ಸುಧೀರ್ ಮಕ್ಕಳು ನನ್ನನ್ನು ಮದುವೆಗೆ ಕರೆಯಲೇ ಇಲ್ಲ: ನೋವು ತೋಡಿಕೊಂಡ ಹಿರಿಯ ನಟ
ಬೆಂಗಳೂರು, ಆಗಸ್ಟ್ 29: ಸದ್ಯ ಕನ್ನಡ ಚಿತ್ರರಂಗದಲ್ಲಿ ಟ್ರೆಂಡಿಂಗ್‌ನಲ್ಲಿರುವ ಜೋಡಿ ಎಂದರೆ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ. ಈ ತಾರಾ ಜೋಡಿ ಇತ್ತೀಚಿಗಷ್ಟೇ ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ತರುಣ್ ಸುಧೀರ್ ಮದುವೆಗೆ ಕನ್ನಡ ಚಿತ್ರರಂಗದ ತಾರಾ ಬಳಗವೇ ಹರಿದುಬಂದಿತ್ತು. ಆದರೆ ಹಿರಿಯ ನಟರೊಬ್ಬರು ನಾನು ಈ ಹಿಂದೆ ಎಷ್ಟೇ ಸಹಾಯ ಮಾಡಿದರೂ ಸುಧೀರ್ ಮಕ್ಕಳು ನನ್ನನ್ನು ಮದುವೆಗೆ ಕರೆಯಲೇ ಇಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಟ ಸುಧೀರ್ ಅವರ ಆಪ್ತ ಹಿರಿಯ ನಟ, ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಈ ಮಾತುಗಳನ್ನು ಆಡಿದ್ದು, ಸುದ್ದಿ ಮನೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮಗಾದ ನೋವನ್ನು ತೋಡಿಕೊಂಡಿದ್ದಾರೆ. ಅಲ್ಲದೇ ನಟ ಸುಧೀರ್ ಅವರ ಮಕ್ಕಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

'ಒಂದು ಕಾಲದಲ್ಲಿ ನಾನು ಸಿನಿಮಾನೂ ಮಾಡುತ್ತಿದ್ದೆ ಜೊತೆಗೆ ನಾಟಕ ಕಂಪನಿಗಳು ಉಳಿಯಬೇಕು ಎಂದು ಕಂಪನಿಗಳಿಗೆ ಕೆಲಸ ಮಾಡುತ್ತಿದೆ. ನಮ್ಮ ಸುಧೀರಣ್ಣ ಅವರ ಕಂಪನಿಗೂ ನಾನು ಬಹಳಷ್ಟು ದುಡಿದಿದ್ದೇನೆ. ಅವರು ಕೊಟ್ಟಷ್ಟು ಹಣ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ಎಂದೂ ನಾನು ಅವರ ಮುಂದೆ ಇಷ್ಟೇ ಬೇಕು ಅಂತಾ ಸಂಬಳದ ಬೇಡಿಕೆ ಇಟ್ಟಿಲ್ಲ. ಕೊಟ್ಟಷ್ಟು ಹಣ ತೆಗೆದುಕೊಂಡು ಕೆಲಸ ಮಾಡಿದ್ದೇನೆ.'
'ಅವರ ಇಬ್ಬರು ಮಕ್ಕಳೂ ಕೂಡ ಈಗ ದೊಡ್ಡ ನಿರ್ದೇಶಕರಾಗಿದ್ದಾರೆ. ತುಂಬಾ ಖುಷಿ ಆಯ್ತು. ಅವರ ತಾಯಿ, ಸುಧೀರ್ ಅವರು ತೀರಿಕೊಂಡ ಮೇಲೆ ನಾಟಕದ ಕಂಪನಿ ಬಂದ್ ಮಾಡಬಾರದು ಎಂದು ನಡೆಸುತ್ತಿದ್ದರು. ಈ ವೇಳೆ ನಿಮಗೆ ಸಮಯ ಇದ್ದಾಗ ದಯವಿಟ್ಟು ಡೇಟ್ ಕೊಡಿ ಎಂದು ಕೇಳಿಕೊಂಡಿದ್ದರು ನಾನು ಕೂಡ ಒಪ್ಪಿಕೊಂಡಿದ್ದೆ. ಅಲ್ಲದೇ ನನ್ನ ಮಕ್ಕಳಿಗೆ ಯಾವುದಾದರೂ ಸಿನಿಮಾ ಹೇಳಿ ಅಂದಿದ್ದರು ಅವರ ಮಾತಿಗೆ ಗೌರವ ಕೊಟ್ಟಿದ್ದೇನೆ' ಎಂದರು.

'ಅದರ ಮುಂದಿನ ವಾರವೇ ನಾನು ಕಾರು ತೆಗೆದುಕೊಂಡು ಅವರ ಮನೆ ಹತ್ತಿರ ಹೋಗಿ ಮೂಹರ್ತಕ್ಕೆ ಕರೆದುಕೊಂಡು ಹೋಗಿ ನಿರ್ದೇಶಕರಿಗೆ, ನಿರ್ಮಾಪಕರಿಗೆ, ಮ್ಯಾನೇಜರ್‌ಗಳಿಗೆ ಎಲ್ಲರಿಗೂ ಪರಿಚಯ ಮಾಡಿಸಿ ಮ್ಯಾನೇಜರ್ ನಂಬರ್ ಕೊಡಿಸಿ ಬಂದಿದ್ದೀನಿ. ನಂದ ಕಿಶೋರ್‌ಗೆ ಎರಡು ಸಿನಿಮಾದಲ್ಲಿ ಪಾತ್ರ ಮಾಡಿಸಿದ್ದೇನೆ'.
'ದೊಡ್ಡವನಿಗೆ ಪುಟ್ಟು ಎನ್ನುತ್ತೇವೆ. ಚಿಕ್ಕವನಿಗೆ ಚಿನ್ನು ಎನ್ನುತ್ತೇವೆ. ಈಗ ಇಬ್ಬರೂ ದೊಡ್ಡ ಡೈರೆಕ್ಟರ್ ಆಗಿದ್ದಾರೆ ತುಂಬಾ ಖುಷಿ ಆಗುತ್ತದೆ. ಆದರೆ ಅವರು ತರುಣ್ ಮದುವೆಗೆ ನನ್ನನ್ನು ಕರೆಯಲೇ ಇಲ್ಲ. ಯಾಕೆ..? ಅವರು ನನ್ನನ್ನು ಮದುವೆಗೆ ಯಾಕೆ ಕರೆದಿಲ್ಲ ಎನ್ನುವುದು ನನ್ನ ಪ್ರಶ್ನೆ. ಎಲ್ಲಾ ನನ್ನ ಕೇಳಿದರು ಯಾಕೆ ಮದುವೆಗೆ ಬರಲಿಲ್ಲ ಅಂತಾ..? ನನ್ನನ್ನು ಕರೆಯಲೇ ಇಲ್ಲಾ ಅಂತಾ ಉತ್ತರ ಕೊಟ್ಟೆ. ನೀವು ಕೆಲಸ ಕೊಡದಿದ್ದರು ಬೇಸರ ಇಲ್ಲ. ಒಂದು ಫೋನ್ ಮಾಡಿದ್ದರೂ ಸಾಕಿತ್ತು. ನಮ್ಮ ಸಿನಿಮಾದಲ್ಲಿ ನಿಮಗೆ ಸರಿಹೊಂದುವ ಪಾತ್ರ ಇಲ್ಲ. ತಪ್ಪಾಗಿ ತಿಳಿಬೇಡಿ ಮದುವೆಗೆ ಬನ್ನಿ ಎಂದಿದ್ದರೆ ಖಂಡಿತಾ ಬರುತ್ತಿದ್ದೆ' ಎಂದು ಟೆನ್ನಿಸ್ ಕೃಷ್ಣ ಬೇಸರ ತೋಡಿಕೊಂಡಿದ್ದಾರೆ.












Click it and Unblock the Notifications