ನಾವು ಯಾವಾಗ ಹೋಗ್ತೀವೋ ಗೊತ್ತಿಲ್ಲ: ಪ್ರಿಯಾ ಸುದೀಪ್ ಹೀಗಂದಿದ್ದೇಕೆ?
ಕಿಚ್ಚ ಸುದೀಪ್ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕೆಲ ತಿಂಗಳ ಹಿಂದಷ್ಟೇ ಕಿಚ್ಚ ಅವರ ತಾಯಿ ಇಹಲೋಕ ತ್ಯಜಿಸಿದ್ದರು. ಈ ನೋವಿನಿಂದ ಸುದೀಪ್ ಇನ್ನೂ ಹೊರಬಂದಿಲ್ಲ. ಹಾಗಾಗಿ ಅಮ್ಮನಿಲ್ಲದ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದು ಅಭಿಮಾನಿಗಳಲ್ಲಿ ಕೈಮುಗಿದು ಕೇಳಿಕೊಂಡಿದ್ದರು. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅವರ ಪತ್ನಿ ಪ್ರಿಯಾ ಸುದೀಪ್ ಅವರು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. 'ನಾವು ಯಾವಾಗ ಹೋಗ್ತೀವೋ ಗೊತ್ತಿಲ್ಲ, ಜೀವನ ನಮ್ಮ ಕೈಯಲ್ಲಿಲ್ಲ' ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
'ಪ್ರತಿ ವರ್ಷ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು, ಸ್ನೇಹಿತರು ಒಳ್ಳೆಯ ರೀತಿಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ರಕ್ತದಾನ, ಅನ್ನದಾನ, ಬಡ ಮಕ್ಕಳಿಗೆ ಸಹಾಯ ಮಾಡುವ ಮೂಲಕ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಈ ವರ್ಷ ಅವರ ಹುಟ್ಟುಹಬ್ಬಕ್ಕೆ ನಾನು ಅಂಗಾಂಗ ಹಾಗೂ ಅಂಗಾಂಶಗಳ ದಾನ ಮಾಡಿದ್ದೇನೆ. ಅದರ ಪ್ರಕ್ರಿಯೆ ತುಂಬಾ ಸುಲಭ. ಇದರ ಮಾಹಿತಿ ಎಲ್ಲ ಈ ವಿಡಿಯೋದೊಂದಿಗೆ ಹಂಚಿಕೊಂಡಿದ್ದೇನೆ' ಎಂದಿದ್ದಾರೆ.

52 ಜನರಿಂದ ಅಂಗಾಂಗ ದಾನ
'ನಿಮ್ಮ ಒಂದು ಸಣ್ಣ ನಿರ್ಧಾರದಿಂದ ಒಂದು ಸಣ್ಣ ಜೀವ ಉಳಿಯುತ್ತೆ ಅಂದ್ರೆ ಅಂತಹ ದೊಡ್ಡ ಕೆಲಸ ಬೇರೊಂದಿಲ್ಲ. ನಮ್ಮ ಕಿಚ್ಚ ಸುದೀಪ್ ಕೇರ್ ಫೌಂಡೇಷನ್ ಮೂಲಕ ನಾನು ಅಂಗಾಂಗ ದಾನಕ್ಕೆ ನೋಂದಣಿ ಮಾಡಿದ್ದೇನೆ. ನೀವೂ ಕೂಡ ಅಂಗಾಂಗ ದಾನ ಮಾಡಿ ಜೀವ ಉಳಿಸಿ ಎಂದು ಮನವಿ ಮಾಡಿಕೊಳ್ತೀನಿ. ಈ ವರ್ಷ ಸುದೀಪ್ ಅವರಿಗೆ 52ನೇ ಹುಟ್ಟುಹಬ್ಬ. ಹಾಗಾಗಿ ನಮ್ಮ ತಂಡದಿಂದ 52 ಜನ ಅಂಗಾಂಗ ದಾನ ಮಾಡಿದ್ದಾರೆ.
'ಈ ರೀತಿ ಅಂಗಾಂಗ ದಾನ ಮಾಡಬೇಕಂದ್ರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ನಮ್ಮೆಲ್ಲರ ಜವಾಬ್ದಾರಿ. ಹಾಗಾಗಿ ನಿಮ್ಮನ್ನ ನೀವು ಮೊದಲು ಚೆನ್ನಾಗಿ ನೋಡಿಕೊಳ್ಳಿ. ಆಗ ಈ ಕಾರ್ಯಕ್ಕೆ ಒಂದು ನಿಜವಾದ ಅರ್ಥ ಬರುತ್ತೆ. ಯಾಕಂದ್ರೆ ನಾವು ಯಾವಾಗ ಹೋಗ್ತೀವೋ ನಮಗೆ ಗೊತ್ತಿಲ್ಲ. ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ. ಹಾಗಾಗಿ ನೀವೂ ಅಂಗಾಂಗ ದಾನ ಮಾಡಿ ಎನ್ನುವುದು ನನ್ನ ಮನವಿ' ಎಂದು ಪ್ರಿಯಾ ಸುದೀಪ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಪತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಪ್ರಿಯಾ ಸುದೀಪ್ ಈ ವಿಶೇಷ ಕಾರ್ಯದ ಮೂಲಕ ಕರೆ ನೀಡಿದ್ದಾರೆ. ಸುದೀಪ್ ಅವರ ಫೌಂಡೇಷನ್ ಮೂಲಕ ಈಗಾಗಲೇ ಹಲವು ಸಮಾಜಮುಖಿ ಕೆಲಸಗಳು ನಡೆಯುತ್ತಿದ್ದು, ಈ ಹುಟ್ಟುಹಬ್ಬಕ್ಕೆ ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ. ಸುದೀಪ್ ಅವರು ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿದ್ದರು. ಈ ಬಾರಿಯ ಹುಟ್ಟುಹಬ್ಬಕ್ಕೆ ನಾನು ಮನೆಯಲ್ಲಿ ಇರೋದಿಲ್ಲ. ಯಾರೂ ಮನೆಯ ಹತ್ತಿರ ಬರಬೇಡಿ, ಅಮ್ಮನಿಲ್ಲದೆ ಆ ಆಚರಣೆ ತುಂಬಾ ಕಷ್ಟವಾಗುತ್ತೆ. ಹಾಗಾಗಿ ಒಂದು ದಿನ ಮೊದಲೇ ಬೇರೆ ಕಡೆ ಅಭಿಮಾನಿಗಳಿಗೆ ಸಿಗುತ್ತೇನೆ ಎಂದು ಕಿಚ್ಚ ಸುದೀಪ್ ಮನವಿ ಮಾಡಿದ್ದರು.












Click it and Unblock the Notifications