'ನಾಲಿಗೆ ಸೀಳಿದ್ರೂ ಕನ್ನಡ': ರಶ್ಮಿಕಾ ಮಂದಣ್ಣಗೆ ತಿರುಗೇಟು ಕೊಟ್ಟ ನಟಿ ಯಾರು?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚಿಗೆ ನಾನು ಹೈದರಾಬಾದ್‌ನ ಹುಡುಗಿ ಎಂದು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ರಶ್ಮಿಕಾ ಮಂದಣ್ಣ ಮಾತಿಗೆ ಕನ್ನಡಿಗರು ವ್ಯಾಪಕ ಆಕ್ರೋಶ ಹೊರ ಹಾಕಿದ್ದು, ರಶ್ಮಿಕಾ ಕರ್ನಾಟಕದ ಕೊಡಗು ಮೂಲದವರು. ಭಾರತೀಯ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಂತೆ ತನ್ನ ಹುಟ್ಟೂರನ್ನೇ ಬದಲಾಯಿಸಿಕೊಂಡಿದ್ದಾರೆ ಎಂದು ನಟಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಇದೀಗ ರಶ್ಮಿಕಾ ಮಂದಣ್ಣ ಅವರ ಈ ಹೇಳಿಕೆಯ ಬಗ್ಗೆ ಬಿಗ್ ಬಾಸ್ ಸೀಸನ್ 11ರ ಖ್ಯಾತಿಯ ನಟಿ ಯಮುನಾ ಶ್ರೀನಿಧಿ ಅವರು ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ರಶ್ಮಿಕಾ ಮಂದಣ್ಣ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ನೋಡಿಲ್ಲ ನಾನು. ಆದರೆ ನನ್ನ ತಾಯಿಯನ್ನು ನನ್ನ ತಾಯಿ ಅಂತಾ ಹೇಳಿಕೊಳ್ಳಲು ಆಗದೇ ಇದ್ದ ಮೇಲೆ ಹೇಗೆ?. ಬೇರೆ ಹೆಂಗಸಿಗೆ ನೀವು ಗೌರವ ಕೊಡಬಹುದು, ಹಾಗಂತ ಬೇರೆ ಹೆಂಗಸನ್ನು ತೋರಿಸಿ ನನ್ನ ತಾಯಿ ಅಂತಾ ಹೇಳಲು ಆಗುವುದಿಲ್ಲ. ನನ್ನ ತಾಯಿ ಯಾವತ್ತಿದ್ದರೂ ನನ್ನ ತಾಯಿಯೆನೇ'.

'ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನನ್ನ ಬಗ್ಗೆ ಹೇಳುವುದಾದರೇ ನಾನು ಎಲ್ಲೇ ಹೋದರು ಕನ್ನಡದಲ್ಲಿಯೇ ಮಾತನಾಡುವುದು. ಕನ್ನಡವೇ ನನ್ನ ಗುರುತು. ಬೇರೆ ದೇಶಗಳಿಗೆ ಹೋದಾಗ ನಾವು ಕನ್ನಡದವರು, ನಾನು ಕನ್ನಡತಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ. ನಿಮ್ಮತನ, ನಿಮ್ಮ ಭಾಷೆ, ನಿಮ್ಮ ಬೇರು ಏನು ಎನ್ನುವುದನ್ನು ಹೇಳಿಕೊಳ್ಳಲು ಹೆಮ್ಮೆ ಇರಬೇಕು' ಎಂದರು.
'ನಾನು ಅವರ ಆ ವಿಡಿಯೋ ನೋಡಿಲ್ಲ ಆದರೆ ಅವರು ನಿಜವಾಗಿಯೂ ಹೇಳಿದ್ದೇ ಆದರೆ, ಅದು ಅವರ ಬಗ್ಗೆ ಮಾತನಾಡುತ್ತದೆ. ಇಲ್ಲಿ ಯಾರ ಬಗ್ಗೆನೂ ಅಲ್ಲ. ನಮ್ಮ ಕನ್ನಡಿಗರಿಗೆ ಸಹಿಷ್ಣುತೆ ಜಾಸ್ತಿ, ಎಲ್ಲವನ್ನೂ ಸಹಿಕೊಂಡು ಬಿಡುತ್ತೇವೆ. ಕನ್ನಡದಲ್ಲಿ ಬೇರೆ ಭಾಷೆಯವರೇ ಹೆಚ್ಚಿದ್ದಾರೆ. ಕನ್ನಡಿಗರಿಗೆ ಸಹಿಷ್ಣುತೆ ಜಾಸ್ತಿ ಇರುವುದರಿಂದ ಯಾರು ಹೇಗೆ ಮಾತನಾಡಿದರೂ ನಡೆಯುತ್ತದೆ ಎಂದುಕೊಂಡು ಹೇಳುತ್ತಾರೋ ನನಗೆ ಗೊತ್ತಿಲ್ಲ. ಆದರೆ ನಮ್ಮನ್ನು ನಾಲಿಗೆ ಸೀಳಿ ನರಕಕ್ಕೆ ದೂಕಿದರೂ ಕನ್ನಡ ಅಂತಾನೇ ಹೇಳುವುದು. ಅದನ್ನು ಬಿಟ್ಟರೆ ನಮಗೆ ಬೇರೆ ಗುರುತು ಸಹ ಇಲ್ಲ' ಎಂದರು.
'ನಮ್ಮನ್ನು ಯಾರೇ ಮಾತನಾಡಿಸಿದರೂ ನಾವು ಮೊದಲು ಕರ್ನಾಟಕದವರು, ನಾವು ಕನ್ನಡದವರು ಅಂತಾನೇ ಹೇಳುವುದು. ನಮ್ಮತನವನ್ನು, ನಮ್ಮ ಬೇರನ್ನು ಬಿಟ್ಟು ಮಾತನಾಡಲು ನಮಗಂತೂ ಸಾಧ್ಯವಿಲ್ಲ. ಅದು ಹೇಗೆ ಮಾತನಾಡುತ್ತಾರೋ ನಮಗಂತೂ ಅರ್ಥವಾಗುವುದಿಲ್ಲ. ಅವರಿಗೆ ಯಾವ ಸಂದರ್ಭದಲ್ಲಿ ಆ ರೀತಿ ಹೇಳಿಸಿದ್ದಾರೋ ಗೊತ್ತಿಲ್ಲ. ಆದರೆ ನನಗೆ ಯಾವುದೇ ಸಂದರ್ಭ ಬಂದರೂ ಸಹ ಕನ್ನಡನೇ ನನ್ನ ಗುರುತು' ಎಂದು ನಟಿ ಯಮುನಾ ಶ್ರೀನಿಧಿ ಹೇಳಿದರು.












Click it and Unblock the Notifications