ನಟ ಶಂಕರ್‌ನಾಗ್ ಸಾವು ತಪ್ಪಿಸುವ ಒಂದು ಅವಕಾಶವಿತ್ತು: ಹೊರಬಂತು ಅಸಲಿ ವಿಚಾರ
ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ನಟ ಶಂಕರ್‌ನಾಗ್. ಆದರೆ, ಶಂಕರ್‌ನಾಗ್ ಅವರು ಇಂದಿಗೂ ಕನ್ನಡಿಗರ ಹೃದಯದಲ್ಲಿ ಶಂಕ್ರಣ್ಣನಾಗಿ ನೆಲೆಸಿದ್ದಾರೆ. ಆಗಿನಿಂದ ಈಗಿನ ಜಮಾನದ ಆಟೋ ಚಾಲಕರಿಗೂ ಶಂಕರ್‌ನಾಗ್ ಅವರೇ ದೇವರು. ಅಷ್ಟರ ಮಟ್ಟಿಗೆ ಅವರು ಮಾಡಿದ್ದ ಪಾತ್ರಗಳು ಜನರ ಮೇಲೆ ಪ್ರಭಾವ ಬೀರಿದೆ. ಆದರೆ, ಅವರ ಸಾವು ಮಾತ್ರ ಇಂದಿಗೂ ಮರೆಯಲಾಗದ ಘಟನೆಯಾಗಿಯೇ ಉಳಿದಿದೆ. ಇನ್ನು ಆ ದಿನ ಶಂಕರ್‌ನಾಗ್ ಅವರ ಜೀವ ಉಳಿಸುವ ಅವಕಾಶ ಒಬ್ಬರ ಕೈಲಿತ್ತು ಎಂಬ ವಿಚಾರ ಈಗ ಬಹಿರಂಗವಾಗಿದೆ.
ಶಂಕರ್‌ನಾಗ್ ಅವರು ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರ ಹಿಂದಿನ ದಿನ ಶಂಕರ್‌ನಾಗ್ ಅವರ ಜೊತೆಯಲ್ಲೇ ಇದ್ದ ಕನ್ನಡ ಚಿತ್ರರಂಗದ ಹಿರಿಯ ನಟರೊಬ್ಬರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಂದು ಶಂಕರ್‌ನಾಗ್ ಅವರನ್ನು ಸಾವಿನಿಂದ ತಪ್ಪಿಸುವ ಅವಕಾಶ ನನಗೆ ಇತ್ತು ಎಂದು ಮರುಗಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಸಿಹಿಕಹಿ ಚಂದ್ರು ಅವರು "ಸುದ್ದಿಮನೆ" ಸಂದರ್ಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

"ನಾನು ಮೊದಲ ಬಾರಿಗೆ ಶಂಕರ್‌ನಾಗ್ ಅವರನ್ನು ಕಾಲೇಜು ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋದಾಗ ಭೇಟಿಯಾಗಿದ್ದೆ. ಆ ಮೇಲೆ ಸಿನಿಮಾ ರಂಗಕ್ಕೆ ಬಂದ ಮೇಲೆ ನಾವಿಬ್ಬರೂ ಒಳ್ಳೆಯ ಸ್ನೇಹಿತರಾದೆವು. "ನಿಗೂಢ ರಾತ್ರಿ" ಸಿನಿಮಾ ಮಾಡುವಾಗ ನಾನೂ ನಟಿಸಿದ್ದೆ. ಸಂಕೇತ್ ಥಿಯೇಟರ್‌ನಲ್ಲಿ ಅದರ ಡಬ್ಬಿಂಗ್ ನಡೀತಿತ್ತು. ನಾನು ಆ ದಿನ ರಾತ್ರಿ ಡಬ್ಬಿಂಗ್ ಮುಗಿಸಿಕೊಂಡು ದಾವಣಗೆರೆಗೆ ಹೋಗಬೇಕಿತ್ತು. ರಾತ್ರಿ 9.30ಕ್ಕೆ ಬಸ್‌ಗೆ ಹೊರಡಬೇಕಿತ್ತು. ಆಗ ಶಂಕರ್‌ನಾಗ್ ಅವರು 7 ಗಂಟೆಗೆ ಸುಮಾರಿಗೆ ಥಿಯೇಟರ್‌ಗೆ ಬಂದು ಒಂದು ಸಾಂಗ್ ಟ್ರಾನ್ಸ್‌ಫರ್ ಮಾಡಿಕೊಳ್ಳಬೇಕು ಎಂದು ಆತುರದಲ್ಲಿದ್ರು. ಹಾಗಾಗಿ ನನ್ನ ಡಬ್ಬಿಂಗ್ ನಿಲ್ಲಿಸಿದ್ರು" ಎಂದು ವಿವರಿಸಿದ್ದಾರೆ.
"ನನ್ನದು ಇನ್ನೊಂದು ರೀಲ್ ಆಗಿದ್ರೆ ಡಬ್ಬಿಂಗ್ ಮುಗೀತಿತ್ತು. ಹಾಗಾಗಿ ನಾನು ಇನ್ನೊಂದು ರೀಲ್ ಇದೆ ಸರ್, ಅದನ್ನ ಮಾಡಿ ಊರಿಗೆ ಹೊರಡಬೇಕು ಎಂದು ಶಂಕರ್‌ನಾಗ್ ಅವರಿಗೆ ಹೇಳಿದ್ದೆ. ಆದರೆ ಅವರು ತರಾತುರಿಯಲ್ಲಿದ್ರು. ಇಲ್ಲ ನೀನು ಆ ಮೇಲೆ ಡಬ್ಬಿಂಗ್ ಮಾಡ್ಕೊ ಅಂದ್ರು. ಕೊನೆಗೆ ಅವರು ಹೊರಟು ಹೋದರು. ನಾನು ಡಬ್ಬಿಂಗ್ ಮುಗಿಸಿ ಓಡೋಡಿ ಬಸ್ ಹತ್ತಿ ದಾವಣಗೆರೆ ತಲುಪಿದ್ದೆ" ಎಂದು ಚಂದ್ರು ಹೇಳಿದ್ದಾರೆ.

"ಮುಂಜಾನೆ ದಾವಣಗೆರೆ ತಲುಪಿ ಮನೆಯಲ್ಲಿ ಕುತಿದಿದ್ದೆ. ಆಗ ನಿರ್ಮಾಪಕ ನಾಗಪ್ರಕಾಶ್ ಅವರಿಂದ ನನಗೆ ಫೋನ್ ಬಂತು. ಶಂಕರ್‌ನಾಗ್‌ಗೆ ಆಕ್ಸಿಡೆಂಟ್ ಆಗಿದೆ, ಬಾಡಿ ತೆಗಿಯೋಕೆ ಹೋಗ್ತಿದಿನಿ, ಬರ್ತೀಯಾ? ಅಂದ್ರು. ಆಗ ನನಗೆ ಭೂಮಿಯೇ ಕುಸಿದಂತಾಯ್ತು. ನಿನ್ನೆ ಸಂಜೆ ಭೇಟಿ ಮಾಡಿದ ಶಂಕರ್‌ನಾಗ್ ಬೆಳಿಗ್ಗೆ ಇನ್ನಿಲ್ಲ ಅಂದ್ರೆ ನಂಬಲು ಆಗಲಿಲ್ಲ" ಎಂದು ಕಹಿ ಅನುಭವ ತೆರೆದಿಟ್ಟಿದ್ದಾರೆ.
"ಆದರೆ, ನನ್ನಲ್ಲಿ ತಪ್ಪಿತಸ್ಥ ಭಾವನೆ ಇತ್ತು. ಒಂದು ವೇಳೆ ಆ ಹಿಂದಿನ ನಾನು ಇಲ್ಲ ನಾನು ಡಬ್ಬಿಂಗ್ ಮಾಡಿದ ಮೇಲೆ ನೀವು ರೆಕಾರ್ಡಿಂಗ್ ಮಾಡಿ ಎಂದು ಶಂಕರ್‌ನಾಗ್ ಅವರಿಗೆ ಹಠ ಮಾಡಿದ್ರೆ, ಬಹುಶಃ ಆಗ ಅವರ ಕೆಲಸ ಕೂಡ ಒಂದು ಗಂಟೆ ಮುಂದಕ್ಕೆ ಹೋಗುತ್ತಿತ್ತು. ಇದರಿಂದ ಶಂಕರ್‌ನಾಗ್ ಅವರನ್ನು ಸಾವಿನಿಂದಲೂ ತಪ್ಪಿಸಬಹುದಿತ್ತು. ಅವರ ಕಾರು ಅಪಘಾತದ ಸಂದರ್ಭ ಎದುರಾಗುತ್ತಿರಲಿಲ್ಲವೇನೋ ಅನಿಸಿತ್ತು. ಕೊನೆಗೆ ನನ್ನಿಂದಲೇ ಅವರಿಗೆ ಹೀಗಾಯ್ತಾ ಅನ್ನೋ ನೋವು ಕೂಡ ಕಾಡಿತ್ತು. ಆ ಡಿಪ್ರೆಶನ್ ನೋವಿನಿಂದ ಹೊರಬರಲು ಮೂರು ತಿಂಗಳು ಬೇಕಾಯ್ತು" ಎಂದು ಸಿಹಿಕಹಿ ಚಂದ್ರು ಹೇಳಿದ್ದಾರೆ.












Click it and Unblock the Notifications