40 ಬಾರಿ ಕೊಕೇನ್ ಖರೀದಿ, ಡ್ರಗ್ಸ್ ಕೇಸ್‌ನಲ್ಲಿ ಖ್ಯಾತ ನಟ ಬಂಧನ
ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಖ್ಯಾತ ನಟರೊಬ್ಬರು ಅರೆಸ್ಟ್ ಆಗಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರರಂಗದ ನಟ ಶ್ರೀಕಾಂತ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದು, ಸೋಮವಾರ ಬೆಳಿಗ್ಗೆ ಅವರನ್ನು ನುಂಗಂಬಾಕ್ಕಂ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆತಂದಿದ್ದರು. ನಟನ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಗಳಲ್ಲಿ ಮಾದಕ ದ್ರವ್ಯ ಸೇವನೆ ಸಂಬಂದ ಪಾಸಿಟಿವ್ ಎಂದು ದೃಢವಾದ ನಂತರ ಮತ್ತು ಅವರ ಮೊಬೈಲ್ ಫೋನ್‌ನಲ್ಲಿ ಅಪರಾಧ ವಹಿವಾಟುಗಳು ಕಂಡುಬಂದ ನಂತರ ನಟನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಪೊಲೀಸರು ಡ್ರಗ್ಸ್ ಜಾಲವೊಂದನ್ನು ಬೇಧಿಸಿದ್ದರು. ಆ ಕೇಸ್‌ನ ಆರೋಪಿಗಳು ನೀಡಿದ ಹೇಳಿಕೆಗಳ ಆಧಾರದ ಮೇಲೆ ನಟನನ್ನು ವಿಚಾರಣೆಗೆ ಒಳಪಡಿಸಿ ನಂತರ ಬಂಧಿಸಲಾಗಿದೆ. ಚೆನ್ನೈನಲ್ಲಿ ನಡೆದ ಪಬ್ ಜಗಳವೊಂದರ ತನಿಖೆ ನಡೆಸುತ್ತಿದ್ದಾಗ ಪೊಲೀಸರು ಎಐಎಡಿಎಂಕೆ ಮಾಜಿ ಕಾರ್ಯಕರ್ತ ಪ್ರಸಾದ್ ಎಂಬುವವರನ್ನು ಬಂಧಿಸಿದ್ದರು. ಮಾದಕ ದ್ರವ್ಯಗಳನ್ನು ಸರಬರಾಜು ಮತ್ತು ಸಾಗಣೆ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ಶ್ರೀಕಾಂತ್ ಅವರು ನಟನಿಗೆ ಕೊಕೇನ್ ಮಾರಾಟ ಮಾಡಿದ್ದಾರೆ ಎಂದು ಪ್ರಸಾದ್ ಆರೋಪಿಸಿದ ನಂತರ ಪೊಲೀಸರು ಅವರನ್ನು ವಿಚಾರಣೆಗೆ ಕರೆತಂದರು.

ನಟ ಶ್ರೀಕಾಂತ್ ಸುಮಾರು 40 ಬಾರಿ ಕೊಕೇನ್ ಅನ್ನು ಪ್ರತಿ ಗ್ರಾಂಗೆ 12,000 ರೂಪಾಯಿಯಂತೆ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ನಟ ತನ್ನ ಗೂಗಲ್ ಪೇ ಬಳಸಿ ಬರೋಬ್ಬರಿ 4.72 ಲಕ್ಷ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ನಟನ ರಕ್ತ ಪರೀಕ್ಷೆಯಲ್ಲೂ ಡ್ರಗ್ಸ್ ಸೇವನೆ ದೃಢಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೊಲೀಸರು ಈಗ ಅವರನ್ನು ವಶಕ್ಕೆ ಪಡೆದಿದ್ದಾರೆ. ನಟ ಇನ್ನೂ ಈ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಪೊಲೀಸರು ಡ್ರಗ್ಸ್ ಸೇವನೆ ಜಾಲವನ್ನು ಬೆನ್ನಟ್ಟಿದಾಗ ನಟ ಶ್ರೀಕಾಂತ್ ಹೆಸರು ಕೇಳಿಬಂದಿತ್ತು. ಬಳಿಕ ತನಿಖೆ ಚುರುಕುಗೊಳಿಸಲಾಗಿದ್ದು, ಮತ್ತಷ್ಟು ತಮಿಳು ನಟರು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಶ್ರೀಕಾಂತ್ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರಗಳಲ್ಲಿ ಅವರನ್ನು ಶ್ರೀರಾಮ್ ಎಂದು ಕರೆಯಲಾಗುತ್ತದೆ. ಈ ನಟ 2002ರಲ್ಲಿ ರೋಜಾ ಕೂಟ್ಟಂ ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಏಪ್ರಿಲ್ ಮಾಧತಿಲ್, ಮನಸೆಲ್ಲಂ ಮತ್ತು ಪಾರ್ಥಿಬನ್ ಕಣವು ಚಿತ್ರಗಳೊಂದಿಗೆ ಸತತ ಹಿಟ್‌ಗಳನ್ನು ನೀಡಿದರು. ಇವೆಲ್ಲವೂ ಅವರ ವೃತ್ತಿಜೀವನದ ಕೆಲವು ಅತ್ಯುತ್ತಮ ಚಿತ್ರಗಳೆಂದು ಪರಿಗಣಿಸಲಾಗಿದೆ. 2023ರಲ್ಲಿ ಅವರು ಒಕಾರಿಕು ಒಕರು ಚಿತ್ರದೊಂದಿಗೆ ತೆಲುಗಿನಲ್ಲಿ ಎಂಟ್ರಿ ನೀಡಿದ್ದರು. ಅವರ ಕೆಲವು ಗಮನಾರ್ಹ ಚಿತ್ರಗಳಲ್ಲಿ ಬೋಸ್, ಕನಾ ಕಾಂಡೇನ್, ಆಡವಾರಿ ಮಾಟಲಕು ಅರ್ಥಾಲು ವೆರುಲೆ, ಕಾಫಿ ವಿತ್ ಕಾದಲ್ ಸೇರಿವೆ.












Click it and Unblock the Notifications