Vinay Gowda: ಶೋ ಮುಗಿದ ಮೇಲೆ ಗೆದ್ದ ವಿನಯ್: ಬಿಗ್‌ಬಾಸ್ ಮನೆ ಸಲಗ ಮತ್ತಷ್ಟು ಇಷ್ಟವಾಗಿದ್ದೇಕೆ?
ಕನ್ನಡ ಬಿಗ್‌ಬಾಸ್ ಸೀಜನ್ 10 ಮುಗಿದು ವಾರವಷ್ಟೇ ಕಳೆಯುತ್ತಿದ್ದು, ಜನ ಇನ್ನೂ ಬಿಗ್ ಬಾಸ್ ಶೋ ಸ್ಪರ್ಧಿಗಳ ಗುಂಗಿನಲ್ಲೇ ಇದ್ದಾರೆ. ಬಿಗ್ ಬಾಸ್ ಕನ್ನಡ ಸೀಜನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದು, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ಆದರೆ ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ಫರ್ಧಿಯೊಬ್ಬರು ಸಂಪೂರ್ಣ ಶೋನ ಹೈಲೆಟ್ ಆಗಿದ್ದು, ಕಪ್ ಗೆಲ್ಲದಿದ್ದರೂ, ಜನರ ಮನಸ್ಸು ಗೆದ್ದಿದ್ದಾರೆ. ಶೋ ಮುಗಿದ ಬಳಿಕ ಮತ್ತಷ್ಟು ಜನರಿಗೆ ಇಷ್ಟವಾಗಿದ್ದಾರೆ.
ಇವರು ಎಲ್ಲಾ ಟಾಸ್ಕ್‌ನಲ್ಲೂ 100% ಆಟವಾಡಿದವರು, ಖಂಡಿಸುವ ಸಮಯದಲ್ಲಿ ಎಂತವರ ಆಟವನ್ನೂ ಖಂಡಿಸಿದವರು, ಮೊದಮೊದಲು ಅಗ್ರೇಸಿವ್ ಆಟಗಾರ, ಜಗಳಗಳ ರೂವಾರಿ ಎನಿಸಿಕೊಳ್ಳುತ್ತಿದ್ದ, ಈ ಸ್ಫರ್ಧಿ ಶೋ ಮುಗಿಯುವ ಹಂತದಲ್ಲಿ ಬಿಗ್‌ಬಾಸ್ ಮನೆಯ ಜಂಟಲ್‌ಮನ್ ಎನಿಸಿಕೊಳ್ಳುತ್ತಾರೆ. ಇವರೇ ಬಿಗ್ ಬಾಸ್ ಮನೆಯ ಸಲಗ ವಿನಯ್ ಗೌಡ.

ಕನ್ನಡ ಕಿರುತೆರೆಯಲ್ಲಿ ಮಹಾದೇವನ ಪಾತ್ರ ಹಾಗೂ ಸಿನಿಮಾ ನಟನೆಯ ಮೂಲಕ ಜನರಿಂದ ಮೆಚ್ಚುಗೆ ಗಳಿಸಿದ್ದ ವಿನಯ್ ಗೌಡ ಇದೀಗ ಬಿಗ್ ಬಾಸ್ ಕನ್ನಡದ ಮೂಲಕ ತಮ್ಮ ನಿಜವಾದ ವ್ಯಕ್ತಿತ್ವದಿಂದ ಕರ್ನಾಟಕದ ಮನೆ ಮನೆ ತಲುಪಿದ್ದಾರೆ. ಬಿಗ್ ಬಾಸ್ ಮನೆಯ ಅಗ್ರೇಸಿವ್ ಆಟಗಾರ ಎನಿಸಿಕೊಂಡಿದ್ದ ವಿನಯ್ ಗೌಡ ಶೋ ಮುಗಿದ ಬಳಿಕ ಜನರಿಗೆ ಮತ್ತಷ್ಟು ಇಷ್ಟವಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪೋಸ್ಟ್‌ಗಳು ಹರಿದಾಡುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ
ವಿನಯ್ ಗೌಡ, ಬಿಗ್ ಬಾಸ್ ಮೊದಲಿನಿಂದ ಕೊನೆಯವರೆಗೂ ತಮ್ಮ ಆಟವನ್ನು ಅತ್ಯುತ್ತಮವಾಗಿ ಆಡಿದ್ದಾರೆ. ವಿನಯ್ ಗೌಡ, ಸಂಗೀತಾ ಶೃಂಗೇರಿ ಇರದಿದ್ದರೆ ಈ ಬಾರಿಯ ಬಿಗ್ ಬಾಸ್ ಶೋ ಸಪ್ಪೆಯಾಗುತ್ತಿತ್ತು ಎನ್ನುವ ಮಾತುಗಳು ಕೇಳಿಬರುತ್ತಿದೆ. ಮೊದಮೊದಲು ಟಾಸ್ಕ್‌ಗಳಲ್ಲಿ ಜಗಳವಾಡುತ್ತಾ ಕಿರಿಕಿರಿ ಎನಿಸುತ್ತಿದ್ದ ವಿನಯ್ ಗೌಡ, ಬರಬರುತ್ತಾ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ಮೊದಲು ವಿನಯ್ ಅವರನ್ನು ಎಲಿಮಿನೇಟ್ ಮಾಡಿದ್ರೆ ಸಾಕು ಎನ್ನುತ್ತಿದ್ದವರು, ಕೊನೆಗೆ ವಿನಯ್ ಗೌಡ ಗೆಲ್ಲಲಿ ಎಂದ ಉದಾಹಣೆಗಳು ಸಹ ಇದೆ. ಅದೇನೇ ಇರಲಿ ಬಿಗ್ ಬಾಸ್ ಮನೆಯಲ್ಲಿ ನೂರು ದಿನ ಪೂರೈಸಿದ ವಿನಯ್ ಮೂರನೇ ರನ್ನರ್ ಅಪ್ ಆದರು.

ಫ್ರೆಂಡ್‌ಶಿಪ್‌ನಲ್ಲಿ ಫ್ಲಿಪ್ ಆಗದ ವಿನಯ್ ಗೌಡ
ಈ ಬಾರಿಯ ಬಿಗ್ ಬಾಸ್‌ನಲ್ಲಿ ಫ್ಲಿಪ್ ಎನ್ನುವ ಶಬ್ಧ ಅನೇಕ ಬಾರಿ ಕೇಳಿ ಬಂದಿತ್ತು. ಕೆಲವೊಂದು ಸ್ಪರ್ಧಿಗಳು ಸ್ನೇಹವನ್ನು, ಸಂಬಂಧವನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಪ್ರೇಕ್ಷಕರಿಗೆ ಕಂಡು ಬಂದರೂ, ವಿನಯ್ ಗೌಡ ಮಾತ್ರ ಫ್ರೆಂಡ್‌ಶಿಪ್‌ನಲ್ಲಿ ಫ್ಲಿಪ್ ಆಗಿಲ್ಲ. ಪ್ರತಿ ಬಿಗ್ ಬಾಸ್‌ನಂತೆ ಈ ಬಾರಿಯೂ ಗುಂಪುಗಾರಿಕೆ ಮೇಲ್ನೋಟಕ್ಕೆ ಕಂಡುಬಂದಿತ್ತು. ಆದರೆ ವಿನಯ್ ಮೊದಲ ದಿನ ತಮ್ಮ ಜೊತೆಗೆ ನಿಂತಿದ್ದವರ ಜೊತೆಗೆ ಕೊನೆಯವರೆಗೆ ಇದ್ದರು.
ವಿನಯ್ ಟೀಂನಲ್ಲಿದ್ದ ಸ್ಪರ್ಧಿಗಳು ಒಬ್ಬೊಬ್ಬರಾಗಿಯೇ ಹೊರಗೆ ಬಂದರೂ ಸಹ ಕೊನೆಯ ವಾರಗಳಲ್ಲಿ ಜೊತೆಗಿದ್ದ ನಮೃತಾ ಗೌಡ ಅವರಿಗೆ ವಿನಯ್ ಬೆಂಬಲವಾಗಿದ್ದರು. ನಮೃತಾ ಗೌಡ ಎಲಿಮಿನೇಷನ್‌ನಿಂದ ಪಾರಾದಾಗ ಸಂಭ್ರಮಿಸಿದ್ದರು. ಹೀಗಾಗಿ ಪ್ರೇಕ್ಷಕರು ವಿನಯ್ ಫ್ರೆಂಡ್‌ಶಿಪ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಶೋ ಮುಗಿದ ಮೇಲೆ ಗೆದ್ದ ವಿನಯ್
ಬಿಗ್ ಬಾಸ್ ಶೋ ಮುಗಿದ ಮೇಲೆ ವಿನಯ್ ಜನರಿಗೆ ಮತ್ತಷ್ಟು ಇಷ್ಟವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿನಯ್ ಪರವಾಗಿ ಪೋಸ್ಟ್‌ಗಳು ಹರಿದಾಡುತ್ತಿದೆ. ಆಟದಲ್ಲಿ ಅಗ್ರೇಸಿವ್ ಆಗಿದ್ದ ವಿನಯ್ ಉಳಿದ ಸಮಯದಲ್ಲಿ ಇತರ ಸ್ಫರ್ದಿಗಳಿಗೆ ನೆರವಾದ, ಉದಾಹರಣೆಗೆ ಡ್ರೋನ್ ಪ್ರತಾಪ್ ಅವರ ಬಟ್ಟೆ ನೀರಿನಲ್ಲಿ ಹಾಕಿದಾಗ ತನ್ನ ಬಟ್ಟೆ ಬಳಸುವಂತೆ ವಿನಯ್ ಹೇಳುತ್ತಾರೆ. ಈ ರೀತಿಯ ಅನೇಕ ವಿಡಿಯೋಗಳು ಹರಿದಾಡುತ್ತಿದೆ.
ಇತ್ತೀಚಿಗೆ ನೀಡಿದ ಸಂದರ್ಶನಗಳಲ್ಲಿ ವಿನಯ್ ತಮ್ಮ ಪೋಷಕರು, ತಾವು ಪಟ್ಟ ಕಷ್ಟ, ತಮ್ಮ ಬದುಕಿನ ಬಗ್ಗೆ ಹೇಳಿಕೊಂಡಿದ್ದರು. ಇದನ್ನು ನೋಡಿದ ಪ್ರೇಕ್ಷಕರು ಇಷ್ಟಲ್ಲ ಕಷ್ಟಗಳಿದ್ದರೂ ಒಂದು ದಿನಾನೂ ಶೋನಲ್ಲಿ ಸಿಂಪತಿ ಕಾರ್ಡ್ ಪ್ಲೇ ಮಾಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೋನಿಂದ ಹೊರಬಂದ ಬಳಿಕ ವಿನಯ್ ಇತರ ಸ್ಪರ್ಧಿಗಳ ಬಗ್ಗೆ ಆಡಿರುವ ಮಾತುಗಳು ಸಹ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ ಶೋ ಮುಗಿದ ಮೇಲೂ ವಿನಯ್ ಜನರಿಗೆ ಮತ್ತಷ್ಟು ಇಷ್ಟವಾಗಿದ್ದಾರೆ.











Click it and Unblock the Notifications