Vishal Health Update: ಅಂದು ವಿಶಾಲ್ ಕೈ ನಡುಗಿದ್ದೇಕೆ? ಎಲ್ಲದಕ್ಕೂ ಖುದ್ದು ಸ್ಪಷ್ಟನೆ ಕೊಟ್ಟ ನಟ
ತಮಿಳು ನಟ ವಿಶಾಲ್ ಅವರ ಅನಾರೋಗ್ಯ ಸಂಬಂಧ ಹಲವು ಗಾಳಿಸುದ್ದಿಗಳು ಹರಿದಾಡುತ್ತಿವೆ. ಮದಗಜರಾಜ ಸಿನಿಮಾ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿದ್ದ ಪರಿ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಬಳಿಕ ಅವರಿಗೆ ವೈರಲ್ ಫೀವರ್ ಇರುವುದು ದೃಢವಾಗಿತ್ತು. ಆದರೂ ವಿಶಾಲ್ ಬಗ್ಗೆ ಹಲವು ವದಂತಿಗಳ ಹರಿದಾಡಿದ್ದವು. ಸದ್ಯ ಈ ಎಲ್ಲದರ ಬಗ್ಗೆ ನಟ ವಿಶಾಲ್ ಅವರೇ ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ.
ನಿನ್ನೆ ಮದಗಜ ರಾಜ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ದಿಢೀರನೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾದ ನಟ ವಿಶಾಲ್, ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ಅವರ ಅನಾರೋಗ್ಯದ ವದಂತಿಗಳನ್ನು ಅವರು ತಳ್ಳಿಹಾಕಿದ್ದು, ನಾನು ಆರೋಗ್ಯವಾಗಿದ್ದು ಮತ್ತೆ ಟ್ರ್ಯಾಕ್‌ಗೆ ಮರಳಿದ್ದೇನೆ ಎಂದಿದ್ದಾರೆ.

ಈ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಬೆಂಬಲಕ್ಕಾಗಿ ಕೃತಜ್ಞತೆಗಳು ಎಂದಿದ್ದಾರೆ. ನನಗೆ ಒಂದು ವಿಷಯ ಗೊತ್ತಾಯಿತು. ನನ್ನನ್ನು ಎಷ್ಟು ಜನರು ಪ್ರೀತಿಸುತ್ತಾರೆ? ಹಾಗೂ ಎಷ್ಟು ಮಂದಿ ನನ್ನನ್ನು ಹೃದಯದಿಂದ ಆಶೀರ್ವದಿಸಿದ್ದಾರೆ ಎಂಬುದನ್ನು ಅರಿತುಕೊಂಡಿದ್ದೇನೆ. ನಾನು ಇನ್ನೂ 425 ಮೆಸೇಜ್‌ಗಳಿಗೆ ಉತ್ತರವನ್ನೇ ನೀಡಿಲ್ಲ. ಅವರೆಲ್ಲರೂ ನನಗೆ ಬೇಗ ಚೇತರಿಸಿಕೊಂಡು ಬಾ ಎಂದು ಆರೈಸಿದ್ದರು ಎಂದಿದ್ದಾರೆ.
ನನಗೆ ವೈರಲ್ ಫೀವರ್ ಮಾತ್ರವೇ ಇತ್ತು. ಅದು ಎಲ್ಲರಿಗೂ ಸಹಜವಾಗಿ ಬರುತ್ತದೆ. ಆದರೆ ಒಂದು ವಿಷಯವೆಂದರೆ ನನಗೆ ಸ್ವಲ್ಪ ಜ್ವರ ಹೆಚ್ಚಿನ ಮಟ್ಟಕ್ಕೆ ತಲುಪಿತ್ತು. ಅಂದು ನಾನು ನಿಜವಾಗಿಯೂ ಅಸ್ವಸ್ಥನಾಗಿದ್ದರಿಂದ ಮದಗಜರಾಜ ಕಾರ್ಯಕ್ರಮಕ್ಕೆ ಹೋಗಬೇಡ ಎಂದು ನನ್ನ ಪೋಷಕರು ಕೂಡ ಹೇಳಿದ್ದರು. ಆದರೆ, ಅಂದು ಕನ್ನಡಿಯಲ್ಲಿ ನನ್ನನ್ನು ನೋಡಿದಾಗ ಸಿನಿಮಾ ನಿರ್ದೇಶಕ ಸುಂದರ್ ಸಿ ಸರ್ ಮುಖ ಕಂಡಿತು. ನಾನು ಹಲವು ವರ್ಷಗಳಿಂದ ಕಾಯುತ್ತಿದ್ದ ಈ ಕಾರ್ಯಕ್ರಮವನ್ನು ಮಿಸ್ ಮಾಡಬಾರದು ಎಂದುಕೊಂಡೆ. ಹಾಗಾಗಿ ಕಾರ್ಯಕ್ರಮಕ್ಕೆ ಬಂದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಳಿಕ ಅಲ್ಲಿದ ಮಾಧ್ಯಮ ಪ್ರತಿನಿಧಿಗಳಿಗೆ ನಿಮ್ಮ ಪ್ರೀತಿಗೆ ನಾನು ಋಣಿ ಎಂದರು. ನಾನು ಕೂಡ ಈ ಪ್ರೀತಿಯ ಗುಲಾಮ. ಈ ರೀತಿಯ ಪ್ರೀತಿಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಮದಗಜರಾಜ ಪ್ರೆಸ್ ಮೀಟ್‌ನಿಂದ ಹೊರಬಂದ ಬಳಿಕ ಹಲವರು ನನಗೆ ಫೋನ್ ಹಾಗೂ ಮೆಸೇಜ್ ಮಾಡಿದ್ದರು. ಹಲವು ನನ್ನ ಆರೋಗ್ಯ ಕ್ಷೇಮ ವಿಚಾರಿಸಿದರು. ನಿಮ್ಮೆಲ್ಲರ ಪ್ರೀತಿಯಿಂದ ನಾನು ಸಿನಿಮಾರಂಗದಲ್ಲಿ 20 ವರ್ಷಗಳಿಂದ ಬದುಕಿದ್ದೇನೆ, ನಾನು ಆರೋಗ್ಯವಾಗಿದ್ದೇನೆ ಹಾಗೂ ಮತ್ತೆ ಟ್ರ್ಯಾಕ್‌ಗೆ ಮರಳಿದ್ದೇನೆ ಎಂದು ವಿಶಾಲ್ ಹೇಳಿದ್ದಾರೆ.

ಇನ್ನು ವಿಶಾಲ್ ಅವರು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ವಿಶಾಲ್ ಅವರ ಆರೋಗ್ಯದ ಬಗ್ಗೆ ಹೆಲ್ತ್ ಬುಲೆಟಿನ್ ಕೂಡ ವೈರಲ್ ಆಗಿರುವ ಬಗ್ಗೆಯೂ ವಿಶಾಲ್ ಮೌನ ಮುರಿದಿದ್ದಾರೆ. ಅದೆಲ್ಲವೂ ಸುಳ್ಳು ಎಂದು ವಿಶಾಲ್ ಹೇಳಿದ್ದಾರೆ. ನಾನು ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ಆದರೆ ನಾನು ಯಾವ ಆಸ್ಪತ್ರೆಗೂ ದಾಖಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಮಾರ್ಕ್ ಆಂಟನಿ ಸಿನಿಮಾದಲ್ಲಿನ ಡೈಲಾಗ್‌ನಂತೆ 'ನಾನು ಬೀಳುತ್ತೇನೆ ಎಂದುಕೊಂಡಿದ್ದೀಯಾ? ಅದು ಆಗುವುದಿಲ್ಲ...' ಇದೇ ಡೈಲಾಗ್ ಅನ್ನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ನನ್ನ ಆತ್ಮವಿಶ್ವಾಸ ಮತ್ತು ನನ್ನ ತಂದೆಯ ಆತ್ಮವಿಶ್ವಾಸವೇ ನನ್ನ ನಿಜವಾದ ಶಕ್ತಿ. ಈ ಎರಡೂ ಶಕ್ತಿಗಳು ಒಟ್ಟಾಗಿ ಸೇರಿದರೆ ಯಾವುದೇ ಅಡೆತಡೆಗಳನ್ನು ನಿವಾರಿಸಲು ನನಗೆ ಸಾಧ್ಯವಾಗುತ್ತೆ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ನಾನು ಇನ್ನು ಆರು ತಿಂಗಳ ಕಾಲ ಶೂಟಿಂಗ್‌ಗೆ ಬರುವುದಿಲ್ಲ ಕೆಲವರು ಹೇಳುತ್ತಿದ್ದರು. ಆದರೆ, ನೋಡಿ ನಾನು ಚೆನ್ನಾಗಿಯೇ ಇದ್ದೇನೆ, ಮತ್ತೆ ಟ್ರ್ಯಾಕ್‌ಗೆ ಮರಳಿದ್ದೇನೆ ಎಂದು ವಿಶಾಲ್ ಎಲ್ಲ ವದಂತಿಗಳಿಗೂ ಬ್ರೇಕ್ ಹಾಕಿದ್ದಾರೆ.












Click it and Unblock the Notifications