Darshan: 'ದರ್ಶನ್ ನನ್ನ ಅಣ್ಣನಂತೆ' ನಟಿ ಸ್ಪೂರ್ತಿ ವಿಶ್ವಾಸ್ ಹೇಳಿದ್ದೇನು?
ಸ್ಯಾಂಡಲ್‌ವುಡ್ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಆದರೆ ದರ್ಶನ್ ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆನ್ನುವುದನ್ನು ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಮಾಡಿದ ಒಳ್ಳೆಯ ಕಾರ್ಯಗಳನ್ನು ನೆನೆದು ದರ್ಶನ್ ಒಬ್ಬ ಒಳ್ಳೆಯ ಮನುಷ್ಯ ಅಂತಲೇ ಬಹುತೇಕ ಜನ ಹೇಳುತ್ತಿದ್ದಾರೆ. ಇದೇ ದಾಟಿಯಲ್ಲಿ ನಟಿ ಸ್ಪೂರ್ತಿ ವಿಶ್ವಾಸ್ ದರ್ಶನ್ ಬಗ್ಗೆ ಕೆಲ ಮಾತುಗಳನ್ನಾಡಿದ್ದಾರೆ.
ಹೌದು.... 'ಜಾಲಿಡೇಸ್' ಸಿನಿಮಾ ನಟಿ ಸ್ಪೂರ್ತಿ ವಿಶ್ವಾಸ್ ಮಾತನಾಡಿ, ದರ್ಶನ್ ಅಣ್ಣ ನನ್ನನ್ನು ತಂಗಿ ತರಹ ನೋಡುತ್ತಿದ್ದರು. ಅವರನ್ನು ನಾನು ಬುಲ್ ಬುಲ್ ಸಿನಿಮಾ ಟೈಮ್‌ನಲ್ಲಿ ಮೊದಲ ಬಾರಿ ಭೇಟಿ ಮಾಡಿದ್ದೆ. ಆ ನಂತರ ನಾನು ದರ್ಶನ್ ಅಣ್ಣನ ಮನೆಗೆ ಹೋಗಿದ್ದೇನೆ. ನಾನು ಬರುವ ವಿಚಾರ ತಿಳಿದರೆ ದರ್ಶನ್ ಅಣ್ಣ ನನಗೆ ಇಷ್ಟವಾಗುವ ಅಡುಗೆಯನ್ನೇ ಮಾಡಿಸುತ್ತಿದ್ದರು. ವಿಜಯಲಕ್ಷ್ಮಿ ಅಕ್ಕ ಕೂಡ ನನ್ನ ಪ್ರೀತಿಯಿಂದ ನೋಡಿಕೊಳ್ತಾಯಿದ್ದರು ಎಂದು ಸ್ಪೂರ್ತಿ ಹೇಳಿದ್ದಾರೆ.

ದರ್ಶನ್ ಅಣ್ಣನಲ್ಲಿ ಕೊಲೆ ಮಾಡುವಷ್ಟು ಕ್ರೂರತ್ವ ಇಲ್ಲ. ನಾನು ತುಂಬಾ ಹತ್ತಿರದಿಂದ ಅವರನ್ನು ನೋಡಿದ್ದೇನೆ. ಅವರು ಕೊಲೆ ಪ್ರಕರಣದಲ್ಲಿ ಜೈಲಲ್ಲಿ ಇದ್ದಾರೆ ಅಂದರೆ ನನಗೆ ನಂಬೋಕೆ ಕಷ್ಟವಾಗುತ್ತಿದೆ. ಆದರೆ ಕಾನೂನು ಎಲ್ಲರಿಗೂ ಒಂದೇ. ಅದರ ಪ್ರಕಾರ ಯಾರು ತಪ್ಪಿಸ್ಥರು ಇದ್ದಾರೆ ಅವರಿಗೆ ಶಿಕ್ಷೆಯಾಗಲಿ. ಇದರಿಂದ ದರ್ಶನ್ ಆಚೆ ಬರಲಿ ಎನ್ನುವುದು ನನ್ನ ಆಶಯ ಎಂದು ನಟಿ ಮಾತನಾಡಿದ್ದಾರೆ.
ಕಷ್ಟದ ಸಮಯದಲ್ಲಿ ವಿಜಯಲಕ್ಷ್ಮಿ ಅಕ್ಕ ದರ್ಶನ್ ಅಣ್ಣನ ಜೊತೆಗೆ ನಿಂತಿದ್ದಾರೆ. ಇದರಿಂದ ಮದುವೆ ಬೆಲೆ ಏನು ಅನ್ನೋದು ವಿಜಯಲಕ್ಷ್ಮಿ ಅಕ್ಕ ಪ್ರೂವ್ ಮಾಡಿದ್ದಾರೆ. ಇದರಿಂದ ನನಗೆ ಅವರ ಮೇಲಿದ್ದ ಗೌರವ ಇನ್ನಷ್ಟು ಹೆಚ್ಚಾಗಿದೆ. ದರ್ಶನ್ ಅಣ್ಣ ಕೊಲೆ ಮಾಡುವ ಹಂತಕ್ಕೆ ಹೋಗಿರುವುದಿಲ್ಲ. ಆ ನಂಬಿಕೆ ಇದೆ ನನಗೆ. ಇದಾಗಬಾರದಿತ್ತು ಆದರೆ ಆಗಿದೆ. ಈಗಲೂ ದರ್ಶನ್ ಅಣ್ಣ ಅರೆಸ್ಟ್ ಆಗಿದ್ದಾರೆ ಅಂದರೆ ನನಗೆ ನಂಬಲು ಆಗುತ್ತಿಲ್ಲ. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದು ಸ್ಪೂರ್ತಿ ಹೇಳಿದ್ದಾರೆ.

ಈ ಘಟನೆಯಿಂದಾದರೂ ಜನ ಕಲಿತುಕೊಳ್ಳಬೇಕು. ಎಷ್ಟೋ ಕೆಟ್ಟದಾಗಿ ಮೆಸೇಜ್ ಮಾಡ್ತಾರೆ ಕೆಲವೊಮ್ಮೆ. ಅದೆಷ್ಟೋ ಜನರಿಗೆ ಇಂತಹ ಮೆಸೇಜ್ ಗಳು ಬೇಸರ ತರುತ್ತವೆ. ಆದರೆ ಅವರು ಹೊರಗೆ ತರುವುದಿಲ್ಲ. ಆ ಒಂದು ಮೆಸೇಜ್ ನಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇನ್ಮುಂದಾದರೂ ಹೀಗೆಲ್ಲ ಮಾಡುವವರು ಇದನ್ನು ಬಿಟ್ಟುಬಿಡಿ. ದರ್ಶನ್ ಅಣ್ಣ ವಾಪಸ್ ಬರಲಿ. ಕನ್ನಡ ಚಿತ್ರರಂಗಕ್ಕೆ ವಾಪಾಸ್ ಬರಲಿ ಇನ್ನೂ ಅನೇಕ ಸಿನಿಮಾಗಳನ್ನು ಮಾಡಲಿ ಎಂದಿದ್ದಾರೆ. ಅಣ್ದನನ್ನ ನಾನು ಮೂರು ವರ್ಷದ ಹಿಂದೆ ಮೀಟ್ ಮಾಡಿದ್ದೆ. ಅವರ ಮನೆಯಲ್ಲಿ ಊಟ ಮಾಡಿದಿನಿ. ಆ ಋಣಕ್ಕಾದ್ರೂ ಅವರನ್ನು ಮೀಟ್ ಮಾಡುತ್ತೇವೆ ಎಂದು ನಟಿ ಭಾವುಕ ಮಾತುಗಳನ್ನು ಆಡಿದ್ದಾರೆ.
ರಿಟ್ ಅರ್ಜಿ ಸಲ್ಲಿಸಿದ ದರ್ಶನ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ನಟ ದರ್ಶನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮನೆಯಿಂದ ಊಟ, ಹಾಸಿಗೆ, ಪುಸ್ತಕಗಳನ್ನು ಪಡೆಯಲು ಅನುಮತಿ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಜೈಲಿನಲ್ಲಿ ನೀಡುತ್ತಿರುವ ಊಟ ಜೀರ್ಣವಾಗುತ್ತಿಲ್ಲ. ಇದರಿಂದ ಅತಿಸಾರ-ಭೇದಿ ಆಗುತ್ತಿದೆ. ಜೈಲಿನ ಆಹಾರ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಮಾಹಿತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ದರ್ಶನ್ ಪರ ವಕೀಲರು ಉಲ್ಲೇಖಿಸಿದ್ದಾರೆ.












Click it and Unblock the Notifications