'ಅಪ್ಪು' ಟೈಟಲ್ ಬೇಡ ಅಂದಿದ್ದೇಕೆ ನಿರ್ದೇಶಕ ಪುರಿ ಜಗನ್ನಾಥ್?
ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ "ಅಪ್ಪು" ಸಿನಿಮಾ ಇದೇ ಮಾರ್ಚ್ 14ರಂದು ರಾಜ್ಯದಾದ್ಯಂತ ರೀರಿಲೀಸ್ ಆಗುತ್ತಿದೆ. ಪುನೀತ್ ಅವರ ಹುಟ್ಟುಹಬ್ಬದ ಅಂಗವಾಗಿ ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಅಪ್ಪು ಅವರನ್ನು ಲಾಂಚ್ ಮಾಡಲು ಈ ಸಿನಿಮಾ ಮಾಡಲಾಗಿತ್ತು. ಪುನೀತ್ ಅವರ ಈ ಮೊದಲ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಕಂಡು ಇಂದಿಗೂ ಅವರನ್ನು ಅಪ್ಪು ಎಂದು ಕರೆಯುವಂತೆ ಮಾಡಿದೆ. ಆದರೆ, ಈ ಸಿನಿಮಾದ ಡೈರೆಕ್ಟರ್ ಪುರಿ ಜಗನ್ನಾಥ್ ಅವರಿಗೆ ಅಪ್ಪು ಟೈಟಲ್ ಇಷ್ಟವೇ ಇರಲಿಲ್ಲವಂತೆ. ಯಾವ ಕಾರಣಕ್ಕೆ ಅಪ್ಪು ಟೈಟಲ್ ಬೇಡ ಅಂದಿದ್ರು ಎಂಬುದು ಇದೀಗ ರಿವೀಲ್ ಆಗಿದೆ.
ಟಾಲಿವುಡ್‌ನ ಟಾಪ್ ಡೈರೆಕ್ಟರ್‌ಗಳಲ್ಲಿ ಒಬ್ಬರಾದ ಪುರಿ ಜಗನ್ನಾಥ್ ಅವರು ಅಪ್ಪು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರು. ಈ ಕಥೆಯನ್ನು ಮೆಚ್ಚಿದ್ದ ಡಾ.ರಾಜ್‌ಕುಮಾರ್ ಅವರೂ ಈ ಸಿನಿಮಾ ಗ್ರೀನ್ ಸಿಗ್ನಲ್ ನೀಡಿದ್ರು. ಆದ್ರೆ ಅಚ್ಚರಿ ವಿಚಾರ ಅಂದ್ರೆ ಪುರಿ ಅವರಿಗೆ ಈ ಸಿನಿಮಾಗೆ ಅಪ್ಪು ಎಂಬ ಹೆಸರೇ ಇಷ್ಟ ಇರಲಿಲ್ಲವಂತೆ. ಪುರಿ ಅವರು ಈ ಸಿನಿಮಾಗೆ ಬೇರೆ ಟೈಟಲ್ ಇಟ್ಟಿದ್ದರು. ಅದು ಪುರಿ ಅವರಿಗೆ ಬಹಳ ಇಷ್ಟವಾಗಿತ್ತು. ಆದರೂ ಕಾರಣಾಂತರಗಳಿಂದ ಟೈಟಲ್ ಬದಲಿಸಿದ್ದರು ಎನ್ನಲಾಗಿದೆ.

ಈ ವಿಚಾರವನ್ನ ಸಂದರ್ಶನವೊಂದರಲ್ಲಿ ನಟ ಶಿವರಾಜ್‌ಕುಮಾರ್ ಅವರೇ ಬಹಿರಂಗಪಡಿಸಿದ್ದರು. ಇಷ್ಟಕ್ಕೂ ಈ ಸಿನಿಮಾಗೆ ಅಪ್ಪು ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದು ಕೂಡ ಶಿವಣ್ಣ. ಆದರೆ ಪುರಿ ಜಗನ್ನಾಥ್ ಅವರು ಈ ಸಿನಿಮಾಗೆ ಆಗಲೇ ಟೈಟಲ್ ಫಿಕ್ಸ್ ಮಾಡಿಕೊಂಡಿದ್ದರು. ಅಪ್ಪು ಅವರ ಮೊದಲ ಸಿನಿಮಾಗೆ "ಈಡಿಯಟ್" ಎನ್ನುವ ಟೈಟಲ್ ಕೊಟ್ಟಿದ್ದರಂತೆ ಪುರಿ ಜಗನ್ನಾಥ್. ಈ ಚಿತ್ರಕಥೆಗೆ ತಕ್ಕಂತೆ ಟೈಟಲ್ ರೆಡಿ ಮಾಡಿದ್ದರು. ಆದರೆ ಶಿವಣ್ಣ ಅವರಿಗೆ ಈ ಟೈಟಲ್ ಕೊಂಚವೂ ಇಷ್ಟ ಇರಲಿಲ್ಲವಂತೆ.
ಈಡಿಯಟ್ ಟೈಟಲ್ ಬೇಡವೇ ಬೇಡ ಎಂದು ಶಿವಣ್ಣ ಹೇಳಿದ್ದರಂತೆ. ಪುನೀತ್‌ಗೆ ಇದು ಮೊದಲ ಸಿನಿಮಾ. ಹೀಗಾಗಿ ಈಡಿಯಟ್ ಅನ್ನೋದು ಬೇಡ. ನಾವು ಚಿಕ್ಕ ವಯಸ್ಸಿನಿಂದಲೂ ಅಪ್ಪು ಎಂದು ಕರೆಯುತ್ತಿದ್ದೇವೆ. ಈ ಸಿನಿಮಾಗೆ ಅದೇ ಟೈಟಲ್ ಇಡೋಣ ಎಂದಿದ್ದರಂತೆ ಶಿವಣ್ಣ. ಕೊನೆಗೆ ಇದೇ ಟೈಟಲ್ ಫೈನಲ್ ಆಗಿತ್ತು. ಮನೆಗೆ ಮಾತ್ರ ಅಪ್ಪು ಆಗಿದ್ದ ಪುನೀತ್ ಇದೀಗ ಮನೆಮನಗಳಲ್ಲೂ ಪುನೀತ್ ಅವರು ಅಪ್ಪು ಆಗಿ ನೆಲೆಸಿದ್ದಾರೆ. ಇದಕ್ಕೆ ಕಾರಣವೇ ಈ ಸಿನಿಮಾ ಎಂದು ಹೇಳಲಾಗಿದೆ. ಬಳಿಕ ಇದೇ ಸಿನಿಮಾವನ್ನು ಪುರಿ ಜಗನ್ನಾಥ್ ಅವರು ತೆಲುಗಿನಲ್ಲೂ ರೀಮೇಕ್ ಮಾಡಿದ್ರು. ಅದರಲ್ಲಿ ರವಿತೇಜ ಅವರು ನಟಿಸಿ, ಅಲ್ಲಿಯೂ ಬ್ಲಾಕ್‌ಬಸ್ಟರ್ ಹಿಟ್ ಕಂಡಿತ್ತು. ಇದಕ್ಕೆ ಪುರಿ ಜಗನ್ನಾಥ್ ಅವರು "ಈಡಿಯಟ್" ಎಂಬ ಟೈಟಲ್ ಅನ್ನೇ ಇಟ್ಟಿದ್ರು.

ಶಿವಣ್ಣ ಅವರಿಂದಲೇ ಅಪ್ಪು ಸಿನಿಮಾ: ಈಗ ಅಪ್ಪು ಸಿನಿಮಾ ರೀರಿಲೀಸ್ ಆಗುತ್ತಿರುವ ಬೆನ್ನಲ್ಲೇ ಪುರಿ ಜಗನ್ನಾಥ್ ಅವರು ತಮ್ಮ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಶಿವಣ್ಣ ಅವರಿಂದಾಗಿಯೇ ಅಪ್ಪು ಸಿನಿಮಾ ತೆರೆಗೆ ಬಂತು. ಶಿವಣ್ಣ ಅವರೇ ನನ್ನನ್ನು ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರಿಗೆ ಪರಿಚಯ ಮಾಡಿಕೊಟ್ಟರು. ಬಳಿಕ ನಾನು ಪುನೀತ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಎಂದು ಪುರಿ ನೆನೆದಿದ್ದಾರೆ. ಪುನೀತ್ ಅವರು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಒಂದು ರತ್ನ, ಅವರು ಬಹುಮುಖ ಪ್ರತಿಭೆ ಎಂದು ಸ್ಮರಿಸಿದ್ದಾರೆ. ಈಗ ಅಪ್ಪು ಸಿನಿಮಾ ರೀರಿಲೀಸ್ ಆಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದ್ದಾರೆ.












Click it and Unblock the Notifications