Ajith Kumar: ಖ್ಯಾತ ನಟ ಅಜಿತ್ ಕುಮಾರ್ ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು?
ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರು ದಿಢೀರ್ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅಜಿತ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದರು. ನಿನ್ನೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ನೂಕುನುಗ್ಗಲು ಕಂಡುಬಂದಿತ್ತು. ಈ ವಿಡಿಯೋ ವೈರಲ್ ಕೂಡ ಆಗಿತ್ತು. ಇಂದು ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.
ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳ ನೂಕುನುಗ್ಗಲು ವೇಳೆ ಅಜಿತ್ ಕುಮಾರ್ ಅವರಿಗೆ ಕಾಲು ನೋವು ಕಾಣಿಸಿಕೊಂಡಿದ್ದು, ಅಜಿತ್‌ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ಅಜಿತ್ ಕುಮಾರ್ ಅವರನ್ನು ಕಾಣಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ಅಜಿತ್ ಅವರ ಕಾಲಿಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಕಾಲಿನಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡ ಬಳಿಕ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆ ಹಾಗೂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಈ ವಿಚಾರ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಲವರು ಆಸ್ಪತ್ರೆಯತ್ತ ದೌಡಾಯಿಸಿದ್ದು, ನಟ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಮೂಲಗಳ ಪ್ರಕಾರ ಇದು ವೈದ್ಯಕೀಯ ತಪಾಸಣೆ ಅಷ್ಟೇ ಎಂದು ಹೇಳಲಾಗುತ್ತಿದೆ. ಆದರೆ ಅವರ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಗೊಂದಲದಲ್ಲಿರುವ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆ. ಅಜಿತ್ ಅವರ ಆರೋಗ್ಯ ಸುಧಾರಿಸಲಿ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.
ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಅಜಿತ್ ಇತ್ತೀಚೆಗೆ ಸಾಲು ಸಾಲು ಸಿನಿಮಾ ಶೂಟಿಂಗ್, ಮೋಟಾರ್‌ಸ್ಪೋರ್ಟ್ ಈವೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ಅಂತರರಾಷ್ಟ್ರೀಯ ಕಾರ್ ರೇಸಿಂಗ್ ಸ್ಪರ್ಧೆಗಾಗಿ ಯುರೋಪ್‌ಗೆ ತೆರಳಿದ್ದರು. ಇದಕ್ಕೂ ಮುನ್ನ ಅವರು "ವಿದಮುಯಾರ್ಚಿ" ಹಾಗೂ "ಗುಡ್ ಬ್ಯಾಡ್ ಅಗ್ಲಿ" ಶೂಟಿಂಗ್ ಪೂರ್ಣಗೊಳಿಸಿದ್ದರು.

ಅಜಿತ್‌ಗೆ ಪದ್ಮಭೂಷಣ ಪ್ರದಾನ
ದೆಹಲಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ನಡೆದಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಸಾಲಿನ ಪದ್ಮಭೂಷಣ ಪ್ರಶಸ್ತಿಯನ್ನು ನಟ ಅಜಿತ್ ಕುಮಾರ್ ಅವರಿಗೆ ಪ್ರದಾನ ಮಾಡಿದ್ದರು. ಅಜಿತ್ ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ತಮಿಳು ಚಲನಚಿತ್ರೋದ್ಯಮದಲ್ಲಿ ಅತ್ಯುನ್ನತ ವ್ಯಕ್ತಿ. ವೈವಿಧ್ಯಮಯ ಪಾತ್ರಗಳನ್ನು ಚಿತ್ರಿಸುವ ಅವರ ಸಾಮರ್ಥ್ಯವು ಉದ್ಯಮದ ಬಹುಮುಖ ಪ್ರತಿಭೆಯ ನಟರಲ್ಲಿ ಒಬ್ಬರೆಂದು ಅವರ ಖ್ಯಾತಿಯನ್ನು ಭದ್ರಪಡಿಸಿದೆ. ಅವರ ಪ್ರಭಾವವು ಸಿನಿಮಾದ ಮಿತಿಗಳನ್ನು ಮೀರಿ ವಿಸ್ತರಿಸುತ್ತಿದ್ದು, ಅವರು ದತ್ತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದ್ರೌಪದಿ ಮುರ್ಮು ಶ್ಲಾಘಿಸಿದ್ದರು.

ಪದ್ಮಭೂಷಣ ಸ್ವೀಕರಿಸಿ ಚೆನ್ನೈಗೆ ಹಿಂದಿರುಗಿದ ನಂತರ ಅಜಿತ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಸಿಕ್ಕಿತ್ತು. ಅಲ್ಲಿ ವಿಮಾನಯಾನ ಸಿಬ್ಬಂದಿ ಮತ್ತು ಹಿತೈಷಿಗಳು ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆಯೂ ಮಾಡಿದ್ದರು. ಈ ವೇಳೆ ಅವರನ್ನು ಅಭಿನಂದಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ನೂಕುನುಗ್ಗಲು ಕಂಡುಬಂದಿತ್ತು. ಇದರಿಂದ ಅವರ ಕಾಲಿಗೆ ಸಣ್ಣ ಪ್ರಮಾಣದ ಗಾಯವಾಗಿ ನೋವು ಕಾಣಿಸಿಕೊಂಡಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications