ಕೈ ಹಿಡಿಯಲಿಲ್ಲ 'ಅಭಿ'ನಯ, ಸಿನಿಮಾ ಅವಕಾಶಗಳಿಲ್ಲದೆ ಕೂಲಿ ಮಾಡುತ್ತಿರುವ "ತಿಥಿ" ಹೀರೋ
ಸಿನಿಮಾ ಎನ್ನುವ ಬಣ್ಣದ ಜಗತ್ತೇ ಹೀಗೆ.. ಕಲಾವಿದರ ಬದುಕನ್ನು ಕೈಹಿಡಿದು ನಡೆಸುವುದು ಮಾತ್ರವಲ್ಲ, ಅದೃಷ್ಟ ಕೈಹಿಡಿಯದಿದ್ರೆ ಎಂತಹ ಪ್ರತಿಭೆ ಇದ್ದರೂ, ಜನಪ್ರಿಯತೆ ಸಿಕ್ಕರೂ ಕಲಾವಿದರ ಬದುಕು ಬೀದಿಗೆ ಬರುತ್ತದೆ. ಇಂತಹ ಏರಿಳಿತವನ್ನು ಈಗಾಗಲೇ ಹಲವು ಕಲಾವಿದರ ಬದುಕಲ್ಲಿ ನಾವೆಲ್ಲ ನೋಡಿದ್ದೇವೆ. ಇನ್ನು ರಾಷ್ಟ್ರಪ್ರಶಸ್ತಿ ಪಡೆದಿದ್ದ ಕನ್ನಡ "ತಿಥಿ" ಸಿನಿಮಾದ ನಾಯಕ ನಟ "ಅಭಿ" ಯಾವುದೇ ಸಿನಿಮಾ ಅವಕಾಶಗಳಿಲ್ಲದೆ ಹೊಟ್ಟೆಪಾಡಿಗಾಗಿ ಈಗ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ..?
2015ರಲ್ಲಿ ತೆರೆಕಂಡಿದ್ದ "ತಿಥಿ" ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ? ರಾಮ್ ರೆಡ್ಡಿ ನಿರ್ದೇಶಿಸಿದ್ದ ಈ ಸಿನಿಮಾದ ನಾಯಕನಾಗಿ ಅಭಿಷೇಕ್ ಎಚ್.ಎನ್ (ಅಭಿ) ತನ್ನ ವಿಶೇಷ ಅಭಿನಯದಿಂದ ಕರ್ನಾಟಕದ ಮನೆಮಾತಾಗಿದ್ದರು. ಅಲ್ಲದೆ ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತು. ಒಂದಲ್ಲ ಎರಡಲ್ಲ, 14ಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿಗಳನ್ನು ಈ ಸಿನಿಮಾದ ಮುಡಿಗೇರಿತು.

ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಾಗಿದ್ದ ಗಡ್ಡಪ್ಪ, ಸೆಂಚುರಿ ಗೌಡ ಇಂದಿಗೂ ಚಿರಪರಿಚಿತ. ಈಗಿನ ಟ್ರೋಲ್ ಪೇಜ್‌ಗಳಲ್ಲಿ ಹಾಗೂ ಮೀಮ್‌ಗಳಲ್ಲಿ ಗಡ್ಡಪ್ಪ, ಸೆಂಚುರಿ ಗೌಡ ರಾರಾಜಿಸುತ್ತಲೇ ಇದ್ದಾರೆ. ಆದರೆ, ಈ ಸಿನಿಮಾದ ನಾಯಕ ಅಭಿಯ ಕಥೆ ಹೀಗಾಗಲಿಲ್ಲ. ತಿಥಿ ಸಿನಿಮಾ ಹಿಟ್ ಆಗಿದ್ದ ಜೋಶ್‌ನಲ್ಲಿ ಇನ್ನೆರಡು ಸಿನಿಮಾಗಳಲ್ಲಿ ನಟಿಸುವ ಅವಕಾಶವೇನೋ ಅಭಿಗೆ ಸಿಕ್ಕಿತು. ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ನಾಯಕ ಕಾಲಿಟ್ಟ ಎಂದೇ ಆಗ ಚರ್ಚೆಗಳಾಗಿದ್ದವು. ಆದರೆ ವಿಧಿಯಾಟ ಬೇರೆಯೇ ಆಗಿತ್ತು.
ಹೀಗೆಲ್ಲ ಒಂದು ಸಣ್ಣ ಪಾತ್ರ ಮಾಡಿದರೂ ಕೆಲವರಿಗೆ ಅದೃಷ್ಟ ಖುಲಾಯಿಸಿಬಿಡುತ್ತೆ. ಹೇಗಿದ್ದ? ಹೇಗಾದ? ಎನ್ನುವಂತಹ ಬದಲಾವಣೆಗಳಿಗೆ ಈಗಾಗಲೇ ಹಲವು ಕಲಾವಿದರು ಸಾಕ್ಷಿಯಾಗಿದ್ದಾರೆ. ಆದರೆ ತಿಥಿಯಂತಹ ಸಿನಿಮಾದಲ್ಲಿ ನಾಯಕ ನಟನಾದರೂ ಅಭಿಗೆ ಅದೃಷ್ಟ ಅನ್ನೋದು ಕೈಹಿಡಿಯಲಿಲ್ಲ. ಹಲವು ವರ್ಷಗಳಿಂದ ಅಭಿ ಸಿನಿಮಾರಂಗದಿಂದ ದೂರವೇ ಸರಿದುಬಿಟ್ಟರು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಅಭಿ ಪ್ರತ್ಯಕ್ಷರಾಗಿದ್ದಾರೆ. ಆದರೆ ಅಭಿ ಕಾಣಿಸಿಕೊಂಡಿದ್ದ ತಿಥಿ ಸಿನಿಮಾದ ಹೀರೋ ಆಗಿ ಅಲ್ಲ, ಬದಲಾಗಿ ಹೊಟ್ಟೆಪಾಡಿಗೆ ಕೂಲಿ ಕೆಲಸ ಮಾಡುತ್ತಿರುವ ಒಬ್ಬ ಸಾಮಾನ್ಯನಾಗಿ..
ಹೌದು, ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಹಳ್ಳಿಯೊಂದರಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಅಭಿಯನ್ನು ಒಬ್ಬರು ಗುರುತು ಹಿಡಿದು ಮಾತನಾಡಿಸಿದ್ದಾರೆ. ಆಗ ಅಭಿ ಅಸಲಿ ವಿಚಾರವನ್ನು ಹೇಳಿಕೊಂಡಿದ್ದಾರೆ. ಸುಣ್ಣದ ಕೊಪ್ಪಲು ಅಭಿ ಎಂದು ಪರಿಚಯ ಮಾಡಿಕೊಂಡಿರುವ ನಟ, ಮೂರು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದೆ. ಏನಂತ ಮಾತನಾಡಲಿ ಹೇಳಪ್ಪ? ಯಾವುದೇ ಸಿನಿಮಾ ಆಫರ್‌ಗಳು ಬರಲಿಲ್ಲ, ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದೇನೆ. ಮರ ತುಂಬುವ ಕೆಲಸ ಇತ್ತು ಬಂದಿದ್ದೀನಿ ಎಂದು ನಗುತ್ತಲೇ ಮಾತನಾಡಿದ್ದಾರೆ.
ರಿಯಾಲಿಟಿ ಶೋಗಳಲ್ಲಿ ಚಾನ್ಸ್ ಕೊಡಿ
ಕನ್ನಡ ಚಿತ್ರರಂಗದ ಸ್ಟಾರ್ ಆಗಿ ಕಾಣಿಸಿಕೊಂಡಿದ್ದ ಉದಯೋನ್ಮುಖ ಪ್ರತಿಭೆ ಅಭಿ ಸ್ಥಿತಿ ಹೀಗೆ ಆಗಬಾರದಿತ್ತು. ಬಿಗ್‌ಬಾಸ್‌ನಂತಹ ರಿಯಾಲಿಟಿ ಶೋಗಳು ಇಂತಹವರಿಗೆ ವೇದಿಕೆಯಾಗಬೇಕು, ಕೆಲವರಿಗೆ ಪದೇ ಪದೇ ರಿಯಾಲಿಟಿ ಶೋಗಳಲ್ಲಿ ಅವಕಾಶಗಳನ್ನು ನೀಡಲಾಗುತ್ತಿದೆ. ಕೆಲಸಕ್ಕೆ ಬಾರದ, ಪ್ರತಿಭೆಯಿಲ್ಲದವರಿಗೆ ಏನೇನೋ ಅದೃಷ್ಟ ಒಲಿಯುತ್ತಿದೆ. ಅಭಿಯಂತಹ ಹಳ್ಳಿಗಾಡಿನ ಪ್ರತಿಭೆಗಳು ರಿಯಾಲಿಟಿ ಶೋ ಆಯೋಜಕರ ಕಣ್ಣಿಗೆ ಕಾಣಲ್ವ? ಎಂದು ಕಾಮೆಂಟ್ ಮಾಡಿದ್ದಾರೆ. ಅಭಿ ಮತ್ತೆ ಬಣ್ಣದ ಲೋಕಕ್ಕೆ ಮರಳಬೇಕು ಎಂದು ಆಸೆ ಬಿಚ್ಚಿಟ್ಟಿದ್ದಾರೆ.












Click it and Unblock the Notifications