#MeToo: 'ನಮ್ಮ ಇಂಡಸ್ಟ್ರಿಲಿ ಅದು ನಡೆದಿದ್ರೆ...' ನಟ ಸುದೀಪ್ ಹೇಳಿದ್ದೇನು?
ಮಲೆಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ಹೇಮಾ ಕಮಿಟಿ ಸಲ್ಲಿಸಿರುವ ವರದಿಯು ಬೇರೆ ಚಿತ್ರರಂಗಗಳನ್ನು ಬೆಚ್ಚಿಬೀಳಿಸಿದೆ. ಕನ್ನಡ ಚಿತ್ರರಂಗಕ್ಕೂ ಈ ರೀತಿಯ ಒಂದು ಕಮಿಟಿ ರಚಿಸಬೇಕು ಎಂದು ಜೋರಾದ ಕೂಗು ಎದ್ದಿದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲೂ ನಟಿಯರಿಗೆ ಲೈಂಗಿಕ ದೌರ್ಜನ್ಯವಾಗಿದೆಯಾ? ಎನ್ನುವ ಅನುಮಾನವೂ ಎದ್ದಿದೆ. ಇದೇ ವಿಚಾರವಾಗಿ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಖಾರವಾಗಿ ಮಾತನಾಡಿದ್ದಾರೆ.
ಖಾಸಗಿ ವಾಹಿನಿಗೆ ಸಂದರ್ಶನದ ವೇಳೆ ನಟಿಯರು ಸಿನಿಮಾದಲ್ಲಿ ನಟಿಸಲು ಕಾಂಪ್ರಮೈಸ್ ಆಗಬೇಕು ಎನ್ನುವ ಮಾತಿದೆ ಎಂದು ಪ್ರಶ್ನೆ ಕೇಳಿದಾಗ, ಸುದೀಪ್ ಉತ್ತರಿಸಿದ್ದಾರೆ. ʼನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಆ ರೀತಿ ನಡೆದಿದೆ ಎಂದು ಗೊತ್ತಾದ್ರೆ, ನಮ್ಮ ಚಿತ್ರರಂಗದವರು ಅವರನ್ನ ಕರ್ಕೊಂಡು ಬಂದು ಹೊಡೀತಾರೆ, ಮರೀಬೇಡಿ...ʼ ಎಂದು ವಾರ್ನಿಂಗ್ ಕೂಡ ನೀಡಿದ್ದಾರೆ.

ʼಒಂದೇ ಒಂದು ಹೇಳಿಕೆಯು ಎಲ್ಲವನ್ನೂ ನಾಶ ಮಾಡಬಲ್ಲದು ಎಂದು ಹೇಳಿರುವ ಅವರು, ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ವಿಶೇಷ ವ್ಯಾಖ್ಯಾನ ನೀಡಿದ್ದಾರೆ. ಅಡುಗೆ ಮನೆಯಲ್ಲೂ ಒಂದು ಪ್ಯಾನ್ ಎಂದು ಇರುತ್ತೆ. ಅದು ಸೀಮಿತವಾಗಿರುವುದಿಲ್ಲ. ಅದರಲ್ಲಿ ಏನು ಬೇಕಾದರೂ ತಯಾರಿಸಬಹುದು ಎಂದಿದ್ದಾರೆ.
ಇನ್ನು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಿತ್ರರಂಗದ ಬಗ್ಗೆ ಹೇಳಿದ್ದ ಗಡ್ಡ ಬೆಳೆಯಬಹುದು, ಇಂಡಸ್ಟ್ರಿ ಬೆಳೀತಿಲ್ಲ ಎನ್ನುವ ಮಾತಿಗೆ ಪ್ರತಿಕ್ರಿಯಿಸಿ, ಅವರು ತಿಳುವಳಿಕೆ ಇರುವವರು, ಈ ಪ್ರಶ್ನೆಯನ್ನು ಅವರಿಗೇ ಕೇಳುವುದು ಸೂಕ್ತ ಎಂದು ಸುದೀಪ್ ಹೇಳಿದ್ದಾರೆ. ಫ್ಯಾನ್ ವಾರ್ ಬಗ್ಗೆಯೂ ಮಾತನಾಡಿರುವ ಸುದೀಪ್, ಗಲಾಟೆ ಮಾಡುತ್ತಿರುವುದು ಇವರೇ ಎನ್ನುವುದು ಗೊತ್ತಿದ್ದರೆ ಅವರನ್ನು ಕರೆಸಿ, ಈ ರೀತಿ ಮಾಡಬೇಡಿ ಎಂದು ಬುದ್ಧಿ ಹೇಳಬಹುದು. ಆದರೆ, ಮನೆಯಲ್ಲಿರುವ ನನ್ನ ಮಗಳು ಹಾಗೂ ಫ್ಯಾಮಿಲಿಯನ್ನ ಎಳೆದು ತರುತ್ತಾರೆ ಎಂದು ಗರಂ ಆಗಿ ಮಾತನಾಡಿದ್ದಾರೆ.

ಇಂಡಸ್ಟ್ರಿಯಲ್ಲಿ ಏನಾಗಿದೆ?: ಮಲೆಯಾಳಂ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿರುವ ಹೇಮಾ ಸಮಿತಿ ವರದಿಯು ಇದೀಗ ಭಾರತೀಯ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಇದರ ಗಾಳಿ ಸ್ಯಾಂಡಲ್‌ವುಡ್ ಕಡೆಗೂ ಬೀಸಿದ್ದು, ಇಲ್ಲಿಯೂ ಹೇಮಾ ಮಾದರಿಯ ಕಮಿಟಿಯೊಂದನ್ನು ರಚಿಸಬೇಕು ಎನ್ನುವ ಕೂಗು ಎದ್ದಿದೆ.
ಈ ಬಗ್ಗೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಸಂಘಟನೆಯು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೂಡ ಮಾಡಿದೆ. ನಟಿ ರಮ್ಯಾ, ನಿರ್ದೇಶಕಿ ಕವಿತಾ ಲಂಕೇಶ್, ನಟ ಸುದೀಪ್, ನಟ ಚೇತನ್, ನಟ ಕಿಶೋರ್, ಮೇಘನಾ, ಪೂಜಾ ಗಾಂಧಿ, ನಿರ್ದೇಶಕ ಸುನಿ, ಲೇಖಕಿ ಉಷಾ, ಶ್ರುತಿ ಹರಿಹರನ್, ಐಂದ್ರಿತಾ ರೈ, ಶಾನ್ವಿ ಶ್ರೀವಾಸ್ತವ, ಆಶಿಕಾ ರಂಗನಾಥ್ ಸೇರಿದಂತೆ 153 ಜನ ಮನವಿ ಪತ್ರದಲ್ಲಿ ಸಹಿ ಹಾಕಿದ್ದಾರೆ.
ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಫೈರ್ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಬಳಿಕ ಚಿತ್ರರಂಗದ ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಿತ್ತು. ಅದರಂತೆ ಫಿಲ್ಮ್ ಚೇಂಬರ್ ಶೀಘ್ರದಲ್ಲೇ ಸಭೆ ನಡೆಸುವುದಾಗಿ ತಿಳಿಸಿದೆ.












Click it and Unblock the Notifications