ಶೀಘ್ರದಲ್ಲೇ ಅಂತ್ಯವಾಗುವ ಕನ್ನಡದ ಟಾಪ್ ಧಾರಾವಾಹಿಗಳ ವಿವರ
ಇತ್ತೀಚಿಗೆ ಮನೋರಂಜನಾ ಕ್ಷೇತ್ರದ ಯಶಸ್ಸಿನಲ್ಲಿ ಸಿನಿಮಾಗಳಷ್ಟೇ ಕಿರುತೆರೆ ಕೂಡ ಸಿಂಹಪಾಲು ಪಡೆದುಕೊಂಡಿದೆ. ಕಿರುತೆರೆಯ ಕಾರ್ಯಕ್ರಮಗಳು, ಧಾರಾವಾಹಿಗಳು ಕೋಟ್ಯಂತರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಹೀಗಾಗಿ ಅನೇಕ ಸ್ಟಾರ್ ನಟ-ನಟಿಯರು ಇತ್ತೀಚಿಗೆ ಹೆಚ್ಚಾಗಿ ಕಿರುತೆರೆಯ ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಗಿಂತ ಧಾರಾವಾಹಿಗಳು ಜನರ ಜೀವನದಲ್ಲಿ ಹಾಸುಹೊಕ್ಕಿರುತ್ತವೆ. ಕೆಲ ಪ್ರೇಕ್ಷಕರು ಒಂದು ದಿನದ ಊಟವನ್ನು ಮಿಸ್ ಮಾಡಬಹುದು ಆದರೆ ಧಾರಾವಾಹಿ ಸಂಚಿಕೆಗಳನ್ನು ಮಿಸ್ ಮಾಡುವುದಿಲ್ಲ ಅಷ್ಟರಮಟ್ಟಿಗೆ ಇಷ್ಟಪಟ್ಟು ಪ್ರತಿ ದಿನ ನೋಡುತ್ತಾರೆ. ಹೀಗೆ ಜನರ ಮೆಚ್ಚುಗೆ ಪಡೆದ ಕೆಲ ಧಾರಾವಾಹಿಗಳು ಈಗ ಅಂತಿಮ ಹಂತಕ್ಕೆ ಬಂದು ತಲುಪಿವೆ. ಕಲರ್ಸ್ ಕನ್ನಡ ಹಾಗೂ ಜೀ ವಾಹಿನಿಯಲ್ಲಿ ಜನ ಮೆಚ್ಚಿದ ಕೆಲ ಧಾರಾವಾಹಿಗಳು ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿವೆ. ಮುಕ್ತಾಯ ಹಂತಕ್ಕೆ ಬಂದ ಧಾರಾವಾಹಿಗಳ ವಿವರ ಇಲ್ಲಿದೆ.

ಲಕ್ಷ್ಮೀ ಬಾರಮ್ಮ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿದೆ. ಈ ಬಗ್ಗೆ ಧಾರಾವಾಹಿ ತಂಡ ಈಗಾಗಲೇ ಅಧೀಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಮೊದಲು ಭಾಗ್ಯ ಲಕ್ಷ್ಮೀ ಧಾರಾವಾಹಿಯೊಂದಿಗೆ ಆರಂಭವಾದ ಈ ಕಥೆ ಬಳಿಕ ಲಕ್ಷ್ಮೀ ಬಾರಮ್ಮ ಹೆಸರಿನಲ್ಲಿ ಸ್ವತಂತ್ರ ಧಾರಾವಾಹಿ ಪ್ರಸಾರ ಕಾಣಲು ಆರಂಭವಾಯಿತು. ಮೊದಲು ಅಕ್ಕ ತಂಗಿಯ ಬಾಂಧವ್ಯದಿಂದ ಆರಂಭವಾದ ಕಥೆ ಬಳಿಕ ಲಕ್ಷ್ಮೀ, ಕಾವೇರಿ, ಕೀರ್ತಿ, ವೈಷ್ಣವ್ ಈ ನಾಲ್ವರ ಸುತ್ತಲೂ ಹೆಣೆದುಕೊಂಡಿತು.
ಇತ್ತೀಚಿಗೆ ಇಂಟ್ರಸ್ಟಿಂಗ್ ಆಗಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಪ್ರೇಕ್ಷಕರಿಗೆ ದಿಢೀರ್ ಶಾಕ್ ಕೊಟ್ಟಿತ್ತು. ಜನ ಮೆಚ್ಚಿದ ಲಕ್ಷ್ಮೀ ಬಾರಮ್ಮ ಧಾರಾವಾಹಿ 'ಅಂತಿಮ ಅಧ್ಯಾಯ' ಎಂದು ಅಧೀಕೃತವಾಗಿ ತಿಳಿಸಿ ಸದ್ಯ ಧಾರಾವಾಹಿಯ ಸಂಚಿಕೆಗಳು ಪ್ರಸಾರವಾಗುತ್ತಿದೆ. ಈ ಹಿಂದೆಯೇ ಈ ಧಾರಾವಾಹಿ ಅಂತ್ಯವಾಗುವ ಸೂಚನೆ ಸಿಕ್ಕಿತ್ತು. ಧಾರಾವಾಹಿ ತಂಡದ ಒಬ್ಬ ಸದಸ್ಯರೊಬ್ಬರು ಅಂತಿಮ ದಿನದ ಶೂಟಿಂಗ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ತಕ್ಷಣವೇ ಆ ಪೋಸ್ಟ್ ಡಿಲೀಟ್ ಆಗಿದ್ದು, ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯಗೊಳ್ಳುತ್ತಾ ಎನ್ನುವ ಅನುಮಾನ ಮೂಡಿತ್ತು. ಆದರೆ ಈಗ ಧಾರಾವಾಹಿ ತಂಡವೇ ಅಧೀಕೃತವಾಗಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಶ್ರೀರಸ್ತು ಶುಭಮಸ್ತು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಶೀಘ್ರವೇ ಅಂತ್ಯವಾಗುವ ಸಾಧ್ಯತೆ ಇದೆ. ಹಿರಿಯ ನಟಿ ಸುಧಾರಾಣಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಇತ್ತೀಚಿಗೆ 700 ಸಂಚಿಕೆಗಳನ್ನು ಪೂರೈಸಿದೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಸದ್ಯದ ಕಥೆ ನೋಡುವುದಾದರೆ ಕಥಾ ನಾಯಕಿ ತುಳಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ತನ್ನ ಮಗ ಹಾಗೂ ಸೊಸೆಗೆ ನೀಡಿದ್ದಾಳೆ. ಇತ್ತ ಕಿರಿ ಸೊಸೆ ದೀಪಿಕಾ ಕೂಡ ಬದಲಾಗಿದ್ದು, ಮೂವರು ಅಣ್ಣ ತಮ್ಮಂದಿರು ಕೂಡ ಒಂದಾಗಿದ್ದಾರೆ. ಈಗ ತಂಗಿ ನಿಧಿಗೆ ಈ ಹಿಂದೆ ನಿಶ್ಚಯಿಸಿದ್ದ ವರ ಸಂಜಯ್ ಜೊತೆಗೆ ಮದುವೆ ಮಾಡಲು ಮೂವರು ಅಣ್ಣಂದಿರು ಪ್ರಯತ್ನಿಸುತ್ತಿದ್ದಾರೆ. ಸದ್ಯ ಎಲ್ಲರ ಜೀವನವೂ ಸುಖಾಂತ್ಯಕ್ಕೆ ಸಾಗುತ್ತಿದ್ದು, ಧಾರಾವಾಹಿ ಕೂಡ ಶೀಘ್ರದಲ್ಲೇ ಅಂತ್ಯವಾಗುವ ಸಾಧ್ಯತೆ ಇದೆ ಎಂದು ಪ್ರೇಕ್ಷಕರು ಊಹಿಸಿದ್ದಾರೆ.

ನೂರು ಜನ್ಮಕೂ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಡಿಸೆಂಬರ್ 23ರಿಂದ ಪ್ರಸಾರವಾಗಲು ಪ್ರಾರಂಭವಾದ ನೂರು ಜನ್ಮಕೂ ಎನ್ನುವ ಧಾರಾವಾಹಿ ಶೀಘ್ರದಲ್ಲೇ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಈ ಧಾರಾವಾಹಿಯಲ್ಲಿ ಗೀತಾ ಸೀರಿಯಲ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಧನುಷ್ ಗೌಡ ನಾಯಕರಾಗಿದ್ದು, ಶಿಲ್ಪಾ ನಾಯಕಿಯಾಗಿದ್ದಾರೆ. ಚಿರು ಹಾಗೂ ಮೈತ್ರಿ ಜೋಡಿ ಒಂದಾಗಲು ಬಿಡದ ದುಷ್ಟಶಕ್ತಿಯ ವಿರುದ್ಧ ರಾಘವೇಂದ್ರ ಸ್ವಾಮಿಯ ಭಕ್ತೆ ಹೋರಾಡುವುದೇ ಈ ಧಾರಾವಾಹಿಯ ಕಥಾಹಂದರವಾಗಿದೆ.
ವಿಭಿನ್ನ ಕಥಾಹಂದರ ಹೊಂದಿದ್ದ ಈ ಧಾರಾವಾಹಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿತ್ತು. ಆದರೆ ದಿನ ಕಳೆದಂತೆ ಧಾರಾವಾಹಿ ತುಂಬಾ ನೀರಸವಾಗಿದ್ದು, ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಧಾರಾವಾಹಿ ತಂಡ ಶ್ರಮ ವಹಿಸಿದಷ್ಟು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಈ ಧಾರಾವಾಹಿ ಶೀಘ್ರದಲ್ಲೇ ಅಂತ್ಯವಾಗುವ ಸಾಧ್ಯತೆ ಇದೆ.

ಯಜಮಾನ ಹಾಗೂ ವಧು
ಬಿಗ್ ಬಾಸ್ ಕನ್ನಡ ಸೀಸನ್ 11ರ ಬಳಿಕ ಆರಂಭವಾದ ಯಜಮಾನ ಹಾಗೂ ವಧು ಧಾರಾವಾಹಿಗಳು ಪ್ರೇಕ್ಷಕರಿಗೆ ರುಚಿಸಲೇ ಇಲ್ಲ. ಕಾಂಟ್ರಾಕ್ಟ್ ಮದುವೆ ಹಾಗೂ ಡಿವೋರ್ಸ್ ಲಾಯರ್ ಕಥೆಯನ್ನು ಜನ ಅಷ್ಟರ ಮಟ್ಟಿಗೆ ಒಪ್ಪಿಕೊಂಡಿಲ್ಲ. ಹೊಸ ನಾಯಕ ನಾಯಕಿಯನ್ನು ಪರಿಚಯಿಸಿ ಕಾಂಟ್ರಾಕ್ಟ್ ಮದುವೆ ಎನ್ನುವ ಕಥಾಹಂದರದೊಂದಿಗೆ ಆರಂಭವಾದ ಯಜಮಾನ ಧಾರಾವಾಹಿ ಆರಂಭದ ಕೆಲ ವಾರಗಳಷ್ಟೇ ಇಂಟ್ರಸ್ಟಿಂಗ್ ಆಗಿದ್ದು, ದಿನಕಳೆದಂತೆ ಕಥೆ ನೀರಸವಾಯಿತು. ಧಾರಾವಾಹಿ ಆರಂಭದಲ್ಲೇ ಎಲ್ಲಾ ಕಥೆಗಳು ರಿವೀಲ್ ಆಗುತ್ತಿದ್ದು, ಈ ಧಾರಾವಾಹಿ ಕಡಿಮೆ ಸಂಚಿಕೆ ಪ್ರಸಾರಗೊಂಡು ಅಂತಿಮವಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ವಧು ಧಾರಾವಾಹಿ ಕಥೆ ಕೂಡ ಇದೇ ಆಗಿದ್ದು, ನಿರೀಕ್ಷಿಸಿದ ಮಟ್ಟಿಗೆ ಈ ಧಾರಾವಾಹಿಗಳು ಪ್ರೇಕ್ಷಕರನ್ನು ಸೆಳೆಯಲಿಲ್ಲ. ಹೀಗಾಗಿ ಒಟ್ಟಿಗೆ ಆರಂಭವಾದ ಈ ಧಾರಾವಾಹಿಗಳು ಶೀಘ್ರದಲ್ಲೇ ಅಂತ್ಯವಾಗುವ ಸಾಧ್ಯತೆ ಇದೆ.
ಮುದ್ದು ಸೊಸೆ ಆರಂಭ
ಬಿಗ್ ಬಾಸ್ ಕನ್ನಡ ಸೀಸನ್ 11 ರನ್ನರ್ ಅಪ್ ನಟ ತ್ರಿವಿಕ್ರಮ್ ಹಾಗೂ ಅಂತರಪಟ ಧಾರಾವಾಹಿಯಲ್ಲಿ ನಾಯಕಿಯ ತಂಗಿ ಪಾತ್ರ ಮಾಡುತ್ತಿದ್ದ ನಟಿ ಪ್ರತಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮುದ್ದು ಸೊಸೆ ಧಾರಾವಾಹಿ ಸದ್ಯದಲ್ಲೇ ಆರಂಭವಾಗಲಿದೆ. ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್ ಆಗಿದೆ. ಡಾಕ್ಟರ್ ಆಗಬೇಕು ಎಂದುಕೊಂಡಿರುವ ಪುಟ್ಟ ಹುಡುಗಿಯ ಮದುವೆಯ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೋಮೋ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದು, ಮುದ್ದು ಸೊಸೆಯ ಕಥೆಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ. ಆದರೆ ಧಾರಾವಾಹಿ ಪ್ರಾರಂಭವಾಗುವ ದಿನಾಂಕ ಹಾಗೂ ಸಮಯವನ್ನು ಈವರೆಗೂ ಧಾರಾವಾಹಿ ತಂಡ ಬಹಿರಂಗ ಪಡಿಸಿಲ್ಲ. ಸದ್ಯ ಲಕ್ಷ್ಮಿ ಬಾರಮ್ಮ ಧಾರಾವಾಹಿ ಅಂತ್ಯವಾಗುವ ಕಾರಣ ಮುದ್ದು ಸೊಸೆ ಈ ಧಾರಾವಾಹಿಯ ಸಮಯದಲ್ಲಿಯೇ ಪ್ರಸಾರವಾಗುವ ಸಾಧ್ಯತೆ ಇದೆ.












Click it and Unblock the Notifications