ಸುದೀಪ್ ಸರ್ ಹೇಳಿದ ಆ ಮಾತಿಂದ ತುಂಬಾ ನೋವಾಯ್ತು: ತುಕಾಲಿ ಸಂತೋಷ್ ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಹೊಸ ಸೀಸನ್ ಶುರವಾಗಲು ಇನ್ನೆರಡೇ ದಿನ ಬಾಕಿ ಇದೆ. ಸ್ಪರ್ಧಿಗಳು ಯಾರು ಎಂಬ ಕುತೂಹಲಕ್ಕೂ ತೆರೆ ಬೀಳಲಿದೆ. ಇದೇ ವೇಳೆ ಬಿಗ್‌ಬಾಸ್ ಕನ್ನಡ ಸೀಸನ್-10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ಹೊಸ ಸ್ಪರ್ಧಿಗಳಿಗೆ ಟಿಪ್ಸ್ ನೀಡಿದ್ದಾರೆ. ಬಿಗ್‌ಬಾಸ್ ಮನೆಗೆ ಹೋಗುವವರು ಹೇಗಿರಬೇಕು? ಹೇಗೆಲ್ಲ ಆಟ ಆಡಬೇಕು ಎಂದು ತಮ್ಮ ಅನುಭವದೊಂದಿಗೆ ಸಲಹೆ ನೀಡಿದ್ದಾರೆ. ಜೊತೆ ಸುದೀಪ್ ಸರ್ ಅವರು ಆಡಿದ ಮಾತಿನಿಂದ ನೋವಾಗಿತ್ತು ಎಂದೂ ತುಕಾಲಿ ಹೇಳಿಕೊಂಡಿದ್ದಾರೆ.
'ಬಿಗ್‌ಬಾಸ್ ಅನುಭವ ಅಂದ್ರೆ ಒಂದು ಕಾಣದ ಜಗತ್ತಿನ ಒಳಗೆ ಹೋದಂತೆ. ಅಲ್ಲಿ ನಮಗೆ ಒಂದು ಫೋನ್ ಇರಲ್ಲ, ನೆಟ್‌ವರ್ಕ್ ಇರೋದಿಲ್ಲ. ಅಲ್ಲಿ ಯಾರೂ ನಮಗೆ ಗೊತ್ತಿರಲ್ಲ, ಪರಿಚಯ ಇರೋದಿಲ್ಲ. ಬಿಗ್‌ಬಾಸ್ ಮನೆಯೊಳಗೆ ಒಂದು ಹದಿನೆಂಟು ಜನರನ್ನ ಬಿಟ್ಟು ನಿಮಗೆ ನೀವೇ ಆಟ ಆಡಿಕೊಳ್ಳಿ ಎಂದು ಮನಸ್ಸುಗಳ ನಡುವೆ ಆಡೋ ಆಟ ಅದು' ಎಂದು ತುಕಾಲಿ ಸಂತೋಷ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

'ಆ ಆಟವನ್ನು ಅನುಭವಿಸುವುದೇ ಒಂದು ಸ್ವರ್ಗ. ಮನುಷ್ಯ ಆದವನು ಬಿಗ್‌ಬಾಸ್ ಅನುಭವವನ್ನು ಒಂದು ದಿನವಾದ್ರೂ ಹಂಚಿಕೊಳ್ಳಬೇಕು. ಆ ದಿನ ನಿಜಕ್ಕೂ ಪರಿಪೂರ್ಣವಾಗುತ್ತೆ ಅನ್ನೋದು ನನ್ನ ಅಭಿಪ್ರಾಯ. ಬಿಗ್‌ಬಾಸ್‌ನ ಇನ್ನೊಂದು ಅನುಭವ ಅಂದ್ರೆ ಅದು ಕಿಚ್ಚ ಸುದೀಪ್ ಸರ್. ಅವರು ಫಿನಾಲೆವರೆಗೆ ನಮ್ಮ ಜೊತೆ ಇದ್ದು ಮಾತನಾಡಿಸುತ್ತಾರೆ. ಅದೇ ದೊಡ್ಡ ಅನುಭವ. ಆ ಜಗತ್ತಿನೊಳಗೆ ಹೋಗಿ ನಾವೇ ದುಡಿದುಕೊಂಡು, ತಿನ್ಕೊಂಡು ಕೊನೆಗೆ ಗೆದ್ದು ಬರೋದು ಒಂದು ಚಾಲೆಂಜ್. ಆ ಅನುಭವವನ್ನ ಯಾರೂ ಮಿಸ್ ಮಾಡಿಕೊಳ್ಳಬಾರದು' ಎಂದಿದ್ದಾರೆ.
'ಸುದೀಪ್ ಸರ್ ಮಾತು ಕೇಳಿ ಶಾಕ್ ಆಯ್ತು'
'ವಾರ ವಾರವೂ ಟಾಸ್ಕ್ ಇರುತ್ತೆ. ಜೊತೆಯಲ್ಲಿ ಇದ್ದವರನ್ನ ನೋಡಿ ನೋಡಿ ಬೇಜಾರಾಗಿರುತ್ತೆ. ಅವರನ್ನೇ ನಾಮಿನೇಟ್ ಮಾಡೋದು ಎಲ್ಲ ಇರುತ್ತೆ. ಆ ವಾರದಲ್ಲಿ ಏನಾದರೂ ತಪ್ಪು ಮಾಡಿದ್ರೆ, ಸರಿ ಮಾಡಿದ್ರೆ ಹೊಗಳೋಕೆ ಸುದೀಪ್ ಸರ್ ಬರ್ತಾರೆ ಅಂತ ಕಾಯುತ್ತೀವಿ. ಶುರುವಿನಲ್ಲಿ ನಾನು ಸಿಕ್ಕಾಪಟ್ಟೆ ಕಾಮಿಡಿ ಮಾಡ್ಕೊಂಡು ಇರ್ತಿದ್ದೆ. ನನ್ನ ಯಾರೂ ಎಲಿಮಿನೇಟ್ ಮಾಡೋಕೆ ಸಾಧ್ಯನೇ ಇಲ್ಲ ಅನ್ಕೊಂಡಿದ್ದೆ. ಆದರೆ ಸುದೀಪ್ ಸರ್ ಬಂದು ನೀವು ಮಾಡ್ತಿರೋದು ಕಾಮಿಡಿ ಅಲ್ಲ, ಬೇರೆಯವರಿಗೆ ನೋವು ಮಾಡ್ತಿದ್ದೀರಿ ಅಂದ್ರು. ಆ ವಿಚಾರಕ್ಕೆ ನನಗೆ ನೋವು ಕೂಡ ಆಯ್ತು' ಎಂದಿದ್ದಾರೆ.
'ಕೊನೆಗೆ ಎಲ್ಲ ಸ್ಪರ್ಧಿಗಳು ನನ್ನನ್ನೇ ನಾಮಿನೇಟ್ ಮಾಡೋಕೆ ಶುರು ಮಾಡಿದ್ರು. ಇದು ನನಗೆ ತುಂಬಾ ದೊಡ್ಡ ಹೊಡೆತ ಕೊಟ್ಟಿತು. ತುಕಾಲಿ ಸರಿ ಇಲ್ಲ ಅನ್ನೋ ಮಾತು ಎಲ್ಲೆಡೆ ಕೇಳಿಬಂತು. ಕಾಮಿಡಿ ಮಾಡ್ಕೊಂಡು ಇದ್ದವನು ಬಿಗ್‌ಬಾಸ್ ಮನೆಗೆ ಹೋಗಿ ಹೊಸಬರನ ಜೊತೆ ಬದುಕೋದು ನಿಜಕ್ಕೂ ಕಷ್ಟ. ವೀಕೆಂಡ್‌ನಲ್ಲಿ ಸುದೀಪಣ್ಣ ಕೂಡ ಆ ರೀತಿ ಹೇಳಿದ್ದರಿಂದ ನನಗೆ ತುಂಬಾ ಸಮಸ್ಯೆ ಆಯ್ತು. ಆ ಮೇಲೆ ಕೂತು ಯೋಚನೆ ಮಾಡಿದೆ. ಇಲ್ಲಿ ಆಟ ಆಡೋದು ಹೇಗೆ ಅಂತ ಗೊತ್ತಾಯ್ತು. ಅದನ್ನ ನೋಡಿ ಸುದೀಪಣ್ಣ ಖುಷಿ ಪಟ್ಟರು. ಎಲ್ಲರೂ ಗುದ್ದಾಡಿಕೊಂಡು ಆಟ ಆಡಿದ್ರೆ, ನೀವು ಮಾತಲ್ಲೇ ಆಡ್ತಿದ್ದೀರಲ್ಲ ಅಂತ ಹೊಗಳಿದ್ರು. ನನಗೆ ಸಿಕ್ಕಾಪಟ್ಟೆ ಸಪೋರ್ಟ್ ಕೂಡ ಮಾಡಿದ್ರು' ಎಂದು ತುಕಾಲಿ ಸಂತೋಷ್ ಬಿಗ್‌ಬಾಸ್ ಅನುಭವ ಹಂಚಿಕೊಂಡಿದ್ದಾರೆ.












Click it and Unblock the Notifications