿದು ವಶೀಕರಿಸಿ ಭಾರತೀಯ ಮಾನಸಿಕತೆಯನ್ನು ಭಾರತವಿರೋಧಿ ಮನಃಸ್ಥಿತಿಯಾಗಿ ಮತಾಂತರಿಸುತ್ತಿದೆ. ಯಾವ ಆರ್ಯ ಆಕ್ರಮಣ ಎಂಬ ಪೊಳ್ಳು ವಾದ ಭಾರತವನ್ನು ಒಡೆಯಲು ತಮಗೆ ಅನುಕೂಲ ಎಂದು ಬ್ರಿಟಿಷರು ಭಾವಿಸಿ ಈ ನೆಲದಲ್ಲಿ ಹರಿಯಬಿಟ್ಟರೋ ಅದೇ ಕಾರ್ಯವನ್ನು ಭಾರತದ ಎಡಪಂಥೀಯರು ಇಂದು ಯಶಸ್ವಿಯಾಗಿ ಮಾಡುತ್ತಿದ್ದಾರೆ.

ಅವರ ಆರ್ಯ ಆಕ್ರಮಣವೆಂಬ ಪೊಳ್ಳುವಾದ ಹಲವು ಚಳವಳಿಗಳನ್ನು ಹೂಡಿ, ಹೊಡೆದು, ಬಡಿದು; ಜಾತಿ-ಜಾತಿಗಳ ನಡುವೆ ಕಲಹ ತಂದಿಕ್ಕಿ; ಹಲವು ಪಕ್ಷಗಳನ್ನು ಕಟ್ಟಿ, ಒಡೆದು; ಜನರ ಮನಸ್ಸನ್ನು ಭ್ರಮಾಧೀನವನ್ನಾಗಿಸಿ ಹಲ ಕಾಲ ದೇಶವನ್ನು ದುರ್ದೆಶೆಗೆ ತಳ್ಳಿ; ಈಗ ದೇಶ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗಿರುವಾಗ, ಅದೇ ಅಭಿವೃದ್ಧಿಯ ವಿಚಾರವನ್ನು ಬಳಸಿಕೊಂಡು ದೇಶವನ್ನು ಉತ್ತರ-ದಕ್ಷಿಣವಾಗಿ ಒಡೆಯುವ ಮಟ್ಟಕ್ಕೆ ಮುಟ್ಟಿಸಿದೆ.

"ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ"! ಇದೇನೂ ಹೊಸದಲ್ಲ. ದ್ರಾವಿಡ ದೇಶ ಅಂತ ಹಿಂದೆ ಬೊಬ್ಬಿರಿಯುತ್ತಿದ್ದುದಕ್ಕೆ ಹೊಸ ಆಂಗ್ಲ ಹೆಸರು ಅಷ್ಟೇ. "ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದಲ್ಲಿ ದಕ್ಷಿಣದ ರಾಜ್ಯಗಳ ಎಲ್ಲಾ ಮಾನವ ಅಭಿವೃದ್ಧಿ ಸೂಚಕಗಳು ಉತ್ತಮವಾಗಿವೆ. ದಕ್ಷಿಣದ ರಾಜ್ಯಗಳು ವಿವಿಧ ತೆರಿಗೆಗಳ ಮೂಲಕ ರಾಷ್ಟ್ರದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದರೂ ಕೇಂದ್ರದಿಂದ ಸಿಗುವ ಅನುದಾನದಲ್ಲಿ ಅನವರತ ಅನ್ಯಾಯ, ಅಸಮಾನತೆ ಇದೆ.

ಈ ಅನ್ಯಾಯವನ್ನು ಖಂಡಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ತಮ್ಮ ನ್ಯಾಯೋಚಿತ ಪಾಲನ್ನು ಪಡೆದುಕೊಳ್ಳಲು ದಕ್ಷಿಣದ ರಾಜ್ಯಗಳು "ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ" ಎಂಬ ಹೆಸರಿನಡಿಯಲ್ಲಿ ಒಟ್ಟಾಗಬೇಕು" ಎನ್ನುವ ಹೊಸ ವಾದವೊಂದು 2016 ರಿಂದೀಚೆಗೆ ಕೇಳಿ ಬರುತ್ತಿದೆ. ಅದಕ್ಕಾಗಿ ಅಂಕಿ ಅಂಶಗಳನ್ನೆಲ್ಲಾ ತಿರುಚಿ ಸಾಲು ಸಾಲು ಲೇಖನಗಳೂ ವಾಮಪಂಥೀಯರಿಂದ ಹೊರಬಂದವು. (ಈ ಲೇಖನ ಇತ್ತೀಚೆಗೆ ಎದ್ದಿರುವ ಆಯರ್ಯ-ದ್ರಾವಿಡ ವಿವಾದಕ್ಕೆ ಸಂಬಂಧಿಸಿದಂತೆ ಲೇಖಕರ ವೈಯಕ್ತಿಕ ಅನಿಸಿಕೆಯಷ್ಟೆ)

ಎಡ ಬುದ್ಧಿಜೀವಿಗಳ ಮಾತಿನಲ್ಲಿ ಹುರುಳಿದೆಯೇ?

ಎಡ ಬುದ್ಧಿಜೀವಿಗಳ ಮಾತಿನಲ್ಲಿ ಹುರುಳಿದೆಯೇ?

ಆದರೆ ಈ ಎಡ ಬುದ್ಧಿಜೀವಿಗಳ ಮಾತಿನಲ್ಲಿ ಹುರುಳಿದೆಯೇ? ಮೊದಲನೆಯದಾಗಿ ರಾಜ್ಯಗಳಿಗೆ ಈ ರೀತಿಯ ಅನುದಾನದ ಅಸಮಾನ ಹಂಚಿಕೆ ಕೇವಲ ಭಾರತದಲ್ಲಿ ಮಾತ್ರವಲ್ಲ; ಅಮೇರಿಕಾ, ಸ್ವಿಟ್ಜರ್ಲೆಂಡ್, ಜರ್ಮನಿ ಹಾಗೂ ಇಂಗ್ಲೆಂಡುಗಳಲ್ಲೂ ಇದೆ. ಮೂಲಭೂತ ಸೌಕರ್ಯಗಳು ಕಡಿಮೆ ಇರುವ ರಾಜ್ಯಗಳನ್ನು ಶ್ರೀಮಂತ ರಾಜ್ಯಗಳ ಮಟ್ಟಕ್ಕೆ ಏರಿಸುವ ಪ್ರಯತ್ನ ಮಾಡದಿದ್ದರೆ ಈ ಎರಡೂ ರಾಜ್ಯಗಳ ಆರ್ಥಿಕ ಅಭಿವೃದ್ಧಿ ಅಂತರ ಹೆಚ್ಚಾಗುತ್ತಲೇ ಹೋಗುತ್ತದೆ. ಅದಕ್ಕಿಂತಲೂ ಗಂಭೀರ ವಿಚಾರವೆಂದರೆ ಈ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಆರ್ಥಿಕ ಉತ್ಪಾತ ಹಾಗೂ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಹುದು.

ಬರೇ ಬೆಂಗಳೂರು ಒಂದನ್ನೇ ಕೇಂದ್ರವಾಗಿಟ್ಟುಕೊಂಡು ಆಡಳಿತ/ಅಭಿವೃದ್ಧಿ ಮಾಡಿದ ಕಾರಣದಿಂದ ಕರ್ನಾಟಕದ ಉಳಿದ ಭಾಗಗಳಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದು, ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಕೇಳುತ್ತಿರುವುದು ಇದಕ್ಕೆ ಉತ್ತಮ ನಿದರ್ಶನ. ಉಳ್ಳವರಿಂದ ಕಿತ್ತುಕೊಂಡು ಇಲ್ಲದವರಿಗೆ ಕೊಡುವ ಎಡಪಂಥೀಯ ತತ್ತ್ವಗಳಲ್ಲಿ ನಂಬಿಕೆಯುಳ್ಳ ಬುದ್ಧಿಜೀವಿಗಳು ಅವರದೇ ಮಾರ್ಗಕ್ಕೆ ತುಸುವಾದರೂ ಹತ್ತಿರವುಳ್ಳ ಅವರೇ ಕರೆಯುವ ಬಂಡವಾಳಶಾಹೀ ಸರಕಾರದ ಈ ಕ್ರಮವನ್ನು ವಿರೋಧಿಸುವುದು ಅವರು ಎಂದಿಗೂ ತಮ್ಮ ತತ್ತ್ವಕ್ಕೆ ಬದ್ಧರಾಗಿರುವುದಿಲ್ಲ ಎನ್ನುವುದಕ್ಕೆ ಇನ್ನೊಂದು ನಿದರ್ಶನ ಅಷ್ಟೇ!

ಶ್ರೀಮಂತ ರಾಜ್ಯಗಳಲ್ಲೇ ರೈತರ ಆತ್ಮಹತ್ಯೆಯೂ ಹೆಚ್ಚು!

ಶ್ರೀಮಂತ ರಾಜ್ಯಗಳಲ್ಲೇ ರೈತರ ಆತ್ಮಹತ್ಯೆಯೂ ಹೆಚ್ಚು!

ಎರಡನೆಯದಾಗಿ ಇವರ ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಭಾಗವಾಗುಳ್ಳ ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಿಗೆ ವಿಶೇಷ ವರ್ಗದ ರಾಜ್ಯಗಳನ್ನಾಗಿಸಿ ಹೆಚ್ಚಿನ ಅನುದಾನ ಘೋಷಿಸಲಾಗಿದೆ. ಎಡ ಬುದ್ಧಿಜೀವಿಗಳ ಪ್ರಕಾರ ಇವೆರಡೂ ಶ್ರೀಮಂತ ರಾಜ್ಯಗಳಾಗಿದ್ದರೆ ಇವಕ್ಕೆ ವಿಶೇಷ ಅನುದಾನ ಯಾಕೆ ಬೇಕು? ವಿಚಿತ್ರವೆಂದರೆ ಇವರು ಶ್ರೀಮಂತ ಎನ್ನುವ ಕರ್ನಾಟಕ, ತಮಿಳುನಾಡು, ಆಂಧ್ರಗಳಲ್ಲಿ ಪ್ರತಿ ವರ್ಷ ಅತೀ ಹೆಚ್ಚು ರೈತರು ಸಾಯುತ್ತಿದ್ದಾರೆ!

ದಕ್ಷಿಣದ ರಾಜ್ಯಗಳು ಶ್ರೀಮಂತ ಎನ್ನುವ ಇವರುಗಳು ಮರೆತ ಮುಖ್ಯ ಅಂಶವೊಂದಿದೆ. ದಕ್ಷಿಣದ ರಾಜ್ಯಗಳ ಬೆಂಗಳೂರು, ಚೆನ್ನೈಯಂತಹ ನಗರಗಳು ಅತೀ ಹೆಚ್ಚು ತೆರಿಗೆ ಪಾವತಿಸುತ್ತವೆಯೇ ಹೊರತು ಈ ರಾಜ್ಯಗಳ ಉಳಿದ ಪ್ರದೇಶಗಳಲ್ಲ. ಹಾಗೆಯೇ ದೇಶದ 40% ತೆರಿಗೆ ಮಹಾರಾಷ್ಟ್ರದಿಂದ ಸಂಗ್ರಹಿಸಲ್ಪಡುತ್ತದೆ(ಇದು ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಭಾಗವಲ್ಲ!). ಅದರಲ್ಲೂ ಮುಂಬೈ ಒಂದರ ಪಾಲೇ 30%. ಚೆನ್ನೈ, ಬೆಂಗಳೂರಿಗರು ನಾವೇ ಹೆಚ್ಚು ತೆರಿಗೆ ಪಾವತಿಸುತ್ತೇವೆ. ನಮಗೆ ಹೆಚ್ಚು ಅನುದಾನ ಕೊಡಬೇಕು ಎಂದು ಧರಣಿ ಕೂತರೆ ಈ ನಗರಗಳನ್ನೂ ಪ್ರತ್ಯೇಕ ದೇಶವನ್ನಾಗಿ ಮಾಡಲು ಸಾಧ್ಯವಿದೆಯೇ? (ಕಮ್ಯೂನಿಷ್ಟರು ಇದಕ್ಕೂ ಸಿದ್ಧರಾಗಿರಬಹುದು; ಒಡೆಯುವುದು ಅವರ ಜನ್ಮಸಿದ್ಧ ಹಕ್ಕು).

ಈ ವಾದದಲ್ಲಿ ಯಾವ ಹುರುಳಿದೆ ಹೇಳಿ!

ಈ ವಾದದಲ್ಲಿ ಯಾವ ಹುರುಳಿದೆ ಹೇಳಿ!

ತಮಿಳುನಾಡು, ಕರ್ನಾಟಕದಲ್ಲಿ ರೈತರಿಂದ ಬರುವ ತೆರಿಗೆ ಪ್ರಮಾಣ ಕೂಡಾ ಕಡಿಮೆ. ಹಾಗಾಗಿ ತಮಿಳು ರೈತರು ಉತ್ತರಪ್ರದೇಶದ ರೈತರಿಗೆ ಸಬ್ಸಿಡಿ ಕೊಡುವಂತಾಗಿದೆ ಎಂದು ವರ್ಷದ ಕೆಳಗೆ ಧರಣಿ ನಡೆಸುತ್ತಿದ್ದ ರೈತರಲ್ಲದ ತಮಿಳು ಎಡಪಂಥೀಯರ ವಾದದಲ್ಲಿ ಯಾವುದೇ ಹುರುಳಿಲ್ಲ. ಸ್ವಾತಂತ್ರ್ಯಾನಂತರ ಬಹುಕಾಲ ಆಳಿದ ರಾಜಕೀಯ ಪಕ್ಷವೊಂದರ ದುರಾಡಳಿತದ ಕಾರಣದಿಂದ ಕೆಲವು ರಾಜ್ಯಗಳು ಶ್ರೀಮಂತವಾಗಿ ಕೆಲವು ರಾಜ್ಯಗಳು ಬಡವಾಗಿಯೇ ವಿನಾ ಅಲ್ಲಿರುವ ಸಂಪನ್ಮೂಲದ ಕೊರತೆಯಿಂದಲ್ಲ.

ಇವತ್ತು ಶ್ರೀಮಂತ ಎನ್ನಿಸಿಕೊಂಡ ರಾಜ್ಯ/ನಗರಗಳು ಭವಿಷ್ಯದಲ್ಲಿ ಜನಸಂಖ್ಯಾ ಸ್ಫೋಟವೋ ಅಥವಾ ಯಾವುದೋ ಪ್ರಾಕೃತಿಕ ವಿಕೋಪದ ಕಾರಣದಿಂದ ವಿನಾಶದತ್ತ ಸಾಗಿದರೆ ಈ ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಉಳಿದ ಪಾಲುದಾರ ರಾಜ್ಯಗಳು ತಮ್ಮದೇ ಪ್ರತ್ಯೇಕ ದೇಶವೆಂದು ಬೆನ್ನಿಗೆ ಇರಿದಾವೆಯೇ ಹೊರತು ಬೆನ್ನಿಗೆ ನಿಂತು ಸಹಾಯ ಮಾಡಲಿಕ್ಕಿಲ್ಲ. ನಾವು ಹೆಚ್ಚು ಕೊಡುತ್ತೇವೆ; ನಮಗೆ ಹೆಚ್ಚು ಸಿಗಬೇಕು; ಇಲ್ಲದಿದ್ದರೆ ಪ್ರತ್ಯೇಕವಾಗುತ್ತೇವೆ ಎನ್ನುವುದರ ದೂರಗಾಮೀ ಪರಿಣಾಮ ಅದೇ. ತಮಿಳು ಅಸ್ಮಿತೆಯನ್ನೇ ಬೊಬ್ಬಿರಿವ ಭಾಷಾಂಧತೆ, ಕಷ್ಟ ಕಾಲದಲ್ಲಿ ಯಾರಿಗೂ ಸಹಾಯ ಮಾಡದ ಮಲಯಾಳೀ ರಾಜಕಾರಣವನ್ನು ಅರಿತ ಎಂತಹಾ ಸಾಮಾನ್ಯನಿಗೂ ಸ್ಪಷ್ಟವಾಗಿ ತಿಳಿದಿರುವ ಸಂಗತಿ ಇದು.

ಇವರ ಮೂಲ ಉದ್ದೇಶವೇನು?

ಇವರ ಮೂಲ ಉದ್ದೇಶವೇನು?

ಹಾಗಾದರೆ ಇವರ ಮೂಲ ಉದ್ದೇಶವೇನು? ಆರ್ಯ ದ್ರಾವಿಡ ಜನಾಂಗವೆಂಬ ಎಂಬ ಕಪೋಲ ಕಲ್ಪಿತ ವಾದದ ಜೊತೆಜೊತೆಗೆ ಅಭಿವೃದ್ಧಿಯ ವಿಚಾರವನ್ನು ಬಳಸಿ ದಕ್ಷಿಣ ಭಾರತೀಯರಲ್ಲಿ ಮೌಢ್ಯದ ಬೀಜ ಬಿತ್ತುವುದು; ಭಾಜಪಾವನ್ನು ಅಧಿಕಾರದಿಂದ ದೂರ ಇಡುವುದು; ಇದು ಉತ್ತರ ದಕ್ಷಿಣ ವಿಭಜನೆಗೆ ಮೊದಲ ಮೆಟ್ಟಿಲು. ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾದ ಮುಂದುವರಿದ ಭಾಗವೇ ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಲುದ್ದೇಶಿಸಿರುವ 'ದ್ರಾವಿಡ ವಿಚಾರ ಕಲಾ ಮೇಳ' ಎಂಬ ಸಮ್ಮೇಳನ!

ದ್ರಾವಿಡ ಭಾಷೆಗಳನ್ನು ಒಂದೇ ವೇದಿಕೆಗೆ ತಂದು ಸೌಹಾರ್ದ ಬೆಸೆಯುವುದರ ಹಿಂದೆ ದಕ್ಷಿಣ ಭಾರತದಲ್ಲಿ ದ್ರಾವಿಡ ಚಳವಳಿಗೆ ಮತ್ತೆ ಕಾವು ಕೊಟ್ಟು ಈಗಿರುವ ಕೇಂದ್ರ ಸರಕಾರ ಹಿಂದೀ ಸರಕಾರ, ಅದು ದಕ್ಷಿಣ ಭಾರತೀಯರ ಅಳಲುಗಳಿಗೆ ಕಿವಿಗೊಡುತ್ತಿಲ್ಲ ಎಂದು ಬೊಬ್ಬಿರಿದು ಮುಂದಿನ ಲೋಕಸಭಾ ಚುನಾವಣೆಗೆ ತನ್ನ ಅನ್ನದಾತರಿಗೆ ಸಹಾಯ ಮಾಡುವ ಉದ್ದೇಶವಿದೆ. ಆದರೆ ಇದರ ದೂರಗಾಮೀ ಪರಿಣಾಮ ಮಾತ್ರ ಉತ್ತರ ದಕ್ಷಿಣವಾಗಿ ಭಾರತದ ವಿಭಜನೆ.

ಭಾರತವನ್ನು ಒಡೆವ ಹುನ್ನಾರವೇ?

ಭಾರತವನ್ನು ಒಡೆವ ಹುನ್ನಾರವೇ?

ಒಂದೇ ಜನಾಂಗದಿಂದ ಸೃಜಿಸಿದ್ದ ಭಾರತವನ್ನು ಒಡೆದು ತಮ್ಮ ಹಿಡಿತದಲ್ಲಿರಿಸಿಕೊಳ್ಳುವ ಸಲುವಾಗಿ ಬ್ರಿಟಿಷರು, ಇಂಡೋ ಯೂರೋಪಿಯನ್ ಸಂತತಿಗೆ ಸೇರಿದ ಆರ್ಯರು ಕ್ರಿ.ಪೂ 1500ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅನಾಗರಿಕ ದ್ರಾವಿಡ ಜನಾಂಗಕ್ಕೆ ನಾಗರಿಕತೆಯನ್ನು ಕಲಿಸಿ ಇಲ್ಲಿಯೇ ನೆಲೆಸಿದರೆಂದು ಇತಿಹಾಸದ ಪುಸ್ತಕಗಳಲ್ಲೆಲ್ಲಾ ಬರೆಯಿಸಿದರು. ಅಲೆಮಾರಿಗಳು, ಕ್ರೂರಿಗಳು, ಆಕ್ರಮಣಕಾರಿಗಳು ಎಂದು ಇವರಿಂದ ಬಿಂಬಿಸಲ್ಪಟ್ಟ ಹೊರಗಿನಿಂದ ಬಂದ ಆರ್ಯರಿಗೆ ಆಧುನಿಕ ಭಾಷೆಗಳಿಗಿಂತಲೂ ಸುಂದರ, ಸಶಕ್ತ, ಪರಿಶುದ್ಧ ಭಾಷೆಯನ್ನು ಸೃಜಿಸಲು ಸಾಧ್ಯವಾದದ್ದು ಹೇಗೆ? ಆರ್ಯ ಭಾಷೆ ಸಂಸ್ಕೃತಕ್ಕೂ ದ್ರಾವಿಡ ಭಾಷೆಗಳಿಗೂ ಬಹು ಹತ್ತಿರದ ಸಂಬಂಧವಿರುವುದು ಹೇಗೆ ಎಂಬ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ.

ಹರಪ್ಪಾದಲ್ಲಿ ನಡೆದ ವ್ಹೀಲರನ ಉತ್ಖನನಗಳ ಸ್ಟ್ರಾಟಿಗ್ರಫಿಯ ಪುನರ್ ಪರಿಶೀಲನೆ, ಮೊಹಂಜೋದಾರೋದಲ್ಲಿ ಜಿ.ಎಫ್.ಡೇಲ್ಸ್ ಹೊಸದಾಗಿ ಜರುಗಿಸಿದ ಉತ್ಖನನ ಹಾಗೂ ಕಲಾವಸ್ತುಗಳ ಪರೀಕ್ಷೆ; ರಂಗಪುರ್, ಲೋಥಾಲ್ ಗಳಲ್ಲಿ ಡಾ. ಎಸ್. ಆರ್. ರಾವ್ ನಡೆಸಿದ ಉತ್ಖನನಗಳಲ್ಲಿ, ಕಾಲಿಬಂಗನ್, ಸುರ್ಕೋದಾಗಳಲ್ಲಿ ಜೆ.ಪಿ.ಜೋಷಿ ನಡೆಸಿದ ಉತ್ಖನನಗಳಲ್ಲೂ ಸಿಕ್ಕಿದ ಕುದುರೆಯ ಮೂಳೆಗಳು ಹಾಗೂ ಅಕ್ಕಿ ಇಲ್ಲಿನ ಪ್ರಾಚೀನ ನಾಗರೀಕತೆ ಆರ್ಯರದ್ದೇ ಎನ್ನುವುದನ್ನು ಸ್ಪಷ್ಟಪಡಿಸಿತು.

ಭುಜ್, ಕ್ಯಾಂಬೆಗಳಲ್ಲಿ ನಡೆದ ಸಂಶೋಧನೆಗಳು, ಮೆಹರ್ ಗಢ್ ನಲ್ಲಿ ನಡೆದ ಉತ್ಖನನ ಇಂದಿಗೂ 9 ಸಾವಿರ ವರ್ಷಗಳ ಹಿಂದೆಯೇ ವೇದಗಳು ರಚಿಸಲ್ಪಟ್ಟಿದ್ದವೆನ್ನುವುದನ್ನು ದೃಢೀಕರಿಸಿತು.

ಸರಸ್ವತಿ ನದಿ ದಂಡೆ ಮೇಲಿನ ಸಂಶೋಧನೆಗಳು

ಸರಸ್ವತಿ ನದಿ ದಂಡೆ ಮೇಲಿನ ಸಂಶೋಧನೆಗಳು

ಇತ್ತೀಚೆಗೆ ಸರಸ್ವತಿ ನದಿಯ ಬಗ್ಗೆ ನಡೆದ ಅಪಾರ ಸಂಶೋಧನೆಗಳು ಈ ವೇದಕಾಲೀನ ನಾಗರಿಕತೆಯನ್ನು ಹತ್ತು ಸಾವಿರ ವರ್ಷಗಳಿಗೂ ಹಿಂದಕ್ಕೊಯ್ದಿವೆ. ಬಿರ್ಹಾನದಲ್ಲಿ ದೊರಕಿದ ವಸ್ತುಗಳ ಕಾರ್ಬನ್ ಡೇಟಿಂಗ್ ಕ್ರಿ.ಪೂ 7400ರ ಕಾಲಘಟ್ಟಕ್ಕೆ ಅವುಗಳನ್ನು ಮುಟ್ಟಿಸಿದರೆ. ಲುಂಕಾರಂಸಾರ್ನಲ್ಲಿ ದೊರೆತ ಕುರುಹುಗಳು ಕ್ರಿ.ಪೂ. 9,400ರಕ್ಕೆ ಕೊಂಡೊಯ್ದವು.

ಸರಸ್ವತಿ ಈ ಹಿಂದೆ ಸುಮಾರು 15000-8000 ವರ್ಷಗಳ ನಡುವೆ ಗುಪ್ತಗಾಮಿನಿಯಾದಳು ಎಂದು ರಾಖಿಗರ್ಹಿಯಲ್ಲಿ ನಡೆದ ಉತ್ಖನನಗಳಿಂದ ರುಜುವಾತಾಯಿತು. ರುದ್ರನ ಆರಾಧನೆಗೆ ಬಳಸುವ ಶತಛಿದ್ರಕುಂಭವು ಸರಸ್ವತಿ ನದಿಯ ಬಹುತೇಕ ಅವಶೇಷಗಳಲ್ಲಿ ದೊರೆತಿದೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿ ಸಿಕ್ಕಿದ ಭಾರತದ ಹತ್ತಿಯ ಬೀಜಗಳು ಸಿಂಧೂ-ಸರಸ್ವತಿ ಉತ್ಖನನದಲ್ಲೂ ಸಿಕ್ಕಿವೆ. ಯೂರೋಪಿನಲ್ಲಿ ಸಿಗುತ್ತಿದ್ದ ಕುದುರೆಗಳಿಗಿದ್ದ ಪಕ್ಕೆಲುಬುಗಳು 36. ಅದೇ ಋಗ್ವೇದದ ಮೊದಲ ಮಂಡಲದ ಅಶ್ವಸೂಕ್ತದಲ್ಲಿ ಉಲ್ಲೇಖವಾದ ಕುದುರೆಗಳ ಪಕ್ಕೆಲಬುಗಳ ಸಂಖ್ಯೆ 34. ಅವು ಹಿಮಾಲಯದಲ್ಲೇ ಇದ್ದ ಶಿವಾಲಿಕ್ ಜಾತಿಯ ಕುದುರೆಗಳು. ಮೂವತ್ತು ಸಾವಿರ ವರ್ಷಗಳಿಗೂ ಹಿಂದಿನ ರಚನೆಗಳಿರುವ ಭೀಮ್ ಬೆಡ್ಕಾ ಗುಹೆಗಳಲ್ಲಿ ನಟರಾಜನ, ಕುದುರೆಗಳ, ಅಶ್ವಮೇಧದ ಕೆತ್ತನೆಗಳಿವೆ.

ಆರ್ಯ-ದ್ರಾವಿಡ ಏನು ಇದರರ್ಥ?

ಆರ್ಯ-ದ್ರಾವಿಡ ಏನು ಇದರರ್ಥ?

'ಆರ್ಯ' ಎಂದರೆ 'ಸುಸಂಸ್ಕೃತ', 'ಆದರಣೀಯ' ಎಂದರ್ಥ. ಇದು ಜನಾಂಗವಾಚಕವಲ್ಲ, ಗುಣವಾಚಕ! ಆರ್ಯ ಶಬ್ದ "ಅರಿಯ" ಶಬ್ದದಿಂದ ಬಂತು. ಭತ್ತವನ್ನು ಸಂಸ್ಕರಿಸಿ ಪಡೆದ ಅಕ್ಕಿಯನ್ನು ತುಳುವಿನಲ್ಲಿ "ಅರಿ" ಎನ್ನುತ್ತೇವೆ. ಅಂದರೆ ಆರ್ಯ ಎಂದರೆ ಸಂಸ್ಕಾರವಂತ ಎಂದರ್ಥವೇ ಹೊರತು ಜನಾಂಗದ ಹೆಸರಲ್ಲ. ದ್ರವಿಡ ಎಂದರೆ ಮರಗಳಿಂದ ಸಮೃದ್ಧವಾದುದು ಎಂದರ್ಥ. ಅದು ಪ್ರದೇಶ ಸೂಚಕ ಪದ. ಸೇಡನ್ ಬರ್ಗ್ ಎಂಬ ಪ್ರಖ್ಯಾತ ಗಣಿತಶಾಸ್ತ್ರಜ್ಞ ಅರಗಳಿರುವ ಚಕ್ರದ ಅಭಿವೃದ್ಧಿ ಹಾಗೂ ಅಂಕೆಗಳ ವಲಸೆಯನ್ನು ಅಧ್ಯಯನ ಮಾಡಿದರು.

ಚೌಕದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ವೃತ್ತವನ್ನು ಹಾಗೆಯೇ ವೃತ್ತದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ಚೌಕವನ್ನು ತಯಾರಿಸುವ ಮೂಲ ಎಲ್ಲಿಂದ ಬಂತು ಎಂದು ಅವರು ಸಂಶೋಧನೆಗಿಳಿದಾಗ ಅದು ಶುಲ್ಬ ಸೂತ್ರದತ್ತ ಬೆರಳು ಮಾಡಿತು. ಸ್ಮಶಾನಚಿತ್ ಎನ್ನುವ ಯಜ್ಞವೇದಿಕೆ ಈಜಿಪ್ಟಿನ ಪಿರಮಿಡ್ಡುಗಳಿಗೆ ಸ್ಪೂರ್ತಿಯಾದುದನ್ನೂ ಅವರು ಕಂಡುಕೊಂಡರು. ಹೀಗೆ ವಿಜ್ಞಾನದ ಹಾಗೂ ಖಗೋಳದ ವಲಸೆಯೂ ಸಿಂಧೂ-ಸರಸ್ವತಿ ತೀರದಿಂದ ಉಳಿದ ಕಡೆಗೆ ಪ್ರಸರಣವಾದ ಪ್ರಕರಣವೂ ಜನಾಂಗ ವಲಸೆ ಹೊರಗಿನಿಂದ ಇಲ್ಲಿಗಲ್ಲ, ಇಲ್ಲಿಂದಲೇ ಹೊರಗೆ ಎನ್ನುವುದನ್ನು ಮತ್ತಷ್ಟು ಸ್ಪಷ್ಟಪಡಿಸಿತು.

ಈಚೆಗೆ ನಡೆದ ಪಾಪ್ಯುಲೇಶನ್ ಜೆನೆಟಿಕ್ಸ್ ಪ್ರಕಾರ ನಮ್ಮ ದೇಶಕ್ಕೆ ಸುಮಾರು ನಲವತ್ತು ಸಾವಿರ ವರ್ಷದಿಂದ ಯಾವುದೇ ದೊಡ್ಡ ಪ್ರಮಾಣದ ಜನಾಂಗೀಯ ವಲಸೆ ಆಗಿಯೇ ಇಲ್ಲ ಎಂದು ತಿಳಿದು ಬರುತ್ತದೆ. ಅಲ್ಲದೆ ಎಲ್ಲಾ ಭಾರತೀಯ ಜಾತಿಗಳ ತಲೆಬುರುಡೆ, ಇನ್ನಿತರ ದೇಹರಚನೆಯನ್ನು ತಳಿಶಾಸ್ತ್ರದ ಪ್ರಕಾರ ಸಂಶೋಧನೆಗೊಳಪಡಿಸಿದಾಗ ಅವು ಒಂದೇ ರೀತಿಯಾಗಿರುವುದು ಕಂಡುಬರುತ್ತದೆ. ಇವೆಲ್ಲವೂ ಆರ್ಯ ಆಕ್ರಮಣವನ್ನು, ಅವರ ಹೊರಗಿನಿಂದ ವಲಸೆಯನ್ನು ಒಂದೇ ಏಟಿಗೆ ಕತ್ತರಿಸಿ ಹಾಕುತ್ತವೆ.

ಈಮೂರ್ಖತನಕ್ಕೆ ನಗಬೇಕೋ, ಅಳಬೇಕೋ?!

ಈಮೂರ್ಖತನಕ್ಕೆ ನಗಬೇಕೋ, ಅಳಬೇಕೋ?!

ಯಾರನ್ನು ಆರ್ಯರನ್ನಾಗಿಸುವುದು, ದ್ರಾವಿಡರ ಪಟ್ಟಿಗೆ ಯಾರನ್ನು ಸೇರಿಸುವುದು ಎನ್ನುವುದರ ಬಗ್ಗೆ ಈ ಆರ್ಯ ಆಕ್ರಮಣ ವಾದಿಗಳ ಬಳಿಯೇ ಸ್ಪಷ್ಟತೆಯಿಲ್ಲ. ಬ್ರಾಹ್ಮಣರನ್ನಷ್ಟೇ ಆರ್ಯ ಪಟ್ಟಿಗೆ ಸೇರಿಸೋಣವೆಂದರೆ ಬ್ರಾಹ್ಮಣ ರಾವಣನನ್ನು ಅವರೀಗಾಗಲೇ ದ್ರಾವಿಡನನ್ನಾಗಿಸಿಯಾಗಿದೆ; ದಕ್ಷಿಣಾತ್ಯರೂ ದೇವರೆಂದು ಆರಾಧಿಸುವ ಕ್ಷತ್ರಿಯ ರಾಮ ಆರ್ಯ ಪಟ್ಟಿಯಲ್ಲಿದ್ದಾನೆ!

ದಕ್ಷಿಣದವರು ಆರಾಧಿಸುವ ವಿಂಧ್ಯವನ್ನು ದಾಟಿ ದಕ್ಷಿಣಕ್ಕೆ ಬಂದ ಅಗಸ್ತ್ಯ ಋಷಿ ವೈದಿಕ ಸೂತ್ರಕಾರರಾದ ದಕ್ಷಿಣ ಭಾರತೀಯರಾದ ಬೋಧಾಯನ, ಆಪಸ್ತಂಭರನ್ನು; ವೇದಗಳಲ್ಲಿ ಬರುವ ಕೃಷ್ಣವರ್ಣದವರಾಗಿದ್ದ ಕಣ್ವ, ಆಂಗೀರಸ, ಕೃಷ್ಣ, ವ್ಯಾಸ ಇವರನ್ನು ಯಾವ ಪಟ್ಟಿಯಲ್ಲಿ ಸೇರಿಸುವುದು? ಆರ್ಯ ಆಕ್ರಮಣ ಸಿದ್ಧಾಂತಿಗಳು ಹೇಳುವಂತೆ ಆರ್ಯರು ಬೆಳ್ಳಗಿದ್ದರೆಂದು ವೇದದಲ್ಲಿ ಎಲ್ಲೂ ಹೇಳಿಲ್ಲ. ಹಾಗೆಯೇ ಅವರನ್ನುವ ದ್ರಾವಿಡರ ದೇವತೆ ಶಿವನನ್ನು ಶುದ್ಧ ಸ್ಪಟಿಕ ಸಂಕಾಶ ಎಂದಿದೆ ವೇದ.

ಇಡೀ ವೇದ ವಾಘ್ಮಯದಲ್ಲಿ ವಿಷ್ಣು ಪರ ಸೂಕ್ತಗಳಿಗಿಂತಲೂ ಹೆಚ್ಚು ರುದ್ರ ಪರ ಸೂಕ್ತಗಳಿವೆ. ದಕ್ಷಿಣ ಭಾರತಕ್ಕಿಂತಲೂ ಉತ್ತರಭಾರತದಲ್ಲೇ ಶೈವಾರಾಧನೆ ಹೆಚ್ಚು. ಶಿವನ ನೆಲೆ ಇರುವುದೂ ಅಪ್ಪಟ ಆರ್ಯ ಸ್ಥಾನದಲ್ಲಿ. ಸುರ-ಅಸುರರಿಬ್ಬರು ಅಕ್ಕ ತಂಗಿಯರ(ದಿತಿ-ಅದಿತಿ) ಮಕ್ಕಳು ಎನ್ನುವ ಅಂಶವೇ ಅಸುರರು ದ್ರಾವಿಡರು ಹಾಗೂ ದೇವತೆಗಳು ಆರ್ಯರು ಎನ್ನುವ ಅವರ ಮೊಂಡು ವಾದವನ್ನು ಒಂದೇ ಏಟಿಗೆ ಬದಿಗೆ ಸರಿಸುತ್ತದೆ. ಅಣ್ಣ ತಮ್ಮಂದಿರ ಜಗಳವನ್ನು ಎರಡು ಪ್ರತ್ಯೇಕ ಜನಾಂಗಗಳ ನಡುವಿನ ಜಗಳದಂತೆ ಬಿಂಬಿಸಿದವರ ಮೂರ್ಖತನಕ್ಕೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+