"ಯಶ್ ಅಂದೇ ವಿಷ್ಣುವರ್ಧನ್ ಸ್ಮಾರಕಕ್ಕಾಗಿ ಧ್ವನಿ ಎತ್ತಿದ್ರು, ಇಂದು ಯಾವ ನಟನೂ ಬರಲಿಲ್ಲ"
ನಟ ವಿಷ್ಣುವರ್ಧನ್ ಸ್ಮಾರಕವನ್ನು ತೆರವು ಮಾಡಿದ ಘಟನೆ ಸಂಬಂಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ಜಾಗದಲ್ಲಿ ಸ್ಮಾರಕ ಮರುನಿರ್ಮಾಣವಾಗಬೇಕು ಎಂದು ಧ್ವನಿ ಎತ್ತಿದ್ದಾರೆ. ಇದೇ ವಿಚಾರವಾಗಿ ವಿಷ್ಣು ಅಳಿಯ ಅನಿರುದ್ಧ ಅವರು ಸಭೆ ಕರೆದಿದ್ದರು. ಈ ಸಭೆಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದ್ದಿದ್ದು, ಚರ್ಚೆ ವೇಳೆ ದೊಡ್ಡ ಹೈಡ್ರಾಮಾ ನಡೆದಿದೆ. ಅಲ್ಲದೆ ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರವಾಗಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ಆಗಲೇ ಧ್ವನಿ ಎತ್ತಿದ್ದರು, ಈಗ ಯಾವ ನಟ ಕೂಡ ಈ ಬಗ್ಗೆ ಮುಂದೆ ಬರುತ್ತಿಲ್ಲ ಎಂದು ಪ್ರಸ್ತಾಪವಾಯಿತು. ಇದನ್ನು ಕೇಳಿ ಅಲ್ಲಿದ್ದವರೆಲ್ಲ ರೊಚ್ಚಿಗೆದ್ದಿರುವ ಪ್ರಸಂಗ ನಡೆದಿದೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಅದರ ಮಾಲೀಕರು ನೆಲಸಮ ಮಾಡಿದ್ದರು. ಇದರಿಂದ ವಿಷ್ಣು ಅಭಿಮಾನಿಗಳು ಕೆರಳಿದ್ದರು. ಅದೇ ಜಾಗದಲ್ಲಿ ಸ್ಮಾರಕ ಮತ್ತೆ ನಿರ್ಮಿಸಬೇಕು ಎಂದು ಹೋರಾಟಕ್ಕೂ ಕರೆ ನೀಡಿದ್ದರು. ಈ ಎಲ್ಲದರ ಬಗ್ಗೆ ಚರ್ಚಿಸಲು ಅನಿರುದ್ಧ ಅವರು ಭಾನುವಾರ ವಿಷ್ಣುವರ್ಧನ್ ಅವರ ನಿವಾಸದಲ್ಲೇ ಸಭೆ ಕರೆದಿದ್ದರು. ಆಗ ಅಭಿಮಾನಿಗಳ ನಡುವೆಯೇ ಕೆಲದ ಮನಸ್ತಾಪಗಳು ಕಂಡುಬಂದಿವೆ. ಕೆಲವರು ಅನಿರುದ್ಧ ಅವರ ಮಾತಿಗೆ ಅಸಮಾಧಾನ ಹೊರಹಾಕಿದ್ದಾರೆ.

ಸಭೆಯಲ್ಲಿದ್ದ ವ್ಯಕ್ತಿಯೊಬ್ಬ ಯಶ್ ಪರವಾಗಿ ಧ್ವನಿ ಎತ್ತಿದರು. "ವಿಷ್ಣು ಸರ್ ಅವರ ಸ್ಮಾರಕದ ವಿಚಾರವಾಗಿ ಹಲವು ವರ್ಷಗಳ ಹಿಂದೆಯೇ ಮಲ್ಲೇಶ್ವರದಲ್ಲಿ ಹೋರಾಟ ನಡೆದಿತ್ತು. ಆಗ ಅಲ್ಲಿಗೆ ವಿಷ್ಣು ಸರ್ ಕುಟುಂಬ ಕೂಡ ಬಂದಿತ್ತು. ಆಗ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಬಂದಿದ್ದರು. ವಿಷ್ಣು ಸರ್ ಸ್ಮಾರಕದ ವಿಚಾರವಾಗಿ ಅವರು ಧ್ವನಿ ಎತ್ತಿದ್ದರು. ಆದರೆ ಈಗ ಯಾವ ನಾಯಕ ನಟನೂ ಈ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿಲ್ಲ" ಎಂದು ಅಭಿಮಾನಿಯೊಬ್ಬರು ಪ್ರಸ್ತಾಪಿಸಿದರು.
ಯಶ್ ವಿಚಾರ ಯಾಕೆ?
ಇದರಿಂದ ಕೋಪಗೊಂಡ ವಿಷ್ಣುವರ್ಧನ್ ಅಭಿಮಾನಿಗಳು "ಇಲ್ಲಿ ಯಶ್ ವಿಚಾರವನ್ನ ಯಾಕೆ ತರುತ್ತಿದ್ದೀಯಾ?" ಎಂದು ಆತನ ಮೇಲೆ ರೇಗಿದರು. ಬಳಿಕ ಅವರು ಕೂಡಲೇ ಮಾತು ನಿಲ್ಲಿಸುವಂತೆ ಹೇಳಿ ಮೈಕ್ ಕಸಿದುಕೊಂಡಿರುವ ಘಟನೆ ನಡೆದಿದೆ. ಇಲ್ಲಿ ವಿಚಾರ ಅವರು ಬಂದ್ರು, ಅವರು ಬಂದ್ರು ಅನ್ನೋದಲ್ಲ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಬೇಕು ಅಷ್ಟೇ ಎಂದು ಎಲ್ಲರೂ ಕೂಗಾಡಿದರು. ಈ ವಿಡಿಯೋ ವೈರಲ್ ಆಗಿದೆ.

ಕಿಚ್ಚ, ರಿಷಬ್, ಧ್ರುವ ಪೋಸ್ಟ್
ವಿಷ್ಣುವರ್ಧನ್ ಅವರ ಸ್ಮಾರಕ ತೆರವು ಮಾಡಿದ ವಿಚಾರವಾಗಿ ಮೊದಲಿಗೆ ನಟ ಕಿಚ್ಚ ಸುದೀಪ್ ತಮ್ಮ ಸುದೀರ್ಘ ಪೋಸ್ಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಿಷಬ್ ಶೆಟ್ಟಿ ಕೂಡ ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿಕ್ರಿಯಿಸಿದ್ದರು. ಕಿಚ್ಚ ಸುದೀಪ್ ಅವರು ಈ ಘಟನೆಯನ್ನ ಖಂಡಿಸಿದ್ದರು. ಆ ಸ್ಮಾರಕ ಮತ್ತೆ ನಿರ್ಮಾಣ ಮಾಡಲು ಎಲ್ಲಿಗೆ ಬರುವುದಕ್ಕೂ ಸಿದ್ಧ, ನಾನೇ ಮುಂದೆ ನಿಂತು ಆ ಕೆಲಸ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದರು.












Click it and Unblock the Notifications