Nisha Yogeshwar: ದರ್ಶನ್ ಜೊತೆ ನಟಿಸಬೇಕಿದ್ದ ನಿಶಾ ಯೋಗೇಶ್ವರ್; ಅವಕಾಶ ತಪ್ಪಿಸಿದ್ದು ಯಾರು?
ಚನ್ನಪಟ್ಟಣ ಉಪಚುನಾವಣೆ ಅಖಾಡ ರಂಗೇರಿದೆ. ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಸಿ.ಪಿ. ಯೋಗೇಶ್ವರ್ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮೂರು ಪಕ್ಷಗಳಿಗೆ ಇದು ಪ್ರತಿಷ್ಟೆಯ ಕಣವಾಗಿದ್ದು ಭಾರಿ ಕುತೂಹಲ ಕೆರಳಿಸಿದೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಗಳಾದ ನಿಶಾ ಯೋಗೇಶ್ವರ್ ತಮ್ಮ ತಂದೆಯ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಸಿಪಿ ಯೋಗೇಶ್ವರ್ ಮತ್ತು ಮಗಳು ನಿಶಾ ಯೋಗೇಶ್ವರ್ ನಡುವೆ ವೈಮನಸ್ಸು ಮೂಡಿದೆ. ತನ್ನ ಬೆಳವಣಿಗೆಗೆ ತಂದೆಯೇ ಅಡ್ಡಿಯಾಗಿದ್ದಾರೆ ಎಂದು ನಿಶಾ ಯೋಗೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕೀಯಕ್ಕೆ ಬರದಂತೆ ತಡೆದರು, ಸಮಾಜ ಸೇವೆ ಮಾಡಲು ಕೂಡ ಅಡ್ಡಿಯಾದರು, ವಿದ್ಯಾಭ್ಯಾಸ ಮಾಡಲು ಅಡ್ಡಿಯಾಗಿದ್ದರು ಎಂದು ತಂದೆಯ ವಿರುದ್ಧವೇ ಆರೋಪಿಸಿದ್ದಾರೆ. ಯಾವ ಕ್ಷೇತ್ರದಲ್ಲೂ ನನ್ನನ್ನು ಬೆಳೆಯಲು ಬಿಡುತ್ತಿಲ್ಲ, ಈಗ ನೆಮ್ಮದಿಯಾಗಿ ಇರಲು ಆಗುತ್ತಿಲ್ಲ, ಎಲ್ಲಾ ಸತ್ಯಗಳನ್ನು ಹೊರತರುತ್ತೇನೆ ಎಂದು ಹೇಳಿದ್ದಾರೆ.

ಸಿಪಿ ಯೋಗೇಶ್ವರ್ ರಾಜಕೀಯಕ್ಕೆ ಬರುವ ಮೊದಲು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸೈನಿಕ ಸಿನಿಮಾ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ತಂದೆಯಂತೆ ತಾನೂ ಕೂಡ ಸಿನಿಮಾ ರಂಗಕ್ಕೆ ಬರಬೇಕು ಎನ್ನುವುದು ಮಗಳ ಕನಸಾಗಿತ್ತು. ಆದರೂ ಅವರ ಕನಸು ಈಡೇರಲಿಲ್ಲ.
ದರ್ಶನ್ ಜೊತೆ ನಟಿಸಬೇಕಿತ್ತು
ನಟ ದರ್ಶನ್ ಅಭಿನಯದ ಅಂಬರೀಶ ಸಿನಿಮಾದಲ್ಲಿ ನಟಿಸಲು ನಿಶಾ ಯೋಗೇಶ್ವರ್ ಅವರಿಗೆ ಅವಕಾಶ ಸಿಕ್ಕಿತ್ತು. ನಿಶಾ ಯೋಗೇಶ್ವರ್ ಕೂಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಅಪ್ಪನ ಸಿನಿಮಾ 'ಸೈನಿಕ' ನಿರ್ದೇಶಕ ಮಹೇಶ್ ಸುಖಧರೆ ಅವರೇ ಅಂಬರೀಶ ಸಿನಿಮಾಗೂ ನಿರ್ದೇಶನ ಮಾಡುತ್ತಿದ್ದರು. ಖುಷಿಯಿಂದಲೇ ನಿಶಾ ಈ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದರು. ಆದರೆ ನಿಶಾ ಅವರ ಅದೃಷ್ಟ ಕೈಕೊಟ್ಟಿತ್ತು, ಸಿನಿಮಾ ಮುಹೂರ್ತ ಆದ ಬಳಿಕ, ನಿಶಾ ಕಾಲಿಗೆ ಪೆಟ್ಟಾಗಿತ್ತು, ಎರಡು ತಿಂಗಳು ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದರು.
ಚಿತ್ರತಂಡ ಅದಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರಿಂದ ಎರಡು ತಿಂಗಳು ಕಾಯಲು ಸಿದ್ದರಿರಲಿಲ್ಲ. ಬಳಿಕ ಈ ಅವಕಾಶ ರಚಿತಾ ರಾಮ್ ಪಾಲಾಯಿತು. ಹಾಗಾಗಿ ನಿಶಾ ಯೋಗೇಶ್ವರ್ ಅವರಿಗೆ ದರ್ಶನ್ ಜೊತೆ ನಟಿಸುವ ಅವಕಾಶ ತಪ್ಪಿ ಹೋಯಿತು. ಅದಾದ ಬಳಿಕ ತೆಲುಗಿನ 'ಶ್ರೀರಾಮರಕ್ಷ' ಎನ್ನುವ ಸಿನಿಮಾದಲ್ಲಿ ಅಭಿನಯಿಸಿದರೂ ಆ ಸಿನಿಮಾಗೆ ಬಿಡುಗಡೆ ಭಾಗ್ಯ ಸಿಗಲಿಲ್ಲ.












Click it and Unblock the Notifications