ನಟ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ಸ್ಥಿತಿ ಸದ್ಯ ಹೇಗಿದೆ?
ಕನ್ನಡಿಗ ಹಾಗೂ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದರು. ಚೆನ್ನೈನ ಅಪೋಲೋ ಆಸ್ಪತ್ರೆಗೆ ರಜನಿಕಾಂತ್ ಅವರನ್ನು ಸೆಪ್ಟೆಂಬರ್ 30ರಂದು ರಾತ್ರಿ ದಾಖಲಿಸಲಾಗಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ನಿನ್ನೆ ತಡರಾತ್ರಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವುದಾಗಿ ವರದಿಯಾಗಿದೆ.
ರಜನಿಕಾಂತ್ ಅವರಯ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಹೃದಯದಿಂದ ಹೊರಹೋಗುವ ಮುಖ್ಯ ರಕ್ತನಾಳದಲ್ಲಿ ಊತವಿತ್ತು ಎಂದು ಹೇಳಲಾಗಿದೆ. ಆದರೆ ಆಸಪತ್ರೆಯಲ್ಲಿ ಇದಕ್ಕೆ ನೇರವಾಗಿ ಆಪರೇಷನ್ ಮಾಡಿರಲಿಲ್ಲ, ಬದಲಾಗಿ ಟ್ರಾನ್ಸ್‌ಕ್ಯಾತಿಟರ್ ವಿಧಾನದಿಂದ ಚಿಕಿತ್ಸೆ ನೀಡಿರುವುದಾಗಿ ವೈದ್ಯರು ಹೇಳಿದ್ದರು.

ಅಪೋಲೋ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಸಾಯಿ ಸತೀಶ್ ಅವರು ನಟ ರಜನಿಕಾಂತ್ ಅವರು ಮಹಾಪಧಮನಿಯಲ್ಲಿ ಸ್ಟೆಂಟ್ ಹಾಕಿದ್ದರು. ಹಾಗಾಗಿ ಅವರಿಗೆ ಊತ ಕಡಿಮೆಯಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ. ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿರುವುದರಿಂದ ಇನ್ನೆರಡು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಮಾಡುವುದಾಗಿ ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿತ್ತು.
ಅದರಂತೆ ನಿನ್ನೆ ರಾತ್ರಿ 11 ಗಂಟೆ ವೇಳೆ ರಜನಿಕಾಂತ್ ಅವರನ್ನು ಅಪೋಲೋ ಆಸ್ಪತ್ರೆ ಡಿಸ್ಚಾರ್ಜ್ ಮಾಡಿದೆ ಎಂದು ಚೆನ್ನೈ ಪೊಲೀಸರು ಹೇಳಿದ್ದಾರೆ. ಅವರ ಹೃದಯದಿಂದ ಹೊರಹೋಗುವ ಮುಖ್ಯ ರಕ್ತನಾಳದಲ್ಲಿ ಇದ್ದ ಊತವನ್ನು ಶಸ್ತ್ರಚಿಕಿತ್ಸೆಯಿಲ್ಲದೆ, ಟ್ರಾನ್ಸ್‌ಕ್ಯಾತಿಟರ್ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗಿದೆ. ಇದು ಯಶಸ್ವಿಯಾದ ಕಾರಣ ರಜನಿಕಾಂತ್ ಅವರು ಗುಣಮುಖರಾಗಿದ್ದಾರೆ.

ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ತಮಿಳುನಾಡು ಆರೋಗ್ಯ ಸಚಿವ ಮಾ.ಸುಬ್ರಮಣಿಯ, ರಜನಿಕಾಂತ್ ಅವರು ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಖಾಲಿ ಹೊಟ್ಟೆಯಲ್ಲಿ ಕೆಲವು ಪರೀಕ್ಷೆಗಳನ್ನು ಮಾಡಬೇಕಿದ್ದರಿಂದ, ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ರಜನಿಕಾಂತ್ ಆರೋಗ್ಯ ಉತ್ತಮವಾಗಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ಅವರು ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎಂದಿದ್ದರು.
ಸದ್ಯ ನೆಚ್ಚಿನ ತಲೈವಾ ಅವರು ಗುಣಮುಖರಾಗಿರುವುದರಿಂದ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ರಜನಿಕಾಂತ್ ಅವರು ಬೇಗನೆ ಸುಧಾರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ನಟ ರಜನಿಕಾಂತ್ ಅವರ ವೆಟ್ಟೈಯಾನ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಈ ಸಿನಿಮಾದ ಮನಸಲಾಯೋ ಸಾಂಗ್ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಜೈಲರ್ ಸಿನಿಮಾದಲ್ಲಿ ಸಕ್ಸಸ್ ಕಂಡಿರುವ ರಜನಿಕಾಂತ್ ಅವರು ಮತ್ತೊಮ್ಮೆ ಈ ಸಿನಿಮಾ ಮೂಲಕ ಮೋಡಿ ಮಾಡಲು ಮುಂದಾಗಿದ್ದಾರೆ.
ಟಿ.ಜೆ.ಜ್ಞಾನವೇಲ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಮಲೆಯಾಳಂನ ಫಹಾದ್ ಫಸಿಲ್, ಮಂಜು ವಾರಿಯರ್, ಟಾಲಿವುಡ್‌ನ ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್ ಸೇರಿದಂತೆ ಹಲವರು ನಟಿಸಿದ್ದಾರೆ.
ವೆಟ್ಟೈಯಾನ್ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಅವರ ಮುಂದಿನ ಸಿನಿಮಾ ಕೂಲಿ ಕೂಡ ಶೂಟಿಂಗ್‌ಗೆ ಸಜ್ಜಾಗಿದೆ. ಖ್ಯಾತ ನಟ ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ನಾಗಾರ್ಜುನ, ಸೌಬಿನ್ ಶಾಹಿರ್, ಶ್ರುತಿ ಹಾಸನ್, ಸತ್ಯರಾಜ್ ಮತ್ತು ಕನ್ನಡದ ಉಪೇಂದ್ರ ಸೇರಿದಂತೆ ಪ್ರಮುಖರು ಇರಲಿದ್ದಾರೆ.












Click it and Unblock the Notifications