The Kerala Story: ಒಟಿಟಿಗೆ ಬರಲು ಸಿದ್ಧವಾಯ್ತು ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ
ಮುಂಬೈ, ಫೆಬ್ರವರಿ 07: ಕಳೆದ ವರ್ಷ ಭಾರಿ ವಿವಾದಕ್ಕೆ ಕಾರಣವಾದ ಸಿನಿಮಾಗಳಲ್ಲಿ ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಕೂಡ ಒಂದು. ಟ್ರೈಲರ್‌ನಿಂದಲೇ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಸಿನಿಮಾ ಬಿಡುಗಡೆಯಾದ ನಂತರ ಸಾಕಷ್ಟು ಸದ್ದು ಮಾಡಿತ್ತು. ವಿರೋಧ ಮತ್ತು ಟೀಕೆಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಈಗ ಈ ಸಿನಿಮಾ ಒಟಿಟಿಗೆ ಬರಲು ಸಿದ್ಧವಾಗಿದೆ.
ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿಯೇ ಒಟಿಟಿಗೆ ಬರುತ್ತಿದೆ ಎನ್ನಲಾಗಿದ್ದ 'ದಿ ಕೇರಳ ಸ್ಟೋರಿ' ಊಹಾಪೋಹಗಳ ಬಳಿಕ ಕೊನೆಗೂ ಒಟಿಟಿ ಬಿಡುಗಡೆಯನ್ನು ಧೃಡಪಡಿಸಿದೆ. ಒಟಿಟಿ ಫ್ಲಾಟ್‌ಫಾರ್ಮ್ Zee5 ನಲ್ಲಿ ಫೆಬ್ರವರಿ 16 ರಿಂದ 'ದಿ ಕೇರಳ ಸ್ಟೋರಿ' ಸ್ಟ್ರೀಮ್ ಆಗಲಿದೆ. ಈ ಬಗ್ಗೆ ಚಿತ್ರ ತಂಡ ಮತ್ತು ನಟಿ ಅದಾ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.

'ದಿ ಕೇರಳ ಸ್ಟೋರಿ'
ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದ ಮತ್ತು ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ 'ದಿ ಕೇರಳ ಸ್ಟೋರಿ' ಚಲನಚಿತ್ರವು ಮೇ 5, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 'ದಿ ಕೇರಳ ಸ್ಟೋರಿ' 2023 ರ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಅಚ್ಚರಿ ಎಂಬಂತೆ ಬಾಕ್ಸ್ ಆಫೀಸ್‌ನಲ್ಲಿ 242.20 ಕೋಟಿ ಗಳಿಸಿತು.
ನಟಿ ಅದಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಇ ಖುಷಿಯನ್ನು ಹಂಚಿಕೊಂಡಿದ್ದಾರೆ. "ಫೈನಲಿ.. !!!!! ಆಶ್ಚರ್ಯ!! ZEE5 ನಲ್ಲಿ ಬಹು ನಿರೀಕ್ಷಿತ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ! ದಿ ಕೇರಳ ಸ್ಟೋರಿ ಫೆಬ್ರವರಿ 16 ರಂದು ಪ್ರೀಮಿಯರ್ ಆಗಿದೆ. ಕೇವಲ ZEE5 ನಲ್ಲಿ ಮಾತ್ರ" ಎಂದಿದ್ದಾರೆ. ಜೊತೆಗೆ #TheKeralaStoryOnZEE5 #VipulAmrutlalShah #Save Our Daughters ಎಂಬ ಹ್ಯಾಶ್ ಟ್ಯಾಗ್‌ಗಳನ್ನು ಬಳಸಿದ್ದಾರೆ.
ಚಿತ್ರರಂಗದ ವಿರುದ್ಧ ಕಿಡಿಕಾರಿದ್ದ ದಿ ಕೇರಳ ಸ್ಟೋರಿ ನಿರ್ದೇಶಕ!
ಸಿನಿಮಾ ಹಿಟ್ ಆದರೂ ಕೂಡ ನಿರ್ದೇಶಕ ಸುದೀಪ್ತೋ ಸೇನ್ ಚಿತ್ರರಂಗದ ವಿರುದ್ಧ ಕಿಡಿಕಾರಿದ್ದರು. ಈ ಹಿಂದೆ ಜೂನ್ 2023 ರಲ್ಲಿ ಒಟಿಟಿ ಬಿಡುಗಡೆ ಬಗ್ಗೆ ಮಾತನಾಡಿದ್ದ ಅವರರು, ಯಾವುದೇ OTT ಪ್ಲಾಟ್‌ಫಾರ್ಮ್‌ಗಳಿಂದ ಒಳ್ಳೆ ಆಫರ್‌ಗಳು ಬಂದಿಲ್ಲ ಎಂದು ಹೇಳಿದ್ದರು. ಜೊತೆಗೆ ಚಿತ್ರರಂಗ ತನ್ನ ವಿರುದ್ಧ ಗುಂಪುಗೂಡಿದೆ ಎಂದು ಆರೋಪಿಸಿದ್ದರು.

ಸುದೀಪ್ತೋ ಸೇನ್ ರೆಡಿಫ್‌ಗೆ ನೀಡಿದ್ದ ಸಂದರ್ಶನದಲ್ಲಿ, "ಇಲ್ಲಿಯವರೆಗೆ, ಪರಿಗಣಿಸಲು ಯೋಗ್ಯವಾದ ಯಾವುದೇ ಪ್ರಸ್ತಾಪ ಬಂದಿಲ್ಲ. ಚಿತ್ರರಂಗವು ನಮ್ಮನ್ನು ಶಿಕ್ಷಿಸಲು ಗುಂಪುಗೂಡಿದೆ ಎಂದು ತೋರುತ್ತದೆ" ಎಂದಿದ್ದರು. ಇದಕ್ಕೆ ಕಾರಣವೇನು ಎಂದು ಕೇಳಿದಾಗ, "ನಮ್ಮ ಸಿನಿಮಾದ ಗಲ್ಲಾಪೆಟ್ಟಿಗೆಯ ಯಶಸ್ಸು ಚಿತ್ರರಂಗದ ಅನೇಕ ವಿಭಾಗಗಳನ್ನು ಕೆರಳಿಸಿದೆ. ನಮ್ಮ ಯಶಸ್ಸಿಗಾಗಿ ಮನರಂಜನಾ ಉದ್ಯಮದ ಒಂದು ಗ್ಯಾಂಗ್ ನಮ್ಮನ್ನು ಶಿಕ್ಷಿಸಲು ಒಗ್ಗೂಡಿದೆ ಎಂದು ಅನ್ನಿಸುತ್ತಿದೆ" ಎಂದಿದ್ದರು.
ಒಟಿಟಿ ಬಿಡುಗಡೆ ಬಗ್ಗೆ ಮಾತನಾಡಿದ್ದ ಅವರು, "ಇನ್ನೂ ಚಲನಚಿತ್ರವನ್ನು ವೀಕ್ಷಿಸದವರಿಗೆ ಒಂದು ಅನುಭವಕ್ಕಾಗಿ ZEE5 ನಲ್ಲಿ ಕೇರಳ ಕಥೆಯನ್ನು ವೀಕ್ಷಿಸಲು ನಾನು ಒತ್ತಾಯಿಸುತ್ತೇನೆ. ಅನೇಕರು ಪರಿಸ್ಥಿತಿಯ ವಾಸ್ತವತೆಯ ಬಗ್ಗೆ ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ಅಂತಹ ಕತ್ತಲನ್ನು ಅವರ ತಲೆಯಿಂದ ಈ ಸಿನಿಮಾ ಹೋಗಲಾಡಿಸುತ್ತದೆ. ಚಿತ್ರದಲ್ಲಿನ ಕಥೆಗಳು ನಿಜವಾಗಿರುವುದರಿಂದ ಅವರಿಗೆ ಸತ್ಯವನ್ನು ತೋರಿಸುತ್ತದೆ. ಚಿತ್ರದಲ್ಲಿನ ಪಾತ್ರಗಳ ಭವಿಷ್ಯ ಮತ್ತು ಪರಿಣಾಮಗಳು ನಿಜ. ಈ ಚಲನಚಿತ್ರ ವೀಕ್ಷಕರಿಗೆ ವಿಶಿಷ್ಟವಾದ ಸಿನಿಮೀಯ ಅನುಭವವಾಗಿದೆ." ಎಂದಿದ್ದಾರೆ.
'ದಿ ಕೇರಳ ಸ್ಟೋರಿ' ವಿವಾದ
'ದಿ ಕೇರಳ ಸ್ಟೋರಿ' ಟ್ರೈಲರ್ ಬಿಡುಗಡೆಯಾದಾಗಿನಿಂದ ವಿವಾದದಲ್ಲಿತ್ತು. ಚಿತ್ರದ ಟ್ರೇಲರ್ ಕೇರಳದಿಂದ 32,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು, ಆದರೆ ಅನೇಕರು ಅಂದಾಜು ಅಂಕಿಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು 'ವಿಕೃತ ಕಥೆ' ಎಂದು ಕರೆದಿದ್ದರು. ರಾಜ್ಯದಲ್ಲಿ ಚಲನಚಿತ್ರದ ಮೇಲೆ ನಿಷೇಧ ವಿಧಿಸಿದ್ದರು.











Click it and Unblock the Notifications