ಕೊಡಗಿನಲ್ಲಿ ಆಟಿ ಪದ್ನಟ್ ಸಂಭ್ರಮ: ಈ ಆಚರಣೆಗಳ ವಿಶೇಷತೆಗಳೇನು ಗೊತ್ತಾ?
ಮಡಿಕೇರಿ, ಆಗಸ್ಟ್ 03: ಕೊಡಗಿನಲ್ಲೀಗ ಆಟಿ (ಕಕ್ಕಡ) ತಿಂಗಳು ಜುಲೈ 17ರಿಂದ ಆರಂಭವಾಗಿದ್ದು ಆಗಸ್ಟ್ 16ರವರೆಗೆ ಇರಲಿದೆ. ಇದರ ನಡುವೆ ಆಟಿ 18ನೇ ದಿನ(ಆಗಸ್ಟ್ 3)ವನ್ನು ಆಟಿ ಪದ್ನಟ್ ಎಂದು ಆಚರಿಸಲಾಗುತ್ತದೆ. ಹಾಗಾದರೆ ಇದರ ವಿಶೇಷತೆಗಳು ಏನಿರಬಹುದು ಎಂಬ ಅಚ್ಚರಿ ಮೂಡುವುದು ಸಹಜ. ಆದರೂ ಹಬ್ಬದ ಹಿಂದಿನ ಇತಿಹಾಸ ಮತ್ತು ಆಚರಣೆ ವಿಭಿನ್ನವಾಗಿರುವುದಂತು ನಿಜ.
ಕೊಡಗಿನಲ್ಲಿ ಕೊಡವ ಸಂಪ್ರದಾಯದಂತೆ ಸಾರ್ವಜನಿಕವಾಗಿ ಕೆಲವೇ ಕೆಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ಹಬ್ಬಗಳ ಆಚರಣೆ ಹಿಂದೆ ಭತ್ತದ ಕೃಷಿಯ ನಂಟು ಇರುವುದು ಎದ್ದು ಕಾಣಿಸುತ್ತದೆ. ನಿಜವಾಗಿ ಹೇಳಬೇಕೆಂದರೆ ಭತ್ತದ ಕೃಷಿ ಇಲ್ಲಿನವರಿಗೆ ಹಣ ತರುವ ಕೃಷಿಯಲ್ಲ. ಆದರೂ ಭತ್ತದ ಬಗ್ಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಈ ಭತ್ತದ ಕೃಷಿಯನ್ನು ಆದರಿಸಿ ಇಲ್ಲಿ ಹಬ್ಬಗಳು ಆಚರಿಸಲ್ಪಡುತ್ತವೆ. ಅದರಂತೆ ಆಟಿ ಪದ್ನಟ್ ಕೂಡ ಆಚರಣೆಯಾಗುತ್ತಿದೆ.

ಇವತ್ತು ಕೊಡಗು ಬದಲಾವಣೆ ಕಂಡಿದೆ. ವಾಣಿಜ್ಯ ಬೆಳೆಗಳ ಭರಾಟೆ, ವ್ಯಾಪಾರ ವಹಿವಾಟುಗಳು ಹೆಚ್ಚಾಗಿದ್ದು, ಆಧುನಿಕತೆಗೆ ತೆರೆದುಕೊಂಡಿದೆ. ಭತ್ತದ ಬಯಲುಗಳು ಕಾಫಿ ತೋಟ, ನಿವೇಶನ, ಬಡಾವಣೆಗಳಾಗಿ ಮಾರ್ಪಾಡುಗೊಂಡಿವೆ. ಜೊತೆಗೆ ಭತ್ತದ ಕೃಷಿಯೂ ಹಲವು ಕಾರಣಗಳಿಂದ ನಶಿಸುತ್ತಿದೆ. ಆದರೆ ಒಂದೆರಡು ದಶಕಗಳ ಹಿಂದೆ ಹೀಗಿರಲಿಲ್ಲ. ಎಲ್ಲೆಂದರಲ್ಲಿ ಭತ್ತದ ಬಯಲುಗಳು ಕಾಣಿಸುತ್ತಿದ್ದವು. ಹೆಚ್ಚಿನವರಿಗೆ ಭತ್ತದ ಕೃಷಿಯೇ ಆಧಾರವಾಗಿತ್ತು.
ಆಟಿ ತಿಂಗಳಲ್ಲಿ ಬಿಡುವಿಲ್ಲದ ದುಡಿಮೆ
ಇಂತಹ ಕಾಲದಲ್ಲಿ ಆಟಿ (ಕಕ್ಕಡ) ತಿಂಗಳೆಂದರೆ ಕೊಡಗಿನವರ ಮಟ್ಟಿಗೆ ಬಿಡುವಿಲ್ಲದ ದುಡಿಮೆಯ ಕಾಲವಾಗಿತ್ತು. ಸದಾ ಸುರಿಯುವ ಮಳೆ, ಕೊರೆಯುವ ಚಳಿ, ಮುಂಜಾನೆಯಿಂದ ಸಂಜೆಯವರೆಗೂ ಮಳೆಯಲ್ಲಿ ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ಭತ್ತದ ಕೃಷಿಗೆ ಸಂಬಂಧಿಸಿದ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಇಲ್ಲಿನವರದ್ದಾಗಿತ್ತು. ಇಂತಹ ಕಾಲದಲ್ಲಿ ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯನ್ನು ಆಟಿ (ಕೊಡವ ಭಾಷೆಯಲ್ಲಿ ಕಕ್ಕಡ) ತಿಂಗಳು ಎಂದು ಕರೆಯಲಾಗುತ್ತದೆ.
ಈ ಸಮಯದಲ್ಲಿ ಶುಭ ಕಾರ್ಯಗಳು ನಿಷಿದ್ಧವಾಗಿದ್ದು, ಕೃಷಿ ಕೆಲಸಗಳಿಗೆ ಜನ ಹೆಚ್ಚಿನ ಆದ್ಯತೆ ನೀಡುವುದರಿಂದ ಇತರೆ ಎಲ್ಲ ವ್ಯಾಪಾರಗಳು ಕಡಿಮೆಯಾಗಿರುತ್ತಿತ್ತು. ಜೊತೆಗೆ ಮಳೆಯೂ ಧಾರಾಕಾರವಾಗಿ ಸುರಿಯುತ್ತಿತ್ತು. ಕೊಡಗಿನ ಮಟ್ಟಿಗೆ ಭತ್ತದ ಕೃಷಿಯನ್ನು ಮಳೆಗಾಲದಲ್ಲಿ ಮಳೆ ನೀರನ್ನು ಅವಲಂಬಿಸಿ ಮಾಡಲಾಗುತ್ತಿತ್ತು. ಮಳೆ ಸುರಿದು ಭೂಮಿಯಡಿಯಿಂದ ಜಲ ಹುಟ್ಟಿ ಹರಿದರೆ ಅದರ ನೀರನ್ನು ಬಳಸಿ ಭತ್ತದ ಕೃಷಿಯ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಆ ಕಾಲದಲ್ಲಿ ಮಳೆ ಸಮಯಕ್ಕೆ ಸರಿಯಾಗಿ ಆಗುತ್ತಿದ್ದುದರಿಂದ ಇನ್ನು ಆಟಿ ತಿಂಗಳಿಗಿಂತ ಮುಂದೆಯೇ ಭತ್ತದ ಕೃಷಿ ಕಾರ್ಯ ಮುಗಿದು ಹೋಗುತ್ತಿತ್ತು.

ಭತ್ತದ ಕೃಷಿ ಎಂದರೆ ಅದೊಂದು ಸಂಭ್ರಮ
ಕೊಡಗಿನಲ್ಲಿ ಸುರಿಯುವ ಮಳೆಯಲ್ಲಿ ನಾಟಿ ಮಾಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಸುರಿಯುವ ಮಳೆ, ಕೊರೆಯುವ ಚಳಿಯಲ್ಲಿ ಕೆಸರುಗದ್ದೆಯಲ್ಲಿ ನಾಟಿ ನೆಡುವುದು ಎಂದರೆ ಅದು ಕಷ್ಟದ ಕೆಲಸವೂ ಹೌದು ಜೊತೆಗೆ ವಿಭಿನ್ನ ಅನುಭವವೂ ಹೌದು. ಇಲ್ಲಿ ಹೆಂಗಸರು ಪೈರು ಕಿತ್ತರೆ ಗಂಡಸರು ನಾಟಿ ನೆಡುತ್ತಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಗದ್ದೆ ಹೊಂದಿರುವ ಎಲ್ಲರೂ ಗದ್ದೆ ಕೆಲಸವನ್ನು ಕಲಿತಿರುತ್ತಾರೆ.
ಹಿಂದಿನ ಕಾಲದಲ್ಲಿ ಕೂಡು ಆಳುಗಳಾಗಿ ಭತ್ತದ ಕೃಷಿ ಕೆಲಸವನ್ನು ಮಾಡುತ್ತಿದ್ದರು. ಆಗ ಇನ್ನೂ ಗದ್ದೆಗೆ ಯಂತ್ರೋಪಕರಣಗಳು ಇಳಿದಿರಲಿಲ್ಲ. ಎತ್ತುಗಳನ್ನು ಬಳಸಿ ಉಳುಮೆ ಮಾಡಲಾಗುತ್ತಿತ್ತು. ಬೆಳಿಗ್ಗೆ 5ಗಂಟೆಗೆ ಮಳೆಯಿರಲಿ, ಚಳಿಯಿರಲಿ ಯಾವುದನ್ನೂ ಲೆಕ್ಕಿಸದೆ ಎತ್ತುಗಳೊಂದಿಗೆ ಗದ್ದೆಗೆ ತೆರಳಿ ಉಳುಮೆ ಆರಂಭಿಸಿದರೆ 11ಗಂಟೆ ವೇಳೆಗೆ ಉಳುಮೆ ನಿಲ್ಲಿಸಲಾಗುತ್ತಿತ್ತು. ಆ ನಂತರ ಉಳುಮೆ ಮಾಡುತ್ತಿರಲಿಲ್ಲ. ಇನ್ನು ನಾಟಿಗೆ ಎಲ್ಲರೂ ಸೇರಿಕೊಂಡು ಮಾತನಾಡುತ್ತಾ ಹರಟೆ ಹೊಡೆಯುತ್ತಾ ಮಾಡುತ್ತಿದ್ದರಿಂದ ಆಯಾಸವೂ ಗೊತ್ತಾಗುತ್ತಿರಲಿಲ್ಲ. ಕುಂಭದ್ರೋಣ ಮಳೆ ಸುರಿದರೂ ಜಗ್ಗದೆ ಕೆಲಸ ಮಾಡುತ್ತಿದ್ದರು. ಮಳೆಯಿಂದ ಕಾಪಾಡಲು ವಾಟೆ(ಬಿದಿರಿನ ರೀತಿಯ ಚಿಕ್ಕದಾದ ಸಸ್ಯ)ಯಿಂದ ಮಾಡಿದ ಕೊರಂಬು(ಗೊರ್ಗ) ಧರಿಸುತ್ತಿದ್ದರು.
ಆಟಿ ಸೊಪ್ಪಿನಿಂದ ಖಾದ್ಯ ತಯಾರಿ
ಇನ್ನು ಹೆಚ್ಚಿನ ಪ್ರಮಾಣದಲ್ಲಿ ಗದ್ದೆಗಳೇ ಇದ್ದುದರಿಂದಾಗಿ ಅವುಗಳಲ್ಲಿ ನಾಟಿ ಮಾಡಿ ಮುಗಿಸುವ ಹೊತ್ತಿಗೆ ಜನ ಸುಸ್ತಾಗಿ ಬಿಡುತ್ತಿದ್ದರು. ಆಟಿ ತಿಂಗಳಲ್ಲಿ ಬಿಡುವಿಲ್ಲದ ಮಳೆ ಮತ್ತು ಬಿಡುವಿಲ್ಲದ ಅದು ಕೂಡ ನೀರಲ್ಲೇ ನಿಂತು ಮಾಡಬೇಕಾದ ಅನಿವಾರ್ಯತೆ ಹೀಗೆ ಸದಾ ಕೊರೆವ ಚಳಿ, ಮಳೆಯಲ್ಲೇ ಕೆಲಸ ಮಾಡುತ್ತಿದ್ದವರಿಗೆ ತಮ್ಮ ಶರೀರವನ್ನು ಶೀತದಿಂದ ರಕ್ಷಿಸಿಕೊಳ್ಳುವ ಅಗತ್ಯತೆಯೂ ಇತ್ತು. ಆಗ ಬಂದಿದ್ದೇ ಆಟಿ ಪದ್ನಟ್ ಆಚರಣೆ. ಆಟಿ ತಿಂಗಳು ಆರಂಭವಾಗಿ ಹದಿನೆಂಟನೇ ದಿನಕ್ಕೆಲ್ಲ ಗದ್ದೆಯ ನಾಟಿ ಕೆಲಸಗಳು ಬಹುತೇಕ ಮುಗಿದು ಬಿಡುತ್ತಿದ್ದವು. ಈ ವೇಳೆ ದುಡಿಮೆಯಿಂದ ಸುಸ್ತಾದ ದೇಹಕ್ಕೆ ಚೈತನ್ಯ ತುಂಬ ಬೇಕಾಗಿತ್ತು. ದೇಹ ಶೀತಮಯವಾಗಿರುತ್ತಿದ್ದ ಕಾರಣ ಉಷ್ಣಾಂಷ ಹೆಚ್ಚಿಸುವ ಅಗತ್ಯತೆಯಿತ್ತು.

ಇದಕ್ಕಾಗಿ ಹಿರಿಯರು ಕೆಲವು ಗಿಡಮೂಲಿಕೆಗಳ ಉಪಯೋಗ ಅರಿತು ಅದನ್ನು ಸೇವಿಸುತ್ತಿದ್ದರು. ಆಗ ಮಳೆಯೂ ಎಡೆಬಿಡದೆ ಸುರಿಯುತ್ತಿದ್ದರಿಂದ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿಯಿತ್ತು. ಹೆಚ್ಚಿನವರು ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿಕೋಳಿ ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಇವುಗಳಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿತ್ತು. ಇನ್ನು 18ನೇ ದಿನ ಆಟಿ ಪಾಯಸ ಸೇವಿಸಲಾಗುತ್ತದೆ. ಈ ಆಟಿ ಪಾಯಸದ ವಿಶೇಷತೆ ಆಟಿ ಪದ್ನಟ್ ಆಚರಣೆಯ ಹಿಂದೆ ಅಡಗಿದೆ ಎಂಬುದೇ ವಿಶೇಷ.
ಆಟಿ ಸೊಪ್ಪಿನಲ್ಲಿ 18 ತರದ ಔಷಧಿ
ಕೊಡಗಿನ ಕಾಡುಗಳಲ್ಲಿ, ತೋಟಗಳ ಅಂಚಿನಲ್ಲಿ ಪೊದೆಯಾಗಿ ಬೆಳೆಯುವ ಉದ್ದುದ್ದ ದಂಟಿನ ಮೂರ್ನಾಲ್ಕು ಅಡಿಗೂ ಹೆಚ್ಚು ಎತ್ತರ ಬೆಳೆಯುವ ಸಸ್ಯ ಆಟಿಸೊಪ್ಪು. ಇದರ ವೈಜ್ಞಾನಿಕ ಹೆಸರು ಜಸ್ಟಿಕಾ ವೈನಾಡೆನ್ಸಿಯಂತೆ. ಈ ಸೊಪ್ಪಿನಲ್ಲಿ ಆಟಿ ತಿಂಗಳು ಆರಂಭವಾಗುತ್ತಿದ್ದಂತೆಯೇ ಒಂದೊಂದೇ ಔಷಧಿಗುಣ ಸೇರುತ್ತಾ ಹೋಗಿ 18ರಂದು 18 ತರಹದ ಔಷಧಿ ಇದರಲ್ಲಿ ಇರುತ್ತದೆ. ಬಳಿಕ ಅದು ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವುದು ನಂಬಿಕೆ. ಹೀಗಾಗಿ ಆಟಿ ಪದ್ನಟ್ (ಆಗಸ್ಟ್ 3)ರಂದು ಈ ಸೊಪ್ಪಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬರುತ್ತದೆ.
ಕಾಡಿನಲ್ಲಿ ಸಿಗುವ ಸೊಪ್ಪನ್ನು ತಂದು ಶುಚಿಗೊಳಿಸಿ ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಿಸಿದಾಗ ನೀಲಿ ಬಣ್ಣದ ರಸ ಬಿಡುತ್ತದೆ. ಬಳಿಕ ಸೊಪ್ಪನ್ನು ಬೇರ್ಪಡಿಸಿ ರಸವನ್ನು ತೆಗೆದುಕೊಂಡು ಅದರಲ್ಲಿ ಪಾಯಸ, ಬರ್ಪಿ ಸೇರಿದಂತೆ ಹಲವು ಖಾದ್ಯಗಳನ್ನು ಮಾಡಿ ಅದಕ್ಕೆ ಜೇನು ಬೆರೆಸಿ ತಿಂದರೆ ತುಂಬಾ ರುಚಿಯಾಗಿರುತ್ತದೆ. ಇನ್ನು ನಾಟಿ ಕೋಳಿ ಖಾದ್ಯಗಳು ಮನೆಗಳಲ್ಲಿ ಘಮ್ಮೆನ್ನುತ್ತಿರುತ್ತವೆ. ಜತೆಗೆ ಕೆಲವರ ಮನೆಗಳಲ್ಲಿ ಮದ್ಯಕ್ಕೂ ಸ್ಥಾನ ನೀಡಲಾಗುತ್ತದೆ.
ಮನೆಗಳಲ್ಲಿ ಸಂಭ್ರಮದ ವಾತಾವರಣ
ಹಿಂದಿನ ಕಾಲದ ಪರಿಸ್ಥಿತಿಗೆ ತಕ್ಕಂತೆ ಪೂರ್ವಜರು ಹಲವು ಸಂಪ್ರದಾಯವನ್ನು ಜಾರಿಗೆ ತಂದಿದ್ದು ಆದು ಆರೋಗ್ಯಕಾರಿಯಾಗಿದೆ. ಅದನ್ನು ಬದಲಾದ ಕಾಲಘಟ್ಟದಲ್ಲಿಯೂ ಇಲ್ಲಿನವರು ಆಚರಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿಯೇ ಜಿಲ್ಲೆ ಮಾತ್ರವಲ್ಲದೆ, ತಾವು ಎಲ್ಲಿ ನೆಲೆಸಿದ್ದಾರೋ ಅಲ್ಲೆಲ್ಲ ಆಚರಣೆಗಳನ್ನು ಮಾಡುತ್ತಾ ಖುಷಿಯಾಗಿ ಕಾಲ ಕಳೆಯುತ್ತಾರೆ. ಕೊಡಗಿನಲ್ಲಿ ಯಾವುದೇ ಹಬ್ಬಗಳಿರಲಿ ಎಲ್ಲರೂ ಒಟ್ಟಾಗಿ ಸಂಭ್ರಮಿಸುವುದು ಇಲ್ಲಿನ ಸಂಸ್ಕೃತಿ ಅದು ಮುಂದುವರೆಯುತ್ತಾ ಸಾಗುತ್ತಿದೆ ಎನ್ನುವುದೇ ಸಂತಸದ ವಿಷಯವಾಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications