ಅಫ್ಘಾನಿಸ್ತಾನದ ಲಕ್ಷಾಂತರ ನಿರಾಶ್ರಿತರಿಗೆ ಜಾಗ ಕೊಡುತ್ತಾ ‘ದೊಡ್ಡಣ್ಣ’ ಅಮೆರಿಕ..?
ಒಂದು ಕಡೆ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಹಿಡಿತಕ್ಕೆ ಸಿಕ್ಕಿದೆ. ಇನ್ನೊಂದು ಕಡೆ ಜನರಿಗೆ ಹಿಂಸೆ ಮತ್ತು ಗಲಭೆಯ ಭೀತಿ ಕಾಡುತ್ತಿದೆ. ಹೀಗಾಗಿ ಲಕ್ಷಾಂತರ ಜನ ತಾವು ಹುಟ್ಟಿ ಬೆಳೆದ ಜಾಗ ತೊರೆದು ಬೇರೆಡೆ ವಲಸೆ ಹೋಗುತ್ತಿದ್ದಾರೆ. ಕೈಯಲ್ಲಿ ಪುಡಿಗಾಸೂ ಇಲ್ಲದೆ, ಭವಿಷ್ಯದ ಅರಿವಿಲ್ಲದೆ ಜೀವ ಉಳಿಸಿಕೊಳ್ಳಲು ಜನರು ಓಡಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಹೊತ್ತಲ್ಲೇ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶದ ನಾಯಕರಿಗೆ ಹೊಸ ಸವಾಲು ಎದುರಾಗಿದೆ.
Recommended Video
ಅದೇನೆಂದರೆ, ಅಫ್ಘಾನ್‌ನಿಂದ ಬರುತ್ತಿರುವ ನಿರಾಶ್ರಿತರಿಗೆ ನೆಲೆ ನೀಡಲೇಬೇಕಾದ ಒತ್ತಡಕ್ಕೆ ಬ್ರಿಟನ್, ಅಮೆರಿಕ, ಸ್ವಿಸ್, ನೆದರ್ಲ್ಯಾಂಡ್ ಮತ್ತಿತರ ರಾಷ್ಟ್ರಗಳು ಸಿಲುಕಿಬಿಟ್ಟಿವೆ. ಈವರೆಗೂ ಅಮೆರಿಕ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡದೇ ಹೋದರು, ಅಫ್ಘಾನ್ ನಿರಾಶ್ರಿತರಿಗೆ ಸೂರು ಒದಗಿಸಲು ಸಿದ್ಧವಾಗಿದೆ.
ಇದಕ್ಕಾಗಿ ಪೂರ್ವತಯಾರಿ ಮಾಡಿಕೊಂಡಿರುವ 'ದೊಡ್ಡಣ್ಣ' ಜಗತ್ತಿನ ಎದುರು ತನ್ನ ಮಾನ ಉಳಿಸಿಕೊಳ್ಳಲು ಮುಂದಾಗಿದೆ. ಕೆನಡಾ ಸುಮಾರು 20 ಸಾವಿರ ಅಫ್ಘಾನ್ ನಿರಾಶ್ರಿತರಿಗಾಗಿ ನೆರವನ್ನು ನೀಡುವುದಾಗಿ ಘೋಷಿಸಿದೆ. ಕೆನಡಾ ಘೋಷಣೆ ಬಳಿಕ ಪಾಶ್ಚಿಮಾತ್ಯರು ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದಾರೆ.

ಬ್ರಿಟನ್ ಮೇಲೂ ಒತ್ತಡ..!
ನೂರಾರು ವರ್ಷಗಳ ಕಾಲ ಬೇರೆ ಬೇರೆ ದೇಶಗಳನ್ನು ಆಳಿದ್ದ ಬ್ರಿಟನ್‌ಗೆ ಬೇರೆಯದ್ದೇ ಸವಾಲು ಎದುರಾಗಿದೆ. ಜಾಗತಿಕ ಮಟ್ಟದಲ್ಲಿ ತನ್ನ ಮಾನ ಉಳಿಸಿಕೊಳ್ಳಲು ಅಫ್ಘಾನ್ ನಿರಾಶ್ರಿತರಿಗೆ ಬ್ರಿಟನ್ ಜಾಗ ನೀಡಬೇಕಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಆದ್ರೆ ಇನ್ನೂ ಯಾವುದೂ ಫೈನಲ್ ಆಗಿಲ್ಲ. ತಾಲಿಬಾನ್‌ನ ಆಡಳಿತ ಜಾರಿಯಾಗುತ್ತಲೇ ಅಫ್ಘಾನಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜನರು ಮೊದಲು ಅಲ್ಲಿಂದ ಹೊರಬರುವ ನಿರೀಕ್ಷೆಯಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಅಫ್ಘಾನ್ ನಿರಾಶ್ರಿತರಿಗೆ ಜಾಗ ನೀಡಬೇಕು ಎಂಬ ಒತ್ತಡ ಕೇಳಿಬರುತ್ತಿದೆ. ಶ್ರೀಮಂತ ರಾಷ್ಟ್ರಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪಾಶ್ಚಿಮಾತ್ಯ ದೇಶಗಳ ಹೆಗಲ ಮೇಲೆ ಈ ಮೂಲಕ ದೊಡ್ಡ ಜವಾಬ್ದಾರಿ ಬಿದ್ದಂತಾಗಿದೆ.

ಯುರೋಪ್ ರಾಷ್ಟ್ರಗಳಿಗೂ ಒತ್ತಡ
ತಾಲಿಬಾನ್ ಆಡಳಿತವನ್ನು ಅಮೆರಿಕದ ಮಿತ್ರ ರಾಷ್ಟ್ರಗಳು ಈಗಾಗಲೇ ಖಂಡಿಸಿವೆ. ತಾಲಿಬಾನ್ ಆಡಳಿತವನ್ನು ಅಧಿಕೃತ ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಯುರೋಪ್ ರಾಷ್ಟ್ರಗಳು ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಬೇಕಿದೆ. ಈಗಾಗಲೇ ಕೊರೊನಾ 3 ಅಲೆಗಳ ಏಟಿಗೆ ತತ್ತರಿಸಿ ಹೋಗಿರುವ ಯುರೋಪ್ ರಾಷ್ಟ್ರಗಳಿಗೂ ಈ ಬೆಳವಣಿಗೆ ಹೊಸ ತಲೆನೋವು ತಂದಿದೆ. ನಿರಾಶ್ರಿತರಿಗೆ ಜಾಗ ನೀಡದೇ ಇದ್ರೆ ಜಾಗತಿಕ ಮಟ್ಟದಲ್ಲಿ ತಮ್ಮ ಘನತೆಗೆ ಕುತ್ತು ಬರುವ ಆತಂಕ ಕೂಡ ಯುರೋಪ್ ರಾಷ್ಟ್ರಗಳನ್ನು ಕಾಡುತ್ತಿದೆ. ಕೈಯಲ್ಲಿ ಕಾಸಿಲ್ಲ ಎಂದರೂ ಕಷ್ಟದಲ್ಲಿರುವ ಅಫ್ಘಾನ್ ಜನರಿಗೆ ಸಹಾಯ ಮಾಡಲೇಬೇಕಾದ ಅನಿವಾರ್ಯತೆ ಈ ಮೂಲಕ ಸೃಷ್ಟಿಯಾಗಿದೆ.

ಅಮೆರಿಕ ವಿರುದ್ಧ ರೊಚ್ಚಿಗೆದ್ದ ಜರ್ಮನಿ
ಜಗತ್ತಿನ ದೊಡ್ಡಣ್ಣ ಅಂತಾ ಇಷ್ಟುದಿನ ಬಿಲ್ಡಪ್ ಕೊಡುತ್ತಿದ್ದ ಅಮೆರಿಕದ ತಾಕತ್ತು ಏನು ಅನ್ನೋದು ಜಗತ್ತಿನ ಎದುರು ಈಗ ಬಯಲಾಗಿದೆ. ತಾಲಿಬಾನ್ ಪಡೆಗಳನ್ನು ಎದುರಿಸಲು ಆಗದೆ ಅಮೆರಿಕ ಪರದಾಡುತ್ತಿರುವುದು ಆಕ್ರೋಶ ಮೂಡುವಂತೆ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜರ್ಮನಿ, ಅಮೆರಿಕದ ಎಡವಟ್ಟಿನ ನಿರ್ಧಾರವನ್ನು ಖಂಡಿಸಿದೆ. ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳದೆ ತರಾತುರಿಯಲ್ಲಿ ಅಮೆರಿಕ ಮಾಡಿದ ಮಹಾ ಎಡವಟ್ಟಿಗೆ ತಜ್ಞರು ಈಗಾಗಲೇ ಬೇಸರ ವ್ಯಕ್ತಪಡಿಸಿದ್ದರು. ಆದ್ರೆ ಈಗ ನೋಡಿದರೆ ಮಿತ್ರ ರಾಷ್ಟ್ರಗಳಿಂದಲೂ ಅಮೆರಿಕ ತೀವ್ರ ವಿರೋಧ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲ್ಲವೂ ಅಮೆರಿಕದ ಎಡವಟ್ಟು..!
ದಿಢೀರ್ ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡಿದ್ದ ಅಮೆರಿಕ ಪತರುಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಕಮ್‌ಬ್ಯಾಕ್ ಮಾಡಿದೆ. ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ದಾಳಿ ನಡೆಸಿ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಅಕಸ್ಮಾತ್ ಈ ಜಾಗವೂ ಅಮೆರಿಕದ ತೆಕ್ಕೆಯಿಂದ ಬಿಟ್ಟು ಹೋದರೆ ಅಮೆರಿಕದ ಪಾಲಿಗೆ ಅಫ್ಘಾನಿಸ್ತಾನದ ಬಾಗಿಲು ಸಂಪೂರ್ಣ ಬಂದ್ ಆದಂತೆಯೇ.












Click it and Unblock the Notifications