ನಟ ಸುನೀಲ್ ಸಾವಿನ ದಿನ ನಡೆದಿದ್ದೇನು? ಜೊತೆಯಲ್ಲಿದ್ದ ಮಾಲಾಶ್ರೀಗೆ ಏನಾಗಿತ್ತು?
ಬೆಳ್ಳಿ ಕಾಲುಂಗುರ ಸಿನಿಮಾ ಖ್ಯಾತಿಯ ನಟ ಸುನೀಲ್ ಜುಲೈ 24, 1994ರಂದು ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದರು. ಆಗಷ್ಟೇ ಚಿತ್ರರಂಗದಲ್ಲಿ ಚಿಗುರಿದ್ದ ಪ್ರತಿಭೆಯೊಂದು ಈ ರೀತಿ ಅಕಾಲಿಕವಾಗಿ ಅಂತ್ಯಗೊಂಡಿದ್ದು, ಸಂಪೂರ್ಣ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ನಷ್ಟವಾಗಿತ್ತು. ನಟ ಸುನೀಲ್ ಮರಣದ ದಿನ ಏನಾಯ್ತು? ಯಾರ್ಯಾರು ಜೊತೆಯಲ್ಲಿ ಇದ್ದರು ಎನ್ನುವುದರ ಬಗ್ಗೆ ನಟ ಸುನೀಲ್ ಸಹೋದರ, ಸುಧೀರ್ ಕುಮಾರ್ ಶೆಟ್ಟಿ ವಿವರಿಸಿದ್ದಾರೆ.
ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ಹೈದ್ರಾಬಾದ್‌ನಲ್ಲಿ ಏನೋ ಕಾರ್ಯಕ್ರಮ ಇತ್ತು ಅಂತಾ ಸುನೀಲ್ ಹಾಗೂ ಮಾಲಾಶ್ರೀ ಇಬ್ಬರು ಅಲ್ಲಿಗೆ ಹೋಗಿದ್ದರು. ಅಲ್ಲಿಂದ ಬಂದು ಹೊಸಪೇಟೆಯಲ್ಲಿ ಬಸವರಾಜು ಅವರ ನಾಟಕ ಕಂಪನಿಯ ಕಾರ್ಯಕ್ರಮ ಇತ್ತು ಎಂದು ಹೋಗಿದ್ದರು. ಈ ಭಾಗದಲ್ಲಿ ಮೊದಲು ನಾಟಕದ ಬಗ್ಗೆ ಅಷ್ಟು ಕ್ರೇಜ್ ಇರಲಿಲ್ಲ. ಹೀಗಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರಾದ ಸುನೀಲ್ ಹಾಗೂ ಮಾಲಾಶ್ರೀ ಬರುತ್ತಿದ್ದಾರೆ ಎಂದರೆ ಜನ ಹೆಚ್ಚಾಗಿ ಸೇರುತ್ತಾರೆ ಎಂದು ಇವರನ್ನು ಕರೆದಿದ್ದರು. ಇವರು ಕೂಡ ಹೋಗಿದ್ದರು' ಎಂದರು.

'ರಾತ್ರಿ ಕಾರ್ಯಕ್ರಮ ಮುಗಿಸಿ ಹೊರಡುವ ಸಮಯದಲ್ಲಿ ಇವರು ತಂಗಿದ್ದ ಜಾಗದಲ್ಲಿ ಜನ ಮುತ್ತಿಕೊಂಡಿದ್ದರು. ಹೀಗಾಗಿ ಸುಸ್ತಾಗಿದ್ದ ಸುನೀಲ್ ಇವತ್ತು ಹೊರಡುವುದ ಬೇಡ ಅಂತಾ ಚಾಲಕ ಕೃಷ್ಣನಿಗೆ ಹೇಳಿದ್ದ. ಆದರೆ ಕೃಷ್ಣ ತಾನು ಡ್ರೈವ್ ಮಾಡುವುದಾಗಿ ಹೇಳಿದ್ದ. ಜೊತೆಗೆ ಮಾರನೇ ದಿನ ನನ್ನ ಮಗಳ ಹುಟ್ಟುಹಬ್ಬ ಇದ್ದ ಕಾರಣ ಬರಲು ನಿರ್ಧರಿಸಿದ್ದರು. ಹೀಗಾಗಿ ರಾತ್ರಿ 12-1 ಗಂಟೆಯ ಹಾಗೆ ಹೊಸಪೇಟೆಯನ್ನು ಬಿಟ್ಟಿದ್ದಾರೆ'.
'ಸುನೀಲ್ ಜೊತೆಗಿದ್ದ ಮಾಲಾಶ್ರೀ ಹಾಗೂ ಸಚಿನ್ ಹೇಳಿರುವ ಪ್ರಕಾರ ಸಾಧಾರಣ ಮೂರುವರೆ ಗಂಟೆಯವರೆಗೂ ಕಾರಿನಲ್ಲಿ ಮಾತನಾಡುತ್ತಲೇ ಇದ್ದರು. ಕಾರಿನ ಮುಂದಿನ ಸೀಟಿನಲ್ಲಿ ಚಾಲಕ ಕೃಷ್ಣ ಹಾಗೂ ಸಚಿನ್ ಕುಳಿತುಕೊಂಡಿದ್ದರು. ಹಿಂದಿನ ಭಾಗದಲ್ಲಿ ನನ್ನ ತಮ್ಮ ಹಾಗೂ ಮಾಲಾಶ್ರೀ ಕುಳಿತುಕೊಂಡಿದ್ದರು. ಮಾತನಾಡುತ್ತಲೇ ಬರುತ್ತಿದ್ದರು, ಸಹಜವಾಗಿ ನಿದ್ದೆ ಬಂದಿದೆ. ಈ ಅಪಘಾತ ನಡೆದಿದ್ದು ನಾಲ್ಕು ಗಂಟೆಗೆ'.

'ತಮಿಳುನಾಡಿನ ಲಾರಿಯೊಂದು ಬಂದು ಕಾರಿಗೆ ಗುದ್ದಿದೆ. ಮೊದಲು ಯಾರು ನೋಡಿಯೇ ಇರಲಿಲ್ಲ. ಆಮೇಲೆ ಯಾರೋ ದಾರಿ ಹೋಕರು ಒಬ್ಬರು ನೋಡಿ ಎಲ್ಲರನ್ನೂ ಚಿತ್ರದುರ್ಗದ ಆಸ್ಪತ್ರೆಗೆ ಸೇರಿಸಿದರು. ಆಗ ಮೊಬೈಲ್ ಇರಲಿಲ್ಲ. ಆ ದಿನ ಭಾನುವಾರ ನನಗೆ ರಜೆ ಇತ್ತು. ಅಪಘಾತದಲ್ಲಿ ಚಾಲಕ ಕೃಷ್ಣ ಅಲ್ಲೇ ಸಾವನ್ನಪ್ಪಿದ್ದ. ನನ್ನ ತಮ್ಮ ಸುನೀಲ್ ಚಾಲಕನ ಹಿಂಬದಿಯ ಸೀಟಿನಲ್ಲಿ ಕುಳಿತ ಕಾರಣ ಇವನಿಗೂ ಗಂಭೀರ ಗಾಯವಾಗಿತ್ತು. ಉಳಿದಿಬ್ಬರಿಗೆ ಸ್ವಲ್ಪ ಗಾಯವಾಗಿತ್ತು. ಆ ಕಾರಿನ ಪರಿಸ್ಥಿತಿ ನೋಡಿದರೆ ನಾಲ್ಕು ಜನ ಕೂಡ ಸಾಯಬೇಕಿತ್ತು ಅಷ್ಟು ಕಾರು ಜಖಂಗೊಂಡಿತ್ತು' ಎಂದರು.
'ಈ ರೀತಿ ಅಪಘಾತವಾಗಿದೆ. ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಬೆಳಗ್ಗೆ ಎಂಟು ಗಂಟೆಗೆ ನಮ್ಮ ಮಾವನ ಮನೆಗೆ ಫೋನ್ ಬಂತು. ಮಾವನ ಮಗ ಓಡಿಕೊಂಡು ಬಂದು ಕಾರು ಅಪಘಾತ ಆಗಿದೆ, ಕೃಷ್ಣ ಹೋಗಿದ್ದಾನೆ. ಬಾಬು ಅಣ್ಣ ತುಂಬಾ ಗಂಭೀರ ಅಂತೆ ಎಂದು ನನಗೆ ವಿಚಾರ ಹೇಳಿದ. ಎರಡು ದಿನದ ಹಿಂದೆ ನಮ್ಮ ಜೊತೆ ಮಾತನಾಡಿ ಹೋದವ ದಿಢೀರ್ ಹೀಗೆ ಎಂದರೆ ನಾವು ಹೇಗೆ ತಡೆದುಕೊಳ್ಳುವುದು'.
'ವಿಷಯ ಗೊತ್ತಾಗುತ್ತಿದ್ದಂತೆ ನಾವು ಹೊರಟೆವು ಇನ್ನೂರು ಕಿಲೋಮೀಟರ್ ಹೇಗೆ ಹೋದೆವು ಅಂತಾನೂ ಗೊತ್ತಿಲ್ಲ. ಅಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯರು ನೋಡಿ ಹೇಳಿದ್ದರು ಇವನು ಉಳಿಯಲ್ಲ ಎಂದು. ಹೇಗಾದರೂ ಬದುಕಿಸಿಕೊಳ್ಳಬಹುದು ಅಂತಾ ಇದ್ದರೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಂತಾ ಹೇಳಿದರು. ನಾವು ಹೋಗುವಾಗ ಎರಡು ಮೂರು ಸಾವಿರ ಜನ ಸೇರಿದ್ದರು. ನಮ್ಮ ಕಾರಿನ ಹಿಂದೆಯೇ ನೂರಾರು ಜನ ಇದ್ದರು. ಹೀಗಾಗಿ ಪೊಲೀಸರು ಬೇಗನೇ ನಮ್ಮನ್ನು ಎಳೆದುಕೊಂಡು ಆಸ್ಪತ್ರೆ ಬಾಗಿಲು ಹಾಕಿಬಿಟ್ಟರು'.
'ಹೋಗಿ ನೋಡಿದಾಗ ತಲೆಗೆ ಬ್ಯಾಂಡೇಜ್ ಹಾಕಿದ್ದರು. ಕಾಲಿಗೆ ಬ್ಯಾಂಡೇಜ್ ಹಾಕಿದ್ದರು. ಸೀಟು ಹೊಡೆದ ರಭಸಕ್ಕೆ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ನಾನು ಅವನನ್ನು ನೋಡಿ ಅಲ್ಲಿಯೇ ಕುಸಿದು ಬಿದ್ದೆ. ಬಳಿಕ ಗಾಯಗೊಂಡಿದ್ದ ಇಬ್ಬರನ್ನೂ ಆಂಬ್ಯುಲೆನ್ಸ್‌ನಲ್ಲಿ ಹಾಕಿ, ಮಾಲಾಶ್ರೀ ಅವರನ್ನು ಬೇರೆ ಕಾರಿಗೆ ಹಾಕಿ ಅಲ್ಲಿಂದ ಬೆಂಗಳೂರಿಗೆ ಹೊರಟೆವು. ಚಿತ್ರದುರ್ಗ ದಾಟಿ ಎರಡು ಕಿಲೋ ಮೀಟರ್ ಮುಂದೆ ಹೋದಾಗ ಏಕಾಏಕಿ ಆಂಬ್ಯುಲೆನ್ಸ್ ನಿಂತುಕೊಂಡಿತು. ನನಗೆ ಆಗಲೇ ಏನೋ ಆಗಿದೆ ಅಲ್ಲಿ ಅಂತಾ ಗೊತ್ತಾಯ್ತು. ಪೊಲೀಸರು ನಮ್ಮ ಜೊತೆಗೆ ಇದ್ದ ಕಾರಣ ಇನ್ಸೆಪೆಕ್ಟರ್ ಹೋಗಿ ನೋಡಿಕೊಂಡು ಬಂದು ಅವನು ಇಲ್ಲ ಅಂತಾ ಹೇಳಿಬಿಟ್ಟರು'.
'ನಾವು ನೋಡಿದಾಗ ಅವನು ಉಸಿರು ಮೇಲೆ ತೆಗೆದುಕೊಳ್ಳುತ್ತಿದ್ದ ಬಿಟ್ಟರೆ ಬೇರೆ ಏನೂ ಇರಲಿಲ್ಲ. ಕೊನೆಗೆ ನಮ್ಮ ಮಾವ ಮಾಲಾಶ್ರೀ ಮತ್ತು ಸಚಿನ್ ಅನ್ನು ಒಂದು ಆಂಬ್ಯುಲೆನ್ಸ್‌ನಲ್ಲಿ ಹಾಕಿ ಬೆಂಗಳೂರಿಗೆ ಕಳುಹಿಸಿದರು. ಇವನ ಮೃತದೇಹವನ್ನು ಮತ್ತೆ ಚಿತ್ರದುರ್ಗಕ್ಕೆ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಬಂದೆವು'.
'ಈ ಪ್ರಕರಣದಲ್ಲಿ ತಪ್ಪು ಯಾರದ್ದು ಅಂತಾ ಹೇಳಲು ಆಗುವುದಿಲ್ಲ. ಕಾರು-ಲಾರಿ ಇಬ್ಬರೂ ಸ್ಪೀಡ್ ಇದ್ದರು. ಹೈವೇ ಬೇರ, ಅದರಲ್ಲೂ ರಾತ್ರಿ ಹೊತ್ತು ನಿದ್ದೆ ಎಳೆದಿದೆ. ಕೊನೆಗೆ ಮನೆಯವರಿಗೆಲ್ಲಾ ವಿಷಯ ತಿಳಿಸಿದೆವು. ನಾವು ಅಲ್ಲಿಂದ ಹೊರಟಾಗ ಇವರು ಇಲ್ಲಿಂದ ಚಿತ್ರದುರ್ಗಕ್ಕೆ ಹೋಗಲು ಸಿದ್ಧರಾಗಿದ್ದರು. ಸುನೀಲ್ ಇಲ್ಲೇ ಇದ್ದ ಕಾರಣ ಬೆಂಗಳೂರಿಗೆ ತರುವುದು ಅಂತಾ ನಿರ್ಧರಿಸಿದೆವು. ನಾನು ಬೆಂಗಳೂರಿಗೆ ಬಂದು ಮಾಲಾಶ್ರೀಯನ್ನು ನ್ಯುಮಾನ್ಸ್‌ಗೆ ಸೇರಿಸಿ ನಮ್ಮ ಮನೆಗೆ ಬಂದೆ. ಇಲ್ಲಿ ಬಂದಾಗ ಸಾವಿರಾರು ಜನರು ನನ್ನ ತಮ್ಮನಿಗಾಗಿ ಕಾದಿದ್ದರು'.
'ಶಶಿ ಕುಮಾರ್, ಶಿವಣ್ಣ ಸೇರಿದಂತೆ ಎಲ್ಲಾ ಸಿನಿಮಾ ನಟರು ನಮ್ಮ ಮನೆಯ ಬಳಿ ಸೇರಿದ್ದರು. ಎಲ್ಲರೂ ಅಂತಿಮ ದರ್ಶನ ಪಡೆದ ಮೇಲೆ ಜನರಿಗೆ ನೋಡಲು ಬಿಡಬೇಕು ಅಂತಾ ಎಲ್ಲರೂ ಹೇಳಿದರು. ಆದರೆ ನಾವು ಅದೇ ದಿನ ರಾತ್ರಿ ಊರಿಗೆ ತೆಗೆದುಕೊಂಡು ಬಂದೆವು. ನಮ್ಮೆಲ್ಲರ ಪರಿಸ್ಥಿತಿ ಹೇಳ ತೀರದಂತಾಗಿತ್ತು' ಎಂದು ನಟ ಸುನೀಲ್ ಸಹೋದರ ಸುಧೀರ್ ಕುಮಾರ್ ಶೆಟ್ಟಿ ತಮ್ಮನ ಕೊನೆಯ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾದರು.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications