ಸ್ಮಾರಕದ ಜಾಗ ಖರೀದಿಗೆ ಈಗ ಮುಂದೆ ಬಂದವರು ಆಗ ಏಕೆ ಬರಲಿಲ್ಲ: ಸುದೀಪ್‌ಗೆ ಟಾಂಗ್ ಕೊಟ್ರಾ ಅನಿರುದ್ಧ?
ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕವನ್ನ ಕೆಲ ದಿನಗಳ ಹಿಂದೆ ನೆಲಸಮ ಮಾಡಲಾಗಿತ್ತು. ಇದು ವಿವಾದಿತ ಜಾಗ ಆಗಿದ್ದ ಕಾರಣ ಕೋರ್ಟ್ ಸೂಚನೆ ಮೇರೆಗೆ ಸ್ಮಾರಕ ತೆರವು ಮಾಡಲಾಗಿತ್ತು. ಇದನ್ನು ವಿಷ್ಣು ಫ್ಯಾನ್ಸ್ ತೀವ್ರವಾಗಿ ಖಂಡಿಸಿದ್ದರು. ಇದು ವಿಷ್ಣುದಾದಾಗೆ ಮಾಡಿದ ಅವಮಾನ. ಕೂಡಲೇ ಅದೇ ಜಾಗದಲ್ಲಿ ಸ್ಮಾರಕ ಮರು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಧ್ವನಿಗೂಡಿಸಿದ್ದ ನಟ ಕಿಚ್ಚ ಸುದೀಪ್ ಕೂಡ ಸಮಾಧಿ ಜಾಗ ಉಳಿಸಿಕೊಳ್ಳಲು ನಾನು ರೆಡಿ ಎಂದಿದ್ದರು. ಸ್ಮಾರಕದ ವಿಚಾರವಾಗಿ ಇಂದು ವಿಷ್ಣುವರ್ಧನ್ ನಿವಾಸದಲ್ಲಿ ಅವರ ಅಳಿಯ ಅನಿರುದ್ಧ ಜಟ್ಕರ್ ಅವರು ಸಭೆ ಕರೆದಿದ್ದರು. ಆವತ್ತು ಯಾರೂ ಬರಲಿಲ್ಲ, ಇಂದು ಈಗ ಸ್ಮಾರಕ ಜಾಗವನ್ನ ನಾವು ಖರೀದಿ ಮಾಡಿ ಕೊಡುತ್ತೇವೆ ಎನ್ನುತ್ತಿದ್ದಾರೆ ಎನ್ನುವ ಮೂಲಕ ಅನಿರುದ್ಧ ಅವರು ನಟ ಸುದೀಪ್‌ಗೆ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಅದೇ ಜಾಗದಲ್ಲಿ ಮತ್ತೆ ಸ್ಮಾರಕ ಆದರೆ ಸಂತೋಷ. ಆ ಜಾಗಕ್ಕಾಗಿ ನಾವು ಆರು ವರ್ಷಗಳ ಕಾಲ ಪ್ರಯತ್ನ ಪಟ್ಟಿದ್ದೇವೆ. ರಾಜ್ಯ ಸರ್ಕಾರ ನಿಂತರೂ ಇದು ಸಾಧ್ಯವಾಗಲಿಲ್ಲ. ಕೆಲವರು ಈಗ ಆ ಜಾಗವನ್ನು ಕೊಂಡುಕೊಳ್ತೀವಿ ಅಂತಿದ್ದಾರೆ. ಇತ್ತೀಚೆಗೆ ನಡೆದ ಘಟನೆಯಿಂದ ರೊಚ್ಚಿಗೆದ್ದು ಕೆಲವರು ಪ್ರಯತ್ನಪಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿ ಆದರೆ ತುಂಬಾ ಸಂತೋಷ. ಪಂಚಭಾಷಾ ನಟಿಯಾಗಿದ್ದ ಭಾರತಿ ಅಮ್ಮಾವ್ರು ಎಲ್ಲರ ಮುಂದೆ ಕಣ್ಣೀರು ಸುರಿಸಿದ್ರು. ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನ ಮಾಡಿದ್ರು. ಒಂಬತ್ತು ವರ್ಷದಿಂದಲೂ ಯಾಕೆ ಯಾರೂ ಆ ಜಾಗ ಖರೀದಿಸಿ ಸ್ಮಾರಕ ಕಟ್ಟಲು ಮುಂದೆ ಬರಲಿಲ್ಲ? ಎಂದು ಅನಿರುದ್ಧ ಪ್ರಶ್ನಿಸಿದ್ದಾರೆ.

ಸುದೀಪ್ ಹೇಳಿದ್ದೇನು?
ವಿಷ್ಣುವರ್ಧನ್ ಅವರ ಸ್ಮಾರಕ ನೆಲಸಮ ಮಾಡಿದ ವಿಚಾರವಾಗಿ ಬೇಸರದಿಂದ ವಿಡಿಯೋ ಹಂಚಿಕೊಂಡಿದ್ದ ಸುದೀಪ್ ಅವರು ಅದಕ್ಕೆ ಹಣ ಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ ಗೊತ್ತಿಲ್ಲ ಎಂದಿದ್ದರು.
ನಾವು ಕೋರ್ಟ್ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿದ್ದಾರೋ ಅವರ ಮನವೊಲಿಸಿ ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ ಎಂದು ಕಿಚ್ಚ ಹೇಳಿದ್ದರು.
ಸರ್ಕಾರ ಮಧ್ಯಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ನಾನು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಮಾತನಾಡುತ್ತಿದೀನಿ. ಕಿಚ್ಚನಾಗಿ ಆಗಿ ಅಲ್ಲ, ಈ ಬಗ್ಗೆ ಅತಿಯಾದ ನೋವಿದೆ. ಅವರಿಗೆ ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು. ವಿಷ್ಣುವರ್ಧನ್ ಅಂತಹ ಒಬ್ಬ ಮೇರುನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ ಅಂದರೆ ಏನರ್ಥ ಎಂದು ಗುಡುಗಿದ್ದರು.

ವಿಷ್ಣುವರ್ಧನ್ ಅವರ ಹೆಸರಲ್ಲಿ ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ, ಇದು ಅತ್ಯಂತ ಖಂಡನೀಯ. ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ನ್ಯಾಯಾಲಯಕ್ಕೆ ಹೋಗಲು ನಾನೂ ಸಿದ್ಧ. ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ. ನಿಮಗೆ ಏನು ಹಣಕಾಸು ಬೇಕೋ ಅದನ್ನ ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿ ಕೊಡಿ ಎಂದು ಸುದೀಪ್ ಮನವಿ ಮಾಡಿದ್ದರು. ಇದೀಗ ಅನಿರುದ್ಧ ಅವರು ಸ್ಮಾರಕದ ಜಾಗ ಖರೀದಿ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications