Yuva Rajkumar: ಮಹಿಳೆಗೆ ಕಾರು ಡಿಕ್ಕಿ ಘಟನೆ ಬಗ್ಗೆ ನಟ ಯುವ ರಾಜ್‌ಕುಮಾರ್ ಹೇಳಿದ್ದೇನು?
ತುಮಕೂರಿನ ಸಿದ್ಧಗಂಗಾ ಮಠದ ಬಳಿ ನಟ ಯುವ ರಾಜ್‌ಕುಮಾರ್ ನಟನೆಯ ಎಕ್ಕ ಚಿತ್ರತಂಡದ ಕಾರು ಮಹಿಳೆಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಮಹಿಳೆ ಕಾಲಿಗೆ ತೀವ್ರ ಪೆಟ್ಟಾದರೂ ಚಿತ್ರತಂಡ ಆಕೆಯ ಸ್ಥಿತಿ ವಿಚಾರಿಸದೆ ಅಮಾನವೀಯವಾಗಿ ನಡೆದುಕೊಂಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ವೇಳೆ ನಟ ಯುವ ರಾಜ್‌ಕುಮಾರ್ ಕೂಡ ಅಲ್ಲೇ ಇದ್ದರು ಎನ್ನಲಾಗಿತ್ತು. ಸಿನಿಮಾ ಪ್ರಚಾರದ ನಡುವೆ ಯುವ ರಾಜ್‌ಕುಮಾರ್ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಸಲಿಗೆ ಅಲ್ಲಿ ನಡೆದಿದ್ದೇನು? ಎಂದು ತಿಳಿಸಿದ್ದಾರೆ.
ಚಿತ್ರತಂಡವು ರಾಜ್ಯದಾದ್ಯಂತ ಎಕ್ಕ ಸವಾರಿ ಹಮ್ಮಿಕೊಂಡಿತ್ತು. ಹೀಗಾಗಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿತ್ತು. ಆಗ ಅಲ್ಲಿ ಜನ ಹೆಚ್ಚಾಗಿ ಸೇರಿದ್ದರಿಂದ ಮಹಿಳೆಯೊಬ್ಬರಿಗೆ ಚಿತ್ರತಂಡದ ಕಾರು ಡಿಕ್ಕಿ ಹೊಡೆದಿತ್ತು. ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ಚಿತ್ರತಂಡ ಮಹಿಳೆಗೆ ಏನಾಯ್ತು ಎಂದು ಸೌಜನ್ಯಕ್ಕೂ ವಿಚಾರಿಸದೆ ಅಲ್ಲಿಂದ ಹೊರಟು ಹೋಗಿತ್ತು ಎಂದು ಮಾಧ್ಯಮಗಳ ಮುಂದೆ ಮಹಿಳೆ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಯುವ ರಾಜ್‌ಕುಮಾರ್ ವೇದಿಕೆಯಲ್ಲೇ ಮಾತನಾಡಿದ್ದಾರೆ.

ತುಮಕೂರಿಗೆ ಹೋಗಿದ್ದಾಗ ಮಹಿಳೆಯ ಕಾಲು ಮೇಲೆ ಕಾರು ಹತ್ತಿದ್ದ ವಿಚಾರ ನನಗೆ ಗೊತ್ತಿರಲಿಲ್ಲ. ಬೆಂಗಳೂರಿಗೆ ನಾವು ವಾಪಸ್ ಆದ ಬಳಿಕ ಮಾಧ್ಯಮಗಳಲ್ಲಿ ಈ ವಿಚಾರ ತಿಳಿಯಿತು. ಈ ವಿಷಯ ಗೊತ್ತಾಗಿ ನಮ್ಮ ಅಭಿಮಾನಿಗಳ ಕಡೆಯಿಂದ ಗಾಯಗೊಂಡ ಆ ಮಹಿಳೆಗೆ ಎಲ್ಲ ಸೌಕರ್ಯ ಮಾಡಿಕೊಡಲಾಗಿದೆ. ಮಹಿಳೆಯನ್ನ ಬೌನ್ಸರ್ ತಳ್ಳಿದರು ಎಂದು ಹೇಳಿದ್ದಾರೆ. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ.
ಮಹಿಳೆಗೆ ಕೈಲಾದ ಸಹಾಯ ಮಾಡಿದ್ದೀವಿ
ಸಿದ್ದಗಂಗಾ ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದು ಹೊರಡುವ ಸಮಯದಲ್ಲಿ ಈ ಘಟನೆ ಆಯ್ತು ಎಂದು ತಿಳಿಯಿತು. ಮಠದಲ್ಲಿ ತುಂಬಾ ಜನ ಸೇರಿದ್ದರು. ಹಾಗಾಗಿ ತಳ್ಳಾಟದಲ್ಲಿ ಅವರಿಗೆ ಏಟಾಗಿದೆ. ನನಗೆ ನಿಜವಾಗಿಯೂ ಅಲ್ಲಿ ಈ ವಿಚಾರದ ಬಗ್ಗೆ ತಿಳಿದಿರಲಿಲ್ಲ. ಅಲ್ಲಿಂದ ಕಾಲೇಜೊಂದರಲ್ಲಿ ನಮ್ಮ ಕಾರ್ಯಕ್ರಮ ಇತ್ತು. ಬಳಿಕ ಫೋನ್‌ನಲ್ಲಿ ಈ ಸುದ್ದಿ ನೀಡಿದೆ. ಕೂಡಲೇ ತುಮಕೂರಿನಲ್ಲಿದ್ದ ನಮ್ಮ ಅಭಿಮಾನಿಗಳಿಗೆ ತಿಳಿಸಿದೆ. ಅವರು ತಕ್ಷಣ ಆಸ್ಪತ್ರೆಗೆ ತೆರಳಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಕಾಲು ಫ್ರಾಕ್ಚರ್ ಆಗಿಲ್ಲ, ಉಳುಕಿದೆ ಎಂದು ಹೇಳಿದ್ರು. ಬಳಿಕ ನಮ್ಮಿಂದ ಕೈಲಾದ ಸಹಾಯವನ್ನು ಮಾಡಿದ್ದೀವಿ ಎಂದು ನಟ ಸ್ಪಷ್ಟನೆ ನೀಡಿದ್ದಾರೆ.
ಆ ಸಮಯದಲ್ಲಿ ನಮಗೂ ಈ ವಿಚಾರ ಗೊತ್ತಾಗಲಿಲ್ಲ, ಬೇರೆಯವರೂ ಹೇಳಿಲ್ಲ. ಮಾಧ್ಯಮದವರೇ ಆ ಮಹಿಳೆಯನ್ನು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಿದರು ಎಂದು ತಿಳಿಯಿತು. ಅವರಿಗೂ ಧನ್ಯವಾದಗಳು. ಇನ್ನು ಬೌನ್ಸರ್‌ಗಳು ಅಲ್ಲಿ ತಳ್ಳಾಡಿದರು ಎಂದು ಹೇಳುತ್ತಿದ್ದಾರೆ. ಅವರ ಪರವಾಗಿ ನಾನು ಕ್ಷಮೆ ಕೇಳ್ತೀನಿ, ಇದೆಲ್ಲ ಅನಿರೀಕ್ಷಿತವಾಗಿ ನಡೆದಿದೆ. ಈ ಘಟನೆ ಆಗಬಾರದಿತ್ತು. ನನಗೆ ಅಲ್ಲೇ ವಿಚಾರ ತಿಳಿದಿದ್ದರೆ ಖಂಡಿತವಾಗಿ ಅವರನ್ನು ಅಲ್ಲೇ ಆರೋಗ್ಯ ವಿಚಾರಿಸುತ್ತಿದ್ದೆ. ಸದ್ಯ ಆ ಮಹಿಳೆ ಈಗ ಆರೋಗ್ಯವಾಗಿದ್ದಾರೆ ಎಂದು ಯುವ ಹೇಳಿದ್ದಾರೆ.












Click it and Unblock the Notifications