Mohini Dey: ರೆಹಮಾನ್ ತಂಡದಲ್ಲಿರುವ ಮೋಹಿನಿ ಡೇ ಯಾರು? ಕುಟುಂಬ, ಜೀವನ ಮಾಹಿತಿ
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪತ್ನಿ ಸಾಯಿರಾ ಬಾನು ಜೊತೆ ವಿಚ್ಛೇದನ ಬಗ್ಗೆ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮೋಹಿನಿ ಡೇ ಕೂಡ ಗಂಡನಿಂದ ಬೇರಾಗುವುದಾಗಿ ಘೋಷಣೆ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಎ.ಆರ್. ರೆಹಮಾನ್ ನಡೆಸಿಕೊಡುವ ಸಂಗೀತ ಕಾರ್ಯಕ್ರಮಗಳಲ್ಲಿ ಮೋಹಿನಿ ಡೇ ಬಾಸ್ ಗಿಟಾರ್ ವಾದಕಿಯಾಗಿ ಕೆಲಸ ಮಾಡುತ್ತಾರೆ. ಸಂಗೀತ ಸಂಯೋಜಕ ಮಾರ್ಕ್‌ರನ್ನು ಮದುವೆಯಾಗಿದ್ದ 29 ವರ್ಷದ ಚೆಲುವೆ ಗಂಡನಿಂದ ದೂರವಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಮೋಹಿನಿ ಡೇ, ಭಾರತದ ಹೆಸರಾಂತ ಗಿಟಾರ್ ವಾದಕಿ. ಜುಲೈ 20, 1996 ರಂದು ಮುಂಬೈನಲ್ಲಿ ಜನಿಸಿದ ಅವರು ಜಾಝ್ ಸಂಗೀತಗಾರ ಲೂಯಿಸ್ ಬ್ಯಾಂಕ್ಸ್ ಮಾರ್ಗದರ್ಶನದಲ್ಲಿ 11ನೇ ವಯಸ್ಸಿನಲ್ಲೇ ಪ್ರದರ್ಶನ ನೀಡಲು ಆರಂಭಿಸಿದರು. ಸ್ಯಾಕ್ಸೋಫೋನ್ ವಾದಕ ಮತ್ತು ಸಂಗೀತ ಸಂಯೋಜಕ ಮಾರ್ಕ್ ಅವರನ್ನು ವಿವಾಹವಾದರು. 29 ವರ್ಷ ವಯಸ್ಸಿನ ಮೋಹಿನಿ ಡೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. 2024 ರಲ್ಲಿ ವಿಲೋ ಸ್ಮಿತ್ ತಮ್ಮ ಬ್ಯಾಂಡ್‌ಗೆ ಸೇರುವಂತೆ ಆಹ್ವಾನ ನೀಡಿದ್ದರು.

ಮ್ಯೂಸಿಕ್ ಆಲ್ಬಂ ಬಿಡುಗಡೆ
ತಮ್ಮ ಅಸಾಧಾರಣ ಪ್ರತಿಭೆಯಿಂದ ಅವರು ಎ.ಆರ್ ರೆಹಮಾನ್‌ರ ಸಂಗೀತ ಕಾರ್ಯಕ್ರಮದಲ್ಲಿ ಬಾಸ್ ಗಿಟಾರ್ ವಾದಕಿಯಾಗಿ ಕೆಲಸ ಮಾಡುತ್ತಾರೆ. ಚಿಕ್ಕ ವಯಸ್ಸಿನಲ್ಲೇ ವೃತ್ತಿ ಜೀವನ ಆರಂಭಿಸಿದ ಮೋಹಿನಿ ಡೇ ತಮ್ಮ ಸಂಗೀತ ಪ್ರತಿಭೆ, ವಿಶಿಷ್ಠ ಶೈಲಿನಿಂದ ಕಡಿಮೆ ಸಮಯದಲ್ಲೇ ಹೆಚ್ಚು ಹೆಸರು ಮಾಡಿದರು. ತಮ್ಮದೇ ಹೆಸರಿನಲ್ಲಿ ಮೊದಲ ಆಲ್ಬಂ ಕೂಡ ಬಿಡುಗಡೆ ಮಾಡಿದ್ದು, ಅದು ಕೂಡ ಜನಪ್ರಿಯವಾಗಿದೆ. ಮೋಹಿನಿ ಡೇ ಮಮೊಗಿ (MaMoGi) ಬ್ಯಾಂಡ್‌ನ ಸದಸ್ಯರಾಗಿದ್ದಾರೆ, ಅಲ್ಲಿ ಅವರು ತಮ್ಮ ಪತಿ ಮಾರ್ಕ್ ಹಾರ್ಟ್ಸುಚ್ ಜೊತೆ ಕೆಲಸ ಮಾಡುತ್ತಾರೆ.
ಪತಿ ಜೊತೆ ಜಗತ್ತಿನಾದ್ಯಂತ ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇಬ್ಬರ ನಡುವೆ ಪ್ರೀತಿ, ಬಾಂಧವ್ಯ ಉತ್ತಮವಾಗಿತ್ತು. ಸಾರ್ವಜನಿಕ ವೇದಿಕೆಗಳಲ್ಲಿ ಇಬ್ಬರು ಕಾಣಿಸಿಕೊಳ್ಳುತ್ತಿದ್ದರು. ಅಭಿಮಾನಿಗಳು ಇಬ್ಬರ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಇದೀಗ ಇಬ್ಬರು ದೂರವಾಗುತ್ತಿರುವುದು ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.
ಡಿವೋರ್ಸ್ ಬಳಿಕವೂ ಜೊತೆಯಲ್ಲೇ ಕೆಲಸ
ಪರಸ್ಪರ ಗೌರವದಿಂದಲೇ ಇಬ್ಬರೂ ದೂರವಾಗುತ್ತಿದ್ದೇವೆ ಎಂದು ಇಬ್ಬರೂ ಜಂಟಿ ಹೇಳಿಕೆ ನೀಡಿದ್ದಾರೆ. ಮದುವೆ ಜೀವನ ಕೊನೆಯಾದರೂ, ಇಬ್ಬರು ಸಂಗೀತ ಕಾರ್ಯಕ್ರಮವನ್ನು ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಇಬ್ಬರು ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ, ವಿಚ್ಛೇದನ ಇಬ್ಬರ ವೈಯಕ್ತಿಕ ಆಯ್ಕೆಯಾಗಿದ್ದು, ನಮ್ಮ ನಿರ್ಧಾರವನ್ನು ಗೌರವಿಸಿ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.
ಮೋಹಿನಿ ಡೇ ಹಲವು ಭಾಷೆಗಳನ್ನು ಮಾತನಾಡುತ್ತಾರೆ, ಮರಾಠಿ, ಹಿಂದಿ, ಬೆಂಗಾಲಿ ಮತ್ತು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಬಹುಮುಖ ಪ್ರತಿಭೆಯಾಗಿರುವ ಮೋಹಿನಿ ಡೇ ಎ.ಆರ್. ರೆಹಮಾನ್ ವಿಚ್ಛೇದನದ ಬೆನ್ನಲ್ಲೇ ಗಂಡನಿಂದ ದೂರವಾಗುತ್ತಿರುವುದು ಸಾಕಷ್ಟು ಗಾಸಿಪ್‌ಗೆ ಕಾರಣವಾಗಿದೆ.












Click it and Unblock the Notifications