Vishal: ಮತ್ತೆ ನಡುಗಿತು ನಟ ವಿಶಾಲ್ ಕೈ, ಆರೋಗ್ಯ ಇನ್ನೂ ಸುಧಾರಿಸಿಲ್ವಾ?
ತಮಿಳು ನಟ ವಿಶಾಲ್ ಅವರು ಅನಾರೋಗ್ಯದ ಹಿನ್ನೆಲೆ ಇತ್ತೀಚೆಗೆ ಸಖತ್ ಸುದ್ದಿಯಾಗಿದ್ದರು. ಅವರು ವೈರಲ್ ಫೀವರ್‌ನಿಂದ ಬಳಲಿದ ಕಾರಣ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅವರ ಕೈ ಬಹಳ ನಡುಗುತ್ತಿತ್ತು. ಈ ವಿಚಾರವಾಗಿ ವಿಶಾಲ್ ಅವರ ಬಗ್ಗೆ ಬಹಳ ಟ್ರೋಲ್ ಕೂಡ ಮಾಡಲಾಗಿತ್ತು. ಸದ್ಯ ವಿಶಾಲ್ ಅವರ ಆರೋಗ್ಯ ಸುಧಾರಿಸಿದ್ದು, ತಮ್ಮ ಮೇಲಿನ ಟ್ರೋಲ್‌ಗಳಿಗೆ ಕೌಂಟರ್ ನೀಡಿದ್ದಾರೆ.
ನಟ ವಿಶಾಲ್ ಅವರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಹಲವು ವದಂತಿಗಳು ಕೂಡ ಹಬ್ಬಿದ್ದವು. ವಿಶಾಲ್ ಮಾದಕ ವಸ್ತುಗಳನ್ನು ಸೇವಿಸುವ ಕಾರಣದಿಂದ ಅವರ ಕೈ ನಡುಗಿತ್ತು ಎಂದೆಲ್ಲ ಗಾಸಿಪ್ ಹಬ್ಬಿಸಿದ್ದರು. ತಮ್ಮ ಮೇಲಿನ ಎಲ್ಲ ಟ್ರೋಲ್‌ಗಳ ಬಗ್ಗೆ ವಿಶಾಲ್ ಅವರು ಖುದ್ದಾಗಿ ಬಂದು ತಿರುಗೇಟು ಕೊಟ್ಟಿದ್ದಾರೆ.

ಮದಗಜರಾಜ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ವಿಶಾಲ್ ತಮ್ಮ ಮೇಲಿನ ಟ್ರೋಲ್‌ಗಳಿಗೆ ಸರಿಯಾಗಿ ಜಾಡಿಸಿದ್ದಾರೆ. ಮೊದಲಿಗೆ ಅಲ್ಲಿಯೂ ವಿಶಾಲ್ ಅವರ ಕೈ ನಡುಗಿತು. ಕೂಡಲೇ ಮತ್ತೊಂದು ಕೈಯಿಂದ ಮೈಕ್ ಹಿಡಿದುಕೊಂಡರು. ಅಯ್ಯೋ ಕೈ ನಡುಗುತ್ತಲೇ ಇದೆಯಲ್ಲ? ಮತ್ತೊಮ್ಮೆ ಯೂಟ್ಯೂಬ್‌ನಲ್ಲಿ ನನ್ನ ವಿಡಿಯೋ ವೈರಲ್ ಆಗಿಬಿಡುತ್ತದೆಯೇನೋ? ಎಂದು ವಿಶಾಲ್ ಜೋಕ್ ಮಾಡಿದ್ದಾರೆ. ವಿಶಾಲ್ ಬೇಕಂತಲೇ ಈ ಕಾರ್ಯಕ್ರಮದಲ್ಲಿ ಕೈನಡುಗಿಸಿ ಈ ರೀತಿ ತಮಾಷೆಯಾಗಿ ಟಕ್ಕರ್ ಕೊಟ್ಟರು. ನಾನು ಆರೋಗ್ಯವಾಗಿಯೇ ಇದ್ದೇನೆ. ಮೊದಲಿಗಿಂತಲೂ ಹೆಚ್ಚು ಉತ್ಸಾಹದಲ್ಲಿದ್ದೇನೆ ಎಂದಿದ್ದಾರೆ.
ಮೊದಲಿಗೆ ಮದಗಜರಾಜ ಸಿನಿಮಾದ ಕಾರ್ಯಕ್ರಮದಲ್ಲಿ ವಿಶಾಲ್ ಕಾಣಿಸಿಕೊಂಡಿದ್ದರು. ಅಲ್ಲಿ ವಿಶಾಲ್ ಅವರ ಮುಖದ ಹಾವಭಾವ ಕೂಡ ಬದಲಾಗಿತ್ತು. ವೈರಲ್ ಫೀವರ್ ಇದ್ದ ಕಾರಣ ಅವರ ಕೈ ಬಹಳ ನಡುಗುತ್ತಿತ್ತು. ಬಳಿಕ ಅವರು ಕೆಲದಿನಗಳ ಕಾಲ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದುಕೊಂಡು ಗುಣಮುಖರಾಗಿದ್ದರು. ಈ ವೇಳೆ ಅವರ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು.

ತಮ್ಮ ಬಗ್ಗೆ ಹರಿದಾಡುತ್ತಿರುವ ಅವರ ಅನಾರೋಗ್ಯದ ವದಂತಿಗಳನ್ನು ಅವರು ತಳ್ಳಿಹಾಕಿದ್ದು, ನಾನು ಆರೋಗ್ಯವಾಗಿದ್ದೇನೆ, ಮತ್ತೆ ಟ್ರ್ಯಾಕ್‌ಗೆ ಮರಳಿದ್ದೇನೆ. ಈ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಬೆಂಬಲಕ್ಕಾಗಿ ಕೃತಜ್ಞತೆಗಳು. ನನಗೆ ಒಂದು ವಿಷಯ ಗೊತ್ತಾಯಿತು, ನನ್ನನ್ನು ಎಷ್ಟು ಜನ ಪ್ರೀತಿಸುತ್ತಾರೆ? ಎಷ್ಟು ಮಂದಿ ನನ್ನನ್ನ ಹೃದಯದಿಂದ ಆಶೀರ್ವದಿಸಿದ್ದಾರೆ ಅನ್ನೋದು ತಿಳಿದುಕೊಂಡಿದ್ದೇನೆ. ನಾನು ಇನ್ನೂ ನೂರಾರು ಮೆಸೇಜ್‌ಗಳಿಗೆ ಉತ್ತರವನ್ನೇ ಕೊಡಲು ಆಗಲಿಲ್ಲ, ಎಲ್ಲರೂ ನನಗೆ ಬೇಗ ಚೇತರಿಸಿಕೊಂಡು ಬಾ ಎಂದೇ ಹಾರೈಸಿದ್ದರು ಎಂದು ವಿಶಾಲ್ ಹೇಳಿದ್ದರು.
ನನಗೆ ವೈರಲ್ ಫೀವರ್ ಮಾತ್ರ ಇತ್ತು, ಅದು ಎಲ್ಲರಿಗೂ ಸಹಜವಾಗಿ ಬರುತ್ತೆ. ಆದರೆ ನನಗೆ ಸ್ವಲ್ಪ ಜ್ವರ ಹೆಚ್ಚಾಗಿತ್ತು. ಆ ದಿನ ನಾನು ಬಹಳ ಸುಸ್ತಾಗಿದ್ದರಿಂದ ಮದಗಜರಾಜ ಕಾರ್ಯಕ್ರಮಕ್ಕೆ ಹೋಗದಂತೆ ನನ್ನ ಪೋಷಕರು ಹೇಳಿದ್ದರು. ಆದರೆ, ಅಂದು ನನಗೆ ಸಿನಿಮಾ ನಿರ್ದೇಶಕ ಸುಂದರ್ ಸಿ ಸರ್ ಮುಖ ಕಾಣಿಸಿತು. ಹಲವು ವರ್ಷಗಳಿಂದ ಕಾಯುತ್ತಿದ್ದ ಈ ಕಾರ್ಯಕ್ರಮವನ್ನು ಮಿಸ್ ಮಾಡಲೇಬಾರದು ಎಂಬ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದೆ ಎಂದು ಸ್ಪಷ್ಟನೆ ನೀಡಿದ್ದರು.












Click it and Unblock the Notifications