
ಕೊಡಗಿನಲ್ಲಿ ಆಫ್ರಿಕನ್ ಹಂದಿ ಜ್ವರ... ಜನರಲ್ಲಿ ಆತಂಕ ಬೇಡ
ಕಳೆದ ಐದು ವರ್ಷಗಳಿಂದ ಹಲವು ರೀತಿಯ ಸಂಕಷ್ಟ ಅನುಭವಿಸಿದ ಕೊಡಗಿನ ಜನ ಎಲ್ಲ ಸರಿಹೋಯಿತು ಎಂದು ನೆಮ್ಮದಿಯುಸಿರು ಬಿಡುತ್ತಿರುವಾಗಲೇ ಆಫ್ರಿಕನ್ ಹಂದಿ ಜ್ವರದ ಸೋಂಕು ಪತ್ತೆಯಾಗಿರುವುದು ಭಾರಿ ಸುದ್ದಿಯಾಗಿದ್ದು, ಈ ಸೋಂಕು ಮನುಷ್ಯರಿಗೆ ಹರಡುವುದಿಲ್ಲ ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದ್ದರೂ ಆತಂಕವಂತೂ ಜನರಲ್ಲಿ ಇದ್ದೇ ಇದೆ.
ಆಫ್ರಿಕನ್ ಹಂದಿ ಜ್ವರದ ಕುರಿತಂತೆ ನಗರದ ಪಶುಪಾಲನಾ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಪಿ.ಸುರೇಶ್ ಭಟ್ , ತಾಲ್ಲೂಕಿನ ಗಾಳಿಬೀಡು ಗ್ರಾಮದ ಹಂದಿ ಸಾಕಾಣಿಕೆ ಕೇಂದ್ರದಲ್ಲಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳಲಾಗಿದೆ. ಹಂದಿ ಸಾಕಾಣಿಕ ಕೇಂದ್ರದ 1 ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯವೆಂದು ಮತ್ತು 10 ಕಿ.ಮೀ. ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ. ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧೆ ಮಾಡಿ ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
Breaking: ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ; 300 ಹಂದಿಗಳನ್ನು ಕೊಲ್ಲಲು ನಿರ್ದೇಶನ
ಆಫ್ರಿಕನ್ ಹಂದಿ ಜ್ವರದಿಂದ ಮನುಷ್ಯನ ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಉಂಟಾಗುವುದಿಲ್ಲ. ಹಂದಿಮಾಂಸವನ್ನು ಸೇವಿಸುವವರು ಚೆನ್ನಾಗಿ ಬೇಯಿಸಿ ಹಂದಿ ಮಾಂಸ ಸೇವಿಸಬೇಕು. ಹೊರಗಿನ ಹಂದಿ ವ್ಯಾಪಾರಸ್ಥರು ಹಾಗೂ ಅನಧಿಕೃತ ವ್ಯಕ್ತಿಗಳು ಹಂದಿ ಮನೆಗಳಿಗೆ ಪ್ರವೇಶಿಸಿದಂತೆ ನಿಷೇಧಿಸುವುದು. ಹಂದಿ ಮನೆಗಳನ್ನು ಕ್ರಿಮಿನಾಶಕ ಹಾಗೂ ಬಿಸಿ ನೀರಿನಿಂದ ಪ್ರತಿನಿತ್ಯ ತೊಳೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಆಫ್ರಿಕನ್ ಹಂದಿ ಜ್ವರದ ಲಕ್ಷಣ
ಹಂದಿಗಳ ಮೂಗು ಹಾಗೂ ಕಣ್ಣಿನಲ್ಲಿ ಕೀವು ಬರುವುದು ಕಂಡು ಬಂದರೆ ಅದು ಆಫ್ರಿಕನ್ ಹಂದಿ ಜ್ವರದ ಲಕ್ಷಣವಾಗಿದೆ. ಈ ಸಂದರ್ಭದಲ್ಲಿ ಹಂದಿಗಳು ಒದ್ದಾಡಿ ದಿಢೀರ್ ಸಾಯುತ್ತವೆ. ಕಿವಿ, ಬಾಲ, ಹೊಟ್ಟೆಯ ಕೆಲಭಾಗದಲ್ಲಿ ಕೆಂಪಾಗುವುದು, ಉಸಿರಾಟದ ತೊಂದರೆ, ತೀವ್ರ ಜ್ವರ ಆಫ್ರಿಕನ್ ಹಂದಿ ಜ್ವರದ ಲಕ್ಷಣವಾಗಿದೆ. ರೋಗಪೀಡಿತ ಪ್ರದೇಶಗಳಿಂದ ಹಂದಿ ಮತ್ತು ಹಂದಿ ಉತ್ಪನ್ನಗಳ ಆಮದನ್ನು ನಿಲ್ಲಿಸಿವುದು. ರೋಗಪೀಡಿತ ಪ್ರದೇಶಗಳಿಂದ ವಾಹನ ಸಂಚಾರ ನಿಯಂತ್ರಿಸುವುದು ಮತ್ತು ಸಾಧ್ಯವಾದರೆ ನಿಲ್ಲಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಆಫ್ರಿಕನ್ ಹಂದಿ ಜ್ವರ: ಕೇರಳದ ವಯನಾಡ್ನಲ್ಲಿ ಭೀತಿ

ಹಂದಿಮಾಂಸದ ಸೇವನೆಯಿಂದ ಮನುಷ್ಯನಿಗೆ ಹರಡುವುದಿಲ್ಲ
ಆಫ್ರಿಕನ್ ಹಂದಿ ಜ್ವರವು ಹಂದಿ ಅಥವಾ ಹಂದಿಮಾಂಸದ ಸೇವನೆಯ ಮೂಲಕ ಮನುಷ್ಯನಿಗೆ ಹರಡುವುದಿಲ್ಲ ಹಾಗೂ ಮಾನವರಲ್ಲಿ ಈ ವೈರಾಣು ಯಾವುದೇ ರೋಗವನ್ನುಂಟು ಮಾಡುವುದಿಲ್ಲ. ಆ ನಿಟ್ಟಿನಲ್ಲಿ ಹಂದಿಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಹಂದಿಪಾಲಕರು ಮುಂಜಾಗ್ರತೆಯಾಗಿ ಜೈವಿಕ ಸುರಕ್ಷತೆಯ ಕ್ರಮಗಳನ್ನು ಅನುಸರಿಸಬೇಕೆಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ತಿಳಿಸಿದ್ದಾರೆ.

ಹಂದಿ ಸಾಕಾಣಿಕೆಗೆ ದೊಡ್ಡ ಹೊಡೆತ
ಈಗಾಗಲೇ ಸಂಕಷ್ಟದಲ್ಲಿರುವ ಕೊಡಗಿನ ಜನರಿಗೆ ಇದೀಗ ಆಫ್ರಿಕನ್ ಹಂದಿಜ್ವರ ಮತ್ತಷ್ಟು ಸಂಕಷ್ಟವೊಡ್ಡುವ ಸಾಧ್ಯತೆ ಹೆಚ್ಚಾಗಿದೆ. ಹೊರಗಿನ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ವರ್ಷಕ್ಕೊಮ್ಮೆ ಆದಾಯ ತರುವ ಕಾಫಿ, ಕರಿಮೆಣಸು ಹೊರತು ಪಡಿಸಿದರೆ ಕೆಲವರು ಮನೆಯಲ್ಲಿ ಹಂದಿಗಳ ಸಾಕಾಣಿಕೆಯನ್ನು ಉಪಕಸುಬಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಮದುವೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಮಾಂಸದೂಟ ಮಾಡಲಾಗುತ್ತದೆ. ಅದರಲ್ಲೂ ಹಂದಿ ಮಾಂಸದ ಅಡುಗೆ ಇದ್ದೇ ಇರುತ್ತದೆ. ಹೀಗಾಗಿ ಹಂದಿ ಮಾಂಸಕ್ಕೆ ಬೇಡಿಕೆ ಇದ್ದೇ ಇದೆ. ಇದು ಕೆಲವರಿಗೆ ಆದಾಯ ತಂದು ಕೊಡುವ ಉದ್ಯಮವಾಗಿದೆ.

ಪ್ರವಾಸಿಗರು ಕೊಡಗಿಗೆ ತೆರಳಲು ಹಿಂದೇಟು
ಇದೆಲ್ಲದರ ನಡುವೆ ಜಿಲ್ಲೆಯಲ್ಲಿ ಹಂದಿ ಜ್ವರ ಕಾಣಿಸಿಕೊಂಡಿರುವುದು ಆತಂಕ ತಂದಿದೆ. ವರ್ಷಾನುಗಟ್ಟಲೆ ಸಾಕಿದ ಹಂದಿಗಳು ಇದ್ದಕ್ಕಿದ್ದಂತೆ ಸೋಂಕಿನಿಂದ ಸಾವನ್ನಪ್ಪಿದ್ದರೆ, ಸಾವಿರಾರು ರೂಪಾಯಿ ನಷ್ಟವಾಗುತ್ತದೆ. ಇದು ಹಂದಿಪಾಲಕರನ್ನು ಸಂಕಷ್ಟಕ್ಕೆ ನೂಕಿದೆ. ಕಳೆದ ಐದು ವರ್ಷಗಳಿಂದ ಕೊಡಗಿನಲ್ಲಿ ಭೂಕುಸಿತ, ಕೊರೊನಾ, ಮಹಾಮಳೆಯಿಂದಾಗಿ ಆರ್ಥಿಕ ಚಟುವಟಿಕೆ ಕುಸಿದಿದೆ. ಮೊದಲಿನಂತೆ ಪ್ರವಾಸಿಗರು ಬರುತ್ತಿಲ್ಲ. ಎಲ್ಲವೂ ಸರಿ ಹೋಯಿತು ಎನ್ನುವಾಗಲೇ ಆಫ್ರಿಕನ್ ಸೋಂಕು ಕಾಣಿಸಿದೆ. ಇದರಿಂದ ಮನುಷ್ಯರಿಗೆ ಯಾವುದೇ ತೊಂದರೆಯಿಲ್ಲ ಎಂಬ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಪ್ರವಾಸಿಗರು ಇತ್ತ ತೆರಳಲು ಹಿಂದೇಟು ಹಾಕುವಂತಾಗಿದೆ.