ಭಾರತದಲ್ಲಿ ಹವಾಮಾನದ ಹೊಡೆತಕ್ಕೆ 9 ಕೋಟಿ ಜನರಿಗೆ ಊಟ ಸಿಗುವುದಿಲ್ಲ!
ನವದೆಹಲಿ, ಮೇ 16: ಭಾರತದಲ್ಲಿ ಹೊತ್ತಿನ ಊಟಕ್ಕೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. 9 ಕೋಟಿಗೂ ಅಧಿಕ ಭಾರತೀಯರು ಹಸಿವಿನ ಸಮಸ್ಯೆ ಎದುರಿಸಲಿದ್ದಾರೆ ಎಂದು ಎಚ್ಚರಿಸಲಾಗಿದೆ.
ಭಾರತದ ಕೃಷಿ ಉತ್ಪಾದನೆಯಲ್ಲಿ ಕುಸಿತ ಮತ್ತು ಆಹಾರ ಪೂರೈಕೆ ಸರಪಳಿ ಅಡ್ಡಿಯಿಂದ 2030ರ ವೇಳೆಗೆ ಹೆಚ್ಚಿನ ಭಾರತೀಯರು ಹಸಿವಿನ ಸಮಸ್ಯೆ ಎದುರಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಜಾಗತಿಕ ಆಹಾರ ನೀತಿ ವರದಿ 2022ರಲ್ಲಿ ಉಲ್ಲೇಖಿಸಲಾಗಿದೆ.
ದೇಶದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಆಹಾರ ಸರಪಳಿಗೆ ತೊಂದರೆಯಾಗಲಿದ್ದು, ಹಸಿವಿನ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದೆ. ಹವಾಮಾನ ಬದಲಾವಣೆಯಿಂದ 2030ರ ವೇಳೆಗೆ 9 ಕೋಟಿಗೂ ಹೆಚ್ಚು ಭಾರತೀಯರು ಹಸಿವಿನ ಅಪಾಯವನ್ನು ಎದುರಿಸುತ್ತಾರೆ. ಇದು 'ಅಪಾಯದಲ್ಲಿರುವ' ಜನಸಂಖ್ಯೆಯಲ್ಲಿ ಶೇ.23ರಷ್ಟು ಹೆಚ್ಚಳವಾಗಿದೆ, ಇದು ಸಾಮಾನ್ಯ ಸಂದರ್ಭಗಳಲ್ಲಿ 7.39 ಕೋಟಿ ಇರುತ್ತದೆ ಎಂದು ವರದಿಯಾಗಿದೆ.

ಭಾರತದ ಒಟ್ಟು ಆಹಾರ ಉತ್ಪಾದನೆ ಪ್ರಮಾಣ
ದೇಶದಲ್ಲಿ ಒಟ್ಟು ಆಹಾರ ಉತ್ಪಾದನೆಯ ಪ್ರಮಾಣವು ಇಳಿಯುವ ಸಾಧ್ಯತೆ ಹೆಚ್ಚಾಗಿದೆ. ಹವಾಮಾನ ಬದಲಾವಣೆ ಹಿನ್ನಲೆಯಲ್ಲಿ ಧಾನ್ಯಗಳು, ಮಾಂಸ, ಹಣ್ಣುಗಳು, ತರಕಾರಿಗಳು, ಎಣ್ಣೆಕಾಳುಗಳು, ಬೇಳೆಕಾಳುಗಳು, ಬೇರುಗಳು ಮತ್ತು ಗೆಡ್ಡೆಗಳ ತೂಕದ ಪ್ರಕಾರ ಸೂಚ್ಯಂಕ 1.627 ರಿಂದ 1.549ಕ್ಕೆ ಇಳಿಯುವ ಸಾಧ್ಯತೆಯಿದೆ.

ಹವಾಮಾನ ಬದಲಾವಣೆ ಪ್ರಭಾವ
2030ರ ವೇಳೆಗೆ ಸರಾಸರಿ ಕ್ಯಾಲೋರಿಗಳ ಬಳಕೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬರುವ ಸಾಧ್ಯತೆಯಿದೆ. ಹವಾಮಾನ ಬದಲಾವಣೆಯಿಂದ ತಲಾವಾರು ದಿನಕ್ಕೆ 2,697 kcal ನಿಂದ ಸಾಮಾನ್ಯ ಸಂದರ್ಭಗಳಲ್ಲಿ ತಲಾ 2,651 kcal ವರೆಗೆ ತಗ್ಗಲಿದೆ.

ಬಿಸಿಲಿನ ಶಾಖ ನಾಲ್ಕು ಪಟ್ಟು ಹೆಚ್ಚಾಗುವ ನಿರೀಕ್ಷೆ
2100ರ ವೇಳೆಗೆ ಭಾರತದಾದ್ಯಂತ ಸರಾಸರಿ ತಾಪಮಾನವು 2.4 ಡಿಗ್ರಿ C ಮತ್ತು 4.4 ಡಿಗ್ರಿ C ನಡುವೆ ಏರುತ್ತದೆ ಎಂದು ಅಂದಾಜಿಸಲಾಗಿದೆ. ಬೇಸಿಗೆಯ ಶಾಖದ ಅಲೆಗಳು 2100ರ ವೇಳೆಗೆ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸರಾಸರಿ ತಾಪಮಾನ ಏರಿಕೆಯು ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಕೃಷಿ ಉತ್ಪಾದನೆಯಲ್ಲಿ ಇಳಿಮುಖ
ಭಾರತದ ಹವಾಮಾನದಲ್ಲಿನ ಬದಲಾವಣೆಯು ಕೃಷಿ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆೆ. ಕೃಷಿ ಇಳುವರಿಯು 2041-2060ರ ವೇಳೆಗೆ 6.6 ರಿಂದ ಶೇ.1.8ಕ್ಕೆ ತಗ್ಗಬಹುದು. ಅದೇ ರೀತಿ 2061-2080ರ ವೇಳೆಗೆ 23.6 ರಿಂದ ಶೇ.7.2ರಷ್ಟು ಕುಸಿಯಬಹುದು ಎಂದು ವರದಿಯು ಯೋಜಿಸಿದೆ. ವಾಯುವ್ಯ ಭಾರತ ಸೇರಿದಂತೆ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಅಕ್ಕಿಗೆ ಪರ್ಯಾಯ ಬೆಳೆಯನ್ನು ಬೆಳೆಯುವಂತೆ ಸೂಚಿಸಲಾಗುತ್ತಿದೆ. "ಆಹಾರ ಭದ್ರತೆಗೆ ಧಕ್ಕೆಯಾಗದಂತೆ ಅಕ್ಕಿಯ ಬೆಳೆಯುವ ಪ್ರದೇಶವನ್ನು ಕಡಿಮೆ ಮಾಡಬಹುದು" ಎಂದು ಅದು ಹೇಳುತ್ತದೆ.












Click it and Unblock the Notifications