Sevanti Pakoda: ಘಮ ಘಮ ಅನ್ನೋ ಸೇವಂತಿಗೆ ಪಕೋಡ ನೋಡಿ ಫುಡ್ ಲವರ್ಸ್ ಏನಂದ್ರು?
ಚಳಿಗಾಲದಲ್ಲಿ ಸಂಜೆ ಆದ್ರಂತೂ ಬಾಯಿಗೆ ಗರಿಗರಿಯಾದ ಕುರುಕು ತಿಂಡಿ ಏನಾದ್ರೂ ಇರಬೇಕು. ಇನ್ನು ಬಜ್ಜಿ, ಬೋಂಡಾ, ಪಕೋಡ ಸಿಕ್ಕರಂತೂ ಸ್ವರ್ಗನೇ ಕೈಯಲ್ಲಿದ್ದಂತೆ ಅಂತಾರೆ. ಚಳಿಗಾಲದಲ್ಲಿ ಪಕೋಡ ತಿನ್ನುವವರ ಸಂಖ್ಯೆಯೇನು ಕಡಿಮೆಯಿಲ್ಲ. ಆದರೆ, ಮಾರುಕಟ್ಟೆಗೆ ಹೊಸ ಪಕೋಡವೊಂದು ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಸಾಮಾನ್ಯವಾಗಿ ಈರುಳ್ಳಿ ಪಕೋಡ ಎಲ್ಲೆಡೆ ಫೇಮಸ್ ಆಗಿದೆ. ಅದನ್ನು ಕಂಡರೆ ಹಲವರಿಗೆ ಬಾಯಲ್ಲಿ ನೀರೂರುತ್ತೆ. ಈಗೀಗ ಚಿಕನ್ ಪಕೋಡ ಕೂಡ ನಾನ್‌ಪ್ರಿಯರ ಬೆಸ್ಟ್ ಚಾಯ್ಸ್ ಆಗಿದೆ. ಇದನ್ನು ಹೊರತುಪಡಿಸಿ, ಕೆಲವು ತರಕಾರಿಗಳಲ್ಲಿ ಹಾಗೂ ಬೇರೆ ಬೇರೆ ಧಾನ್ಯಗಳಲ್ಲಿ ಪಕೋಡ ಮಾಡುವುದನ್ನು ನೋಡಿದ್ದೆವು. ಆದರೆ ಇದೀಗ ಹೊಸ ಪಕೋಡವೊಂದು ಎಲ್ಲರ ಗಮನ ಸೆಳೆದಿದೆ.

ಸಾಮಾನ್ಯವಾಗಿ ಸೇವಂತಿಗೆ ಹೂವನ್ನು ದೇವರಿಗೆ ಅಲಂಕಾರ ಮಾಡಲು, ಅಲಂಕಾರಕ್ಕೆ, ಹೂವಿನ ಹಾರ ತಯಾರಿಸಲು ಬಳಸುತ್ತಿದ್ದರು. ಇದೀಗ ಸ್ವಲ್ಪ ಚೇಂಜ್ ಇರಲಿ ಎಂದು ಸೇವಂತಿಗೆ ಹೂವಿನ ಪಕೋಡಾ ರೆಸಿಪಿ ಮಾಡಲು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.
ಹೌದು, ಸೇವಂತಿಗೆ ಹೂವಿನಲ್ಲಿ ಪಕೋಡ ಮಾಡುವ ದುಸ್ಸಾಹಕ್ಕೆ ಕೆಲವರು ಕೈಹಾಕಿದ್ದು, ಇದರ ವಿಡಿಯೋ ಕೂಡ ಮಾಡಿ ಆಹಾರಪ್ರಿಯರಿಗೆ ಆಘಾತ ಕೂಡ ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈರುಳ್ಳಿ ಪಕೋಡಾದಂತೆಯೇ ಸೇವಂತಿಗೆ ಹೂವನ್ನು ಕಡಲೆಹಿಟ್ಟಿನಲ್ಲಿ ಕಲೆಸಿ ಸುಡುವ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದಿದ್ದಾರೆ. ಇದು ಕರಿದ ನಂತರವೂ ಘಮ್ ಎನ್ನುತ್ತಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಇದಕ್ಕೆ ಬಹುತೇಕ ಫುಡ್ ಲವರ್ಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೇವಂತಿಗೆಯಲ್ಲಿ ಪಕೋಡ ಮಾಡಬಹುದು ಎಂಬ ಆಲೋಚನೆ ಬಂದ ತಲೆಗೆ ಅತ್ಯುನ್ನತ ಪ್ರಶಸ್ತಿಯೊಂದನ್ನ ಕೊಡಲೇಬೇಕು ಎಂದು ಕಾಲೆಳೆದಿದ್ದಾರೆ.

ಇನ್ನೂ ಕೆಲವರು ಅಣ್ಣ..ನಮ್ಮ ಬಿಟ್‌ಬಿಡಿ ಅಣ್ಣ ಎಂದು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಂತರ ಒಂದು ವರ್ಷದವರೆಗೆ ಪಕೋಡ ತಿನ್ನೋದೇ ಬೇಡ ಎಂದು ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಜೋಕ್ ಕೂಡ ಮಾಡಿದ್ದಾರೆ. ಹಲವರು ದಯವಿಟ್ಟು ಈ ಪಕೋಡ ಸಿಗುವ ಜಾಗದ ಬಗ್ಗೆ ಮಾಹಿತಿ ಕೊಡಿ. ಬಂದು ತಿಂದು ರಿವ್ಯೂ ಕೊಡ್ತೀವಿ ಎಂದು ಬೇಡಿಕೆ ಇಟ್ಟಿದ್ದಾರೆ.
ಇನ್ನು ಕೆಲವರು ದಯವಿಟ್ಟು ಈ ರೆಸಿಪಿಯನ್ನು ಯಾವುದೇ ಸ್ಟಾರ್ ಹೋಟೆಲ್‌ನವರಿಗೆ ಸಿಗದಂತೆ ನೋಡಿಕೊಳ್ಳಿ. ಈರುಳ್ಳಿ ಪಕೋಡ ಬದಲಿಗೆ ಇನ್ಮೇಲೆ ಸೇವಂತಿಗೆ ಪಕೋಡ ಬಂದ್ರೆ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ. ಇದನ್ನು ಯಾರು ಮಾಡಿದ್ದಾರೆ, ವಿಡಿಯೋ ಎಲ್ಲಿಯದ್ದು ಎಂಬುದರ ನಿಖರ ವಿವರಗಳಿಲ್ಲ. ಆದರೆ ಯಾರೋ ಪ್ರೊಫೆಷನಲ್ ಕುಕ್ ರೀತಿಯೇ ಸೇವಂತಿಗೆ ಪಕೋಡಾ ಕರಿದಿರೋದಂತೂ ಸತ್ಯ. ನಮ್ಮ ಕನ್ನಡಿಗರಂತೂ ಈ ವಿಡಿಯೋ ನೋಡಿ.. ಸೇವಂತಿಗೆ ಹೂವಲ್ಲಿ ಪಕೋಡ ಮಾಡಿದ ಪುಣ್ಯಾತ್ಮನ ಮುಖ ಒಮ್ಮೆ ನೋಡಬೇಕು ಎಂದು ಕೋರಿಕೆ ಇಟ್ಟಿದ್ದಾರೆ. ಕೆಲವರು ಸೇವಂತಿಯೇ...ಸೇವಂತಿಯೇ.. ಎಣ್ಣೇಲಿ ಬೆಂದುಬಿಟ್ಟು ಘಮ್ ಅಂತಿಯೇ... ಎಂದು ಹಾಡನ್ನೂ ಹಾಡಿದ್ದಾರೆ.












Click it and Unblock the Notifications