ಖ್ಯಾತ ಗಾಯಕಿ ಎಸ್.ಜಾನಕಿ ಪುತ್ರ ಮುರಳಿ ಕೃಷ್ಣ ವಿಧಿವಶ
Murali Krishna Passes Away: ಭಾರತೀಯ ಚಿತ್ರರಂಗ ಕಂಡ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ಅವರ ಪುತ್ರ ಮುರಳಿ ಕೃಷ್ಣ ಅವರು ಇಂದು (ಜನವರಿ 22) ನಿಧನರಾಗಿದ್ದಾರೆ. ಹೈದರಾಬಾದ್‌ನಲ್ಲಿ ತನ್ನ ತಾಯಿ ಹಾಗೂ ಕುಟುಂಬದೊಂದಿಗೆ ವಾಸವಾಗಿದ್ದ ಸಂದರ್ಭದಲ್ಲಿ, ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರ ಅಗಲಿಕೆ ಚಿತ್ರರಂಗ ಮತ್ತು ಸಂಗೀತ ಪ್ರೇಮಿಗಳಿಗೆ ತೀವ್ರ ದುಃಖ ತರಿಸಿದೆ.
ಮುರುಳಿ ಕೃಷ್ಣ ಬೆಳೆದುಬಂದ ಹಾದಿ: ಮುರಳಿ ಕೃಷ್ಣ ಅವರು ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಏಕೈಕ ಪುತ್ರರಾಗಿದ್ದರು. ಚಿತ್ರರಂಗದ ಹಿನ್ನೆಲೆಯಲ್ಲಿ ಬೆಳೆದಿದ್ದರೂ, ಅವರು ಪ್ರಚಾರದ ಬದುಕನ್ನು ದೂರವಿಟ್ಟು, ನಟನೆ ಹಾಗೂ ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ಚಿತ್ರಗಳು ಹಾಗೂ ಧಾರಾವಾಹಿಗಳಲ್ಲೂ ಅವರು ನಟಿಸಿದ್ದಾರೆ. ಅವರ ಪತ್ನಿ ಭರತನಾಟ್ಯ ಮತ್ತು ಕುಚ್ಚಿಪುಡಿ ಸೇರಿದಂತೆ ಸಾಂಪ್ರದಾಯಿಕ ನೃತ್ಯಗಳಲ್ಲಿ ಪರಿಣತಿ ಹೊಂದಿರುವ ಖ್ಯಾತ ನೃತ್ಯ ಕಲಾವಿದೆ ಆಗಿದ್ದಾರೆ.

ಆದರೆ, ಅಭಿಪ್ರಾಯಗಳು ಬೇರೆಯಾದ ಕಾರಣ ಅವರು ಪತ್ನಿಯಿಂದ ಪ್ರತ್ಯೇಕವಾಗಿ ಬದುಕಲು ಆರಂಭಿಸಿದ್ದರು. ಇದೇ ವೇಳೆ, ತಮ್ಮ ಮಕ್ಕಳಿಗೆ ವಿವಾಹ ನೆರವೇರಿಸಿ, ನಂತರ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು. ಪ್ರಸಿದ್ಧ ಗಾಯಕಿಯ ಪುತ್ರರಾಗಿದ್ದರೂ ಸಹ, ಹೆಚ್ಚು ಪ್ರಚಾರವನ್ನು ಬಯಸದೆ ಶಾಂತ ಹಾಗೂ ಸರಳ ಜೀವನವನ್ನೇ ಮುರಳಿ ಕೃಷ್ಣ ಅವರು ಆಯ್ಕೆ ಮಾಡಿಕೊಂಡಿದ್ದರು ಎಂಬುದು ಗಮನಾರ್ಹವಾಗಿದೆ.
ಎಸ್.ಜಾನಕಿ ಅವರ ಸಾಧನೆಗಳು: ಎಸ್.ಜಾನಕಿ ಎಂಬ ಹೆಸರು ದಕ್ಷಿಣ ಭಾರತೀಯ ಸಿನೆಮಾ ಸಂಗೀತ ಲೋಕದಲ್ಲಿ ದೊಡ್ಡ ಶಕ್ತಿಯ ಪ್ರತೀಕವಾಗಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ, ಹಲವು ಪೀಳಿಗೆಯ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಗಳು, ರಾಜ್ಯ ಪ್ರಶಸ್ತಿಗಳು, ಪದ್ಮಭೂಷಣ ಸೇರಿದಂತೆ ಹಲವಾರು ಗೌರವಗಳನ್ನು ಪಡಡೆದಿದ್ದಾರೆ.
ಈ ಅದ್ಭುತ ಸಾಧನೆ ಮಾಡಿರುವ ಎಸ್.ಜಾನಕಿ ಅವರು, ಇಂದಿಗೂ ಭಾರತೀಯ ಸಂಗೀತ ಪ್ರೇಮಿಗಳ ಹೃದಯಗಳಲ್ಲಿ ಅಮರವಾಗಿ ಉಳಿದಿದ್ದಾರೆ. ಇಂತಹ ಮಹಾನ್ ಸಂಗೀತ ಮಹನೀಯರ ಕುಟುಂಬದಲ್ಲಿ ಸಂಭವಿಸಿದ ಈ ಅಗಲಿಕೆ, ಸಂಗೀತ ಲೋಕಕ್ಕೆ ದೊಡ್ಡ ನೋವು ಮತ್ತು ಅಪಾರ ದುಃಖವನ್ನು ಉಂಟುಮಾಡಿದೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಎಸ್.ಜಾನಕಿ ಅವರು 1950ರ ದಶಕದ ಆರಂಭದಲ್ಲಿ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅಂತಿಮವಾಗಿ ಚೆನ್ನೈನಲ್ಲಿ ನೆಲೆಸಿದರು. ಇದು ಅವರ ವೃತ್ತಿಜೀವನದ ಅತ್ಯಂತ ಪ್ರಮುಖ ಘಟ್ಟವಾಗಿತ್ತು. ಅವರು ರಾಮ್ ಪ್ರಸಾದ್ ಅವರನ್ನು ವಿವಾಹ ಆಗಿದ್ದು, ದಂಪತಿಗೆ ಮಗನಾಗಿ ಮುರಳಿ ಕೃಷ್ಣ ಜನಿಸಿದ್ದರು.
ಮುರಳಿ ಕೃಷ್ಣ ಸಿನಿಮಾಗಳ ಬಗ್ಗೆ, ವಿಶೇಷವಾಗಿ ತಮಿಳು ಮತ್ತು ತೆಲುಗು ಚಿತ್ರಗಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಭರತನಾಟ್ಯದಲ್ಲಿಯೂ ತರಬೇತಿ ಪಡೆದಿದ್ದರು. ಅವರು ಚೆನ್ನೈ ಮೂಲದ ನರ್ತಕಿ ಉಮಾ ಅವರನ್ನು ವಿವಾಹ ಆಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ನಂತರ ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನ ಪಡೆದು ತಾಯಿಯೊಂದಿಗೆ ವಾಸಿಸುತ್ತಿದ್ದರು. ಮುರಳಿ ಕೃಷ್ಣ ಅವರು ಮುಂಜಾನೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications