ಪುನೀತ್ ನಟಿಸಬೇಕಿದ್ದ ಆ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ಹೀರೋ?
ಸ್ಯಾಂಡಲ್‌ವುಡ್‌ನ ಅಪ್ಪು, ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನವು ಇಡೀ ಕರ್ನಾಟಕಕ್ಕೆ ದೊಡ್ಡ ಆಘಾತ ನೀಡಿದ್ದು ಜನ ಇನ್ನೂ ಮರೆತಿಲ್ಲ. ಪುನೀತ್ ಅವರ ಅಕಾಲಿಕ ನಿಧನದಿಂದ ಅವರು ಮಾಡಬೇಕಿದ್ದ ಹಲವು ಸಿನಿಮಾಗಳು ನಿಂತು ಹೋದವು. ಹೀಗಾಗಿ ಪುನೀತ್‌ಗಾಗಿ ರೆಡಿಯಾಗಿದ್ದ ಸಿನಿಮಾಗಳನ್ನ ರಾಜ್ ಕುಟುಂಬದ ಹೀರೋಗಳನ್ನೇ ಹಾಕಿಕೊಂಡು ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಪೈಕಿ ಅಪ್ಪು ಅವರು ನಟಿಸಬೇಕಿದ್ದ "ದ್ವಿತ್ವ" ಸಿನಿಮಾ ಕೂಡ ಒಂದು. ಇದೇ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ.
2021ರಲ್ಲಿ ಅಪ್ಪು ಅವರ "ದ್ವಿತ್ವ" ಸಿನಿಮಾ ಘೋಷಣೆಯಾಗಿತ್ತು. ಇದನ್ನು ಲೂಸಿಯಾ, ಯೂಟರ್ನ್ ಖ್ಯಾತಿಯ ಪವನ್ ಕುಮಾರ್ ಅವರು ನಿರ್ದೇಶನ ಮಾಡಲು ಮುಂದಾಗಿದ್ದರು. ಹೊಂಬಾಳೆ ಫಿಲಂಸ್ ಈ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಒಳ್ಳೆಯ ಬ್ಯಾನರ್, ಒಳ್ಳೆಯ ನಿರ್ದೇಶಕರ ಜೊತೆಗೆ ಅಪ್ಪು ಸಿನಿಮಾ ಹೇಗಿರುತ್ತೆ ಎಂದು ಅವರ ಅಭಿಮಾನಿಗಳೆಲ್ಲರೂ ತೀವ್ರ ಕುತೂಹಲದಿಂದ ಕಾದಿದ್ದರು.

ಆದರೆ ಈ ಸಿನಿಮಾ ಸೆಟ್ಟೇರುವ ಮುನ್ನವೇ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದರು. ಆಗಿನಿಂದ ಈ ಸಿನಿಮಾ ಕೂಡ ಮೂಲೆ ಸೇರಿತು. ಆದರೆ ಅಪ್ಪು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ದ್ವಿತ್ವ ಸಿನಿಮಾ ಬಗ್ಗೆ ಅಪ್‌ಡೇಟ್ ಕೇಳುತ್ತಿದ್ದರು. ಈ ಕಥೆ ಹಾಳಾಗುವುದು ಬೇಡ, ರಾಜ್ ಫ್ಯಾಮಿಲಿಯ ನಟರಿಗೇ ಆ ಸಿನಿಮಾ ಮಾಡಿ ಎಂದು ಪವನ್ ಕುಮಾರ್ ಅವರಿಗೆ ಮನವಿ ಮಾಡುತ್ತಿದ್ದರು. ಬಹುತೇಕರು ನಟ ಯುವ ರಾಜ್‌ಕುಮಾರ್ ಈ ಸಿನಿಮಾ ಮಾಡಿದರೆ ಸೂಕ್ತ ಎಂದಿದ್ದರು. ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ವೆಬ್ ಸಿರೀಸ್ ಆಗಬಹುದು!
ಪುನೀತ್ ಅವರಿಗಾಗಿಯೇ ಬರೆದಿದ್ದ ಆ ಸ್ಕ್ರಿಪ್ಟ್ ಹೊಸ ರೂಪದಲ್ಲಿ ಬರಬಹುದು ಎಂದು ನಿರ್ದೇಶಕ ಸುಳಿವು ನೀಡಿದ್ದಾರೆ. ದ್ವಿತ್ವ ಯಾವ ಟೈಮಲ್ಲಿ ಬರಬೇಕೋ ಬರಬಹುದು. ಅದು ವೆಬ್ ಸಿರೀಸ್ ಆಗಿಯೂ ಬರಬಹುದು ಎಂಬ ಸುಳಿವು ನೀಡಿದ್ದಾರೆ. ಆ ಮೇಲೆ ಮೂರು ನಾಲ್ಕು ವರ್ಷ ಆದ ಮೇಲೆ ಆ ಸಿನಿಮಾ ನನಗೆ ಡೇಟೆಡ್ ಅಂತಲೂ ಅನಿಸಬಹುದು ಎಂದು ನಿರ್ದೇಶಕ ಪವನ್ ಕುಮಾರ್ ಕ್ಲಾರಿಟಿ ಕೊಟ್ಟಿದ್ದಾರೆ.
ಇನ್ನು ಪವನ್ ಕುಮಾರ್ ಅವರು ಹೊಂಬಾಳೆ ಬ್ಯಾನರ್‌ನಲ್ಲಿ ಧೂಮಂ ಸಿನಿಮಾ ನಿರ್ದೇಶಿಸಿದ್ದರು. ಅದು ಅಷ್ಟಾಗಿ ಸದ್ದು ಮಾಡಲಿಲ್ಲ. ಬಳಿಕ ಪವನ್ ಕುಮಾರ್ ನಿರ್ದೇಶನದಿಂದ ನಟನೆ ಕಡೆ ಬಂದಿದ್ದರು. ಗಾಳಿಪಟ-2 ಸಿನಿಮಾದಲ್ಲಿ ನಟಿಸಿದ್ದ ಪವನ್, ಇದೀಗ ಶೋಧ ಎನ್ನುವ ಹೊಸ ವೆಬ್‌ಸಿರೀಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆಯೂ ಮಾತನಾಡಿರುವ ಅವರು ನಾಲ್ಕು ತಿಂಗಳ ಹಿಂದೆ ಹೀಗೆ ಇರ್ತೀನಿ ಅಂತ ನನಗೇ ಗೊತ್ತಿರಲಿಲ್ಲ. ಮುಂದೆ ಹೇಗಿರುತ್ತೇನೆ, ಏನೆಲ್ಲ ಮಾಡ್ತೀನಿ ಎಂದೂ ನನಗೆ ಗೊತ್ತಿಲ್ಲ ಎಂದಿದ್ದಾರೆ.












Click it and Unblock the Notifications