ಸೋನು ನಿಗಮ್‌ಗೆ ತಟ್ಟಿತಾ ಕನ್ನಡಿಗರ ಶಾಪ? ಮುಂಬೈನಲ್ಲಿ ಕಾರು ಡಿಕ್ಕಿ, ಜಸ್ಟ್ ಮಿಸ್
ಕನ್ನಡಿಗರ ಬಗ್ಗೆ ಅವಹೇಳನ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಗಾಯಕ ಸೋನು ನಿಗಮ್‌ಗೆ ಕೊನೆಗೆ ಕ್ಷಮೆಯಾಚಿಸಿದ್ದರು. ಆದರೆ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ ಎಂದು ಸೋನು ನಿಗಮ್‌ಗೆ ಕರುನಾಡಿನ ಜನತೆ ಹಿಡಿಶಾಪ ಹಾಕಿದ್ದರು. ಈ ಪ್ರಕರಣ ಸದ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ. ಈ ಘಟನೆ ಮಾಸುವ ಮುನ್ನವೇ ಸೋನು ನಿಗಮ್‌ಗೆ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಕನ್ನಡಿಗರ ಶಾಪದಿಂದಲೇ ಸೋನು ನಿಗಮ್‌ಗೆ ಈ ಸ್ಥಿತಿ ಬಂತಾ ಎಂಬ ಮಾತುಗಳು ಕೇಳಿಬರುತ್ತಿವೆ.
ಮೊದಲೆಲ್ಲ ಕನ್ನಡ ಎಂದರೆ ಪ್ರೀತಿ ಅಭಿಮಾನ ಎಂದು ಸೋನು ನಿಗಮ್ ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದರು. ತಮ್ಮ ಗಾಯನದ ಜೊತೆಗೆ ಅವರು ಕನ್ನಡದ ಮೇಲಿಟ್ಟಿದ್ದ ಪ್ರೀತಿಯಿಂದಲೇ ಅವರನ್ನು ಕನ್ನಡಿಗರು ಕೂಡ ಅಷ್ಟೇ ಪ್ರೀತಿ ಕೊಟ್ಟು ಹೃದಯದಲ್ಲಿಟ್ಟುಕೊಂಡಿದ್ದರು. ಆದರೆ ಬೆಂಗಳೂರಿನ ಕಾಲೇಜಿನಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾಗ ಕನ್ನಡ ಹಾಡು ಕೇಳಿದಕ್ಕೆ, ಇದಕ್ಕೇನೆ ಪೆಹಲ್ಗಾಮ್ ಭಯೋತ್ಪಾದಕ ದಾಳಿಯಾಗಿದ್ದು ಎಂದಿದ್ದರು ಸೋನು ನಿಗಮ್. ಈ ವಿಡಿಯೋ ವೈರಲ್ ಆಗಿ, ಕನ್ನಡಿಗರೆಲ್ಲರೂ ಅವರ ವಿರುದ್ಧ ತಿರುಗಿಬಿದ್ದಿದ್ದರು. ಕನ್ನಡದಲ್ಲಿ ಹಾಡದಂತೆ ಅವರನ್ನು ಬ್ಯಾನ್ ಕೂಡ ಮಾಡಲಾಗಿದೆ. ಇದರ ನಡುವೆಯೇ ಅವರಿಗೆ ಮತ್ತೊಂದು ಆಪತ್ತು ಎದುರಾಗಿದೆ.

ಸೋನು ನಿಗಮ್ ಅವರು ಮುಂಬೈನಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೊರಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ. ಆದರೆ ಅದೃಷ್ಟವಶಾತ್ ಸೋನು ನಿಗಮ್ ಈ ದೊಡ್ಡ ಅಪಘಾತದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಅವರು ಗಾಬರಿಗೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಆ ವೀಡಿಯೊದಲ್ಲಿ ಸೋನು ತನ್ನ ಬಾಡಿಗಾರ್ಡ್ ಜೊತೆಗೆ ಮುಂಬೈನ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಅಲ್ಲಿದ್ದ ಕಾರೊಂದು ಸೋನು ಅವರಿಗೆ ಡಿಕ್ಕಿ ಹೊಡೆದಿದೆ. ಆದರೆ ಕೂಡಲೇ ಅವರು ಪಕ್ಕಕ್ಕೆ ಸರಿದಿದ್ದಾರೆ. ಅಲ್ಲಿನ ಬಾಡಿಗಾರ್ಡ್ ಕೂಡ ಸೋನು ಅವರ ರಕ್ಷಣೆಗೆ ಧಾವಿಸಿದ್ದಾರೆ. ಅದೃಷ್ಟವಶಾತ್ ದೊಡ್ಡ ಅಪಘಾತದಿಂದ ಸೋನು ನಿಗಮ್ ಪಾರಾಗಿದ್ದಾರೆ. ಈ ಘಟನೆಯಿಂದ ಸೋನು ನಿಗಮ್ ಒಂದು ಕ್ಷಣ ಆತಂಕದಿಂದ ಕೋಪಗೊಂಡು ಕಾರು ಚಾಲಕನ ಕಡೆಗೆ ನೋಡಿ ಮತ್ತೆ ಸುಮ್ಮನೆ ನಗುತ್ತಾ ಮುಂದಕ್ಕೆ ಹೋಗಿದ್ದಾರೆ. ಬಳಿಕ ತನ್ನ ಸ್ನೇಹಿತರನ್ನು ಅಪ್ಪಿಕೊಂಡು ನಗರದ ಐಷಾರಾಮಿ ರೆಸ್ಟೋರೆಂಟ್‌ಗೆ ಹೋಗಿದ್ದಾರೆ.

ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಈ ಕೇಸ್ ರದ್ದು ಮಾಡುವಂತೆ ಸೋನು ನಿಗಮ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಈ ಕೇಸ್ ವಿಚಾರಣೆ ನಡೆಯುತ್ತಿದ್ದು, ಮತ್ತೊಂದೆಡೆ ಬೆಂಗಳೂರು ಪೊಲೀಸರು ಮುಂಬೈಗೆ ಹೋಗಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಕನ್ನಡಿಗರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಕರ್ನಾಟಕ ಫಿಲ್ಮ್ ಚೇಂಬರ್ ಕೂಡ ಸೋನು ಅವರನ್ನು ಸದ್ಯಕ್ಕೆ ಬ್ಯಾನ್ ಮಾಡಿದೆ. ಅವರು ಹಾಡಿರುವ ಸಿನಿಮಾಗಳನ್ನು ರಿಲೀಸ್ ಆಗಲು ಬಿಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೋನು ನಿಗಮ್ ಕ್ಷಮೆ ಕೇಳಿದ್ದರೂ ಅವರ ಮೇಲಿನ ಸಿಟ್ಟು ಕರ್ನಾಟಕದಲ್ಲಿ ಇನ್ನೂ ಕಡಿಮೆಯಾಗಿಲ್ಲ.












Click it and Unblock the Notifications