Prithwi Bhat: ನಮ್ಮನ್ನ ಬೇಗ ಮನೆಗೆ ಕರೆಸಿಕೊಳ್ಳಿ ಪ್ಲೀಸ್: ಅಪ್ಪನಿಗೆ ಬೇಡಿಕೊಂಡ ಗಾಯಕಿ ಪೃಥ್ವಿ ಭಟ್
ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಅವರು ಪೋಷಕರ ವಿರೋಧದ ನಡುವೆ ಮದುವೆ ಮಾಡಿಕೊಂಡು ಸುದ್ದಿಯಾಗಿದ್ದರು. ಈ ಮದುವೆ ವಿಚಾರ ಬೀದಿಗೆ ಬಂದಿತ್ತು. ಮಗಳಿಗೆ ವಶೀಕರಣ ಮಾಡಿ ಈ ಮದುವೆ ಮಾಡಿಸಿದ್ದಾರೆ ಎಂದು ಪೃಥ್ವಿ ಅವರ ತಂದೆ ಗಂಭೀರ ಆರೋಪಗಳನ್ನ ಮಾಡಿದ್ದರು. ಕನ್ನಡದ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬುವವರನ್ನು ಪ್ರೀತಿಸಿ ಗಾಯಕಿ ಮದುವೆಯಾಗಿದ್ದರು. ಆದರೆ ಈ ಮದುವೆಗೆ ಪೃಥ್ವಿ ಭಟ್ ತಂದೆಯ ವಿರೋಧವಿತ್ತು. ಈ ಕಾರಣದಿಂದ ಸಿಂಪಲ್ ಆಗಿ ದೇವಸ್ಥಾನವೊಂದರಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. ಇದೀಗ ತಮ್ಮ ಮದುವೆಯಾದ ಸಂದರ್ಭ ಹಾಗೂ ಅಪ್ಪನ ಮುನಿಸಿನ ಬಗ್ಗೆ ಪೃಥ್ವಿ ಭಟ್ ಮುಕ್ತವಾಗಿ ಮಾತನಾಡಿದ್ದಾರೆ.
ಮೊದಲಿಗೆ ಸಿಂಪಲ್ ಆಗಿ ಮದುವೆಯಾಗಿದ್ದ ಪೃಥ್ವಿ ಭಟ್ ಅವರು ಬಳಿಕ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಕಿರುತೆರೆ, ಹಿರಿತೆರೆ ಹಾಗೂ ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ಸೆಲೆಬ್ರಿಟಿಗಳ ದಂಡು ಆಗಮಿಸಿ ನವಜೋಡಿಗೆ ಶುಭಹಾರೈಸಿತ್ತು. ಬಳಿಕ ವಿದೇಶಕ್ಕೂ ಹಾರಿತ್ತು ಈ ಜೋಡಿ. ಮದುವೆ ವಿವಾದವೆಲ್ಲ ತಣ್ಣಗಾದ ಮೇಲೆ ಸಂದರ್ಶನದಲ್ಲಿ ಪೃಥ್ವಿ ಭಟ್ ಅವರು ಅಚ್ಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ʼಕೀರ್ತಿ ಇಎನ್‌ಟಿ ಕ್ಲಿನಿಕ್ʼ ಸಂದರ್ಶನದಲ್ಲಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರು ತಮ್ಮ ಮದುವೆ, ಪೋಷಕರ ವಿರೋಧ ಹಾಗೂ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ಹೇಳಿದ್ದಾರೆ.

ತಮ್ಮ ಮದುವೆ ಬಗ್ಗೆ ಮಾತನಾಡಿರುವ ಪೃಥ್ವಿ ಭಟ್ ಅವರು 'ಆ ಕ್ಷಣಕ್ಕೆ ನಮಗೆ ಬೇರೆ ದಾರಿ ಇರಲಿಲ್ಲ. ಹಾಗಾಗಿ ಆ ರೀತಿ ಮದುವೆಯಾಗಬೇಕಾದ ಪರಿಸ್ಥಿತಿ ಎದುರಾಯಿತು ಎಂದಿದ್ದಾರೆ. ಇನ್ನು "ಹುಡುಗರು" ಸಿನಿಮಾದಲ್ಲಿ ಪ್ರೇಮಿಗಳು ಪೋಷಕರ ವಿರೋಧದ ನಡುವೆ, ಓಡಿ ಹೋಗಿ, ಒದ್ದಾಡಿ ಮದುವೆಯಾಗುವ ಸಂದರ್ಭವನ್ನು ಉಲ್ಲೇಖಿಸಿರುವ ಅವರು ಪೃಥ್ವಿ ಭಟ್, ನಮ್ಮ ಮದುವೆ ಕೂಡ ಹುಡುಗರು ಸಿನಿಮಾ ಸ್ಟೈಲಲ್ಲೇ ನಡೆಯಿತು' ಎಂದು ಹೇಳಿಕೊಂಡಿದ್ದಾರೆ.
'ಅಪ್ಪ ಈಗ ಮೆಸೇಜ್ ಮಾಡ್ತಾರೆ. ನಮ್ಮ ತಂದೆ ತಾಯಿ ಅವರಿಬ್ಬರೂ ಖುಷಿಯಾಗಿದ್ರೆ ನನಗೆ ಅಷ್ಟೇ ಸಾಕು. ಆದಷ್ಟು ಬೇಗ ನಮ್ಮನ್ನ ಒಪ್ಪಿ ಮನೆಗೆ ಕರೆದರೆ ಸಾಕು' ಎಂದು ಪೃಥ್ವಿ ಭಟ್ ತನ್ನ ಅಪ್ಪನಿಗೆ ಬೇಡಿಕೊಂಡಿದ್ದಾರೆ. ಇನ್ನು ಅಭಿಷೇಕ್ ಅವರು ಕೂಡ ಮಾತನಾಡಿ, 'ಪೃಥ್ವಿ ಅವರ ತಂದೆ ಬಳಿ ನಾನು ಎರಡು ಮೂರು ಬಾರಿ ಮದುವೆ ಬಗ್ಗೆ ಮಾತನಾಡಿದ್ದೆ. ಖಂಡಿತ ಇದು ತಪ್ಪು ಎಂದೇ ನಾನು ಹೇಳಿದ್ದೆ' ಎಂದಿದ್ದಾರೆ. ಸದ್ಯ ಈ ಸಂದರ್ಶನದ ಪ್ರೋಮೋ ಹಂಚಿಕೊಳ್ಳಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮದುವೆ ವಿವಾದವೇನು?
ಮಗಳ ವಶೀಕರಣ ಮಾಡಿ ಮದುವೆ ಮಾಡಿಸಿದ್ದಾರೆ ಎಂದು ಪೃಥ್ವಿ ಭಟ್ ತಂದೆ ಆರೋಪ ಮಾಡಿದ್ದರು. ಈ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ನನ್ನ ಮಗಳನ್ನ ವಶೀಕರಣ ಮಾಡಿ ಮದುವೆ ಮಾಡಿಸಿದ್ದಾರೆ. ಸಂಗೀತ ಪಾಠ ಹೇಳಿಕೊಡುವ ನರಹರಿ ದೀಕ್ಷಿತ್ ಅವರೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದ್ದರು. ನಮ್ಮ ಜೀವನದಲ್ಲಿ ಮಗಳ ಮದುವೆಯಲ್ಲಿ ಧಾರೆ ಎರೆಯುವ ಅವಕಾಶವನ್ನು ಕಸಿದುಕೊಂಡರು. ಇವರನ್ನು ನಂಬಿ ಹೆಣ್ಣು ಮಕ್ಕಳನ್ನು ಸಂಗೀತ ತರಗತಿಗೆ ಕಳುಹಿಸುವುದು ಹೇಗೆ? ಎಂದು ದೂರಿದ್ದರು. ಆಡಿಯೋ ವೈರಲ್ ಬೆನ್ನಲ್ಲೇ ಪೃಥ್ವಿ ಭಟ್ ಅವರು ತಮ್ಮ ಮದುವೆ ವಿಚಾರದಲ್ಲಿ ನರಹರಿ ದೀಕ್ಷಿತ್ ಅವರ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.












Click it and Unblock the Notifications