Suhaana Syed Marriage: ಗೆಳೆಯ ನಿತಿನ್ ಜೊತೆ ಸರಿಗಮಪ ಸುಹಾನಾ ಸೈಯದ್ ಮಂತ್ರ ಮಾಂಗಲ್ಯದ ಮದುವೆ
"ಸರಿಗಮಪ" ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ (Suhaana Syed) ತನ್ನ ಆಪ್ತ ಸ್ನೇಹಿತ ನಿತಿನ್ ಶಿವಾಂಶ್ ಜೊತೆ ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ಅಂತರ್ ಧರ್ಮೀಯ ವಿವಾಹವಾಗಿದ್ದಾರೆ. 16 ವರ್ಷಗಳಿಂದ ಪರಿಚಯವಿದ್ದ, ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಸುಹಾನಾ ಕಾಲಿಟ್ಟಿದ್ದಾರೆ. ಇಬ್ಬರೂ ಬೇರೆ ಬೇರೆ ಧರ್ಮದವರಾದೂ ಮಂತ್ರಮಾಂಗಲ್ಯದ ಮೂಲಕ ಹೊಸ ಬದುಕಿನ ಪುಟ ತೆರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಮದುವೆ ಫೋಟೋಗಳು ವೈರಲ್ ಆಗಿದ್ದು, ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಸಂಗೀತ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋ ಮೂಲಕ ಸುಹಾನಾ ಗಮನ ಸೆಳೆದಿದ್ದರು. ಈ ಆ ಸೀಸನ್‌ನಲ್ಲಿ ಸುಹಾನಾ ಹಿಂದೂ ದೇವರ "ಶ್ರೀಕಾರನೇ ಶ್ರೀನಿವಾಸನೇ" ಹಾಡು ಹಾಡಿದ್ದರು. ಹಿಜಾಬ್ ಧರಿಸಿ ಹಿಂದೂ ದೇವರನಾಮವಾದ ಹಾಡಿದಕ್ಕಾಗಿ ವಿವಾದ ಸೃಷ್ಟಿಯಾಗಿತ್ತು. ಇದೇ ವಿಚಾರವಾಗಿ ಅವರು ಟೀಕೆಗೆ ಗುರಿಯಾಗಿದ್ದರು. ಆದರೆ ಮತ್ತೊಂದೆಡೆ ಇವರ ಗಾಯನಕ್ಕೆ ಎಲ್ಲರೂ ಮನಸೋತಿದ್ದರು. ಸುಹಾನಾ ಅವರ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಧಾರ್ಮಿಕ ಸೌಹಾರ್ದತೆ ಹೊಗಳಿದ್ದರು.

ಹಲವು ವರ್ಷಗಳ ನಂತರ ಸುಹಾನಾ ಇತ್ತೀಚೆಗಷ್ಟೇ ತಮ್ಮ ಪ್ರೀತಿಯ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದರು. ಸ್ನೇಹಿತ ನಿತಿನ್ ಶಿವಾಂಶ್ ಜೊತೆಗಿನ ಪ್ರೀತಿಯ ವಿಚಾರ ಬಹಿರಂಗಪಡಿಸಿ, ಪ್ರೇಮಕ್ಕೆ ಯಾವುದೇ ಮಿತಿ ಇಲ್ಲ ಎಂದು ಹೇಳಿದ್ದರು.
ಪ್ರೇಮಕ್ಕೆ ಯಾವ ಮಿತಿ ಇಲ್ಲ, ನಾವೇ ಸಾಕ್ಷಿ!
ಪ್ರತಿ ಜೀವಿಯ ಅನ್ವೇಷಣೆಯು ಪ್ರೇಮಕ್ಕಾಗಿಯೇ, ಪ್ರತಿ ಜೀವಿಯ ನಿರೀಕ್ಷೆಯು ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ ಎಂದಿದ್ದರು. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ, ಪ್ರೇಮಕ್ಕೆ ಯಾವ ಮಿತಿಯೂ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆಯು ಎಲ್ಲವನ್ನೂ ಮೀರಿದ್ದು. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟ ಪ್ರೀತಿ ಇದು. ಇಂದು, ಇದು ಕೇವಲ ನಮ್ಮ ಗುಟ್ಟಲ್ಲ, ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮ ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದರು.
ಇದು ಪರಸ್ಪರ ಆಯ್ಕೆ ಮಾಡಿಕೊಂಡ ಎರಡು ಆತ್ಮಗಳ ಕಥೆ, ಇನ್ನು ಮುಂದೆ ಇದು ನಮ್ಮ ರಹಸ್ಯ ಅಲ್ಲ. ಇದು ಸ್ನೇಹ ಮತ್ತು ಪ್ರೇಮಕಥೆ. ನಮ್ಮ ಹೃದಯಗಳು ಪದಗಳನ್ನು ಮೀರಿದ ಭಾಷೆಯನ್ನು ಮಾತನಾಡಿವೆ. ಭಿನ್ನಾಭಿಪ್ರಾಯಗಳು ಸಂಧಿಸುವ ಸ್ಥಳಗಳಲ್ಲಿ ಅರಳಿದ ಶಾಂತ ಪ್ರೀತಿ. ಪ್ರತಿ ಸವಾಲು, ಪ್ರತಿ ಸಂದೇಹ ಮತ್ತು ಪ್ರತಿ ಪಿಸುಗುಟ್ಟಿದ ಭಯದ ಮೂಲಕ, ನಾವು ಹಿಡಿದಿಟ್ಟುಕೊಂಡೆವು ಎಂದು ತಮ್ಮ ಪ್ರೀತಿಯ ವಿಚಾರ ಬಹಿರಂಗಪಡಿಸಿದ್ದರು.
ನಾವು ಹಂಚಿಕೊಳ್ಳುವುದು ಸಂಪ್ರದಾಯಕ್ಕಿಂತ ದೊಡ್ಡದು, ನಂಬಿಕೆಗಳಿಗಿಂತ ಆಳವಾದದ್ದು ಹಾಗು ನಮ್ಮ ಪ್ರಪಂಚಗಳ ಮೌಲ್ಯಕ್ಕಿಂತ ಹೆಚ್ಚು ಸುಂದರವಾಗಿದೆ. ಇದು ಎರಡು ಆತ್ಮಗಳು, ಎರಡು ನಂಬಿಕೆಗಳು, ಒಂದು ಪ್ರೀತಿ. ನಮ್ಮ ನಂಬಿಕೆಗಳನ್ನು ಪರಸ್ಪರ ಸೇರುವಂತೆ ನಾವು ಎಂದಿಗೂ ಬದಲಾಯಿಸಬೇಕಾಗಿಲ್ಲ. ನಾವು ಗೌರವ, ಪ್ರೀತಿಯನ್ನು ನಮ್ಮ ಸಾಮಾನ್ಯ ನೆಲೆಯಾಗಿ ಆರಿಸಿಕೊಂಡೆವು. 16 ಸುಂದರ ವರ್ಷಗಳ ಕಾಲ ಸ್ನೇಹಿತರಾಗಿರುವುದರಿಂದ ಜೀವನಕ್ಕಾಗಿ ಪರಸ್ಪರ ಆಯ್ಕೆ ಮಾಡಿಕೊಳ್ಳುವವರೆಗೆ ತಲುಪಿದೆ. ನಿಮ್ಮೆಲ್ಲರ ಆಶೀರ್ವಾದಗಳು ಬೇಕು ಎಂದು ಸುಹಾನಾ ಕೋರಿದ್ದರು. ಅದರಂತೆ ಇಂದು ಕುವೆಂಪು ಅವರ ಆಶಯವಾದ ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ಇವರ ವಿವಾಹ ನೆರವೇರಿದೆ.












Click it and Unblock the Notifications