ಅನುಮಾನ ಇದ್ರೆ ಬ್ಯಾಂಕ್ ಸ್ಟೇಟ್‌ಮೆಂಟ್ ತೋರಿಸ್ತೀನಿ: 120 ಕೋಟಿಗೆ ಟಾಕ್ಸಿಕ್ ಡೀಲ್ ಸುಳ್ಳು ಎಂದವರಿಗೆ ದಿಲ್ ರಾಜು ತಿರುಗೇಟು
ನಟ ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿತರಣಾ ಹಕ್ಕುಗಳನ್ನು ₹120 ಕೋಟಿ ರೂಪಾಯಿಗೆ ಪಡೆದಿರುವುದಾಗಿ ಟಾಲಿವುಡ್ ನಿರ್ಮಾಪಕ ದಿಲ್ ರಾಜು ಘೋಷಿಸಿದ ಬಳಿಕ, ಈ ಭಾರೀ ಮೊತ್ತದ ಬಗ್ಗೆಯೇ ಚಿತ್ರರಂಗದಲ್ಲಿ ಪ್ರಮುಖ ಚರ್ಚಾ ವಿಷಯವಾಗಿದೆ. ಈ ಸಂಖ್ಯೆಯನ್ನು ಕೇವಲ ಪ್ರಚಾರಕ್ಕಾಗಿ ಹೊರಬಿಟ್ಟಿದ್ದು ಎಂಬ ವದಂತಿಯೂ ಹರಡಿರುವುದರಿಂದ ದಿಲ್ ರಾಜು ನೇರವಾಗಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ದಿಲ್ ರಾಜು ಅವರ ಬ್ಯಾನರ್ ಶ್ರೀವೆಂಕಟೇಶ್ವರ್ ಕ್ರಿಯೇಷನ್ಸ್ (ಎಸ್‌ವಿಸಿ) ಇತ್ತೀಚೆಗೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್‌ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳಿಂದ 'ಟಾಕ್ಸಿಕ್' ಚಿತ್ರದ ಆಂಧ್ರ ಹಾಗೂ ತೆಲಂಗಾಣ ವಿತರಣಾ ಹಕ್ಕುಗಳನ್ನು ಅಡ್ವಾನ್ಸ್ ಕಮಿಷನ್ ಆಧಾರದಲ್ಲಿ ₹120 ಕೋಟಿಗೆ ಪಡೆದಿರುವುದಾಗಿ ದೃಢಪಡಿಸಿತು. ಮೂಲತಃ ತೆಲುಗು ಭಾಷೆಯಲ್ಲದ ಸಿನಿಮಾವೊಂದಕ್ಕೆ ಎಸ್‌ವಿಸಿ ಮಾಡಿದ ಅತಿದೊಡ್ಡ ಹೂಡಿಕೆ ಇದು ಎಂದೇ ಹೇಳಲಾಗಿದೆ.

ಆದರೆ ಈ ಮೊತ್ತವನ್ನು ಕೇವಲ ಪಬ್ಲಿಸಿಟಿ ಗಿಮಿಕ್‌ಗಾಗಿ ಘೋಷಿಸಲಾಗಿದೆ ಎಂಬ ಮಾತುಗಳು ಕೇಳಿಬಂದವು. ತಮ್ಮದೇ ನಿರ್ಮಾಣದ 'ಮಾರ್ಕಂಡೇಯ' ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಪತ್ರಕರ್ತರು ಈ ಬಗ್ಗೆ ದಿಲ್ ರಾಜು ಅವರಿಗೆ ಪ್ರಶ್ನೆ ಕೇಳಿದರು. "ನಿಮ್ಮನ್ನು ದಿಲ್ ರಾಜು ಅಂತ ಕರೆಯಬೇಕೋ, ಡೇರ್ ರಾಜು ಅಂತ ಕರೆಯಬೇಕೋ ಗೊತ್ತಾಗುತ್ತಿಲ್ಲ ಸರ್" ಎಂದು ಪ್ರಶ್ನಿಸಿದರು. ಅದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಅವರು, "ನೀವು ಏನಾದರೂ ಕರೆಯಿರಿ" ಎಂದರು. "₹120 ಕೋಟಿ ಹೂಡಿಕೆ ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ. ಹಲವರು ಶಾಕ್ ಆಗಿದ್ದಾರೆ. ನೀವು ಏನು ಹೇಳಿದರೂ ನಾನು ಸಿದ್ಧ" ಎಂದರು.
ಪಬ್ಲಿಸಿಟಿ ಗಿಮಿಕ್ ಅಲ್ಲ
ಇದು ಕೇವಲ ಪಬ್ಲಿಸಿಟಿ ಸ್ಟಂಟ್ ಅಂತ ಜನ ಭಾವಿಸುತ್ತಿದ್ದಾರೆ ಎಂಬ ಮಾತನ್ನು ದಿಲ್ ರಾಜು ಸ್ಪಷ್ಟವಾಗಿ ತಿರಸ್ಕರಿಸಿದರು. "ಒಂದು ಕೆಲಸ ಮಾಡುತ್ತೇನೆ. ಅನುಮಾನ ಇರುವವರಿಗೆ ಹಣ ವರ್ಗಾವಣೆ ಮಾಡಿದ ಬಳಿಕ ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್ ಹಂಚಿಕೊಳ್ಳುತ್ತೇನೆ. ಆಗ ನಂಬುತ್ತಾರೆ" ಎಂದು ತಿರುಗೇಟು ನೀಡಿದರು. ವರದಿಗಳ ಪ್ರಕಾರ ಟಾಕ್ಸಿಕ್ ಸಿನಿಮಾದ ಆಂಧ್ರ ಹಾಗೂ ತೆಲಂಗಾಣ ವಿತರಣಾ ಹಕ್ಕುಗಳಿಗಾಗಿ ಪಿವಿಆರ್ ಐನಾಕ್ಸ್ ಸೇರಿದಂತೆ ಮೂವರು ಪ್ರಮುಖ ಸ್ಪರ್ಧಿಗಳು ಆಸಕ್ತಿ ತೋರಿಸಿದ್ದರು. ಆದರೆ ಅಂತಿಮವಾಗಿ ಎಸ್‌ವಿಸಿ ಈ ಡೀಲ್‌ನಲ್ಲಿ ಯಶಸ್ವಿಯಾಯಿತು.
ಇನ್ನು ಸಿನಿಮಾ ಬಗ್ಗೆ ಮಾತನಾಡಿದ ದಿಲ್ ರಾಜು, "ಯಶ್ ಭಾರತೀಯ ಸಿನಿಮಾರಂಗದ ಪವರ್‌ಫುಲ್ ನಟ. ಕೆಜಿಎಫ್-2 ಬಳಿಕ ಅವರ ಮಾರುಕಟ್ಟೆ ಜಾಗತಿಕವಾಗಿ ವಿಸ್ತರಿಸಿದೆ. ನಾಲ್ಕು ವರ್ಷಗಳ ನಿರೀಕ್ಷೆಯ ಬಳಿಕ ಬರುತ್ತಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಈ ಪ್ರತಿಷ್ಠಿತ ಯೋಜನೆಯನ್ನು ಪ್ರಸ್ತುತಪಡಿಸಲು ನಾವು ಉತ್ಸಾಹದಲ್ಲಿದ್ದೇವೆ" ಎಂದಿದ್ದಾರೆ. ₹120 ಕೋಟಿ ಹೂಡಿಕೆ ಕುರಿತ ಚರ್ಚೆ ಮುಂದುವರಿದಿದ್ದರೂ, ದಿಲ್ ರಾಜು ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದು, 'ಟಾಕ್ಸಿಕ್' ಬಿಡುಗಡೆಗೆ ಮುನ್ನವೇ ಚಿತ್ರರಂಗದಲ್ಲಿ ಭಾರೀ ಹವಾ ಸೃಷ್ಟಿಸಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ಈ ಸಿನಿಮಾ ದಕ್ಷಿಣ ಭಾರತೀಯ ಭಾಷೆಗಳು ಹಾಗೂ ಹಿಂದಿಯಲ್ಲೂ ಬಿಡುಗಡೆಯಾಗಲಿದೆ. ಮಾರ್ಚ್ 19ರಂದು ಬಿಡುಗಡೆಯಾಗಲಿರುವ ಟಾಕ್ಸಿಕ್‌ಗೆ ಪೈಪೋಟಿ ನೀಡಲು ಧುರಂಧರ್-2 ಕೂಡ ತೆರೆಗೆ ಬರುತ್ತಿದೆ.












Click it and Unblock the Notifications